ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ಬಿಸಾಲ್ಪುರ ಪಟ್ಟಣದ 28 ವರ್ಷದ ಯುವಕನ ಮೃತದೇಹವು ಕುತ್ತಿಗೆ ಸೀಳಿ, ಜನನಾಂಗ ಕತ್ತರಿಸಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಪ್ರೇಮ ಸಂಬಂಧದ ಕಾರಣಕ್ಕಾಗಿ ಯುವಕನನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಪ್ರತಿಪಾದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಉತ್ತರ ಪ್ರದೇಶ
ಕೊಲೆಗೀಡಾದ ಯುವಕನನ್ನು ಮುಜಮ್ಮಿಲ್ ಎಂದು ಗುರುತಿಸಲಾಗಿದ್ದು, ಬುಧವಾರ ಬರೇಲಿ ಜಿಲ್ಲೆಯ ಇಜ್ಜತ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬರ್ಕಾಪುರ ಪ್ರದೇಶದ ಕಾಲುವೆಯ ಬಳಿ ಅವರ ಶವವನ್ನು ಕಟ್ಟಿ ಎಸೆದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಬಿಸಾಲ್ಪುರದಲ್ಲಿ ನಾಪತ್ತೆಯಾಗಿದ್ದ ಮುಜಮ್ಮಿಲ್ ಅವರ ಶವವನ್ನು ಬಿಸಾಲ್ಪುರ ಮತ್ತು ಇಜ್ಜತ್‌ನಗರ ಪೊಲೀಸರ ಜಂಟಿ ಕಾರ್ಯಾಚರಣೆಯ ನಂತರ ಪತ್ತೆ ಮಾಡಲಾಗಿದೆ. ಬಿಸಾಲ್ಪುರದಲ್ಲಿ ದಾಖಲಾಗಿದ್ದ ನಾಪತ್ತೆ ಪ್ರಕರಣವನ್ನು ಕೊಲೆ ಪ್ರಕರಣವನ್ನಾಗಿ ಪರಿವರ್ತಿಸಲಾಗಿದ್ದು, ಬಿಸಾಲ್ಪುರ ಪೊಲೀಸರು ಹೆಚ್ಚಿನ ತನಿಖೆ ನಡೆಸಲಿದ್ದಾರೆ” ಎಂದು ಬರೇಲಿ ವೃತ್ತ ಅಧಿಕಾರಿ (ಮೂರನೇ) ದೇವೇಂದ್ರ ಕುಮಾರ್ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಬುಧವಾರ, ಇಜ್ಜತ್‌ನಗರ ಸ್ಟೇಷನ್ ಹೌಸ್ ಆಫೀಸರ್ (SHO) ವಿಜೇಂದ್ರ ಸಿಂಗ್ ಅವರು ಬರ್ಕಾಪುರ ಗ್ರಾಮದ ಕಾಲುವೆಯ ಬಳಿ ಶವವೊಂದರ ಬಗ್ಗೆ ಮಾಹಿತಿ ಪಡೆದರು. ನಮ್ಮ ತಂಡವು ಕಾಲುವೆಯ ಬಳಿಯ ಪೊದೆಗಳಿಂದ ಯುವಕನ ಛಿದ್ರಗೊಂಡ ದೇಹವನ್ನು ವಶಪಡಿಸಿಕೊಂಡಿದೆ. ಮುಜಮ್ಮಿಲ್ ಅವರನ್ನು ಗಂಟಲು ಸೀಳಿ ಕೊಲ್ಲಲಾಗಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಅವರ ಜನನಾಂಗಗಳನ್ನು ಸಹ ಛಿದ್ರಗೊಳಿಸಲಾಗಿದೆ” ಎಂದು ಎಸ್‌ಎಚ್‌ಒ ಸಿಂಗ್ ಹೇಳಿದ್ದಾರೆ.
ಬಿಸಾಲ್ಪುರ ಸಿಒ ಡಾ. ಪ್ರತೀಕ್ ಅವರು ಬಲಿಪಶುವಿನ ದೇಹ ಮತ್ತು ಅಪರಾಧಕ್ಕೆ ಬಳಸಲಾದ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. “ಪಿಲಿಭಿತ್‌ನ ರಿಚೌಲಾ ಗ್ರಾಮದ ಅರ್ಹಾನ್ ಮತ್ತು ಅವರ ಸ್ನೇಹಿತ ಗುಡ್ಡು ಎಂಬ ಇಬ್ಬರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಕೊಲೆಗೀಡಾದ ಮುಜಮ್ಮಿಲ್ ಶಂಕಿತ ಆರೋಪಿಯ ಕುಟುಂಬದ ಮಹಿಳೆಯೊಂದಿಗೆ ಹೊಂದಿದ್ದ ಸಂಬಂಧದಿಂದ ಉಂಟಾದ ವೈಯಕ್ತಿಕ ದ್ವೇಷದ ಪರಿಣಾಮವಾಗಿ ಈ ಕೊಲೆ ನಡೆದಿದೆ” ಎಂದು ಅವರು ಹೇಳಿದ್ದಾರೆ.
ಮುಜಮ್ಮಿಲ್ ಅವರ ತಂದೆ ಶಂಸುದ್ದೀನ್ ಅವರ ಪ್ರಕಾರ, ಅವರ ಮಗ ಮೊಬೈಲ್ ಟವರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಮಂಗಳವಾರ ಬೆಳಿಗ್ಗೆ ಮನೆಯಿಂದ ಹೊರಟಿದ್ದ ಅವರು ನಂತರ ನಾಪತ್ತೆಯಾಗಿದ್ದರು. ಉತ್ತರ ಪ್ರದೇಶ
“ನಾವು ಅವರಿಗೆ ಕರೆ ಮಾಡಲು ಪ್ರಯತ್ನಿಸಿದಾಗ, ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ನಾವು ಬಿಸಾಲ್ಪುರ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದೇವೆ. ಮುಜಮ್ಮಿಲ್ ಕೆಲವು ವ್ಯಕ್ತಿಗಳೊಂದಿಗೆ ಘರ್ಷಣೆಯನ್ನು ಹೊಂದಿದ್ದರು ಮತ್ತು ಅವರ ಕೊಲೆಗೆ ಅವರೇ ಕಾರಣ ಎಂದು ನಾನು ಅನುಮಾನಿಸುತ್ತೇನೆ” ಎಂದು ಶಂಸುದ್ದೀನ್ ಆರೋಪಿಸಿದ್ದಾರೆ.
ಬಿಸಾಲ್ಪುರ ಪೊಲೀಸ್ ಇನ್ಸ್‌ಪೆಕ್ಟರ್ (ಅಪರಾಧ) ವಿನೋದ್ ಕುಮಾರ್ ಶರ್ಮಾ, “ಅರ್ಹಾನ್ ಮತ್ತು ಗುಡ್ಡು ಕೊಲೆಗೆ ಒಪ್ಪಿಕೊಂಡಿದ್ದಾರೆ. ಮುಜಮ್ಮಿಲ್ ಅರ್ಹಾನ್ ಕುಟುಂಬದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು. ಇದು ಅವರ ನಡುವೆ ಈ ಹಿಂದೆ ವಿವಾದಗಳಿಗೆ ಕಾರಣವಾಗಿತ್ತು” ಎಂದು ಹೇಳಿದ್ದಾರೆ.
ವಿಚಾರಣೆಯ ಸಮಯದಲ್ಲಿ ಆರೋಪಿಯು ಪೊಲೀಸರಿಗೆ ಮೃತನಿಗೆ ತನ್ನ ಸಹೋದರಿಯೊಂದಿಗೆ ಪ್ರೇಮ ಸಂಬಂಧವಿತ್ತು. ಅವಳನ್ನು ಭೇಟಿಯಾಗದಂತೆ ಹಲವಾರು ಬಾರಿ ಎಚ್ಚರಿಸಿದ ನಂತರವೂ ಅವನು ಕೇಳಲಿಲ್ಲ, ಇದರಿಂದಾಗಿ ಅವನನ್ನು ಕೊಂದಿದ್ದೇವೆ ಎಂದು ತಿಳಿಸಿದ್ದಾನೆ ಎಂದು ವರದಿಯಾಗಿದೆ. “ಪ್ರತಿಕಾರದಿಂದಾಗಿ ಶಂಕಿತರು ಬಿಸಾಲ್ಪುರ ಪ್ರದೇಶದಲ್ಲಿ ಮುಜಮ್ಮಿಲ್‌ನನ್ನು ಕೊಂದು, ಅವನ ದೇಹವನ್ನು ಕಟ್ಟಿ, ಕಾರಿನಲ್ಲಿ ಸಾಗಿಸಿ, ಬರೇಲಿಯಲ್ಲಿ ಎಸೆದಿದ್ದಾರೆ” ಎಂದು ಶರ್ಮಾ ಹೇಳಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ಕಾನೂನು ಕ್ರಮಗಳು ಮತ್ತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂಓದಿ: ಲಕ್ನೋದ ಐತಿಹಾಸಿಕ ಇಮಾಂಬರಾಗಳು ವಕ್ಫ್ ಭೂಮಿಯಲ್ಲಿ ನಿರ್ಮಿಸಲಾಗಿಲ್ಲ: ಉತ್ತರಪ್ರದೇಶ ಸರ್ಕಾರ
ಲಕ್ನೋದ ಐತಿಹಾಸಿಕ ಇಮಾಂಬರಾಗಳು ವಕ್ಫ್ ಭೂಮಿಯಲ್ಲಿ ನಿರ್ಮಿಸಲಾಗಿಲ್ಲ: ಉತ್ತರಪ್ರದೇಶ ಸರ್ಕಾರ


