2024ರ ಲೋಕಸಭೆ ಚುನಾವಣೆಯಲ್ಲಿ ವಂಚಿತ್ ಬಹುಜನ ಅಘಾಡಿ ಪಕ್ಷವು ಮಹಾರಾಷ್ಟ್ರದ ಎಲ್ಲಾ 48 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ವಂಚಿತ್ ಬಹುಜನ ಅಘಾಡಿ ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಅವರು ಶನಿವಾರ ತಿಳಿಸಿದ್ದಾರೆ.
ಮುಂಬೈನ ಪಕ್ಷದ ಕೇಂದ್ರ ಕಚೇರಿಯಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಪ್ರಕಾಶ್ ಅಂಬೇಡ್ಕರ್ ಅವರು, ನಾವು 2024ರ ಲೋಕಸಭೆ ಚುನಾವಣೆಯಲ್ಲಿ ಮುಂಬೈನ ಎಲ್ಲಾ 48 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸುತ್ತೇವೆ. ಪಕ್ಷದ ಘಟಕಗಳು ಚುನಾವಣೆಗೆ ಸಿದ್ಧತೆಗಳನ್ನು ಪ್ರಾರಂಭಿಸಿವೆ ಎಂದು ಪ್ರಕಾಶ್ ಅಂಬೇಡ್ಕರ್ ಅವರು ಹೇಳಿದ್ದಾರೆ.
ನಾನು ಅಕೋಲಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. INDIA ಒಕ್ಕೂಟದ ಜೊತೆ ಮೈತ್ರಿ ಸೇರಲು ವಂಚಿತ್ ಬಹುಜನ ಅಘಾಡಿ ಉತ್ಸುಕವಾಗಿತ್ತು. ಆದರೆ ಇದಕ್ಕೆ ಕಾಂಗ್ರೆಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಹೇಳಿದ್ದಾರೆ.
ಮೈತ್ರಿಗೆ ಸೇರುವ ಬಗ್ಗೆ ವಿಬಿಎಯಿಂದ ಯಾವುದೇ ಔಪಚಾರಿಕ ಪ್ರಸ್ತಾವನೆಯನ್ನು ಸ್ವೀಕರಿಸಿಲ್ಲ ಎಂದು ಕಾಂಗ್ರೆಸ್ ಹೇಳಿಕೊಂಡಿದೆ ಎಂದು ಪ್ರಕಾಶ್ ಅಂಬೇಡ್ಕರ್ ಅವರು ಹೇಳಿದ್ದು, ಮೈತ್ರಿ ಕುರಿತು ಷರತ್ತುಗಳ ಬಗ್ಗೆ ಮಾತುಕತೆಗೆ ಕೋರಿ ಪತ್ರವನ್ನು ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ಈ ರಾಜಕೀಯ ಚದುರಂಗದಾಟದ ಮಧ್ಯೆ ವಂಚಿತ್ ಬಹುಜನ ಅಘಾಡಿ ಸಾರ್ವಜನಿಕರಿಂದ ದೂರ ಉಳಿಯುವುದಿಲ್ಲ. ತಳಮಟ್ಟದ ಬೆಂಬಲವನ್ನು ಹೆಚ್ಚಿಸುವ ಗುರಿಯೊಂದಿಗೆ ಬೀಡ್, ಸತಾರಾ ಮತ್ತು ನಾಸಿಕ್ ನಂತಹ ಮಹತ್ವದ ಕ್ಷೇತ್ರಗಳಲ್ಲಿ ರ್ಯಾಲಿಗಳನ್ನು ಆಯೋಜಿಸಲಿದೆ ಎಂದು ಪ್ರಕಾಶ್ ಅಂಬೇಡ್ಕರ್ ಅವರು ಹೇಳಿದ್ದಾರೆ.
ಇದನ್ನು ಓದಿ: ಸಾಹಿತಿಗಳಿಗೆ ಪತ್ರದ ಮೂಲಕ ಜೀವ ಬೆದರಿಕೆ ಪ್ರಕರಣ: ಸಂಘಪರಿವಾರದ ಕಾರ್ಯಕರ್ತನ ಬಂಧನ


