Homeಕರ್ನಾಟಕಉತ್ತರ ಕನ್ನಡ: ಗ್ರಾಮ ಪಂಚಾಯತ್‌ಗಳಿಗೆ ಕೇಸರಿ ಬಳಿಯಲು ಬಿಜೆಪಿ ಕರಾಮತ್ತು!

ಉತ್ತರ ಕನ್ನಡ: ಗ್ರಾಮ ಪಂಚಾಯತ್‌ಗಳಿಗೆ ಕೇಸರಿ ಬಳಿಯಲು ಬಿಜೆಪಿ ಕರಾಮತ್ತು!

ಕಳೆದ ಇಲೆಕ್ಷನ್‌ನಲ್ಲಿ ಶೇಕಡಾ 80ರಷ್ಟು ಗ್ರಾಮ ಪಂಚಾಯತ್ ಪಾರುಪತ್ಯ ನಡೆಸಿದ್ದ ಕಾಂಗ್ರೆಸ್ ಈ ಬಾರಿ ಶೇ.50ರಷ್ಟು ಗೆಲ್ಲುವುದೂ ಅನುಮಾನ. ಬಿಜೆಪಿಯ ಆಕ್ರಮಣಶೀಲ ಧರ್ಮಕಾರಣದೆದುರು ಕಾಂಗ್ರೆಸ್ ಚೇತರಿಸಿಕೊಳ್ಳುವುದು ಕಷ್ಟ.

- Advertisement -
- Advertisement -

ಉತ್ತರ ಕನ್ನಡದ ಗ್ರಾಮಾಂಗಣಗಳಲ್ಲೀಗ ತರಹೇವಾರಿ “ಕಂಟ್ರಿ ಪಾಲಿಟಿಕ್ಸ್” ಶುರುವಿಟ್ಟುಕೊಂಡಿದೆ! ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ‘ಹಣಾ’ಹಣಿ ನಡೆಯುತ್ತಿರುವಂತೆ ಮೇಲ್ನೋಟಕ್ಕೆ ಭಾಸವಾಗುತ್ತದೆ. ಆದರೆ, ಮತ್ತೊಂದು ಕೋನದಿಂದ ಯುದ್ಧ ಭೂಮಿಯತ್ತ ಕಣ್ಣು ಹಾಯಿಸಿದರೆ ಆಧಿಕಾರ ಬಲ, ಧರ್ಮ ಕಾರಣದ ಹಿಕಮತ್ತು ಕರಗತ ಮಾಡಿಕೊಂಡಿರುವ ಆಳುವ ಬಿಜೆಪಿಗೆ ಎದುರಾಳಿಯೇ ಇಲ್ಲವೇನೊ ಅನ್ನಿಸುತ್ತದೆ! ಬಿಜೆಪಿಯ ರಾಷ್ಟ್ರ ಮಟ್ಟದ ನಾಯಕಾಗ್ರೇಸರು ಗ್ರಾಪಂ, ಮುಸ್ಸಿಪಾಲಿಟಿ ಮಟ್ಟಕ್ಕೆ ಇಳಿದಿರುವ ಈ ಕಾಲಮಾನದಲ್ಲಿ ಎದುರಾಗಿರುವ ಗ್ರಾಪಂ ಚುನಾವಣೆ ಎರಡು ಕಾರಣಕ್ಕೆ ಕುತೂಹಲ ಕೆರಳಿಸಿದೆ!

ಒಂದು, ಗ್ರಾಪಂಗಳಿಗೆ ಕಡು ಕೇಸರಿ ಬಣ್ಣ ಬಳಿಯುವ ಪಕ್ಕಾ ಪ್ಲಾನು ಹಾಕಿಕೊಂಡಿರುವ ಸಂಘಪರಿವಾರದ ಹಿಂದುತ್ವದ ಅಂತರ್ಜಾಲ ಅತಿ ಸಕ್ರಿಯವಾಗಿರುವುದು. ಮತ್ತೊಂದು, ಈ ಗ್ರಾಪಂ ಚುನಾವಣೆ ನಡೆದು ಇನ್ನೆರಡು ವರ್ಷದಲ್ಲಿ ಬರಲಿರುವ ಅಸೆಂಬ್ಲಿ ಇಲೆಕ್ಷನ್‌ನ ದಿಕ್ಸೂಚಿ ಎಂಬಂತಾಗಿರುವುದು. ಒಂದಂತೂ ಖರೆ – ಹದಗೊಳ್ಳುತ್ತಿರುವ ಅಖಾಡ ಉತ್ತರಕನ್ನಡದ ರಾಜಕೀಯ ಸಮೀಕರಣ ಬದಲಿಸುತ್ತಿದೆ; ಬಿಜೆಪಿ-ಕಾಂಗ್ರೆಸ್ ಒಳಗಿನ ಆಯಕಟ್ಟಿನಲ್ಲಿ ಗಮನಾರ್ಹ ಬದಲಾವಣೆ ತರುವ ಎಲ್ಲ ಸಂಕೇತಗಳೂ ಸ್ಪಷ್ಟವಾಗುತ್ತಿದೆ. ಹಳ್ಳಿಗಳ ರಸ್ತೆ, ಶಾಲೆ, ಕರೆಂಟು ಮುಂತಾದ್ದೆಲ್ಲ ಎಂಪಿ ಮಟ್ಟದ್ದಲ್ಲ; ಅದೆಲ್ಲ ಏನಿದ್ದರೂ ಎಂಎಲ್‌ಎ ಸರಿಪಡಿಸಬೇಕು. ಎಂಪಿ ಸಾಹೇಬರು ದಿಲ್ಲಿಯಲ್ಲಿ ಕುಂತು ಸಂವಿಧಾನ ಬದಲಿಸುವುವವರು ಎಂದು ದೊಡ್ಡಸ್ತಿಕೆ ಪ್ರವರ ಪ್ರದರ್ಶಿಸುತ್ತಿದ್ದ ಸಂಸದ ಅನಂತ ಹೆಗಡೆಯೂ ಈ ಸಲ ಗ್ರಾಮಗಳ ಸಣ್ಣ ಲೆವೆಲ್‌ನ ರಾಜಕೀಯಕ್ಕೆ ಇಳಿದಿದ್ದಾರೆ.

ಬಿಜೆಪಿ ಹಳ್ಳಿಗಳ ಆಡಳಿತ ವಶಪಡಿಸಿಕೊಳ್ಳಲು ವ್ಯವಸ್ಥಿತ ಕಾರ್ಯಾಚರಣೆ ಆರಂಭಿಸಿರುವಾಗ ಎದುರಾಳಿ ಕಾಂಗ್ರೆಸ್ ಉಮೇದುದಾರರಿಗಾಗಿ ತಡಕಾಡುತ್ತಿದೆ. ದೇಶಪಾಂಡೆ ಮತ್ತು ಮಾರ್ಗರೆಟ್ ಆಳ್ವರ ಭಸ್ಮಾಸುರ ಮೇಲಾಟದಿಂದ ಇಡೀ ಪಕ್ಷವೀಗ ಬರಡಾಗಿಹೋಗಿದೆ! ಆದರೂ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಎಂಎಲ್‌ಎಯಾಗುವ ಆಸೆಯಿಟ್ಟುಕೊಂಡಿರುವ ಮಾಜಿ ಶಾಸಕರು ಮಣ್ಣು ರಸ್ತೆಯಲ್ಲಿ “ಮಣ್ಣು” ಹೊರುತ್ತಿದ್ದಾರೆ. ಬಿಜೆಪಿಯ ಹಾಲಿ ಶಾಸಕರು ತಮ್ಮ ಹಿಡಿತ ಹಳ್ಳಿಗಳಲ್ಲಿ ಬಿಗಿಮಾಡಿಕೊಂಡರೆ ಮತ್ತೆ ಟಿಕೆಟ್ ಕ್ಲೇಮ್ ಮಾಡಬಹುದೆಂಬ ಲೆಕ್ಕಾಚಾರದಲ್ಲಿ ಹಳ್ಳಿಗಾಡಿನಲ್ಲಿ ಬೆವರಿಳಿಸುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಜಿಲ್ಲೆಯಲ್ಲಿ ಸುತ್ತು ಹೊಡೆದು ಹೋಗಿದ್ದಾರೆ.

ಉತ್ತರಕನ್ನಡದಲ್ಲಿ ಒಟ್ಟು 231 ಗ್ರಾಪಂಗಳಿವೆ. 8,65,329 ಮತದಾರರಿದ್ದಾರೆ. ಕರಾವಳಿಯ ಐದು ತಾಲ್ಲೂಕುಗಳ 105 ಗ್ರಾಪಂಗಳಿಗೆ ಡಿ.22 ರಂದು ಮತದಾನ; ಗಟ್ಟದ ಮೇಲಿನ ಏಳು ತಾಲ್ಲೂಕುಗಳ 126 ಗ್ರಾಪಂ ರಚನೆಗೆ ಡಿ.27 ರಂದು ಜನಾದೇಶ ಮುಹೂರ್ತ ಫಿಕ್ಸ್ ಮಾಡಲಾಗಿದೆ. ಪಕ್ಷದ ಚಿನ್ಹೆಗಳ ಮೇಲೆ ಚುನಾವಣೆ ನಡೆಯದಾದರೂ ಅತೀ ಹೆಚ್ಚು ಜವಾರಿ ಜಗಳವನ್ನು ಮಾಜಿ-ಹಾಲಿ ಎಮ್ಮೆಲ್ಲೆಗಳು, ಎಂಪಿ, ಮಂತ್ರಿಗಳು ಹುಟ್ಟುಹಾಕಿ ತಾಕತ್ತು ತೋರಿಸಲು ಹವಣಿಸುತ್ತಿದ್ದಾರೆ. ಐದಾರು ತಿಂಗಳಲ್ಲಿ ಬರಲಿರುವ ತಾಪಂ ಮತ್ತು ಜಿಪಂ ಹೋರಾಟಕ್ಕೆ ರಣವೀಳ್ಯ ಕೊಡುವಂತಿದೆ. ಸದರಿ ಗ್ರಾಪಂ ಇಲೆಕ್ಷನ್ ಮೂಲಕ ಹಳ್ಳಿಗಳಲ್ಲಿ ಬಿಜೆಪಿ ನೆಲೆಯನ್ನು ಮಜಬೂತು ಮಾಡಿಕೊಂಡರೆ ವಲಸಿಗ ಶಾಸಕರ ಹಂಗಿರುವುದಿಲ್ಲ ಎಂಬ ಕರಾರುವಾಕ್ ಲೆಕ್ಕಾಚಾರ ಆರ್‌ಎಸ್‌ಎಸ್ ತಂತ್ರಗಾರರದು.

ಕಳೆದ ಅಸೆಂಬ್ಲಿ ಇಲೆಕ್ಷನ್‌ನಲ್ಲಿ ಕರಾವಳಿಯಲ್ಲಿ ಗೆದ್ದ ಬಿಜೆಪಿಯ ಮೂರು ಶಾಸಕರು ಮೂಲ ಸಿದ್ಧಾಂತದವರಲ್ಲ. ಇವರೆಲ್ಲ ವಲಸಿಗರು. ಇಲೆಕ್ಷನ್ ಹತ್ತಿರ ಬಂದಾಗಲೇ ನಿಗೂಢವಾಗಿ ಸತ್ತುಹೋದ ಹೊನ್ನಾವರದ ಮೀನುಗಾರರ ಹುಡುಗ ಪರೇಶ್ ಮೇಸ್ತನ ಹೆಸರಲ್ಲಿ ಸಂಘಪರಿವಾರ ಹುಟ್ಟು ಹಾಕಿದ ಹಿಂದುತ್ವದ ಹುಚ್ಚು ಅಲೆಯೇರಿ ದಡ ತಲುಪಿದವರು. ಇವರಿಂದ ಪಾರ್ಟಿ ಬೆಳೆಯುತ್ತದೆ ಮತ್ತು ಇವರೆಲ್ಲ ಮತ್ತೆ ಗೆಲ್ಲುತ್ತಾರೆಂಬ ನಂಬಿಕೆ ಸಂಘ ಪರಿವಾರದ ಕಟ್ಟರ್ ಸರದಾರರಿಗಿಲ್ಲ. ಈಗಾಗಲೇ ಕಾರವಾರದ ರೂಪಾಲಿನಾಯ್ಕ್ ಮತ್ತು ಭಟ್ಕಳದ ಸುನೀಲ್ ನಾಯ್ಕ್ರನ್ನು ಅನ್‌ಪಾಪ್ಯುಲರ್ ಮಾಡುವ ಮಸಲತ್ತು ನಡೆದಿದೆ. ಕುಮಟೆಯ ಸಣ್ಣ ಗಾಣಿಗ ಜಾತಿಯ ದಿನಕರ ಶೆಟ್ಟಿಯ ದುಡ್ಡಿನ ವ್ಯಾಮೋಹಕ್ಕೆ ಹೆದರಿ ಬಹುಸಂಖ್ಯಾತ ಬ್ರಾಹ್ಮಣ ಅಥವಾ ಕೊಂಕಣಿ ಒಬ್ಬನಿಗೆ ಟಿಕೆಟ್ ಕೊಡುವ ನಿರ್ಧಾರ ಸಂಘ ಪರಿವಾರದ ಬೈಠಕ್‌ನಲ್ಲಿ ಅದೆಂದೋ ತೀರ್ಮಾನ ಆಗಿಹೋಗಿದೆ!!

ಆಪರೇಷನ್ ಕಮಲ ಮಾಡಿಕೊಂಡ ಹದಿನೇಳು ಅನರ್ಹ ಶಾಸಕರ ತಂಡದಲ್ಲಿರುವ ಯಲ್ಲಾಪುರದ ಮಂತ್ರಿ ಶಿವರಾಮ ಹೆಬ್ಬಾರ್ ಬಿಜೆಪಿಯಲ್ಲಿ ಯಡಿಯೂರಪ್ಪನವರ ಯುಗ ಮುಗಿದ ನಂತರ ನೆಲೆ-ಬೆಲೆ ಕಳೆದುಕೊಳ್ಳುತ್ತಾರೆಂಬುದು ಯಲ್ಲಾಪುರದ ಕಾಳಮ್ಮದೇವಿಗೂ ಪಕ್ಕಾ ಆಗಿಹೋಗಿದೆ!! ಸ್ಪೀಕರ್ ಕಾಗೇರಿಯವರನ್ನು ಶಿರಸಿ ಶಾಸಕನ ಸೀಟಿಂದ ಎಳೆದುಹಾಕಿ ತಾನು ಅಲ್ಲಿ ಕುಳಿತುಕೊಳ್ಳುವ ಕನಸು ಹಲವು ದಿನದಿಂದ ಕಾಣುತ್ತಿರುವ ಸಂಸದ ಅನಂತ್ ಹೆಗಡೆ ಈ ಗ್ರಾಪಂ ಇಲೆಕ್ಷನ್‌ನಿಂದ ಆ ಗುರಿ ಈಡೇರಿಸಿಕೊಳ್ಳು ಸ್ಕೆಚ್ ಹೆಣೆದಿದ್ದಾರೆ. ಬಿಜೆಪಿಗೆ ನೆಲೆಯಿಲ್ಲದ ಹಳಿಯಾಳದಲ್ಲಿ ಕಾಂಗ್ರೆಸ್‌ನ ಹಳೆ ಹುಲಿ ಆರ್.ವಿ ದೇಶಪಾಂಡೆ ಮತ್ತು ಅವರೇ ಸಾಕಿಸಲುಹಿ ಎರಡು ಬಾರಿ ಎಂಎಲ್‌ಸಿ ಮಾಡಿರುವ ಎಸ್.ಎಲ್ ಘೋಟನೇಕರ್ ನಡುವೆ ಮುಸುಕಿನ ಗುದ್ದಾಟ ನಡೆದಿದೆ. 1983ರಿಂದ ಒಮ್ಮೆ ಮಾತ್ರ ಸೋತಿರುವ ದೇಶಪಾಂಡೆಗೆ ರಾಜಕೀಯ ನಿವೃತ್ತಿ ಕೊಡಿಸಿ ಹಳಿಯಾಳದ ಎಂಎ¯ ಎಯಾಗುವ ಯೋಚನೆ ಘೋಟನೇಕರ್ ಮಾಡುತ್ತಿದ್ದಾರೆ.

ಬೆಂಗಳೂರು ಮಟ್ಟದ ರಾಜಕಾರಣಿಯಾಗಿರುವ ದೇಶಪಾಂಡೆ ಅಮವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ ಕ್ಷೇತ್ರಕ್ಕೆ ಬಂದು ಹೋಗುತ್ತಿದ್ದಾರೆ. ಘೋಟನೇಕರ್ ಜನರ ನಡುವೆ ಓಡಾಡಿಕೊಂಡಿದ್ದಾರೆ. ಬಹುಸಂಖ್ಯಾತ ಮರಾಠ ಕೋಮಿನ ಘೋಟನೇಕರ್ ಅವರ ಆಟ ಅರಿತಿರುವ ದೇಶಪಾಂಡೆ, ಅವರಿಗೆ ಮೂಗುದಾರ ಹಾಕಲು ನೋಡುತ್ತಿದ್ದಾರೆ. ಗ್ರಾಪಂ ಇಲೆಕ್ಷನ್‌ನಲ್ಲಿ ಹಳಿಯಾಳದ ಉಸ್ತುವಾರಿಯಾಗಿ ಕ್ಷೇತ್ರದಲ್ಲಿ ಭಾವಿ ಶಾಸಕನ ಗೆಟಪ್ ಪ್ರದರ್ಶಿಸಲು ಹೊರಟ ಘೋಟೇಕರ್‌ಗೆ ದೇಶಪಾಂಡೆ ಪಕ್ಕದ ಯಲ್ಲಾಪುರ ಕ್ಷೇತ್ರಕ್ಕೆ ಸಾಗಾಕಿಸಿದ್ದಾರೆ. ಹೆಬ್ಬಾರ್ ಕಾಂಗ್ರೆಸ್‌ನಲ್ಲಿದ್ದಷ್ಟು ದಿನ ಆತನೊಂದಿಗೆ ಸೇರಿ ತನ್ನನ್ನ ಕಾಡಿದ ಘೋಟನೇಕರ್‌ನನ್ನು ಈಗ ಹೆಬ್ಬಾರ್‌ನ ಕ್ಷೇತ್ರಕ್ಕೆ ಉಸ್ತುವಾರಿಯಾಗಿ ಮಾಡಿ ದೇಶಪಾಂಡೆ ಪರಿಣಾಮಗಳಿಗಾಗಿ ಕಾದಿದ್ದಾರೆ. ಮರಾಠರು ಹೆಚ್ಚಿರುವ ಯಲ್ಲಾಪುರ, ಮುಂಡಗೋಡಲ್ಲಿ ಗೆಳೆಯ ಹೆಬ್ಬಾರ್ ಎದುರು ಸ್ಪರ್ಧಿಸುವ ಹಾಗೆ ಮಾಡಿ ಘೋಟನೇಕರ್‌ನ ಇಕ್ಕಟ್ಟಿಗೆ ಸಿಲುಕಿಸಲು ದೇಶಪಾಂಡೆ ಯೋಚನೆ ಹಾಕಿದ್ದಾರೆ!!

ಕಾರವಾರ ಮತ್ತು ಭಟ್ಕಳದಲ್ಲಿ ಅಲ್ಲಿನ ಮಾಜಿ ಶಾಸಕರಾದ ಸತೀಶ್ ಸೈಲ್ ಹಾಗೂ ಮಂಕಾಳ ವೈದ್ಯರಿಗೆ ಕಾಂಗ್ರೆಸ್ ಗೆಲ್ಲಿಸುವ ಹೊಣೆಗಾರಿಕೆ ಕೊಡಲಾಗಿದೆ. ಮತ್ತೆ ಶಾಸಕರಾಗುವ ಹಠದಲ್ಲಿರುವ ಈ ಇಬ್ಬರೂ ತಂತಮ್ಮ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿಗೆ ಪ್ರಬಲ ಮುಖಾಮುಖಿಯಾಗುವುದು ಖಂಡಿತ! ಮಾಜಿ ಶಾಸಕಿ ಶಾರದಾ ಶೆಟ್ಟಿಯವರಿಗೆ ಕುಮಟೆಯ ಉಸ್ತುವಾರಿ ತಪ್ಪಿಸಿರುವುದರ ಹಿಂದೆ ಆಕೆಯ ಹಿತಶತ್ರು ದೇಶಪಾಂಡೆಯವರ ಕುತಂತ್ರವಿದೆ ಎಂಬ ಅನುಮಾನ ಕಾಂಗ್ರೆಸ್ ವಲಯದಲ್ಲಿದೆ. ಇನ್ನೊಂದು ಊಹಾಪೋಹದಂತೆ ತನ್ನ ಆಪ್ತ ವಲಯದಲ್ಲಿರುವ ಶಾರದಾ ಶೆಟ್ಟಿಯವರಿಗೆ ಕ್ಷೇತ್ರವನ್ನು ಹದಮಾಡಿಸಲು, ಡಿಕೆಶಿ ಉಪಾಯವಾಗಿ ದೇಶಪಾಂಡೆಯವರನ್ನು ಕುಮಟಾದಲ್ಲಿ ಬಿಟ್ಟಿದ್ದಾರಂತೆ. ದೇಶಪಾಂಡೆಯವರು ಕುಮಟಾ ಕ್ಷೇತ್ರದ ಬಹುಸಂಖ್ಯಾತ ಬ್ರಾಹ್ಮಣ ಸಮುದಾಯದ ತಮ್ಮ ಶಿಷ್ಯ ಶಿವಾನಂದ ಹೆಗಡೆಯವರಿಗೆ ಮುಂದಿನ ಟಿಕೆಟ್ ಕೊಡಿಸಲು ಯೋಚಿಸಿದ್ದಾರಂತೆ. ಹಾಗೊಮ್ಮೆ ಬ್ರಾಹ್ಮಣರಿಗೆ ಟಿಕೆಟ್ ಕೊಡಬೇಕೆಂದಿದ್ದರೆ ಮಧು ಬಂಗಾರಪ್ಪ ಜತೆ ಕಾಂಗ್ರೆಸ್‌ಗೆ ಬರಲು ಸಿದ್ಧವಾಗಿರುವ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ದಾಯಾದಿ ಮೊಮ್ಮಗ ಶಶಿಭೂಷಣ ಹೆಗಡೆಯೇ ಗಟ್ಟಿ ಹುರಿಯಾಳೆಂದು ದೇಶಪಾಂಡೆ ವಿರೋಧಿ ಬ್ರಾಹ್ಮಣ ಬಣ ವಾದ ಮಂಡಿಸುತ್ತಿದೆ.

ಸಣ್ಣ-ಸಣ್ಣ ಅಂತರದಲ್ಲಿ ಎರಡು ಬಾರಿ ಬಿಜೆಪಿಯಿಂದ ಕುಮಟೆಯಲ್ಲಿ ಮತ್ತು ಎರಡು ಬಾರಿ ಜೆಡಿಎಸ್‌ನಿಂದ ಶಿರಸಿಯಲ್ಲಿ ಸೋತಿರುವ ಶಶಿಭೂಷಣ ಕಾಂಗ್ರೆಸ್ ಕ್ಯಾಂಡಿಡೇಟಾದರೆ ಎರಡೂ ಕಡೆ ಗೆಲ್ಲಬಲ್ಲ ಬುದ್ಧಿವಂತ-ಜನಪರ ತರುಣ. ಬಹಳ ವರ್ಷದಿಂದ ಶಿರಸಿಯಲ್ಲಿ ದರಬಾರು ಮಾಡಿಕೊಂಡಿರುವ ಡಿಸಿಸಿ ಅಧ್ಯಕ್ಷ ಭೀಮಣ್ಣ ನಾಯ್ಕ್ ಅವರಿಗೆ ರೆಸ್ಟ್ ನೀಡಲಾಗಿದೆ. ಇದು ಡಿಕೆಶಿಗೆ ತೀರಾ ಸನಿಹದಲ್ಲಿರುವ ಶಿರಸಿ ಮೂಲದ ಬೆಂಗಳೂರು ನಿವಾಸಿ ಸುಷ್ಮಾ ಹೊನ್ನಾವರ(ರೆಡ್ಡಿ) ಪ್ರಭಾವದಿಂದಾದದ್ದೆಂದು ಕಾಂಗ್ರೆಸ್‌ನಲ್ಲಿ ಗೊಣಗಾಟ ನಡೆದಿದೆ. ಮಾರ್ಗರೇಟ್ ಆಳ್ವ ಬಣದ ಸುಷ್ಮಾರೆಡ್ಡಿ ಹಣವಂತ ಮಹಿಳೆ. ಶಿರಸಿಯಿಂದ ಶಾಸಕಿಯಾಗುವ ತಯಾರಿಯಲ್ಲಿ ಆಕೆ ಈಗಾಗಲೇ ಓಡಾಟ ಆರಂಭಿಸಿದ್ದಾರೆ.

ಕಳೆದ ಇಲೆಕ್ಷನ್‌ನಲ್ಲಿ ಶೇಕಡಾ 80ರಷ್ಟು ಗ್ರಾಮ ಪಂಚಾಯತ್ ಪಾರುಪತ್ಯ ನಡೆಸಿದ್ದ ಕಾಂಗ್ರೆಸ್ ಈ ಬಾರಿ ಶೇ.50ರಷ್ಟು ಗೆಲ್ಲುವುದೂ ಅನುಮಾನ. ಬಿಜೆಪಿಯ ಆಕ್ರಮಣಶೀಲ ಧರ್ಮಕಾರಣದೆದುರು ಕಾಂಗ್ರೆಸ್ ಚೇತರಿಸಿಕೊಳ್ಳುವುದು ಕಷ್ಟ. ಒಡೆದು ಹೋಗಿ ದುರ್ಬಲಗೊಂಡಿರುವ ಕಾಂಗ್ರೆಸ್‌ಗೆ ಬಿಜೆಪಿಯ ಆರ್ಭಟ ಎದುರಿಸಲಾಗುತ್ತಿಲ್ಲವೆಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ!

  • ಶುದ್ಧೋದನ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...