30 ವರ್ಷದ ದಲಿತ ಮಹಿಳೆಗೆ ಏಳು ಮಂದಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. “ದುಷ್ಕರ್ಮಿಗಳು ಮಹಿಳೆಗೆ ಗನ್ ತೋರಿಸಿ, ಬಟ್ಟೆ ಬಿಚ್ಚುವಂತೆ ಒತ್ತಾಯಿಸುವ ಜೊತೆಗೆ ಘಟನೆಯನ್ನು ಚಿತ್ರೀಕರಣ ಮಾಡಿಕೊಂಡಿದ್ದಾರೆ. ಜುಲೈ 31 ರಂದು ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 30 ರಂದು ಸಂಜೆ ಮುಜಾಫರ್‌ನಗರ ಜಿಲ್ಲೆಯ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಬಳಿಕ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಹುಲ್ಲು ಕತ್ತರಿಸಲು ಹೊಲಕ್ಕೆ ಹೋಗಿದ್ದಾಗ ಘಟನೆ ನಡೆಯಿತು. ಅಲ್ಲಿ ಏಳು ಮಂದಿ ನನಗೆ ಲೈಂಗಿಕ ಕಿರುಕುಳ ನೀಡಿದ್ದರು. ಬಂದೂಕು ತೋರಿಸಿ ನನ್ನ ಬಟ್ಟೆಗಳನ್ನು ತೆಗೆಯುವಂತೆ ಒತ್ತಾಯಿಸಿ, ನಂತರ ವೀಡಿಯೊ ಮಾಡಿಕೊಂಡರು” ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿರಿ: ಬೊಮ್ಮಾಯಿಯವರು ಬಯಸುವ ಯುಪಿ ಮಾದರಿಯ ಆಳ-ಅಗಲ ಬಲ್ಲಿರೇನು!?
ಐಪಿಸಿ ಸೆಕ್ಷನ್ 354 ಬಿ ಮತ್ತು 506, ಎಸ್‌ಸಿ/ಎಸ್‌ಟಿ ಕಾಯ್ದೆಯ ಸೆಕ್ಷನ್ 3 ಮತ್ತು ಐಟಿ ಕಾಯ್ದೆಯ ಸೆಕ್ಷನ್ 67 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಿದ್ದಾರೆ ಎಂದು ಕೊತ್ವಾಲಿ ಪೊಲೀಸ್ ಠಾಣೆ ಎಸ್‌ಎಚ್‌ಒ ಆನಂದ್ ದೇವ್ ಮಿಶ್ರಾ ಹೇಳಿದ್ದಾರೆ.
ಆರೋಪಿಗಳನ್ನು ಅನುಜ್, ಕುಲದೀಪ್, ಅಂಕಿತ್, ರವಿ, ರಿಜ್ವಾನ್, ಚೋಟಾ ಮತ್ತು ಅಬ್ದುಲ್ ಎಂದು ಪೊಲೀಸರು ಗುರುತಿಸಿದ್ದಾರೆ.


