ಉತ್ತರಾಖಂಡ ಸಚಿವ ಸಂಪುಟವು ಅಲ್ಪಸಂಖ್ಯಾತ ಶಿಕ್ಷಣ ಮಸೂದೆ -2025ಕ್ಕೆ ಅನುಮೋದನೆ ನೀಡಿದೆ. ಈ ಮಸೂದೆಯು ರಾಜ್ಯದಲ್ಲಿ ಸಿಖ್, ಜೈನ, ಬೌದ್ಧ, ಕ್ರಿಶ್ಚಿಯನ್ ಮತ್ತು ಪಾರ್ಸಿ ಸಮುದಾಯಗಳು ನಡೆಸುವ ಶಿಕ್ಷಣ ಸಂಸ್ಥೆಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಉದ್ದೇಶ ಹೊಂದಿದೆ.
ಪ್ರಸ್ತುತ, ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯ ಸ್ಥಾನಮಾನ ಮುಸ್ಲಿಂ ಸಮುದಾಯದ ಸಂಸ್ಥೆಗಳಿಗೆ ಮಾತ್ರ ನೀಡಲಾಗಿದೆ. ಆಗಸ್ಟ್ 19 ರಿಂದ ಪ್ರಾರಂಭವಾಗುವ ವಿಧಾನಸಭೆಯ ಮಳೆಗಾಲದ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಲು ಸರ್ಕಾರದ ಸಿದ್ದತೆ ನಡೆಸಿದೆ.
ಮಸೂದೆ ಅಂಗೀಕಾರಗೊಂಡು ಕಾಯ್ದೆಯಾಗಿ ಜಾರಿಗೆ ಬಂದರೆ, ಉತ್ತರಾಖಂಡ ಮದರಸಾ ಶಿಕ್ಷಣ ಮಂಡಳಿ ಕಾಯ್ದೆ, 2016 ಮತ್ತು ಉತ್ತರಾಖಂಡ ಸರ್ಕಾರೇತರ ಅರೇಬಿಕ್ ಮತ್ತು ಪರ್ಷಿಯನ್ ಮದರಸಾ ಗುರುತಿಸುವಿಕೆ ನಿಯಮಗಳು, 2019 ಅನ್ನು ಜುಲೈ 1, 2026 ರಿಂದ ಜಾರಿಗೆ ಬರುವಂತೆ ರದ್ದುಗೊಳಿಸಲು ಸರ್ಕಾರ ಮುಂದಾಗಿದೆ.
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಸೂದೆಗೆ ಅನುಮೋದನೆ ನೀಡಲಾಗಿದೆ ಎಂದು ವರದಿಯಾಗಿದೆ.
ಹೊಸ ಕಾಯ್ದೆ ಜಾರಿಗೆ ಬಂದರೆ ಮಾನ್ಯತೆ ಪಡೆದ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಗುರುಮುಖಿ ಮತ್ತು ಪಾಲಿ ಭಾಷೆಗಳ ಅಧ್ಯಯನವೂ ಸೇರಿಕೊಳ್ಳಲಿದೆ.
ಈ ಮಸೂದೆಯು ಪ್ರಾಧಿಕಾರ ರಚನೆಗೆ ಅವಕಾಶ ನೀಡುತ್ತದೆ. ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳು ಸ್ಥಾಪಿಸುವ ಶಿಕ್ಷಣ ಸಂಸ್ಥೆಗಳು ಅದರಿಂದ ಮಾನ್ಯತೆ ಪಡೆಯುವುದು ಕಡ್ಡಾಯಗೊಳಿಸುತ್ತದೆ.
ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಮತ್ತು ಅವರ ಶೈಕ್ಷಣಿಕ ಅಭಿವೃದ್ಧಿ ಸಾಧ್ಯವಾಗುವಂತೆ ಈ ಸಂಸ್ಥೆಗಳಲ್ಲಿ ಶೈಕ್ಷಣಿಕ ಶ್ರೇಷ್ಠತೆಯನ್ನು ಸುಗಮಗೊಳಿಸಲು ಮತ್ತು ಉತ್ತೇಜಿಸಲು ಈ ಪ್ರಾಧಿಕಾರವು ಕೆಲಸ ಮಾಡುತ್ತದೆ ಎಂದು ಸರ್ಕಾರ ಹೇಳಿದ್ದಾಗಿ ವರದಿಯಾಗಿದೆ.
ಅರ್ಜಿದಾರರು ಕೆಲವು ಷರತ್ತುಗಳನ್ನು ಪೂರೈಸಿದಾಗ ಮಾತ್ರ ಪ್ರಾಧಿಕಾರವು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗೆ ಮಾನ್ಯತೆ ನೀಡುತ್ತದೆ.
ಯಾವುದೇ ಷರತ್ತು ಉಲ್ಲಂಘಿಸಿದರೆ ಅಥವಾ ಶುಲ್ಕಗಳು, ದೇಣಿಗೆಗಳು, ಅನುದಾನಗಳು ಅಥವಾ ಯಾವುದೇ ಇತರ ಹಣಕಾಸಿನ ಮೂಲಗಳಿಂದ ಪಡೆದ ಹಣವನ್ನು ದುರುಪಯೋಗಪಡಿಸಿಕೊಂಡರೆ, ಆ ಸಂಸ್ಥೆಯ ಮಾನ್ಯತೆಯನ್ನು ಸಹ ರದ್ದುಗೊಳಿಸಬಹುದು ಎಂದು ಸರ್ಕಾರ ತಿಳಿಸಿದೆ.
ಉತ್ತರಾಖಂಡ ಶಾಲಾ ಶಿಕ್ಷಣ ಮಂಡಳಿಯು ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಈ ಸಂಸ್ಥೆಗಳಲ್ಲಿ ಶಿಕ್ಷಣವನ್ನು ನೀಡಲಾಗುತ್ತದೆ ಮತ್ತು ವಿದ್ಯಾರ್ಥಿಗಳ ಮೌಲ್ಯಮಾಪನವು ನ್ಯಾಯಯುತ ಮತ್ತು ಪಾರದರ್ಶಕವಾಗಿದೆ ಎಂದು ಪ್ರಾಧಿಕಾರವು ಖಚಿತಪಡಿಸುತ್ತದೆ.
ಒಮ್ಮೆ ಕಾಯ್ದೆ ಜಾರಿಗೆ ಬಂದರೆ, ಇದು ದೇಶದಲ್ಲಿಯೇ ಮೊದಲನೆಯ ಕಾಯ್ದೆಯಾಗಲಿದೆ. ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯಗಳು ಸ್ಥಾಪಿಸಿರುವ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡುವ ಪಾರದರ್ಶಕ ಪ್ರಕ್ರಿಯೆಯನ್ನು ಸ್ಥಾಪಿಸುವ ಜೊತೆಗೆ, ಶಿಕ್ಷಣದಲ್ಲಿ ಗುಣಮಟ್ಟ ಮತ್ತು ಶ್ರೇಷ್ಠತೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಇದು ಹೊಂದಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಸಚಿವ ಸಂಪುಟದ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್, ಬಿಜೆಪಿಯನ್ನು ಸಂಕುಚಿತ ಮನಸ್ಸಿನವರು ಎಂದು ಕರೆದಿದ್ದು, ‘ಮದ್ರಸ’ ದಂತಹ ಉರ್ದು ಪದಗಳ ಬಗ್ಗೆ ಅವರಿಗೆ ಏಕೆ ಹಿಂಜರಿಕೆ ಎಂದು ಪ್ರಶ್ನಿಸಿದ್ದಾರೆ.
“ಬಿಜೆಪಿಯವರು ಸಂಕುಚಿತ ಮನಸ್ಸಿನವರು. ಮದ್ರಸಾ ಎಂಬುದು ಉರ್ದು ಪದ, ಉರ್ದು ಗಂಗಾ-ಜಮುನಿ ಸಂಸ್ಕೃತಿಯ ಉತ್ಪನ್ನವಾಗಿದೆ” ಎಂದು ರಾವತ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
“ಮದ್ರಸಾಗಳು ದೇಶದ ಸ್ವಾತಂತ್ರ್ಯ ಹೋರಾಟದೊಂದಿಗೆ ತಮ್ಮದೇ ಆದ ಇತಿಹಾಸವನ್ನು ಹೊಂದಿವೆ. ಉರ್ದು ಪದದ ಬಗ್ಗೆ ನಿಮಗಿರುವ ಸಮಸ್ಯೆ ಏನು?” ಹರೀಶ್ ರಾವತ್ ಬೆಜೆಪಿಯನ್ನು ಪ್ರಶ್ನಿಸಿದ್ದಾರೆ.
ಮದ್ರಸಾಗಳು ಇಲ್ಲದಂತೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆಯೇ? ಎಂದು ಕೇಳಿದಾಗ, “ಅದೇ ಅವರ ಉದ್ದೇಶ. ಆದರೆ, ಅವರು ಅದನ್ನು ಮಾಡಲು ಸಾಧ್ಯವಿಲ್ಲ” ಎಂದು ಹರೀಶ್ ರಾವತ್ ಹೇಳಿದ್ದಾರೆ.
ಉತ್ತರಾಖಂಡ ಮದ್ರಸಾ ಮಂಡಳಿಯ ಅಧ್ಯಕ್ಷ ಮುಫ್ತಿ ಶಮೂನ್ ಖಾಜ್ಮಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದು, “ಇದು ಮುಂಬರುವ ದಿನಗಳಲ್ಲಿ ಎಲ್ಲಾ ಸಮುದಾಯಗಳಿಗೆ, ವಿಶೇಷವಾಗಿ ಮುಸ್ಲಿಮರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಗುಣಮಟ್ಟದ ಶಿಕ್ಷಣ ಸಿಗಲಿದೆ” ಎಂದಿದ್ದಾರೆ.
“ಈ ಕ್ರಮವು ಧಾರ್ಮಿಕ ಶಿಕ್ಷಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅದು ಮೊದಲಿನಂತೆಯೇ ಮುಂದುವರಿಯುತ್ತದೆ” ಎಂದು ಶಮೂನ್ ಖಾಜ್ಮಿ ಹೇಳಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಪದಚ್ಯುತಿ ನಿರ್ಣಯ ಮಂಡಿಸಲು ಮುಂದಾದ ಪ್ರತಿಪಕ್ಷಗಳು: ವರದಿ


