Homeಮುಖಪುಟಉತ್ತರ ಕನ್ನಡ ಬಿಜೆಪಿಗೆ ಯಾರಾಗ್ತಾರೆ ಅಧ್ಯಕ್ಷ?!

ಉತ್ತರ ಕನ್ನಡ ಬಿಜೆಪಿಗೆ ಯಾರಾಗ್ತಾರೆ ಅಧ್ಯಕ್ಷ?!

- Advertisement -

ಉತ್ತರ ಕನ್ನಡದ ಕೇಸರಿ ಪಾಳೆಯದ ಒಳರಾಜಕಾರಣಕ್ಕೆ ಒಂದೇ ಸಮನೆ ಕಾವೇರುತ್ತಿದೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಾಂತರಿ ಶಿವರಾಮ ಹೆಬ್ಬಾರರನ್ನು ಗೆಲ್ಲಿಸುವುದಕ್ಕಿಂತಲೂ ನಿಷ್ಠಾವಂತ ಅನುಯಾಯಿ ಒಬ್ಬರನ್ನು ಜಿಲ್ಲಾ ಬಿಜೆಪಿ ಪೀಠದಲ್ಲಿ ಪ್ರತಿಷ್ಠಾಪಿಸುವ ತಂತ್ರಗಾರಿಕೆ ಬಗ್ಗೆಯೇ ಸಂಘಿ ಸರದಾರರು ತಲೆಕೆಡಿಸಿಕೊಂಡಿದ್ದಾರೆ. ಹೆಬ್ಬಾರ್ ಗೆಲ್ಲಬೇಕಾಗಿರುವುದು ಸಿಎಂ ಯಡ್ಡಿ ಮಹಾತ್ಮರಿಗೆ ಮಾತ್ರ. ನಿಷ್ಠಾವಂತ ಸಂಘ ಸೈನಿಕರಿಗೆ ಆತ ಗೆದ್ದರೂ ಸೋತರೂ ಫರಕೇನೂ ಬೀಳುವುದಿಲ್ಲ. ಸ್ಪೀಕರ್ ಕಾಗೇರಿ, ಸಂಸದ ಅನಂತ್ಮಾಣಿ, ಎಡಬಿಡಂಗಿ ವಕ್ತಾರ ಪ್ರಮೋದ್ ಹೆಗಡೆ ವಗೈರೆ ಬಿಜೆಪಿಯ ಘಟಾನುಘಟಿಗಳಿಗೆ ಹೆಬ್ಬಾರ್ ಸೋತರೇನೇ ಸುಗ್ಗಿ ಸಂಭ್ರಮ!!

ಬಿಜೆಪಿಯಲ್ಲೀಗ ಸಾಂಸ್ಥಿಕ ಚುನಾವಣೆ ನಡೆಯುತ್ತಿದೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಹಿಂದೂತ್ವದ ಗುಣಧರ್ಮದ ಜತೆಗೆ ದುಡ್ಡು ದಂಡಿಯಾಗಿರುವ ಆಸಾಮಿಯನ್ನು ತರಲು ಆರೆಸ್ಸೆಸ್‍ನ ಹಿರಿ ತಲೆಗಳು ತಲಾಶ್ ನಡೆಸಿದ್ದಾರೆ. ವಿಧಾನಸಭಾಧ್ಯಕ್ಷ, ಸಂಸದ, ಭಾವಿ ಮಂತ್ರಿಗಿರಿಯಂಥ ಆಯಕಟ್ಟಿನ ಸ್ಥಾನ ಮತ್ತು ನಿಗಮ-ಮಂಡಳಿ ಅಧಿಕಾರವೆಲ್ಲ ಹವ್ಯಕ ಬ್ರಾಹ್ಮಣ ಬಳಗಕ್ಕೇ ದಕ್ಕುತ್ತಿರುವುದು ಹಿಂದುಳಿದ ವರ್ಗದ ಕಾರ್ಯಕರ್ತರಲ್ಲಿ ರೊಚ್ಚು ಮೂಡಿಸಿದೆ. ಬಿಜೆಪಿಯ ಹಾರವ ಲೀಡರ್‍ಗಳು ಧರ್ಮ, ದೇವರ ಹೆಸರಲ್ಲಿ ಶೂದ್ರರನ್ನು ಮುಂದೆ ನಿಲ್ಲಿಸಿ ಹಿಂದಿನಿಂದ ಅಧಿಕಾರ-ಸುಖ ಸಂಪತ್ತು ಪಡೆಯುತ್ತಿದ್ದಾರೆಂಬ ‘ತಿಳಿವಳಿಕೆ’ ಈಗೀಗ ಹಿಂದುಳಿದ ವರ್ಗದ ಮುಖಂಡರಿಗೆ ಬರತೊಡಗಿದೆ. ಈ ಆತೃಪ್ತ ಶೂದ್ರ ಸಂಕುಲ ಒಂದಾಗದಂತೆ ಜನಿವಾರ ಮಂತ್ರ ಪ್ರಯತ್ನಿಸುತ್ತಿದೆ.

ಅಸಮಾಧಾನಗೊಂಡಿರುವ ಹಿಂದುಳಿದವರಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನ ಕೊಟ್ಟು ಬಾಯಿ ಮುಚ್ಚಿಸಿ ತಾವು ನಿಗಮ-ಮಂಡಳಿ-ಮಂತ್ರಿ-ಸಂಸದರಂತಹ ಲಾಭದಾಯಕ ಹುದ್ದೆಯಲ್ಲಿ ಮುಂದುವರಿಯಬೇಕೆಂಬ ಹಿಕಮತ್ತು ಸಂಘಪರಿವಾರದ ರಿಂಗ್‍ಮಾಸ್ಟರ್‍ಗಳು ಹೊಸ ಪ್ಲಾನು ಮಾಡಿದ್ದಾರೆ. ಈಚೆಗೆ ನೇಮಕವಾದ ಎರಡು ನಿಗಮ-ಮಂಡಳಿ ಮುಖ್ಯಸ್ಥರು ಹವ್ಯಕ ಬ್ರಾಹ್ಮಣರು. ಜೀವ ವೈವಿಧ್ಯ ಮಂಡಳಿಗೆ ಅನಂತ ಅಶೀಸರ ನೆಗೆದು ಕೂತಿದ್ದಾರೆ. ಎಂ.ಎ.ಹೆಗಡೆ ಎರಡನೇ ಅವಧಿಗೆ ಯಕ್ಷಗಾನ ಮಂಡಳಿಗೆ ವಕ್ಕರಿಸಿದ್ದಾರೆ. ಮಜಾ ಎಂದರೆ ಈ ಎಂ.ಎ.ಹೆಗಡೆ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗಲೇ ಯಕ್ಷಗಾನ ಮಂಡಳಿಗೆ ಗದ್ದುಗೆ ಗಿಟ್ಟಿಸಿದ್ದರು. ಈಗ ಚೆಡ್ಡಿಬಿಡಾರದಲ್ಲಿರುವ ಕುಲಬಂಧು ಭೂತದ ಮೂಲಕ ಲಾಬಿ ಮಾಡಿಸಿ ಅದೇ ಕುರ್ಚಿಯಲ್ಲಿ ಫೆವಿಕಾಲ್ ಹಾಕಿ ಕುಂತಿದ್ದಾರೆ. ಇದು ಅಬ್ರಾಹ್ಮಣರ ಕಣ್ಣು ಕುಕ್ಕುತ್ತಿದೆ ಎಂಬ ವಾಸ್ತವ ಅರಿತಿರುವ ಚೆಡ್ಡಿ ಚೆತುರರು ಜಿಲ್ಲಾ ಬಿಜೆಪಿ ಅಧ್ಯಕ್ಷತೆಗೆ ಹಿಂದುಳಿದವರ ತರಲು ಹವಣಿಸುತ್ತಿದ್ದಾರೆ.

ಆರೆಸ್ಸೆಸ್ ಆಯ್ಕೆ ಕುಮಟಾ ಮೂಲದ ಬೆಳಗಾವಿ-ಮುಂಬೈನ ನಿಗೂಢ ಉದ್ಯಮಿ ಸುಬ್ರಿಯ ವಾಳ್ಕೆ. ಈತ ಸಂಘಪರಿವಾರದ ಸಿದ್ಧಾಂತಿಯೆಂದು ಆರೆಸ್ಸೆಸ್ ಸೂತ್ರಧಾರರು ಹೇಳುತ್ತಿದ್ದಾರೆ. ಆದರೆ ಕಳೆದ ಬಾರಿಯ ಅಸೆಂಬ್ಲಿ ಇಲೆಕ್ಷನ್‍ನಲ್ಲಿ ಕುಮಟೆಯಿಂದ ಬಿಜೆಪಿ ಹುರಿಯಾಳಾಗಲು ತಿಪ್ಪರಲಾಗ ಹಾಕಿದ್ದ ವಾಳ್ಕೆ ಆರೆಸೆಸ್ ಹಿನ್ನಲೆಯಾತನಲ್ಲ. ಬಡ ಮಾಲ್ಕರಿ (ಹೋಟೇಲುಗಳ ತಿಂಡಿ ಕರಿಯುವವ) ಮಗನಾದ ವಾಳ್ಕೆ ಬದುಕಲು ಕಷ್ಟಪಟ್ಟವನು. ಹೊಟ್ಟೆ ಪಾಡಿಗಾಗಿ ಬೆಳಗಾವಿ ಸೇರಿದ್ದ ವಾಳ್ಕೆ ಪರಿಚಯ ಹೀಗಿದೆ. ಕುಮಟೆಯಲ್ಲಿ ಆತನ ಹೆಂಡತಿ ನಿಗೂಢ ಅಪಘಾತದಲ್ಲಿ ಸತ್ತು ಹೋದಾಗ ಮತ್ತು ಆತ ತನ್ನ ಉದ್ಯಮದಲ್ಲಿ ಸಹಾಯಕಿಯಾಗಿದ್ದ ಹುಡುಗಿಯನ್ನೇ ಮರುಮದುವೆ ಆದಾಗ ವಾಳ್ಕೆ ‘ಪ್ರಸಿದ್ಧಿ’ ಕುಮಟೆಯಲ್ಲಾಗಿತ್ತು!! ಆತನಲ್ಲಿರುವ ಅಪಾರ ಹಣದ ಗಂಟಿನ ಮೇಲೆ ಕಣ್ಣು ಹಾಕಿದ ಚೆಡ್ಡಿ ದೊರೆಗಳು ಆತನೇ ಜಿಲ್ಲಾ ಬಿಜೆಪಿ ಅಧ್ಯಕ್ಷತೆಗೆ ಯೋಗ್ಯನೆಂದು ಬಿಂಬಿಸುತ್ತಿದ್ದಾರೆ.

ಮುಂಬೈನ ಬಿಜೆಪಿಯ ಟಾಪ್ ಲೀಡರ್‍ಗಳನ್ನು ಹಿಡಿದು ಲಾಬಿ ಮಾಡಿದರೂ ಕುಮಟೆ ಎಮ್ಮೆಲ್ಲೆಗಿರಿಗೆ ನಿಲ್ಲುವ ಛಾನ್ಸ್ ವಾಳ್ಕೆಗೆ ಸಿಕ್ಕಿರಲಿಲ್ಲ. ಈಗ ತನ್ನ ಮೇಲೆ ಏಕಾಏಕಿ ಜಿಲ್ಲಾಧ್ಯಕ್ಷನಾಗಿ ಮಾಡುವ ಮಮಕಾರ ಬಿಜೆಪಿ ಹಿರಿಯರಿಗೆ ಬಂದಿದ್ದೇಕೆಂಬುದು ವಾಳ್ಕೆಗೆ ಅರ್ಥವಾಗಿದೆ. ತನ್ನಲ್ಲಿರುವ ಹಣ ಪಕ್ಷದ ಸಂಘಟನೆಗೆ ಬಳಸಿ ಕಡೆಗೊಂದು ದಿನ ಈ ದೊಡ್ಡವರು ಕೈಗೆ ಗೆರಟೆ ಕೊಟ್ಟು ಕಳಿಸುತ್ತಾರೆಂಬ ಅರಿವು ಪಕ್ಕಾ ವ್ಯಾಪಾರಿಯಾದ ವಾಳ್ಕೆಗಿದೆ. ಹಾಗಾಗಿ ಆತ ಅಧ್ಯಕ್ಷತೆ ತಾನೊಲ್ಲೆ ಅಂತಿದ್ದಾನೆ. ಬೇಕಿದ್ದರೆ ಮುಂದಿನ ಸಾರಿ ಕುಮಟೆಯಲ್ಲಿ ಕ್ಯಾಂಡಿಡೇಟ್ ಮಾಡಿ; ಈ ಖಾಲಿ ಪುಕ್ಕಟ್ಟೆ ಅಧ್ಯಕ್ಷತೆ ನಂಗೆ ಬೇಡ ಎಂದು ಖಡಾಖಂಡಿತ ವಾಳ್ಕೆ ಹೇಳಿದ್ದಾನೆ. ಎಮ್ಮೆಲ್ಲಿಗಿರಿ ಆಸೆ ತೋರಿಸಿ ಈ ಹಿಂದುಳಿದ ವೈಶ್ಯ ಸಮುದಾಯದ ಬಿಸ್ನೆಸ್‍ಮನ್‍ನ ಹಿಂಡುವ ಪ್ಲಾನು ಹಾಕಿದ್ದ ಚೆಡ್ಡಿಗಳೀಗ ಹೊಸ ಹಣವಂತ ಶೂದ್ರನ ಹುಡುಕಾಟಕ್ಕೆ ಇಳಿದಿದ್ದಾರೆ.

ಈಗಿನ ಅಧ್ಯಕ್ಷ ಕೆ.ಜಿ.ನಾಯ್ಕನಂಥ ದುಡ್ಡಿಲ್ಲದವರು ಸಿಗುತ್ತಿದ್ದಾರೆಯೇ ವಿನಃ ಹಣಕಾಸು ಹರಿಸುವ ಪುಢಾರಿ ಕಾಣಿಸುತ್ತಿಲ್ಲ. ಜಿಲ್ಲಾಧ್ಯಕ್ಷನಾಗುವ ಉಮೇದಿನಲ್ಲಿರುವ ಹಳಿಯಾಳದ ಮಾಜಿ ಶಾಸಕ ಸುನೀಲ್ ಹೆಗಡೆ ಆರೆಸ್ಸೆಸ್ ರಿಂಗ್‍ಮಾಸ್ತರ್‍ಗಳಿಗೆ ಒಪ್ಪಿಗೆ ಆಗುತ್ತಿಲ್ಲ. ಊರು ತುಂಬ ಸಾಲ ಮಾಡಿಕೊಂಡು ಪಾಪರ್ ಆಗಿರುವ ಜಿಲ್ಲಾ ಹೈಕಮಾಂಡ್ ವಿನೋದ್ ಪ್ರಭು, ಅನಂತ್ಮಾಣಿ, ಹನ್ಮಂತ ಶಾನಭಾಗ್ ವಗೈರೆ ಪರಮು ಚೆಡ್ಡಿಗಳದು. ಆದರೆ ಸುನಿಲ್ ಪಟ್ಟು ಸಡಿಲಿಸುತ್ತಿಲ್ಲ. ದೇಶಪಾಂಡೆ ಕ್ಷೇತ್ರದವನಾದ ತಾನು ಜಿಲ್ಲಾ ಬಿಜೆಪಿ ಅಧ್ಯಕ್ಷನಾದರೆ ಹಳಿಯಾಳದಲ್ಲೂ ಕಮಲ ಅರಳಿಸಬಹುದೆಂದು ಕೇಶವಕೃಪಾದಲ್ಲಿ ರಚ್ಚೆ ಹಿಡಿದು ಕುಂತಿದ್ದಾನೆ ಸುನೀಲ್. ಹಣ ಮತ್ತು ಹಿಂದೂತ್ವದ ಕಾಂಬಿನೇಷನ್ ಇರುವಾತ ಸಿಗದೆ ಆರೆಸ್ಸೆಸ್ ಗ್ಯಾಂಗ್ ಗೊಂದಲಕ್ಕೆ ಬಿದ್ದಿದೆ; ಗತಿಯಿಲ್ಲದೆ ಸುನೀಲ್ ಹೆಗಡೆಗೆ ಅಧ್ಯಕ್ಷಗಿರಿ ದೀಕ್ಷೆ ಕೊಡಬೇಕಾದ ಅನಿವಾರ್ಯಕ್ಕೆ ಬಿದ್ದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರ ಪ್ರದೇಶ ಚುನಾವಣೆ: ಬಿಜೆಪಿ ಶಾಸಕರನ್ನು ಬೆನ್ನಟ್ಟಿ ಸ್ವಕ್ಷೇತ್ರದಿಂದ ಓಡಿಸಿದ ಜನತೆ

0
ಮುಂಬರುವ ಉತ್ತರ ಪ್ರದೇಶದ ಚುನಾವಣಾ ಕಣ ದಿನ ದಿನಕ್ಕೂ ರಂಗೇರುತ್ತಿದ್ದು, ಪಕ್ಷದ ಪರ ಪ್ರಚಾರದಲ್ಲಿ ತೊಡಗಿರುವ ಬಿಜೆಪಿ ಶಾಸಕರನ್ನು ಅವರ ಸ್ವಂತ ಕ್ಷೇತ್ರ ಮುಜಾಫರ್‌ನಗರದ ಗ್ರಾಮಸ್ಥರು ಓಡಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್...
Wordpress Social Share Plugin powered by Ultimatelysocial