ಸಂಸತ್ತಿನಲ್ಲಿ ಸಿಎಜಿ ವರದಿಗಳ ಮಂಡನೆ ಗಣನೀಯವಾಗಿ ಇಳಿಕೆಯಾಗಿದೆ. 2023ರಲ್ಲಿ ಸಂಸತ್ತಿನಲ್ಲಿ ಕೇವಲ 18 ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ಲೆಕ್ಕಪರಿಶೋಧನೆಯ ವರದಿಗಳನ್ನು ಮಂಡಿಸಲಾಗಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಮಂಡನೆಯಾದ ಅತ್ಯಂತ ಕಡಿಮೆ ಸಂಖ್ಯೆಯ ವರದಿಯಾಗಿದೆ ಎಂದು ದಿ ಹಿಂದೂ ವಿಶ್ಲೇಷಣೆಯು ಬಹಿರಂಗಪಡಿಸಿದೆ.
ದಿ ಹಿಂದೂ ಈ ಕುರಿತು ವಿಶ್ಲೇಷಣೆಯನ್ನು ನಡೆಸಿದ್ದು, ಕಳೆದ ಕೆಲವು ವರ್ಷಗಳಿಂದ ಸಿಎಜಿ ವರದಿ ಮಂಡನೆಯ ಸಂಖ್ಯೆಯು ಸ್ಥಿರವಾಗಿ ಕಡಿಮೆಯಾಗುತ್ತಿದೆ ಎಂದು ಬಹಿರಂಗಪಡಿಸಿದೆ. 2019 ಮತ್ತು 2023ರ ನಡುವೆ ಸರಾಸರಿ 22 ಸಿಎಜಿ ವರದಿಗಳನ್ನು ಮಂಡಿಸಲಾಗಿದೆ. ಆದರೆ 2014 ಮತ್ತು 2018ರ ನಡುವೆ 40 ವರದಿಯನ್ನು ಮಂಡಿಸಲಾಗಿತ್ತು. ಈ ವರದಿಯನ್ನು 2010 ಮತ್ತು 2023ರ ನಡುವೆ CAG ವೆಬ್‌ಸೈಟ್‌ನಲ್ಲಿ ಪ್ರಕಟವಾದ 400 ಕ್ಕೂ ಹೆಚ್ಚು ಆಡಿಟ್ ವರದಿಗಳ ವಿಶ್ಲೇಷಣೆ ಮಾಡಿ ಸಿದ್ದಪಡಿಸಲಾಗಿತ್ತು.
ಉದಾಹರಣೆಗೆ ರೈಲ್ವೆ ಇಲಾಖೆಯ 14 ಆಡಿಟ್ ವರದಿಗಳನ್ನು ಕಳೆದ ಐದು ವರ್ಷಗಳಲ್ಲಿ ಮಂಡಿಸಲಾಗಿದೆ. ಆದಕ್ಕೂ ಹಿಂದಿನ ಐದು ವರ್ಷಗಳ ಅವಧಿಯಲ್ಲಿ 27 ವರದಿಯನ್ನು ಮಂಡನೆ ಮಾಡಲಾಗಿತ್ತು. ಇನ್ನು ಏಪ್ರಿಲ್, ಜುಲೈ ಮತ್ತು ಆಗಸ್ಟ್‌ನಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ 3 ಸಿಎಜಿ ವರದಿಗಳು ಇನ್ನೂ ಸಂಸತ್ತಿನಲ್ಲಿ ಮಂಡನೆಯಾಗಿಲ್ಲ ಎನ್ನುವುದು ಬಯಲಾಗಿದೆ.
ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ನಿಕಟವರ್ತಿಯಾಗಿದ್ದ ಈಗಿನ ಸಿಎಜಿ ಗಿರೀಶ್ ಚಂದ್ರ ಮುರ್ಮು, ಇತ್ತೀಚೆಗೆ ಮೂವರು ಭಾರತೀಯ ಆಡಿಟ್ ಮತ್ತು ಅಕೌಂಟ್ಸ್ ಸರ್ವೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದರು. ಅವರು ಆಯುಷ್ಮಾನ್ ಭಾರತ್ ಮತ್ತು ದ್ವಾರಕಾ ಎಕ್ಸ್‌ಪ್ರೆಸ್‌ವೇ ಯೋಜನೆಯ ವರದಿಗಳನ್ನು ಸಲ್ಲಿಸಿದ್ದರು. ಈ ವರದಿಗಳಿಂದ ಮೋದಿ ಸರ್ಕಾರಕ್ಕೆ ಹಿನ್ನೆಡೆಯಾಗಿತ್ತು. ಈ ವರದಿಯ ಬಳಿಕ ನವದೆಹಲಿಯ ಸಿಎಜಿ ಕಚೇರಿಯಿಂದ ಎಲ್ಲಾ ಪೀಲ್ಡ್ ವರ್ಕ್‌ಗಳನ್ನು ನಿಲ್ಲಿಸುವಂತೆ ಮೌಖಿಕ ಆದೇಶಗಳನ್ನು ರವಾನಿಸಲಾಗಿದೆ ಎಂದು ಹೇಳಲಾಗಿತ್ತು. ಅದರೆ ಈ ಆರೋಪಗಳನ್ನು ಸಿಎಜಿ ಕಚೇರಿ ನಿರಾಕರಿಸಿದ್ದು, ಇಂತಹ ಯಾವುದೇ ಆದೇಶವನ್ನು ನೀಡಲಾಗಿಲ್ಲ ಎಂದು ಹೇಳಿತ್ತು.
ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸಲಾದ ಸಿಎಜಿಯ 12 ವರದಿಗಳು ಕೇಂದ್ರ ಸರ್ಕಾರದ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿನ ಹಣಕಾಸು ಮತ್ತು ಇತರ ಅಕ್ರಮಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದರಿಂದ ಬಿಜೆಪಿಗೆ ಅನಾನುಕೂಲ ಉಂಟುಮಾಡಿತ್ತು.
ಸಿಎಜಿ(CAG) ಇಂಡಿಯಾ:
ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಸುಪ್ರೀಂ ಆಡಿಟ್ ಸಂಸ್ಥೆ. ಇದನ್ನು ಸಂವಿಧಾನದ 148ನೇ ವಿಧಿಯಡಿಯಲ್ಲಿ ಸ್ಥಾಪಿಸಲಾಗಿದೆ. ಇದೊಂದು ಸ್ವತಂತ್ರ ಸಂಸ್ಥೆಯಾಗಿದೆ. ಕೇಂದ್ರ ಮತ್ತು ರಾಜ್ಯದ ಸರ್ಕಾರಿ ಪ್ರಾಧಿಕಾರಗಳ ಲೆಕ್ಕಪರಿಶೋಧನೆ ಮಾಡುವ ಅಧಿಕಾರವನ್ನು ಸಿಎಜಿ ಹೊಂದಿದೆ. 1971ರಲ್ಲಿ ಕೇಂದ್ರ ಸರ್ಕಾರವು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ (ಕರ್ತವ್ಯಗಳು, ಅಧಿಕಾರಗಳು ಮತ್ತು ಸೇವಾ ಷರತ್ತುಗಳು) ಕಾಯಿದೆ-1971ನ್ನು ಜಾರಿಗೆ ತಂದಿದ್ದು, ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಉಲ್ಲೇಖಿಸಿದೆ.
ಇದನ್ನು ಓದಿ: ರಾಮಮಂದಿರ ಉದ್ಘಾಟನೆಗೆ ಅಡ್ವಾಣಿ, ಜೋಷಿಗಿಲ್ಲ ಪ್ರವೇಶ


