Homeಕರ್ನಾಟಕಭಗತ್‌ಸಿಂಗ್ ಬದುಕು ಮಹಾಭಾರತದ ಅಭಿಮನ್ಯುವನ್ನು ನೆನಪಿಸುತ್ತದೆ: ದು.ಸರಸ್ವತಿ

ಭಗತ್‌ಸಿಂಗ್ ಬದುಕು ಮಹಾಭಾರತದ ಅಭಿಮನ್ಯುವನ್ನು ನೆನಪಿಸುತ್ತದೆ: ದು.ಸರಸ್ವತಿ

ಬೆಂಗಳೂರಿನ ಪೌರಕಾರ್ಮಿಕರ ಸಂಘದ ವತಿಯಿಂದ ಚಾಲನೆ ನೀಡಲಾಗಿರುವ ಸ್ವಾತಂತ್ರ್ಯ- 75 ಕಾರ್ಯಕ್ರಮವನ್ನು ಇಂದು ರಾಮಮೂರ್ತಿನಗರದಲ್ಲಿ ಆಯೋಜಿಸಲಾಗಿತ್ತು.

- Advertisement -
- Advertisement -

ಬೆಂಗಳೂರಿನ ಪೌರಕಾರ್ಮಿಕರ ಸಂಘದ ವತಿಯಿಂದ ಚಾಲನೆ ನೀಡಲಾಗಿರುವ ಸ್ವಾತಂತ್ರ್ಯ- 75 ಕಾರ್ಯಕ್ರಮವನ್ನು ಇಂದು ರಾಮಮೂರ್ತಿನಗರದಲ್ಲಿ ಆಯೋಜಿಸಲಾಗಿತ್ತು.

ಈ ವಿಶಿಷ್ಟ ಕಾರ್ಯಕ್ರಮ ಸ್ವಾತಂತ್ರ್ಯ ದಿನಾಚರಣೆಯವರೆಗೆ ನಡೆಯಲಿದ್ದು, ಪೌರಕಾರ್ಮಿಕರ ಹಕ್ಕುಗಳ ಹೋರಾಟಗಾರರು, ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ. ವಿವಿಧ ವಾರ್ಡ್‌ಗಳಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.

ಸೋಮವಾರ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಹೋರಾಟಗಾರ್ತಿ ದು.ಸರಸ್ವತಿ, “ಆರ್ಥಿಕವಾಗಿ ಸಬಲರಾಗಬೇಕು, ಘನತೆಯಿಂದ ಬದುಕುವ ದಿನ ಬರಬೇಕೆಂದು ಇಂದಿಗೂ ಹೋರಾಟ ಮಾಡುತ್ತಿದ್ದೇವೆ. ಈ ಹೋರಾಟವು ಸ್ವಾತಂತ್ರ್ಯ ಚಳವಳಿಯ ಮುಂದುವರಿದ ಭಾಗವೇ ಆಗಿದೆ” ಎಂದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ದೇಶ ಎಂದರೆ ದೇಶದ ಒಳಗೆ ಇರುವ ಜನರೆಂದು ಅರ್ಥ. ಈ ಜನರೆಲ್ಲರೂ ನೆಮ್ಮದಿಯಾಗಿ ಮನುಷ್ಯರ ರೀತಿ ಬದುಕಲು ಸಾಧ್ಯವಾದಾಗ ಮಾತ್ರ ಎಲ್ಲರಿಗೂ ಸ್ವಾತಂತ್ರ್ಯ ದೊರಕಿದೆ ಎಂದರ್ಥ. ನಾವು ರಾಜಕೀಯ ಸ್ವಾತಂತ್ರ್ಯವನ್ನು ಈಗ ಪಡೆದುಕೊಂಡಿದ್ದೇವೆ ಎಂದು ತಿಳಿಸಿದರು.

ದೇಶ ವಿಭಜನೆಯ ಸಂದರ್ಭವನ್ನು ನೆನೆದ ಅವರು, “ಪಾಕಿಸ್ತಾನದ ವ್ಯಾಪ್ತಿಗೆ ಸೇರಲ್ಪಟ್ಟ ಸ್ವಚ್ಛತಾ ಕರ್ಮಿಗಳನ್ನು ಇಲ್ಲಿಗೆ ಕರೆಸಿಕೊಳ್ಳಲು ಬಾಬಾ ಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಪ್ರಧಾನಿಗೆ ಪತ್ರವನ್ನು ಬರೆದಿದ್ದರು. ಆದರೆ ಪಾಕಿಸ್ತಾನದವರು ಸ್ವಚ್ಛತಾಕರ್ಮಿಗಳನ್ನು ಇಲ್ಲಿಗೆ ಕಳುಹಿಸಲು ಸಿದ್ಧವಿರಲಿಲ್ಲ. ಆ ಜನರ ಮೇಲಿನ ಪ್ರೀತಿಯ ಕಾರಣಕ್ಕಾಗಿ ಅಲ್ಲ. ಕಸ ಬಾಚುವ, ಕಕ್ಕಸ್ಸು ತೊಳೆಯುವ ಕೆಲಸವನ್ನು ಮಾಡಲು ಯಾರೂ ಸಿದ್ಧರಿರಲಿಲ್ಲ. ಹೀಗಾಗಿ ಕಳುಹಿಸಲು ಒಪ್ಪಲಿಲ್ಲ. ಆದರೆ ಸ್ವಚ್ಛತಾಕರ್ಮಿಗಳು ಭಾರತಕ್ಕೆ ವಾಪಸ್‌ ಹೋಗಲು ಬಯಸಿದ್ದರಿಂದ ಅವರನ್ನು ಕರೆಸಿಕೊಳ್ಳಲೇಬೇಕೆಂದು ಬಾಬಾ ಸಾಹೇಬರು ಪ್ರಧಾನಿಯವರ ಮೇಲೆ ಒತ್ತಡ ಹಾಕಿದರು” ಎಂದು ವಿವರಿಸಿದರು.

ಕ್ರಾಂತಿಕಾರಿ ಹೋರಾಟಗಾರ ಭಗತ್‌ಸಿಂಗ್‌ ಮತ್ತು ಮಹಾಭಾರತದ ಅಭಿಮನ್ಯುವಿನ ಸ್ಥಿತಿಯನ್ನು ಹೋಲಿಕೆ ಮಾಡಿದ ಅವರು, “ಮಹಾಭಾರತದಲ್ಲಿ ಚಕ್ರವ್ಯೂಹ ಭೇದಿಸಿ ಹೊರಬರಲಾಗದ ಸ್ಥಿತಿಯಲ್ಲಿ ಅಭಿಮನ್ಯು ಸಂಕಟಪಟ್ಟ. ಎಲ್ಲ ಹಿರಿಯರು ನೋಡುತ್ತಾ ಸುಮ್ಮನಿದ್ದರು. ಪ್ರಯತ್ನಪಟ್ಟಿದ್ದರೆ ಅಭಿಮನ್ಯುವನ್ನು ಕಾಪಾಡಬಹುದಿತ್ತು. ಭಗತ್‌ಸಿಂಗ್ ಕಥೆಯೂ ಹೀಗೆ ಆಯಿತು. ಭಗತ್‌ಸಿಂಗ್ ಜೀವನದ ಕುರಿತು ಪ್ರತಿಸಲ ಓದುವಾಗಲೂ ಹೊಟ್ಟೆಯಲ್ಲಿ ಕಲಸಿದಂತಾಗುತ್ತದೆ. ಚಿಕ್ಕ ವಯಸ್ಸಲ್ಲಿ ತೀವ್ರ ಹೋರಾಟ ನಡೆಸಿದ. ಶಿಕ್ಷೆಗೊಳಪಟ್ಟ. ದೊಡ್ಡ ದೊಡ್ಡ ನಾಯಕರಿದ್ದರು. ಆ ಮಗುವನ್ನು ಬಿಡಿಸಲು ಅವರೇಕೆ ಪ್ರಯತ್ನ ಮಾಡಲಿಲ್ಲ ಎಂಬ ಪ್ರಶ್ನೆ ನನ್ನನ್ನು ಕಾಡುತ್ತದೆ” ಎಂದು ವಿವಾದಿಸಿದರು.

ಬ್ರಿಟಿಷರ ವಿರುದ್ಧ ಮಹಿಳೆಯರು ಹೋರಾಡಿದ್ದನ್ನು ಮೆಲುಕು ಹಾಕಿದ ಅವರು, “ಒಮ್ಮೆ ಪೊಲೀಸರು ದಿಢೀರನೆ ದಾಳಿ ಮಾಡಿದ್ದರು. ತಕ್ಷಣ ಅಲ್ಲಿದ್ದ ಕರಪತ್ರಗಳನ್ನು ತಮ್ಮ ಕೆಳಗೆ ಹಾಕಿ ಮಹಿಳೆಯೊಬ್ಬರು ಕುಳಿತುಕೊಳ್ಳುತ್ತಾಳೆ. ಎದ್ದೇಳುವಂತೆ ಪೊಲೀಸರು ಸೂಚಿಸಿದಾಗ ಆ ಮಹಿಳೆ- ನಾನು ಮುಟ್ಟಾಗಿದ್ದೇನೆ. ನಾನು ಏಳಲ್ಲ- ಎಂದು ತಿರುಗೇಟು ನೀಡುತ್ತಾಳೆ. ಪೊಲೀಸರು ಮರುಮಾತನಾಡದೆ ವಾಪಸ್‌ ಹೋಗುತ್ತಾರೆ. ಹೀಗೆ ಸ್ವಾತಂತ್ರ್ಯ ಹೋರಾಟದಲ್ಲಿ ಅಜ್ಞಾತ ಮಹಿಳೆಯರು ಬಹುದೊಡ್ಡ ಪಾತ್ರವಹಿಸಿದ್ದಾರೆ” ಎಂದರು.

ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸ್ವಾತಂತ್ರ್ಯ ಹೋರಾಟ ನಡೆಸಿದವರ ಸ್ಮರಣೆಗಾಗಿ ಹದಿನೈದು ದಿನಗಳ ಕಾಲ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಮೊನ್ನೆ ನೀವು ಮಾಡಿದ ಹೋರಾಟ ಅವಿಸ್ಮರಣೀಯ. ಪಟ್ಟು ಬದಲಿಸಿದೆ ಕೂತಿದ್ದೀರಲ್ಲ, ಅದನ್ನು ಎಂದಿಗೂ ಮರೆಯಲಾಗದು ಎಂದು ಹೊಗಳಿದರು.

ವಕೀಲರು ಹಾಗೂ ಕಾರ್ಮಿಕ ಮುಖಂಡರಾದ ಕ್ಲಿಫ್ಟನ್‌ ರಸಾರಿಯೋ ಮಾತನಾಡಿ, “ಪೌರಕಾರ್ಮಿಕರೂ ಸ್ವಾತಂತ್ರಕ್ಕಾಗಿ ಹೋರಾಡಿದ್ದಾರೆ. ದುಡಿಯುವ ವರ್ಗದ ಹೋರಾಟದಿಂದ ಸ್ವಾತಂತ್ರ್ಯ ಬಂತು ಎಂಬುದನ್ನು ನಾವು ಮರೆಯಬಾರದು” ಎಂದು ತಿಳಿಸಿದರು.

ಸ್ವಾತಂತ್ರ್ಯ ಹೋರಾಟ ಕೇವಲ ಬ್ರಿಟಿಷರನ್ನು ಓಡಿಸುವುದಕ್ಕಾಗಿ ಅಲ್ಲ. ಎರಡು ತೆರನಾದ ಶತ್ರುಗಳನ್ನು ಸೋಲಿಸಬೇಕು ಎಂದಿದ್ದರು ಅಂಬೇಡ್ಕರ್‌. ಆ ಎರಡು ಶತ್ರುಗಳೆಂದರೆ ಬಂಡವಾಳಶಾಹಿಗಳು ಮತ್ತು ಬ್ರಾಹ್ಮಣ್ಯ ಎಂದು ಎಚ್ಚರಿಸಿದ್ದರು. ಆ ಮಾತು ಇಂದಿಗೂ ನಿಜವಾಗಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿರಿ: ಪೌರಕಾರ್ಮಿಕರ ಕಾಯಮಾತಿಗೆ ತೊಡಕಾಗಿರುವ ಬೆಂಗಳೂರಿನ ಕಸದ ಮಾಫಿಯಾ ಮತ್ತು ಕಾಂಟ್ರಾಕ್ಟರ್‌ಗಳು

ಸ್ವಾತಂತ್ರ್ಯವೆಂಬುದು ಕೂಲಿಕಾರ್ಮಿಕರ ಕೈಲಿ, ರೈತರ ಕೈಲಿ, ಆದಿವಾಸಿಗಳ ಕೈಲಿ ಇರಬೇಕು ಎಂದಿದ್ದರು ಭಗತ್‌ಸಿಂಗ್‌. ಬಾಬಾ ಸಾಹೇಬ್‌ ಮತ್ತು ಭಗತ್‌ಸಿಂಗ್ ಅವರನ್ನು ನಾವು ಮರೆಯಲು ಸಾಧ್ಯವಿಲ್ಲ. ಬ್ರಿಟಿಷರು ಹೋದ ಮೇಲೆ ಈ ದೇಶ ಹೇಗಿರಬೇಕು ಎಂದು ಈ ಇರು ಕನಸು ಕಂಡಿದ್ದರು ಎಂದು ವಿವರಿಸಿದರು.

ರೈತ ಹೋರಾಟಗಾರ್ತಿ ಎನ್.ಗಾಯತ್ರಿ ಮಾತನಾಡಿ, “ಸ್ವಾತಂತ್ರ್ಯ ಹೋರಾಟ ಎಂದ ತಕ್ಷಣ ತ್ಯಾಗ ಬಲಿದಾನ ನೆನಪಾಗುತ್ತದೆ. ತ್ಯಾಗ, ಬಲಿದಾನ ಎಂದಾಗ ನೆನಪಿಗೆ ಬರುವುದೇ ಪೌರಕಾರ್ಮಿಕರು. ಕಸಕ್ಕೆ ಮೋಕ್ಷವನ್ನು ಕೊಡುತ್ತಿರುವ ನಿಮ್ಮ ತ್ಯಾಗ, ಬಲಿದಾನ ಸ್ವಾತಂತ್ರ್ಯ ಪ್ರತೀಕ” ಎಂದು ಬಣ್ಣಿಸಿದರು.

ಗರ್ಮೆಂಟ್ ನೌಕರರ ಸಂಘ ಮುಖಂಡರಾದ ಪ್ರತಿಭಾ, ಗಮನ ಮಹಿಳಾ ಸಂಘದ ಮಧು ಭೂಷಣ, ಚಿಂತಕ ಹುಲಿಕುಂಟೆ ಮೂರ್ತಿ, ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಅಶ್ವಿನಿ ಸೇರಿದಂತೆ ಪೌರಕಾರ್ಮಿಕರ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಬಿಜೆಪಿಗೆ ಮತ ಹಾಕುವಂತೆ...

0
ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಿರಿಯ ರಾಜಕಾರಣಿ ಅಧೀರ್ ರಂಜನ್ ಚೌಧರಿ ಅವರಿ ಬಿಜೆಪಿ ಪರ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ವಿಡಿಯೋದಲ್ಲಿ " ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷಕ್ಕೆ ಮತ...