Homeಮುಖಪುಟಊಟ, ನಿದ್ರೆ ಇಲ್ಲ, ದೇಶಕ್ಕೆ ಮರಳುವ ಭರವಸೆಯೂ ಇಲ್ಲ: ಕಂಗಾಲಾದ ಭಾರತೀಯರು

ಊಟ, ನಿದ್ರೆ ಇಲ್ಲ, ದೇಶಕ್ಕೆ ಮರಳುವ ಭರವಸೆಯೂ ಇಲ್ಲ: ಕಂಗಾಲಾದ ಭಾರತೀಯರು

‘ಅಮೆರಿಕ, ಇಂಗ್ಲೆಂಡ್ ಸೇರಿದಂತೆ ವಿವಿಧ ರಾಷ್ಟ್ರಗಳು ತಮ್ಮ ದೇಶದ ಪ್ರಜೆಗಳನ್ನು ಉಕ್ರೇನ್‌ನಿಂದ ವಾಪಸ್ ಕರೆಸಿಕೊಳ್ಳುವಾಗ ಹೊತ್ತಿನಲ್ಲಿ ಭಾರತದ ಪ್ರಧಾನಿ ಮತ್ತು ಸಚಿವರು ಚುನಾವಣೆಯಲ್ಲಿ ಬ್ಯುಸಿಯಾಗಿದ್ದರು’ ಎಂಬ ಆರೋಪಗಳು ಬಂದಿವೆ.

- Advertisement -
- Advertisement -

ಉಕ್ರೇನ್ ಮೇಲೆ ರಷ್ಯಾ ಯುದ್ದ ಘೋಷಿಸಿ ಐದು ದಿನಗಳು ಕಳೆದಿವೆ. ರಷ್ಯಾ ಸೇನೆ ಉಕ್ರೇನ್‌ನ ವಿವಿಧ ಭಾಗಗಳ ಮೇಲೆ ದಾಳಿ ನಡೆಸುತ್ತಿದೆ. ಇದುವರೆಗೂ ನೂರಾರು ಜನರು ಸಾವನ್ನಪ್ಪಿದ್ದಾರೆ. ಪರಿಸ್ಥಿತಿ ಗಂಭೀರವಾಗಿದೆ.

ರಷ್ಯಾ ಮತ್ತು ಉಕ್ರೇನ್ ನಡುವಿನ ಬಿಕ್ಕಟ್ಟು ಉದ್ವಿಘ್ನಗೊಳ್ಳುತ್ತಿರುವುದನ್ನು ಗಮನಿಸಿದ ವಿವಿಧ ದೇಶಗಳು ತಮ್ಮ ಜನರನ್ನು ದೇಶಕ್ಕೆ ವಾಪಸ್ ಕರೆಸಿಕೊಂಡಿದ್ದವು. ಆದರೆ ಐದು ರಾಜ್ಯಗಳ ಚುನಾವಣಾ ಕಣದಲ್ಲಿದ್ದ ಭಾರತವು ಉಕ್ರೇನ್‌ನಿಂದ ಜನರನ್ನು ತುರ್ತಾಗಿ ಕಳೆಸಿಕೊಳ್ಳುವ ಕೆಲಸಕ್ಕೆ ಮುಂದಾಗಲಿಲ್ಲ. ಹೀಗಾಗಿ, ಭಾರತದ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಪ್ರಜೆಗಳು ಉಕ್ರೇನ್‌ನಲ್ಲಿ ಸಿಲುಕಿಕೊಂಡು ಭಾರತಕ್ಕೆ ಮರಳಿ ಬರುವ ಭರವಸೆಯನ್ನೇ ಕಳೆದುಕೊಂಡಿದ್ದಾರೆ.

ರಷ್ಯಾದಿಂದ ದಾಳಿಗೀಡಾಗಿರುವ ಉಕ್ರೇನ್‌ನ ಪ್ರಮುಖ ಭಾಗವಾದ ಖಾರ್ಕಿವ್‌ನಲ್ಲಿ ಸುಮಾರು 18 ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಅವರೆಲ್ಲರೂ, ಖಾರ್ಕಿವ್‌ನ ಕರಾಜಿನ್ ನ್ಯಾಷನಲ್ ಯೂನಿವರ್ಸಿಟಿಯಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ. ಅವರೆಲ್ಲರೂ ಉಕ್ರೇನ್‌ನಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ನಾಲ್ಕು ರಾತ್ರಿಗಳಿಂದ ಮೆಟ್ರೋ ನಿಲ್ದಾಣದಲ್ಲಿದ್ದಾರೆ.

“ಉಭಯ ರಾಷ್ಟ್ರಗಳ ನಡುವೆ ಘರ್ಷಣೆ ಆರಂಭವಾದಾಗ ನಾವು ಮೆಟ್ರೋ ನಿಲ್ದಾಣಕ್ಕೆ ಬಂದೆವು. ನಾವು ತಂದಿದ್ದ ತಿನಿಸುಗಳೆಲ್ಲ ಖಾಲಿಯಾಗಿವೆ. ಆದರೆ ಈಗ ನಮಗೆ ಆಹಾರವಿಲ್ಲ. ನಾನು ಭಾನುವಾರ ಬೆಳಿಗ್ಗೆ ಸ್ವಲ್ಪ ಬ್ರೆಡ್ ತಿಂದೆ. ಅದು ಮುಗಿದ ನಂತರ, ನಮಗೆ ಆಹಾರ ದೊರೆತಿಲ್ಲ. ನಾಲ್ಕು ದಿನಗಳಿಂದ ಸರಿಯಾದ ನಿದ್ರೆಯೂ ಇಲ್ಲ” ಎಂದು ಕೇರಳ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಎಲಿಜಬೆತ್ ದೇವಾಸಿಯಾ ಹೇಳಿದ್ದಾರೆ.

ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್‌: ಪ್ಯಾಲೆಸ್ತೀನ್‌‌ನ ದಿಟ್ಟ ಬಾಲಕಿಯನ್ನು ಉಕ್ರೇನ್‌‌‌ನವರು ಎಂದು ವರದಿ ಮಾಡಿದ ಪಬ್ಲಿಕ್ ಟಿವಿ ಮತ್ತು ಸುವರ್ಣ ಟಿವಿ!

ಸುಮಾರು 500 ಮಂದಿ ಆಶ್ರಯ ಪಡೆದಿರುವ ಮೆಟ್ರೊ ನಿಲ್ದಾಣಕ್ಕೆ ಭಾನುವಾರದಿಂದ ನೀರು ಪೂರೈಕೆ ಆರಂಭಿಸಲಾಗಿದೆ. ಸುತ್ತಲಿನ ಜನರು ಸ್ವಲ್ಪ ಆಹಾರದ ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಇಲ್ಲಿ ನಡೆಯುತ್ತಿರುವ ಘರ್ಷಣೆಯಿಂದ ಅದೂ ಸಾಧ್ಯವಾಗದೇ ಇರಬಹುದು ಎಂದು ಎಲಿಜಬೆತ್ ತಿಳಿಸಿದ್ದಾರೆ.

ಭಾರತೀಯ ರಾಯಭಾರ ಕಚೇರಿಯು ರೈಲುಗಳ ಮೂಲಕ ದೇಶದ ಪಶ್ಚಿಮ ಭಾಗದಲ್ಲಿರುವ ನಗರಗಳಿಗೆ ಸ್ಥಳಾಂತರಗೊಳ್ಳಲು ನಮಗೆ ಹೇಳುತ್ತಿದೆ. ಆದರೆ, ಇಲ್ಲಿ ನಡೆಯುತ್ತಿರುವ ಭಾರೀ ಶೆಲ್‌ಗಳ ದಾಳಿಯಿಂದಾಗಿ ನಮಗೂ, ನಮ್ಮ ಸ್ನೇಹಿತರಿಗೆ ಮೆಟ್ರೋ ನಿಲ್ದಾಣದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದು ಎಲಿಜಬೆತ್ ತಿಳಿಸಿದ್ದಾರೆ.

ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವ ಹರಿಯಾಣದ ಮೂಲದ ವೈದ್ಯಕೀಯ ವಿದ್ಯಾರ್ಥಿ ಅನುರಾಗ್ ಪೂನಿಯಾ ಅವರು ಭಾರತಕ್ಕೆ ವಿಮಾನ ಹತ್ತಲು ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದರು. ಆ ವೇಳೆ, ಉಕ್ರೇನ್ ವಿಮಾನ ನಿಲ್ದಾಣಗಳನ್ನು ಮುಚ್ಚಿದ್ದರಿಂದಾಗಿ ಅವರು ರಾಜಧಾನಿ ಕೈವ್‌ನಲ್ಲಿ ಸಿಕ್ಕಿಕೊಂಡಿದ್ದಾರೆ. ಆಗಿನಿಂದಲೂ ಭಾರತೀಯ ರಾಯಭಾರಿ ಕಚೇರಿಯಿಂದ ಕೇವಲ 20 ಮೀಟರ್ ದೂರದಲ್ಲಿರುವ ಶಾಲೆಯಲ್ಲಿ ಉಳಿದಿದ್ದಾರೆ. ಆದರೂ, ಭಾರತೀಯ ರಾಯಭಾರ ಕಚೇರಿಯು ಅನುರಾಗ್ ಅವರಿಗೆ ಅಥವಾ ಶಾಲೆಯಲ್ಲಿ ವಾಸಿಸುತ್ತಿರುವ ಉಳಿದ 450 ಜನರಿಗೆ ಸಹಾಯ ಮಾಡಲು ಸಾಧ್ಯವಾಗಿಲ್ಲ ಎಂದು ಅನುರಾಗ್ ವಿವರಿಸಿದ್ದಾರೆ.

ರೈಲುಗಳು ಮಾತ್ರ ಸಾರ್ವಜನಿಕ ಸಾರಿಗೆಯಾಗಿ ಕಾರ್ಯನಿರ್ವಹಿಸುತ್ತಿವೆ. ಉಕ್ರೇನ್ ವಿವಿಧ ಭಾಗದ ಜನರನ್ನು ಪಶ್ಚಿಮ ಗಡಿ ಪಟ್ಟಣಗಳಾದ ಇವಾನೊ ಮತ್ತು ಚೆರ್ನಿವಿಟ್ಸಿಗೆ ರೈಲುಗಳ ಮೂಲಕ ಸ್ಥಳಾಂತರಿಸಲಾಗುತ್ತಿದೆ. ಅದಕ್ಕಾಗಿ, ವಿದ್ಯಾರ್ಥಿಗಳಿಗೆ ಆಸನಗಳನ್ನು ಕಾಯ್ದಿರಿಸಗುತ್ತಿದೆ ಎಂದು ತಿಳಿದಾಗ ಸಂತೋಷವಾಯಿತು. ನಮ್ಮೊಂದಿಗಿದ್ದ “250ಕ್ಕೂ ಹೆಚ್ಚು ಜನರು ರೈಲು ನಿಲ್ದಾಣವನ್ನು ತಲುಪಿದರು. ಆದರೆ ಅಲ್ಲಿ ರಾಯಭಾರಿ ಅಧಿಕಾರಿಗಳು ಇರಲಿಲ್ಲ. ಸ್ಥಳೀಯರು ಬಂದೂಕುಗಳನ್ನು ಹಿಡಿದುಕೊಂಡು ನಮ್ಮನ್ನು ರೈಲು ಹತ್ತಲು ಬಿಡಲಿಲ್ಲ” ಎಂದು ಅನುರಾಗ್ ವಿವರಿಸಿದ್ದಾರೆ.

ರೈಲು ನಿಲ್ದಾಣದಿಂದ ನಾವು ಮತ್ತೆ ಶಾಲೆಗೆ ಮರಳಿದಾಗ ಕೇವಲ 180 ಜನರು ಉಳಿದಿದ್ದರು. ಇತರರು ಎಲ್ಲಿಗೆ ಹೋದರು ಎಂಬುದು ನಮಗೆ ತಿಳಿದಿಲ್ಲ. ನಾವು ಅವರನ್ನು ಸಂಪರ್ಕಿಸಲು ಸಾಧ್ಯವಿಲ್ಲ ಎಂದು ಅನುರಾಗ್ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್‌: ಲಂಗರ್‌‌ನ ಈ ಚಿತ್ರ ಯುದ್ದ ಪೀಡಿತ ಉಕ್ರೇನ್‌ ದೇಶದ್ದಲ್ಲ

“ಇಲ್ಲಿ ಯಾವುದೇ ಕಾನೂನು ಇಲ್ಲ ಮತ್ತು ಸರ್ಕಾರವು ಸ್ಥಳೀಯರನ್ನು ಶಸ್ತ್ರಸಜ್ಜಿತಗೊಳಿಸಿದೆ. ಬಂದೂಕು ಹಿಡಿದ ನಾಲ್ಕು ಜನರು ಬಾಗಿಲು ಮುರಿದು ನಮ್ಮ ಹಾಸ್ಟೆಲ್‌ನ ನೆಲಮಾಳಿಗೆಯಲ್ಲಿರುವ ಜಿಮ್‌ಗೆ ನುಗ್ಗಿದರು. ನಮ್ಮಲ್ಲಿ ತುಂಬಾ ಜನ ಇದ್ದುದನ್ನು ನೋಡಿ ಹೊರಟುಹೋದರು. ಈಗ, ನಾವು ಪೀಠೋಪಕರಣಗಳು ಮತ್ತು ಮರದ ಕೊಂಬೆಗಳಿಂದ ದ್ವಾರವನ್ನು ಭದ್ರಪಡಿಸಿದ್ದೇವೆ. ಮೂರು ದಿನಗಳಿಂದ ನಿದ್ದೆ ಮಾಡಿಲ್ಲ. ಭಾರತಕ್ಕೆ ಮರಳುತ್ತೇವೆ ಎಂಬ ಭರವಸೆಯೂ ನಮಗೆ ಇಲ್ಲ” ಎಂದು ಕೀವ್‌ನ ವೈದ್ಯಕೀಯ ಕಾಲೇಜಿನ ಹಾಸ್ಟಲ್‌ನಲ್ಲಿರುವ ಉತ್ತರ ಪ್ರದೇಶ ಮೂಲದ ವಿದ್ಯಾರ್ಥಿ ಅಧಿವೇಶ್ ಧಾಮಾ ಹೇಳಿದ್ದಾರೆ.

ಚುನಾವಣೆಯಲ್ಲಿ ಮುಳುಗಿದ್ದ ಕೇಂದ್ರ ಸರ್ಕಾರ: ಸರೋವರ್‌‌

“ಕಳೆದ ಒಂದು ತಿಂಗಳಿನಿಂದ ಉಕ್ರೇನ್ ಮತ್ತು ರಷ್ಯಾ ನಡುವಿನ ಸಂಘರ್ಷವು ಚರ್ಚೆಯಲ್ಲಿತ್ತು. ಯುದ್ದ ಆರಂಭವಾಗುವ ಅತಂಕವೂ ವ್ಯಕ್ತವಾಗುತ್ತಿತ್ತು. ಹೀಗಾಗಿ, ಅಮೆರಿಕ, ಇಂಗ್ಲೆಂಡ್ ಸೇರಿದಂತೆ ವಿವಿಧ ರಾಷ್ಟ್ರಗಳು ತಮ್ಮ ದೇಶದ ಪ್ರಜೆಗಳನ್ನು ಉಕ್ರೇನ್‌ನಿಂದ ವಾಪಸ್ ಕರೆಸಿಕೊಂಡಿವೆ. ಆದರೆ, ಭಾರತದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ ಸಚಿವರು ಐದು ರಾಜ್ಯಗಳ ಚುನಾವಣೆಯ ಪ್ರಚಾರದಲ್ಲಿ ಮುಳುಗಿದ್ದರು. ಅವರು ಉಕ್ರೇನ್ ಬಿಕ್ಕಟ್ಟಿನ ಬಗ್ಗೆಯಾಗಲೀ, ಅಲ್ಲಿರುವ ಭಾರತೀಯ ಪರಿಸ್ಥಿತಿ- ರಕ್ಷಣೆ ಬಗೆಗಾಗಲೀ ಯೋಚಿಸಲಿಲ್ಲ. ಹೀಗಾಗಿ, ಭಾರತೀಯರು ಉಕ್ರೇನ್‌ನಲ್ಲಿ ಬದುಕಿಗಾಗಿ ಹೋರಾಡುವ ಸ್ಥಿತಿಯಲ್ಲಿದ್ದಾರೆ” ಎಂದು ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸಂಚಾಲಕ ಸರೋವರ್ ಬೆಂಕಿಕೆರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಭಾರತದಲ್ಲಿ ಶಿಕ್ಷಣವು ದುಬಾರಿಯಾಗಿದೆ ಮತ್ತು ಮಾರಾಟಕ್ಕಿದೆ. ಉಳ್ಳವರು ಮಾತ್ರ ದೇಶದಲ್ಲಿ ಉತ್ತಮ ಶಿಕ್ಷಣವನ್ನು ಪಡೆಯುತ್ತಿದ್ದು, ಇಲ್ಲದವರು ಶಿಕ್ಷಣದಿಂದ ವಂಚಿತರಾಗುತ್ತಾರೆ ಅಥವಾ ತಿಳಿವಳಿಕೆ ಇರುವವರು ಕಡಿಮೆ ಖರ್ಚಿನಲ್ಲಿ ಶಿಕ್ಷಣ ಸಿಗುವ ಉಕ್ರೇನ್‌ನಂತಹ ದೇಶಗಳಿಗೆ ವಲಸೆ ಹೋಗುತ್ತಾರೆ. ಹೀಗಾಗಿ ಭಾರತದ ಹೆಚ್ಚಿನ ವೈದ್ಯಕೀಯ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ನೆಲೆಸಿದ್ದಾರೆ. ಭಾರತದಲ್ಲಿ ಸರ್ಕಾರ ಉನ್ನತ ಮತ್ತು ವೃತ್ತಿಪರ ಶಿಕ್ಷಣವು ಕೈಗೆಟುಕುವ ವೆಚ್ಚದಲ್ಲಿ ಸಿಗುವಂತಾಗಬೇಕು. ಇಲ್ಲಿನ ಯುವಜನರಿಗೆ ಇಲ್ಲೇ ಉತ್ತಮ ಶಿಕ್ಷಣ ಮತ್ತು ಉದ್ಯೋಗ ದೊರೆಯುವಂತೆ ಯೋಜನೆಗಳನ್ನು ರೂಪಿಸಬೇಕು” ಎಂದು ಸರೋವರ್ ಒತ್ತಾಯಿಸಿದ್ದಾರೆ.


ಇದನ್ನೂ ಓದಿರಿ: ವೈದ್ಯಕೀಯ ‘ಭಾರ‘ತ: ಉಕ್ರೇನ್‌ನಲ್ಲಿ ಸಿಲುಕಿದ ಇಂಡಿಯಾ ವಿದ್ಯಾರ್ಥಿಗಳ ನೋವಿನ ಮೂಲ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ರಷ್ಯಾದ ದಾಳಿ ಭೀತಿ ಇರುವುದರಿಂದ ಉಕ್ರೇನಿನಿಂದ ಭಾರತೀಯರು ತಾತ್ಕಾಲಿಕವಾಗಿ ತೊರೆಯಬೇಕೆಂದು ಭಾರತೀಯ ರಾಯಭಾರಿ ಕಛೇರಿ ಫೆಬ್ರವರಿ 14,2022ರಂದು ಸೂಚನೆ ಹೊರಡಿಸಿದೆ. ಯುದ್ಧವೆಂದ ಮೇಲೆ ಅಲ್ಲಿನ ಉನ್ನತ ರಾಜಕಾರಣಿಗಳೇ ಪ್ರಾಣಾಪಾಯದಿಂದಿರುವಾಗ,ಸೂಚನೆ ನಿರ್ಲಕ್ಷಿಸಿ ಈಗ ನಮ್ಮ ಉನ್ನತ ರಾಜಕಾರಣಿಗಳನ್ನು ಪ್ರಾಣಾಪಾಯಕ್ಕೊಡ್ಡುತ್ತಿದ್ದಾರೆ.ಹೊರದೇಶ, ಯುದ್ಧಗಳನ್ನು ನಿರ್ಲಕ್ಷಿಸಿ ನಷ್ಟವಾದರೆ ನಿರ್ಲಕ್ಷಿಸಿದವರೇ ಹೊಣೆಗಾರರು.

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...