ಕೇದಾರನಾಥಕ್ಕೆ ಹಿಂದೂಯೇತರರ ಪ್ರವೇಶವನ್ನು ನಿರ್ಬಂಧಿಸಬೇಕೆಂದು ಬಿಜೆಪಿ ಶಾಸಕಿ ಆಶಾ ನೌಟಿಯಾಲ್ ಕರೆ ನೀಡುವ ಮೂಲಕ ದೇಶದ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಕೋಮು ಸಾಮರಸ್ಯಕ್ಕೆ ವಿರುದ್ಧವಾದ ಹೇಳಿಕೆ ನೀಡಿದ್ದಾರೆ. “ಕೆಲವು ಚಟುವಟಿಕೆಗಳು ಹಿಂದೂ ಭಕ್ತರನ್ನು ಕೆರಳಿಸುತ್ತಿವೆ, ಚಾರ್ ಧಾಮ್ ಯಾತ್ರೆಯ ನಾಲ್ಕು ಸ್ಥಳಗಳಿಂದ ಹಿಂದೂಯೇತರರನ್ನು ನಿಷೇಧಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
“ನಾನು ಸ್ಥಳೀಯರೊಂದಿಗೆ ಸಭೆ ನಡೆಸಿದೆ, ಹಿಂದೂಯೇತರರು ಅಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಅವರು ನನಗೆ ತಿಳಿಸಿದರು. ಪ್ರಪಂಚದಾದ್ಯಂತದ ಜನರು ಬಾಬಾ ಕೇದಾರವನ್ನು ಪೂಜಿಸಲು ಹೋಗುತ್ತಾರೆ. ಆದ್ದರಿಂದ, ಆ ಹಿಂದೂಯೇತರರು ಅಲ್ಲಿಗೆ ಹೋಗುವುದನ್ನು ನಿಷೇಧಿಸಬೇಕು. ಸ್ಥಳೀಯ ಉದ್ಯಮಿಗಳು ಸಹ ಅಂತಹ ವಿಷಯಗಳನ್ನು ನಿರುತ್ಸಾಹಗೊಳಿಸಬೇಕೆಂದು ಒತ್ತಾಯಿಸಿದರು” ಎಂದು ನೌಟಿಯಾಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
“ನಾನು ಶಾಸಕಿಯಾಗಿರುವುದರಿಂದ, ಈ ವಿಷಯದ ಕುರಿತು ಧ್ವನಿ ಎತ್ತುವ ಜವಾಬ್ದಾರಿ ನನ್ನ ಮೇಲಿದೆ. ಯಾತ್ರಿಕರು ತಾವು ಬರುವ ಅದೇ ನಂಬಿಕೆಯೊಂದಿಗೆ ಚಾರ್ ಧಾಮ್‌ನಿಂದ ಹಿಂತಿರುಗಬೇಕು” ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಶಿವನಿಗೆ ಅರ್ಪಿತವಾದ ಪವಿತ್ರ ಜ್ಯೋತಿರ್ಲಿಂಗವೆಂದು ಪರಿಗಣಿಸಲಾದ ಕೇದಾರನಾಥವು ಚಾರ್ ಧಾಮ್ ಸರ್ಕ್ಯೂಟ್‌ನಲ್ಲಿ ಪ್ರಮುಖ ಸ್ಥಳವಾಗಿದೆ. ಇದರಲ್ಲಿ ಬದರಿನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ಕೂಡ ಸೇರಿವೆ. ವಾರ್ಷಿಕ ತೀರ್ಥಯಾತ್ರೆ ಏಪ್ರಿಲ್ 30 ರಂದು ಪ್ರಾರಂಭವಾಗಲಿದ್ದು, ಕೇದಾರನಾಥದ ಬಾಗಿಲು ಮೇ 2 ರಂದು ತೆರೆಯಲಿದೆ.

ಆದರೆ, ನೌತಿಯಾಲ್ ಅವರ ಹೇಳಿಕೆಗಳಿಗೆ ವಿರೋಧ ಪಕ್ಷದ ನಾಯಕರಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಸೂರ್ಯಕಾಂತ್ ಧಸ್ಮಣ ಅವರು, “ಮಹಾ ಕುಂಭ, ಹೋಳಿ, ಜುಮ್ಮೆ ಕಿ ನಮಾಜ್ ಅಥವಾ ಚಾರ್ ಧಾಮ್ ಯಾತ್ರೆಯಾಗಿರಲಿ, ಬಿಜೆಪಿ ಪದೇಪದೆ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಕೋಮು ಸಾಮರಸ್ಯವನ್ನು ಹಾಳುಮಾಡುತ್ತಿದೆ. ಇದು ಅವರ ರಾಷ್ಟ್ರೀಯ ಕಾರ್ಯಸೂಚಿಯಾಗಿದೆ. ಇಂತಹ ಹೇಳಿಕೆಗಳು ನಿರುದ್ಯೋಗ ಮತ್ತು ಹಣದುಬ್ಬರದಂತಹ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶವನ್ನು ಹೊಂದಿವೆ” ಎಂದು ಅವರು ವಾದಿಸಿದರು.
ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಕೂಡ ಬಿಜೆಪಿಯ ವಿಧಾನವನ್ನು ಟೀಕಿಸುತ್ತಾ, “ಬಿಜೆಪಿ ನಾಯಕರು ಸಂವೇದನಾಶೀಲ ಹೇಳಿಕೆಗಳನ್ನು ನೀಡುವುದು ಅಭ್ಯಾಸವಾಗಿದೆ. ಉತ್ತರಾಖಂಡ್ ಒಂದು ದೇವಭೂಮಿ, ಆದ್ದರಿಂದ ನೀವು ಎಷ್ಟು ದಿನ ಎಲ್ಲವನ್ನೂ ಧರ್ಮಕ್ಕೆ ಜೋಡಿಸುತ್ತೀರಿ? ಅವರು ಜನರಿಗೆ ಹೇಳಲು ಬೇರೆ ಏನೂ ಇಲ್ಲದ ಕಾರಣ ಹೀಗೆಲ್ಲಾ ಮಾಡುತ್ತಿದ್ದಾರೆ” ಎಂದು ತಿರುಗೇಟು ನೀಡಿದ್ದಾರೆ.
ಈ ಮಧ್ಯೆ, ಬಿಜೆಪಿ ಉತ್ತರಾಖಂಡ ಮಾಧ್ಯಮ ಉಸ್ತುವಾರಿ ಮನ್ವೀರ್ ಸಿಂಗ್ ಚೌಹಾಣ್ ಅವರು ನೌಟಿಯಾಲ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಹಿಂದೂ ಭಾವನೆಗಳನ್ನು ಪ್ರತಿಬಿಂಬಿಸುವುದರಿಂದ ಪಕ್ಷವು ಅವರ ಹೇಳಿಕೆಗಳಿಗೆ ಬದ್ಧವಾಗಿದೆ ಎಂದು ಹೇಳಿದರು. “ಈ ನಾಲ್ಕು ತೀರ್ಥಯಾತ್ರೆಗಳು ಸನಾತನ ಧರ್ಮದಲ್ಲಿ ಮುಖ್ಯವಾಗಿವೆ, ಪ್ರತಿ ವರ್ಷ ಲಕ್ಷಾಂತರ ಜನರು ಈ ತೀರ್ಥಯಾತ್ರೆಯನ್ನು ಕೈಗೊಳ್ಳುತ್ತಾರೆ” ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ದೇವಾಲಯದ ಬಳಿ ಮಾಂಸ ಮತ್ತು ಮದ್ಯ ಮಾರಾಟದ ಬಗ್ಗೆ ಸ್ಥಳೀಯ ವ್ಯಾಪಾರ ಮಾಲೀಕರು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಅವರು ಆರೋಪಿಸಿದರು. “ಈ ಪವಿತ್ರ ಧಾಮದಲ್ಲಿ ಅಂತಹ ವ್ಯವಹಾರಗಳನ್ನು ನಡೆಸುವುದು ತಪ್ಪು. ಇತರ ವ್ಯವಹಾರಗಳ ಸೋಗಿನಲ್ಲಿ ಕಾರ್ಯನಿರ್ವಹಿಸುವ ಮದ್ಯದ ಅಂಗಡಿಗಳು ಸಹ ಇವೆ” ಎಂದು ಅವರು ಹೇಳಿದರು.
‘ಇಸ್ರೇಲ್ ಸರ್ಕಾರಕ್ಕೆ ಮಾನವೀಯತೆ ಏನೇನೂ ಅಲ್ಲ..’; ಗಾಜಾ ಮೇಲಿನ ದಾಳಿ ಖಂಡಿಸಿದ ಪ್ರಿಯಾಂಕಾ ಗಾಂಧಿ


