13 ಮತ್ತು 16 ವರ್ಷ ವಯಸ್ಸಿನ ಇಬ್ಬರು ದಲಿತ ಬಾಲಕಿಯರ ಶವಗಳು ಬುಧವಾರ ಸಂಜೆ ಉತ್ತರಪ್ರದೇಶದ ಉನ್ನಾವೊ ಜಿಲ್ಲೆಯ ಗ್ರಾಮದ ಕುಟುಂಬವೊಂದರ ಜಮೀನಿನಲ್ಲಿ ಪತ್ತೆಯಾಗಿವೆ. ಮತ್ತೊಬ್ಬ 17 ವರ್ಷದ ಬಾಲಕಿಯ ಸ್ಥಿತಿ ಗಂಭೀರ ವಾಗಿದೆ. ಹಿರಿಯ ಹುಡುಗಿಯರು ಸಹೋದರಿಯರಾಗಿದ್ದರು, 13 ವರ್ಷದ ಹುಡುಗಿ ಅವರ ಸೋದರಸಂಬಂಧಿ ಎಂದು ಇಂಡಿಯನ್‌ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಪೊಲೀಸರು ಇದು ವಿಷಪ್ರಾಶನದ ಪ್ರಕರಣ ಎಂದು ಶಂಕಿಸಿದ್ದಾರೆ, ಸ್ಥಳದಲ್ಲಿ ಯಾವುದೇ ಹೋರಾಟದ ಲಕ್ಷಣಗಳಿಲ್ಲ ಮತ್ತು ಯಾವುದೇ ಗಾಯದ ಗುರುತುಗಳು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಬಾಲಕಿಯರ ಸಹೋದರ, ತನ್ನ ಸಹೋದರಿಯರ ಕೈ-ಕಾಲುಗಳನ್ನು ಕಟ್ಟಿ ಹಾಕಲಾಗಿತ್ತು ಎಂದು ಆರೋಪಿಸಿದ್ದಾರೆ.. ಆಸ್ಪತ್ರೆಗೆ ಬಂದಾಗ ಕಿರಿಯ ಬಾಲಕಿಯರನ್ನು ಮೃತರೆಂದು ಘೋಷಿಸಲಾಗಿದ್ದರೆ, 17 ವರ್ಷದ ಯುವತಿಯು ಸ್ಥಿತಿ ಗಂಭೀರವಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಹೋದರ, “ಅವರು ಹುಲ್ಲು ಕೊಯ್ಯಲು ಜಮೀನಿಗೆ ಹೋಗಿದ್ದರು. ಇಂದು, ಅವರು ತಡವಾದರೂ ಹಿಂತಿರುಗದೇ ಇದ್ದಾಗ, ನಾವು ಅವರನ್ನು ಹುಡುಕಲು ಹೋದೆವು. ಅವರ ಕೈಕಾಲುಗಳನ್ನು ಬಟ್ಟೆಗಳಿಂದ ಕಟ್ಟಿ ಹಾಕಿದ್ದನ್ನು ಕಂಡೆವು’ ಎಂದಿದ್ದಾರೆ.
ಲಕ್ನೋ ವಲಯದ ಐಜಿ ಲಕ್ಷ್ಮಿ ಸಿಂಗ್, ಹುಡುಗಿಯರನ್ನು ಕಟ್ಟಿಹಾಕಲಾಗಿತ್ತೆ ಎಂಬುದು ಇನ್ನೂ ದೃಢಪಟ್ಟಿಲ್ಲ. ಮೃತರ ಸಹೋದರ ಈ ಹೇಳಿಕೆಯನ್ನು ನೀಡಿದ್ದಾನೆ, ಆದರೆ ಪೊಲೀಸರು ಸ್ಥಳ ತಲುಪುವ ಮೊದಲು ಶವಗಳನ್ನು ಆ ಜಾಗದಿಂದ ತೆಗೆದಿದ್ದರಿಂದ ನಾವು ಈಗ ಏನನ್ನೂ ಹೇಳಲಾಗುವುದಿಲ್ಲ” ಎಂದು ಹೇಳಿದ್ದಾರೆ.
ಯುಪಿ ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್, ಬಾಲಕಿಯರು ಬುಧವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ತಮ್ಮ ಮನೆಯಿಂದ ಹೊರಟು ಹೋಗಿದ್ದು, ಸಂಜೆ ಕುಟುಂಬ ಸದಸ್ಯರು ಇದನ್ನು ಪತ್ತೆ ಮಾಡಿದ್ದಾರೆ.
ಉನ್ನಾವೊ ಎಸ್ಪಿ ಸುರೇಶರಾವ್ ಎ ಕುಲಕರ್ಣಿ, “ಅಶೋಹಾ ಪೊಲೀಸ್ ಠಾಣೆ ಮಿತಿಯಲ್ಲಿ, ಮೂವರು ಬಾಲಕಿಯರು ತಮ್ಮ ಜಮೀನಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ. ಅವರು ಮೇವು/ಹುಲ್ಲು ತರಲು ಹೋಗಿದ್ದರು ಮತ್ತು ಕುಟುಂಬ ಸದಸ್ಯರು ಅವರನ್ನು ಹುಡುಕಲು ಹೋದಾಗ, ಅವರು ಹೊಲದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡುಕೊಂಡರು. ಅವರ ಬಾಯಿಯಿಂದ ಬಿಳಿ ಪದಾರ್ಥ ಹೊರಬರುತ್ತಿತ್ತು, ಇದು ವಿಷಪ್ರಾಶನದ ಲಕ್ಷಣ ಎಂದು ವೈದ್ಯರು ತಕ್ಷಣಕ್ಕೆ ಅನುಮಾನಿಸಿದ್ದಾರೆ. ನಾವು ಸಂಬಂಧಪಟ್ಟ ಎಲ್ಲ ಜನರ ಹೇಳಿಕೆಗಳನ್ನು ದಾಖಲಿಸುತ್ತಿದ್ದೇವೆ ಮತ್ತು ಆಳವಾದ ತನಿಖೆ ನಡೆಸಲಾಗುತ್ತಿದೆ. ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ” ಎಂದಿದ್ದಾರೆ.
ಎಡಿಜಿ (ಲಕ್ನೋ ವಲಯ) ಎಸ್ ಎನ್ ಸಬತ್, ಅಪರಾಧದ ಸ್ಥಳದಲ್ಲಿ ಯಾವುದೇ ಹಿಂಸಾಚಾರ ಅಥವಾ ಹೋರಾಟದ ಲಕ್ಷಣಗಳಿಲ್ಲ ಎಂದು ಹೇಳಿದರು. “ನಮ್ಮ ತನಿಖೆ ನಡೆಯುತ್ತಿದೆ. ನಾವು ಸಾಧ್ಯವಿರುವ ಎಲ್ಲ ಕೋನಗಳಲ್ಲಿ ತನಿಖೆ ಮಾಡುತ್ತಿದ್ದೇವೆ” ಎಂದು ಎಡಿಜಿ ಹೇಳಿದ್ದಾರೆ.
ಹೆಚ್ಚಿನ ತನಿಖೆಗಾಗಿ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಉನ್ನಾವ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಮೋದಿಯವರ ಮೌನ – ನಮ್ಮ ಹೆಣ್ಣುಮಕ್ಕಳಿಗೆ ಅಪಾಯ: ಚಂದ್ರಶೇಖರ್ ಆಜಾದ್


