ತೆಲುಗು ಚಿತ್ರರಂಗದ ಹಿರಿಯ ನಟ ಕೋಟಾ ಶ್ರೀನಿವಾಸ ರಾವ್ ಭಾನುವಾರ (ಜು.13) ಮುಂಜಾನೆ 4 ಗಂಟೆಯ ಸುಮಾರಿಗೆ ಹೈದರಾಬಾದ್‌ನ ಫಿಲ್ಮ್‌ನಗರದಲ್ಲಿರುವ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಕೋಟಾ ಶ್ರೀನಿವಾಸ ರಾವ್ ಅವರು ಹಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ದಕ್ಷಿಣ ಭಾರತದ ಅಗ್ರಗಣ್ಯ ನಟರಲ್ಲಿ ಒಬ್ಬರಾದ ಕೋಟಾ ಶ್ರೀನಿವಾಸ ರಾವ್ ಅವರು, ರಂಗಭೂಮಿಯಿಂದ ಬೆಳೆದು ಬಂದು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು. ವೃತ್ತಿ ಜೀವನದಲ್ಲಿ ಅವರು ವಿವಿಧ ಭಾಷೆಗಳ 750ಕ್ಕೂ ಹೆಚ್ಚು ಚಿತ್ರಗಳಲ್ಲಿ ಖಳನಾಯಕ, ಹಾಸ್ಯ ಮತ್ತು ಪೋಷಕ ಪಾತ್ರಗಳನ್ನು ನಿರ್ವಹಿಸಿ ಖ್ಯಾತಿಯನ್ನು ಗಳಿಸಿದ್ದರು. ರಾಜಕೀಯಕ್ಕೆ ಕಾಲಿಟ್ಟು ಶಾಸಕರಾಗಿಯೂ ಸೇವೆ ಸಲ್ಲಿಸಿದ್ದರು.
ಜುಲೈ 10, 1942ರಂದು ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಕಂಕಿಪಡುವಿನಲ್ಲಿ ಜನಿಸಿದ ಕೋಟಾ ಶ್ರೀನಿವಾಸ ರಾವ್, 1978ರಲ್ಲಿ ಬಿಡುಗಡೆಯಾದ ‘ಪ್ರಾಣಂ ಖರೀಧು’ ಚಿತ್ರದ ಮೂಲಕ ಸಿನಿಮಾ ಜಗತ್ತಿನಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದರು.
ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡುವ ಮೊದಲು, ಅವರು ಮೆಚ್ಚುಗೆ ಪಡೆದ ರಂಗಭೂಮಿ ಕಲಾವಿದರಾಗಿದ್ದರು. ಅವರ ಕಮಾಂಡಿಂಗ್ ಧ್ವನಿ ಮತ್ತು ಅಭಿವ್ಯಕ್ತಿಶೀಲ ನಟನೆ ಜನರ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. 2013ರಲ್ಲಿ ಬಿಡುಗಡೆಯಾದ ರಾಮ್ ಚರಣ್ ಅವರ ಹಿಟ್ ಚಿತ್ರಗಳಲ್ಲಿ ಒಂದಾದ ‘ನಾಯಕ್’ನಲ್ಲಿ ನಿರ್ವಹಿಸಿದ ಪಾತ್ರದಿಂದ ಶ್ರಿನಿವಾಸ ರಾವ್ ಅವರ ಖ್ಯಾತಿ ಇನ್ನಷ್ಟು ಹೆಚ್ಚಾಗಿತ್ತು.
ಶ್ರೀನಿವಾಸ ರಾವ್ ಅವರು ತೆಲುಗಿನ ಪ್ರಮುಖ ನಟರಾದ ಕೃಷ್ಣ, ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ, ವೆಂಕಟೇಶ್, ಮಹೇಶ್ ಬಾಬು, ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಮತ್ತು ಸಾಯಿ ಧರಮ್ ತೇಜ್ ಸೇರಿದಂತೆ ಹಲವರ ಜೊತೆ ನಟಿಸಿದ್ದರು.
“ಅಹನಾ ಪೆಲ್ಲಂಟಾ”, “ಪ್ರತಿಘಾತನಾ”, “ಯಮುದಿಕಿ ಮೊಗುಡು”, “ಖೈದಿ ನಂ.786”, “ಶಿವ”, “ಬೊಬ್ಬಿಲಿ ರಾಜ”, “ಯಮಲೀಲಾ”, “ಸಂತೋಷಂ”, “ಬೊಮ್ಮರಿಲ್ಲು”, “ಅತ್ತಾಡು”, ಮತ್ತು “ರೇಸ್ ಗುರ್ರಂ” ಶ್ರೀನಿವಾಸ ರಾವ್ ನಟಿಸಿದ ಪ್ರಮುಖ ಚಿತ್ರಗಳು.
ರಾಜಕೀಯದಲ್ಲೂ ಚಾಪು ಮೂಡಿಸಿದ್ದ ಶ್ರೀನಿವಾಸ ರಾವ್ 1999 ರಿಂದ 2004ರ ನಡುವೆ ವಿಜಯವಾಡ ಪೂರ್ವ ಕ್ಷೇತ್ರದ ಶಾಸಕರಾಗಿದ್ದರು. ತೆರೆಯ ಮೇಲಿಯೂ ರಾಜಕಾರಣಿಯಾಗಿ ನಟಿಸಿ ಮೆಚ್ಚುಗೆ ಪಡೆದಿದ್ದರು. ಅಲ್ಲು ಅರ್ಜುನ್ ಮುಖ್ಯ ಪಾತ್ರದಲ್ಲಿ ನಟಿಸಿದ ‘ಜುಲಾಯಿ’ ಅಂತಹ ಒಂದು ಚಿತ್ರವಾಗಿದ್ದು, ಇದರಲ್ಲಿ ರಾವ್ ಶಾಸಕನ ಪಾತ್ರವನ್ನು ನಿರ್ವಹಿಸಿದ್ದರು. ಕನ್ನಡದ “ನಮ್ಮ ಬಸವ”, “ಕಬ್ಜ” ಸೇರಿದಂತೆ ಕೆಲ ಸಿನಿಮಾಗಳಲ್ಲಿ ಶ್ರೀನಿವಾಸ ರಾವ್ ನಟಿಸಿದ್ದರು.
ಕೋಟಾ ಶ್ರೀನಿವಾಸ ರಾವ್ ಅವರು ಪದ್ಮಶ್ರೀ, ನಂದಿ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ರಾವ್ ನಿಧನಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ ತೆಲುಗು ಚಿತ್ರರಂಗದ ಗಣ್ಯರು, ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಂಬನಿ ಮಿಡಿದಿದ್ದಾರೆ.
ರೋಹಿತ್ ವೇಮುಲ ಆತ್ಮಹತ್ಯೆ ಪ್ರಕರಣವನ್ನು ಮರು ತನಿಖೆ ನಡೆಸಲಾಗುವುದು: ತೆಲಂಗಾಣ ಉಪ ಮುಖ್ಯಮಂತ್ರಿ


