ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಸ್ಥಳೀಯವಾಗಿ ಅಭಿವೃದ್ಧಿ ಹೊಂದಿದ ಕೋವಿಡ್ -19 ಲಸಿಕೆ ಕೊವಾಕ್ಸಿನ್‌ನ ಮಾನವ ಕ್ಲಿನಿಕಲ್ ಪ್ರಯೋಗವನ್ನು ನಡೆಸಲು ಸನ್ನದ್ದವಾಗಿದೆ. ಇದಕ್ಕಾಗಿ ಆರೋಗ್ಯವಂತ ವ್ಯಕ್ತಿಗಳು ಸ್ವಯಂಪ್ರೇರಿತರಾಗಿ ಸೋಮವಾರದಿಂದ ದಾಖಲಿಸಿಕೊಳ್ಳಬೇಕೆಂದು ಮನವಿ ಮಾಡಿದೆ.
ಏಮ್ಸ್ ಎಥಿಕ್ಸ್ ಕಮಿಟಿ ಶನಿವಾರ ಕೊವಾಕ್ಸಿನ್‌ನ ಮಾನವ ಕ್ಲಿನಿಕಲ್ ಪ್ರಯೋಗಕ್ಕೆ ಅನುಮತಿ ನೀಡಿದ ನಂತರ ಈ ಸೂಚನೆ ಹೊರಬಿದ್ದಿದೆ.
ಕೋವಾಕ್ಸಿನ್‌ನ ಹಂತ I ಮತ್ತು II ಮಾನವ ಪ್ರಯೋಗಗಳನ್ನು ನಡೆಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಆಯ್ಕೆ ಮಾಡಿದ 12 ಸಂಸ್ಥೆಗಳಲ್ಲಿ ಏಮ್ಸ್ ದೆಹಲಿ ಕೂಡ ಸೇರಿದೆ. ಮೊದಲ ಹಂತದಲ್ಲಿ 375 ಸ್ವಯಂಸೇವಕರ ಮೇಲೆ ಲಸಿಕೆ ಪರೀಕ್ಷಿಸಲಾಗುವುದು ಮತ್ತು ಅವರಲ್ಲಿ ಗರಿಷ್ಠ 100 ಮಂದಿ ಏಮ್ಸ್ ನಿಂದ ಬರಲಿದ್ದಾರೆ.
“ನಾವು ಸೋಮವಾರದಿಂದ ದಾಖಲಾತಿ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಿದ್ದೇವೆ. ಯಾವುದೇ ತೊಂದರೆಗಳಿಲ್ಲದ ಮತ್ತು ಕೋವಿಡ್ -19 ಇತಿಹಾಸವಿಲ್ಲದ ಆರೋಗ್ಯಕರ ವ್ಯಕ್ತಿಗಳನ್ನು ನಾವು ಆಯ್ಕೆ ಮಾಡಲಿದ್ದೇವೆ” ಎಂದು ಏಮ್ಸ್ ಸೆಂಟರ್ ಫಾರ್ ಕಮ್ಯುನಿಟಿ ಮೆಡಿಸಿನ್‌ನ ಪ್ರಾಧ್ಯಾಪಕ ಡಾ.ಸಂಜಯ್ ರಾಯ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಪ್ರಯೋಗದಲ್ಲಿ ಭಾಗವಹಿಸಲು ಇಚ್ಛಿಸುವ ಯಾವುದೇ ಆರೋಗ್ಯವಂತ ವ್ಯಕ್ತಿ, [email protected] ಗೆ ಇಮೇಲ್ ಕಳುಹಿಸಬಹುದು ಅಥವಾ 7428847499 ನಂಬರ್‌ಗೆ ಕರೆ ಮಾಡಬಹುದು/ ಎಸ್‌ಎಂಎಸ್ ಕಳುಹಿಸಬಹುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅಧ್ಯಯನಕ್ಕೆ 18 ರಿಂದ 55 ವರ್ಷಗಳ ಒಳಗಿನ ವಯಸ್ಸಿನವರನ್ನು ಆಯ್ಕೆ ಮಾಡುತ್ತೇವೆ. ಇದು ಯಾದೃಚ್ಛಿಕ, ಡಬಲ್-ಬ್ಲೈಂಡ್, ಪ್ಲಸೀಬೊ-ನಿಯಂತ್ರಿತ ಕ್ಲಿನಿಕಲ್ ಪ್ರಯೋಗವಾಗಿದೆ ಎಂದು ಅವರು ಹೇಳಿದ್ದಾರೆ.
ಮೊದಲ ಮತ್ತು ಎರಡನೇ ಹಂತದಲ್ಲಿ ಏಮ್ಸ್ ದೆಹಲಿಯು 375 ಸ್ವಯಂಸೇವಕರಲ್ಲಿ 100 ಭಾಗವಹಿಸುವವರನ್ನು ಮಾತ್ರ ಆಯ್ಕೆ ಮಾಡುತ್ತದೆ ಮತ್ತು ಉಳಿದವರು ಇತರ ತಾಣಗಳಲ್ಲಿ ಭಾಗವಹಿಸುತ್ತಾರೆ ಎಂದು ಅವರು ಹೇಳಿದರು.
“ನಾವು ಈಗಾಗಲೇ ಕೆಲವು ಸ್ವಯಂಸೇವಕರನ್ನು ನೋಂದಾಯಿಸಿದ್ದೇವೆ. ಸೋಮವಾರದಿಂದ ನಮ್ಮ ತಂಡವು ಲಸಿಕೆ ನೀಡುವ ಮೊದಲು ಅವರ ಆರೋಗ್ಯ ತಪಾಸಣೆಯನ್ನು ಪ್ರಾರಂಭಿಸುತ್ತದೆ” ಎಂದು ಅವರು ಹೇಳಿದರು.
ಭಾರತದ ಮೊದಲ ಸಂಭಾವ್ಯ ಸ್ಥಳೀಯ ಕೋವಿಡ್ -19 ಲಸಿಕೆಯನ್ನು ಕೋವಾಕ್ಸಿನ್ ಅನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ (ಬಿಬಿಐಎಲ್) ಜಂಟಿಯಾಗಿ ಅಭಿವೃದ್ಧಿಪಡಿಸಿದೆ.
ಕೋವಿಡ್ -19 ಲಸಿಕೆಗಳನ್ನು ತಯಾರಿಸುವ ಏಳು ಭಾರತೀಯ ಸಂಸ್ಥೆಗಳಲ್ಲಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕೂಡ ಸೇರಿದೆ. ಪರಿಣಾಮಕಾರಿತ್ವ ಮತ್ತು ಸುರಕ್ಷತೆಗಾಗಿ ಲಸಿಕೆಯನ್ನು ಪರೀಕ್ಷಿಸಲು ಹಂತ 1 ಮತ್ತು ಹಂತ 2 ಮಾನವ ಪ್ರಯೋಗಗಳನ್ನು ಪ್ರಾರಂಭಿಸಲು ನಿಯಂತ್ರಕ ಅನುಮೋದನೆಯನ್ನು ಪಡೆದ ಮೊದಲ ಸಂಸ್ಥೆ ಇದಾಗಿದೆ.
ಇದನ್ನೂ ಓದಿ: ಕೋವಾಕ್ಸಿನ್ ಲಸಿಕೆ ಪ್ರಯೋಗಕ್ಕೆ ICMR ನಿಂದ ಒತ್ತಡ: AIIMS ಆಕ್ಚೇಪ



ಯಾದೃಚ್ಛಿಕ (random)>ಗೊತ್ತುಗುರಿಇಲ್ಲದ,ಎಕ್ಕಾಸಕ್ಕ
ಸೆಲೆ: ಸಂಸ್ಕೃತ ಕನ್ನಡ ಪದನೆರಕೆ
(ಡಾ.ಡಿ.ಎನ್ ಶಂಕರಬಟ್
ಯೋ.ಬರತ ಕುಮಾರ
ಸಂದೀಪ್ ಕಂಬಿ)