ಜುಲೈ 16 ರಂದು ಕೊರೊನಾ ದೃಢಪಟ್ಟ ನಂತರ ಜೈಲಿನಲ್ಲಿದ್ದ 80 ವರ್ಷದ ಹೋರಾಟಗಾರ ಕವಿ ಮತ್ತು ಸಾಮಾಜಿಕ ಕಾರ್ಯಕರ್ತ ವರವರರಾವ್, ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರು ಇನ್ನೂ ದೈಹಿಕವಾಗಿ ದುರ್ಬಲವಾಗಿಯೇ ಇದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ.
“ಬಾಂಬೆ ಹೈಕೋರ್ಟ್‌ನ ನಿರ್ದೇಶನದಂತೆ, ಆಗಸ್ಟ್ 18 ರ ಮಂಗಳವಾರ ಅವರೊಂದಿಗೆ ವೀಡಿಯೊ ಕರೆ ಮಾಡಲು ನಮಗೆ ಅನುಮತಿ ನೀಡಲಾಯಿತು. ಅದೃಷ್ಟವಶಾತ್, ಅವರ ದೈಹಿಕ ಆರೋಗ್ಯ ಇನ್ನೂ ದುರ್ಬಲವಾಗಿದ್ದರೂ ಈ ಬಾರಿ ಅವರು ಸ್ಥಿಮಿತದಲ್ಲಿದ್ದರು” ಎಂದು ಅವರ ಸೋದರಳಿಯ ಎನ್ ವೇಣುಗೋಪಾಲ್ ದಿ ಕ್ವಿಂಟ್‌ಗೆ ಹೇಳಿದರು.
“ಪ್ರಸ್ತುತ ಅವರು ಕೊರೊನಾ ಸೋಂಕಿನಿಂದ ಗುಣವಾಗಿದ್ದಾರೆಯೇ ಎಂದೂ ತಿಳಿದಿಲ್ಲ. ಅಧಿಕಾರಿಗಳು ಅಥವಾ ವೈದ್ಯರಿಂದ ಯಾವುದೇ ಅಧಿಕೃತ ಹೊಸ ವಿಷಯಗಳು ತಿಳಿದುಬಂದಿಲ್ಲ. ಅವರು ಸಾಮಾನ್ಯವಾಗಿ ಎಲ್ಲಾ ವರದಿಗಳನ್ನು ನ್ಯಾಯಾಲಯಗಳಿಗೆ ಸಲ್ಲಿಸುತ್ತಾರೆ. ಯಾವುದೇ ಪರೀಕ್ಷಾ ಫಲಿತಾಂಶಗಳ ಬಗ್ಗೆ ಕುಟುಂಬಕ್ಕೆ ತಿಳಿಸಲಾಗಿಲ್ಲ” ಎಂದು ಅವರು ಆರೋಪಿಸಿದ್ದಾರೆ.
ಜುಲೈ 28 ರಂದು, ಮೂರು ದಿನಗಳಲ್ಲಿ ವರವರ ರಾವ್ ಅವರ ವೈದ್ಯಕೀಯ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯ ಅಧಿಕಾರಿಗಳಿಗೆ ಸೂಚಿಸಿತ್ತು ಎಂದು ವೇಣುಗೋಪಾಲ್ ತಿಳಿಸಿದ್ದಾರೆ.
“ಸೋಮವಾರ, ನ್ಯಾಯಪೀಠವು ಜುಲೈ 31 ರಂದು ಸಲ್ಲಿಸಿದ ವೈದ್ಯಕೀಯ ವರದಿಯನ್ನು ಪರಿಶೀಲಿಸಿದೆ” ಎಂದು ಹೇಳಿದರು.
ಆಗಸ್ಟ್ 17, ಸೋಮವಾರ, ಎಲ್ಗರ್ ಪರಿಷತ್ ಪ್ರಕರಣದಲ್ಲಿ ರಾವ್ ಅವರಿಗೆ ಜಾಮೀನು ನೀಡುವುದನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಆಕ್ಷೇಪ ವ್ಯಕ್ತಪಡಿಸಿತ್ತು.
ಬಾಂಬೆ ಹೈಕೋರ್ಟ್ ರಾಜ್ಯ ಜೈಲು ಅಧಿಕಾರಿಗಳಿಗೆ ವರವರ ರಾವ್ ಅವರ ಕುಟುಂಬದೊಂದಿಗೆ ವೀಡಿಯೊ ಕರೆಯಲ್ಲಿ ಮಾತನಾಡಲು ಅವಕಾಶ ಕಲ್ಪಿಸುವಂತೆ ನಿರ್ದೇಶಿಸಿತ್ತು.
ಜುಲೈ 31 ರಂದು ವೀಡಿಯೊ ಕರೆಯ ನಂತರ, “ರಾವ್ ತನ್ನ ತಂದೆಯ ಸಾವಿನ ಬಗ್ಗೆ ಭ್ರಮನಿರಸನಗೊಂಡಿದ್ದಾರೆ. ಇದು ಅತ್ಯಂತ ದುರ್ಬಲ ಮತ್ತು ಅಸಂಗತ ವಿಷಯವಾಗಿದೆ” ಎಂದು ಅವರ ಕುಟುಂಬವು ಹೇಳಿಕೊಂಡಿತ್ತು.
ತಲೋಜಾ ಜೈಲಿನಲ್ಲಿದ್ದ ರಾವ್ ಅವರಿಗೆ ತಲೆಗೆ ಪೆಟ್ಟಾಗಿದ್ದರಿಂದ, ಸರ್ಕಾರ ನಡೆಸುತ್ತಿರುವ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಉತ್ತಮ ಚಿಕಿತ್ಸೆಗಾಗಿ ನಾನಾವತಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಮಹಾರಾಷ್ಟ್ರ ಸರ್ಕಾರದ ಪತ್ರಿಕಾ ಪ್ರಕಟಣೆಯ ಪ್ರಕಾರ, ಆಗಸ್ಟ್ 16 ರವರೆಗೆ, ತಲೋಜಾ ಜೈಲಿನಲ್ಲಿರುವ ಮೂವರು ಕೈದಿಗಳಿಗೆ ಕೊರೊನಾ ದೃಢಪಟ್ಟಿದ್ದು, ಅದರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಹೈಕೋರ್ಟಿನ ಆದೇಶದ ಪ್ರಕಾರ, ತಲೋಜಾ ಜೈಲು ಕೈದಿಗಳ ಮೇಲೆ 46 ಕ್ಷಿಪ್ರ ಕೊರೊನಾ ಪರೀಕ್ಷೆಗಳನ್ನು ನಡೆಸಿದೆ.
ಇತರ ಭೀಮಾ ಕೋರೆಗಾಂವ್ ಆರೋಪಿಗಳಾದ ಆನಂದ್ ತೇಲ್ದುಂಬ್ಡೆ ಮತ್ತು ವೆರ್ನಾನ್ ಗೊನ್ಸಾಲ್ವೆಸ್ ಸಹ ತಾಲೋಜ ಜೈಲಿನಲ್ಲಿದ್ದಾರೆ.
ಅವರೂ ಕೂಡ ಸಾಂಕ್ರಾಮಿಕ ಸಮಯದಲ್ಲಿ ಆರೋಗ್ಯ ಪರಿಸ್ಥಿತಿಯ ಆಧಾರದಲ್ಲಿ ಜಾಮೀನು ಕೋರಿದ್ದಾರೆ.
ಇದನ್ನೂ ಓದಿ: ಭೀಮಾ ಕೋರೆಗಾಂವ್; ಪ್ರಾಧ್ಯಾಪಕರ ಮೇಲಿನ NIA ಕಿರುಕುಳಕ್ಕೆ ವಿದ್ಯಾರ್ಥಿಗಳ ಖಂಡನೆ


