ಸೆಪ್ಟೆಂಬರ್ 9ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಅಭ್ಯರ್ಥಿಯಾಗಿ ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ ರಾಧಾಕೃಷ್ಣನ್ ಅವರನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಭಾನುವಾರ (ಆ.17) ಘೋಷಿಸಿದೆ.
ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ರಾಧಾಕೃಷ್ಣನ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ.
“ಮುಂದಿನ ಉಪರಾಷ್ಟ್ರಪತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಬೇಕೆಂದು ನಾವು ಬಯಸುತ್ತೇವೆ, ನಾವು ವಿರೋಧ ಪಕ್ಷದ ನಾಯಕರನ್ನು ಸಂಪರ್ಕಿಸಿದ್ದೇವೆ” ಎಂದು ರಾಧಾಕೃಷ್ಣನ್ ಅವರ ಹೆಸರನ್ನು ಘೋಷಿಸುತ್ತಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಜೆ.ಪಿ ನಡ್ಡಾ ಹೇಳಿದ್ದಾರೆ.
“ಸಿ.ಪಿ ರಾಧಾಕೃಷ್ಣನ್ ಅವರು ಒಬ್ಬ ಹಿರಿಯ, ಗೌರವಾನ್ವಿತ ವ್ಯಕ್ತಿ. ತಮಿಳುನಾಡಿನಲ್ಲಿ ಸಮಾಜದ ಎಲ್ಲಾ ವರ್ಗಗಳ ಜನರ ಗೌರವವನ್ನು ಅವರು ಗಳಿಸಿದ್ದಾರೆ” ಎಂದಿದ್ದಾರೆ.
ಮೈತ್ರಿಕೂಟದ ಅಭ್ಯರ್ಥಿಯನ್ನು ಅಂತಿಮಗೊಳಿಸಲು ಎನ್‌ಡಿಎ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಅಧಿಕಾರ ನೀಡಿತ್ತು.
ಅವರು ಸ್ಪೂರ್ತಿದಾಯಕ ಉಪರಾಷ್ಟ್ರಪತಿಯಾಗುತ್ತಾರೆ ಎಂಬ ವಿಶ್ವಾಸವಿದೆ : ಮೋದಿ
ಉಪರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗಿ ಘೋಷಿಸಿದ ಬಳಿಕ, ಪ್ರಧಾನಿ ಮೋದಿ ಅವರು ರಾಧಾಕೃಷ್ಣನ್ ಅವರನ್ನು ಶ್ಲಾಘಿಸಿದ್ದು, ಅವರು “ಸ್ಪೂರ್ತಿದಾಯಕ ಉಪರಾಷ್ಟ್ರಪತಿ” ಆಗುತ್ತಾರೆ ಎಂದು ಹೇಳಿದ್ದಾರೆ.
“ತಮ್ಮ ಸುದೀರ್ಘ ಸಾರ್ವಜನಿಕ ಜೀವನದಲ್ಲಿ ಸಿ.ಪಿ ರಾಧಾಕೃಷ್ಣನ್ ಅವರು ಸಮರ್ಪಣೆ, ನಮ್ರತೆ ಮತ್ತು ಬುದ್ಧಿಶಕ್ತಿಯಿಂದ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಅವರು ನಿರ್ವಹಿಸಿದ ವಿವಿಧ ಹುದ್ದೆಗಳಲ್ಲಿ, ಯಾವಾಗಲೂ ಸಮುದಾಯ ಸೇವೆ ಮತ್ತು ಅಂಚಿನಲ್ಲಿರುವವರ ಸಬಲೀಕರಣದತ್ತ ಗಮನಹರಿಸಿದ್ದಾರೆ” ಎಂದಿದ್ದಾರೆ.
“ಅವರು ತಮಿಳುನಾಡಿನಲ್ಲಿ ತಳಮಟ್ಟದಲ್ಲಿ ವ್ಯಾಪಕ ಕೆಲಸ ಮಾಡಿದ್ದಾರೆ. ಎನ್‌ಡಿಎ ಕುಟುಂಬವು ಅವರನ್ನು ನಮ್ಮ ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡಲು ನಿರ್ಧರಿಸಿದ್ದಕ್ಕೆ ನನಗೆ ಸಂತೋಷವಾಗಿದೆ” ಎಂದು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
“ಸಿ.ಪಿ ರಾಧಾಕೃಷ್ಣನ್ ಅವರು ವಿವಿಧ ರಾಜ್ಯಗಳ ಸಂಸದರಾಗಿ ಮತ್ತು ರಾಜ್ಯಪಾಲರಾಗಿ ಶ್ರೀಮಂತ ಅನುಭವ ಹೊಂದಿದ್ದಾರೆ. ಅವರ ಸಂಸದೀಯ ಮಧ್ಯಸ್ಥಿಕೆಗಳು ಯಾವಾಗಲೂ ಚುರುಕಾಗಿದ್ದವು. ರಾಜ್ಯಪಾಲರಾಗಿದ್ದ ಅವಧಿಯಲ್ಲಿ, ಅವರು ಸಾಮಾನ್ಯ ನಾಗರಿಕರು ಎದುರಿಸುವ ಸವಾಲುಗಳನ್ನು ಪರಿಹರಿಸುವತ್ತ ಗಮನಹರಿಸಿದ್ದರು. ಈ ಅನುಭವಗಳು ಅವರಿಗೆ ಶಾಸಕಾಂಗ ಮತ್ತು ಸಾಂವಿಧಾನಿಕ ವಿಷಯಗಳ ಬಗ್ಗೆ ಅಪಾರ ಜ್ಞಾನವಿದೆ ಎಂಬುವುದನ್ನು ಖಚಿತಪಡಿಸಿದೆ. ‘ಅವರು ಸ್ಪೂರ್ತಿದಾಯಕ ಉಪರಾಷ್ಟ್ರಪತಿಯಾಗುತ್ತಾರೆ ಎಂಬ ವಿಶ್ವಾಸ ನನಗಿದೆ’ ಎಂದು ಮೋದಿ ಹೇಳಿದ್ದಾರೆ.
ಇಂದು (ಸೋಮವಾರ) ಇಂಡಿಯಾ ಮೈತ್ರಿಕೂಟದ ಸಭೆ
ಉಪರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗಿ ಎನ್‌ಡಿಎ ಒಕ್ಕೂಟ ಸಿ.ಪಿ ರಾಧಾಕೃಷ್ಣನ್ ಅವರನ್ನು ಆಯ್ಕೆ ಮಾಡಿದರೆ, ಇತ್ತ ಪ್ರತಿಪಕ್ಷಗಳ ಒಕ್ಕೂಟ ಇಂಡಿಯಾ ತಮ್ಮ ಅಭ್ಯರ್ಥಿ ಆಯ್ಕೆಗೆ ಇಂದು (ಆ.18 ಸೋಮವಾರ ) ಸಭೆ ನಡೆಸಲಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ದೆಹಲಿಯ ಮನೆಯಲ್ಲಿ ಇಂಡಿಯಾ ಒಕ್ಕೂಟದ ಎಲ್ಲಾ ಪಕ್ಷಗಳ ನಾಯಕರು ಸಭೆ ಸೇರಿ ಚರ್ಚೆ ನಡೆಸಲಿದ್ದು, ಉಪರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡುವ ಸಾಧ್ಯತೆ ಇದೆ.
ಇದರ ಜೊತೆಗೆ, ಸ್ವಾತಂತ್ರ್ಯ ದಿನಾಚರಣೆ ವಿರಾಮದ ಬಳಿಕ ಮುಂದುವರಿಯುವ ಸಂಸತ್ ಅಧಿವೇಶದಲ್ಲಿ ವಿರೋಧ ಪಕ್ಷಗಳ ಕಾರ್ಯತಂತ್ರ, ಬಿಹಾರದಲ್ಲಿ ಎಸ್‌ಐಆರ್ ಮತ್ತು ಮತಗಳ್ಳತನದ ವಿರುದ್ದ ರಾಹುಲ್ ಗಾಂಧಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ‘ವೋಟರ್ ಅಧಿಕಾರ್ ಯಾತ್ರೆ’ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆ ಇದೆ.
ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರನ್ನು ಒಳಗೊಂಡ ಉಪರಾಷ್ಟ್ರಪತಿ ಆಯ್ಕೆ ಚುನಾವಣಾ ಪ್ರಕ್ರಿಯೆಯಲ್ಲಿ ಬಹುಮತ ಹೊಂದಿರುವ ಎನ್‌ಡಿಎ, ಸುಲಭ ಗೆಲುವು ಸಾಧಿಸುವ ನಿರೀಕ್ಷೆಯಿದೆ.
ವಿಶೇಷವಾಗಿ, ಎನ್‌ಡಿಎ ತನ್ನ ಒಕ್ಕೂಟದ ಎಲ್ಲಾ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳನ್ನು ಆಗಸ್ಟ್ 21 ರಂದು ನಡೆಯಲಿರುವ ಸಿಪಿ ರಾಧಾಕೃಷ್ಣನ್ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮಕ್ಕೆ ದೆಹಲಿಗೆ ಆಹ್ವಾನಿಸಿದೆ.
ಸಿಪಿ ರಾಧಾಕೃಷ್ಣನ್ ಯಾರು?
ಚಂದ್ರಾಪುರಂ ಪೊನ್ನುಸ್ವಾಮಿ (ಸಿಪಿ) ರಾಧಾಕೃಷ್ಣನ್ ಅವರು ಪ್ರಸ್ತುತ ಮಹಾರಾಷ್ಟ್ರದ 24ನೇ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಜುಲೈ 31, 2024 ರಂದು ಈ ಹುದ್ದೆಯನ್ನು ವಹಿಸಿಕೊಂಡಿದ್ದಾರೆ.
ರಾಧಾಕೃಷ್ಣನ್ ಈ ಹಿಂದೆ ಫೆಬ್ರವರಿ 2023ರಿಂದ ಜುಲೈ 2024ರವರೆಗೆ ಜಾರ್ಖಂಡ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಮಾರ್ಚ್ ಮತ್ತು ಜುಲೈ 2024ರ ನಡುವೆ ತೆಲಂಗಾಣದ ರಾಜ್ಯಪಾಲರಾಗಿ ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಹೆಚ್ಚುವರಿ ಜವಾಬ್ದಾರಿಯನ್ನು ಹೊಂದಿದ್ದರು.
ಬಿಜೆಪಿಯ ಹಿರಿಯ ನಾಯಕರಾದ ರಾಧಾಕೃಷ್ಣನ್, ಕೊಯಮತ್ತೂರಿನಿಂದ ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು ಮತ್ತು ಈ ಹಿಂದೆ ತಮಿಳುನಾಡು ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಸೆಪ್ಟೆಂಬರ್ 9ರಂದು ಉಪರಾಷ್ಟ್ರಪತಿ ಆಯ್ಕೆಗೆ ಮತದಾನ ನಡೆಯಲಿದ್ದು, ಅದೇ ದಿನ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ಘೋಷಿಸಿದೆ. ನಾಮಪತ್ರ ಸಲ್ಲಿಸಲು ಆಗಸ್ಟ್ 21 ಕೊನೆಯ ದಿನಾಂಕವಾಗಿದ್ದು, ಅಭ್ಯರ್ಥಿಗಳು ಆಗಸ್ಟ್ 25 ರವರೆಗೆ ತಮ್ಮ ನಾಮಪತ್ರಗಳನ್ನು ಹಿಂಪಡೆಯಬಹುದು.
ಸಂವಿಧಾನ ಅಪಾಯದಲ್ಲಿದೆ, ಬಿಜೆಪಿ ಅಧಿಕಾರದಲ್ಲಿರುವವರೆಗೆ ಜನರ ಹಕ್ಕುಗಳು ಸುರಕ್ಷಿತವಲ್ಲ: ಮಲ್ಲಿಕಾರ್ಜುನ ಖರ್ಗೆ


