ಕರ್ನಾಟಕದಲ್ಲಿ ಬಹುಜನ ಚಳವಳಿಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದ ಚಿಂತಕಿ, ಸಂಶೋಧಕಿ ಎಚ್.ಕೆ.ವಿಜಯರವರು ಅನಾರೋಗ್ಯದ ಕಾರಣದಿಂದ ಸೆಪ್ಟಂಬರ್ 05ರ ಭಾನುವಾರ ರಾತ್ರಿ ಕೊನೆಯುಸಿರೆಳಿದಿದ್ದಾರೆ.
ಅವರು ಸೇರಿದಂತೆ ಹಲವು ಜನರ ಶ್ರಮದಿಂದ ರೂಪಿತವಾಗಿದ್ದ ಬಹುಜನ ವಿದ್ಯಾರ್ಥಿ ಚಳವಳಿಯಿಂದಾಗಿ ಹೊಸ ತಲೆಮಾರಿನ ಬರಹಗಾರರು ಹುಟ್ಟಿಕೊಂಡರು. ಹೊಸ ರೀತಿಯ ಚಳವಳಿಯ ಹಾಡುಗಳು ಚಾಲ್ತಿಗೆ ಬಂದವು. ಅಂಬೇಡ್ಕರ್- ಗಾಂಧಿ ನಡುವಿನ ಭಿನ್ನಾಭಿಪ್ರಾಯಗಳ ಕುರಿತು ಹೊಸ ಚರ್ಚೆಗಳು ಮುನ್ನಲೆಗೆ ಬಂದವು.
ಸರ್ಕಾರಿ ಉದ್ಯೋಗವನ್ನು ಬಿಟ್ಟು, ಚಳವಳಿಗೆ ಕಾಲಿಟ್ಟಿದ್ದ ಎನ್.ಮಹೇಶ್ ಹೊಸ ಭರವಸೆಯಾಗಿ ಹೊಮ್ಮಿದ್ದರು. ಎನ್.ಮಹೇಶ್ ಅವರಿಗೆ ಸದಾ ಬೆನ್ನೆಲುಬಾಗಿ ನಿಂತು, ಬಹುಜನ ಚಳವಳಿ ಬಲವಾಗಲು ಕಾರಣರಾಗಿ, ದಲಿತ ವಿದ್ಯಾರ್ಥಿ ಸಮೂಹವನ್ನು ತನ್ನ ಮಕ್ಕಳಂತೆ ಪೊರೆದವರು ವಿಜಯ ಮಹೇಶ್ ಎಂದು ನೆನೆಯುತ್ತಾರೆ ಅವರ ಒಡನಾಡಿಗಳು.
ಎಚ್.ಕೆ.ವಿಜಯ ಹಾಗೂ ಎನ್.ಮಹೇಶ್ ಪ್ರೀತಿಸಿ ಮದುವೆಯಾದವರು. ಬೆಂಗಳೂರು ವಿವಿಯ ವಿದ್ಯಾರ್ಥಿಗಳಾಗಿದ್ದ ಈ ಇಬ್ಬರು, ಕಾಲೇಜು ದಿನಗಳಿಂದಲೂ ಪ್ರೀತಿಸುತ್ತಿದ್ದರು. ಮುಂದೆ ಎನ್.ಮಹೇಶ್ ಅವರು ಕೆಎಎಸ್ ಅಧಿಕಾರಿಯಾದರು. ವಿಜಯ ಅವರು ಅಪೆಕ್ಸ್ ಬ್ಯಾಂಕ್ ನಲ್ಲಿ ಕೆಲಸದಲ್ಲಿದ್ದರು. ಕೆಲಸವನ್ನು ಬಿಟ್ಟು ಎನ್.ಮಹೇಶ್, ಚಳವಳಿಗೆ ಕಾಲಿಡಲು ಪ್ರೋತ್ಸಾಹಿಸಿದ ವಿಜಯ ಮಹೇಶ್, ಬಹುಜನ ಚಳವಳಿಯ ಹುಡುಗರಿಗೆ “ವಿಜಯಕ್ಕ” ಎಂದೇ ಚಿರಪರಿಚಿತರಾದರು.
ಚಳವಳಿಯ ಭಾಗವಾಗಿದ್ದ “ಸಮಾಜ ಪರಿವರ್ತನಾ” ಹಾಗೂ “ಪ್ರಬುದ್ಧ ಭಾರತ” ಪತ್ರಿಕೆಗಳಲ್ಲಿ ವಿಜಯ ಅವರ ಲೇಖನಗಳು ಪ್ರಕಟವಾಗಿದ್ದವು. ಇವರು ಬರೆದ ವಿಚಾರಗಳು ‘ಮೂಲನಿವಾಸಿ ಬಹುಜನರ ಇತಿಹಾಸ’, ‘ಅಂಬೇಡ್ಕರ್ ಮತ್ತು ಚರಿತ್ರೆಯ ಮರುಶೋಧ’, ‘ಹಿಂದುತ್ವದ ಗಾಂಧಿ ಮತ್ತು ಮಾನವತೆಯ ಅಂಬೇಡ್ಕರ್’, ‘ವಿಜಯಕ್ಕನ ವಿಚಾರಲಹರಿ’, ‘ನೆಲದ ಮಾತು’, ‘ಆಧುನಿಕ ಪುಷ್ಯಮಿತ್ರ’, ‘ಅಂದದ ಮಗುವಿಗೆ ಚಂದದ ಹೆಸರು’ ಕೃತಿಗಳಾಗಿ ಪ್ರಕಟವಾಗಿವೆ.
“ಬಹುಜನ ವಿದ್ಯಾರ್ಥಿ ಸಂಘಟನೆಗೆ ವಿಜಯ ಮಹೇಶ್ ಅವರ ಬರಹಗಳು ಪ್ರೋತ್ಸಾಹವನ್ನು ನೀಡುತ್ತಿದ್ದವು. ಸಮಾಜ ಪರಿವರ್ತನಾ, ಪ್ರಬುದ್ಧ ಭಾರತಕ್ಕೆ ನಿರಂತರವಾಗಿ ಬರೆಯುತ್ತಿದ್ದರು. ನಾವೆಲ್ಲ ಅವರ ಬರಹಗಳಿಂದ ಸ್ಫೂರ್ತಿ ಪಡೆದೆವು. ಎಷ್ಟೇ ಜನ ಕಾರ್ಯಕರ್ತರು ಬಂದರೂ ಸ್ವತಃ ತಾಯಿಯ ಹಾಗೆ ನೋಡಿಕೊಳ್ಳುತ್ತಿದ್ದರು. ಎನ್.ಮಹೇಶ್ ಅವರು ಈ ವಿಚಾರದಲ್ಲಿ ಭಾಗ್ಯವಂತರು. ಎಲ್ಲರಿಗೂ ಇಂತಹ ಪತ್ನಿ ಸಿಗುವುದಿಲ್ಲ. ಮನೆಯಲ್ಲಿ ಸಂಪೂರ್ಣ ಸಹಕಾರ ಸಿಕ್ಕಿದ್ದರಿಂದಲೇ ಚಳವಳಿಗೆ ಹೋಗಲು ಸಾಧ್ಯವಾಯಿತು. ಬಹುಜನ ಚಳವಳಿಗೆ ಎನ್.ಮಹೇಶ್ ಅರ್ಧ ಶಕ್ತಿಯಾಗಿದ್ದರೆ, ವಿಜಯ ಮಹೇಶ್ ಇನ್ನರ್ಧ ಶಕ್ತಿಯಾಗಿದ್ದರು” ಎನ್ನುತ್ತಾರೆ ಬರಹಗಾರ, ಸಂಘಟಕ ಡಾ.ಶಿವಕುಮಾರ್.
“ನಾಲ್ವಡಿ ಕೃಷ್ಣರಾಜ ಒಡೆಯರ್, ಪೆರಿಯಾರ್ ರಾಮಸ್ವಾಮಿ, ಜ್ಯೋತಿ ಬಾ ಫುಲೆ, ಸಾವಿತ್ರಿ ಬಾ ಫುಲೆ, ಟಿಪ್ಪು ಸುಲ್ತಾನ್, ಕಾನ್ಶಿರಾಮ್, ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಅವರು ಬರೆಯುತ್ತಿದ್ದ ಲೇಖನಗಳು ಅಥೆಂಟಿಕ್ ಆಗಿರುತ್ತಿದ್ದವು. ಹೊಸ ತಲೆಮಾರಿಗೆ ಸ್ಫೂರ್ತಿಯನ್ನು ತುಂಬುತ್ತಿದ್ದರು. ನಾವೆಲ್ಲ ವಿಚಾರವಂತರಾಗಿದ್ದೇವೆ ಎಂದರೆ ಅದರ ಹಿಂದಿನ ಶಕ್ತಿ ವಿಜಯ ಮಹೇಶ್” ಎಂಬುದು ಅವರ ಅಭಿಪ್ರಾಯ.
“ನಾವು ಎಷ್ಟೋ ವಿದ್ಯಾರ್ಥಿಗಳು ವಿವಿಧ ವಿ.ವಿ.ಗಳಲ್ಲಿ ಸಂಶೋಧನೆ ಮಾಡಿದ್ದೇವೆ. ವಿಜಯ ಮಹೇಶ್ ಅವರ ಬರವಣಿಗೆಗಳೇ ಈ ಸಂಶೋಧನಾ ವಿದ್ಯಾರ್ಥಿಗಳಿಗೆ ಆಧಾರವಾಗಿದ್ದವು. ಶೋಷಿತರ ಕುರಿತು ಅತ್ಯಂತ ಖಚಿತವಾಗಿ ಬರೆಯುವ ಲೇಖಕಿ ಅವರರಾಗಿದ್ದರು. ನಾವೆಲ್ಲ ವಿಶ್ವವಿದ್ಯಾನಿಲಯಗಳಲ್ಲಿ ನೋಂದಾಯಿತ ಸಂಶೋಧಕರಾಗಿದ್ದರೆ, ವಿಜಯಕ್ಕ ನೋಂದಾಯಿತರಲ್ಲದ ಸಂಶೋಧಕರಾಗಿದ್ದರು” ಎಂದು ಅಭಿಪ್ರಾಯಪಡುತ್ತಾರೆ ಶಿವಕುಮಾರ್.
ಇದನ್ನೂ ಓದಿ: ಅವಕಾಶವಾದವನ್ನು ಸಿದ್ಧಾಂತವಾಗಿಸಿಕೊಂಡಾಗ ವಿಶ್ವಾಸ ಉಳಿಯುವ ಬಗೆ ಎಂತು?
ಕೈಬರಹದಲ್ಲಿದ್ದ ವಿಜಯ ಮಹೇಶ್ ಅವರ ಬರಹಗಳನ್ನು ಕೃತಿ ರೂಪಕ್ಕೆ ತರಲು ಶ್ರಮಿಸಿದವರಲ್ಲಿ ರಘೋತ್ತಮ ಹೊ.ಬ. ಅವರೂ ಒಬ್ಬರು. “ಸಮಾಜ ಪರಿವರ್ತನಾ ಪತ್ರಿಕೆಯ ಸಂಪಾದನೆಯನ್ನು ನೋಡಿಕೊಳ್ಳುತ್ತಿದ್ದ ಕೃಷ್ಣಮೂರ್ತಿ ಚಮರಂ ಒಂದಿಷ್ಟು ಲೇಖನಗಳನ್ನು ಸಂಗ್ರಹಿಸಿಕೊಟ್ಟಿದ್ದರು. ಮುಂದೆ ಪ್ರಬುದ್ಧ ಭಾರತ ಆರಂಭವಾದಾಗ ಅದರ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದೆ. ಹೀಗಾಗಿ ಅವರ ಹಲವು ಬರಹಗಳನ್ನು ನನ್ನ ಬಳಿ ಇದ್ದವು. ಅವುಗಳನ್ನು ಸಂಗ್ರಹಿಸಿ ಪುಸ್ತಕ ಪ್ರಕಟಿಸಿದ ಖುಷಿ ಇದೆ” ಎನ್ನುತ್ತಾರೆ ಹೊ.ಬ.

“ಎನ್.ಮಹೇಶ್ ಮತ್ತು ವಿಜಯ ಅವರು ಕಾನ್ಶಿರಾಮ್ ಅವರ ಚಿಂತನೆಗಳಿಂದ ಪ್ರಭಾವಿತರಾದವರು. ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಅಧಿಕಾರ ಹಿಡಿದಿತ್ತು. ಹೋರಾಟಗಾರರಾದ ಗೋಪಿನಾಥ್, ಮೋಹನ್ ಕುಮಾರ್ ಅವರು 1992ರಲ್ಲಿ ಸಣ್ಣಮಟ್ಟದಲ್ಲಿ ಬಹುಜನ ಚಳವಳಿಯನ್ನು ಕಟ್ಟುತ್ತಿದ್ದರು. 1993ರಲ್ಲೇ ಭೀಮ್ ಮಾರ್ಚ್ ಹಮ್ಮಿಕೊಂಡಿದ್ದರು. ಮಹೇಶ್ ಅವರು ಚಳವಳಿಯಲ್ಲಿ ಪಾಲ್ಗೊಳ್ಳುತ್ತಿದ್ದರೂ ಸರ್ಕಾರಿ ಉದ್ಯೋಗದಲ್ಲಿದ್ದರು. ಪತ್ನಿಯ ಪ್ರೋತ್ಸಾಹದಿಂದ ಕೆಲಸ ಬಿಟ್ಟರು. ಚಳವಳಿಯಲ್ಲಿ ಪೂರ್ಣ ತೊಡಗಿಸಿಕೊಂಡರು. 1998ರಲ್ಲಿ ಚುನಾವಣೆಯಲ್ಲಿ ನಿಂತರು. ಬಹುಜನ ಚಳವಳಿ ದೊಡ್ಡ ಮಟ್ಟದಲ್ಲಿ ಬೆಳೆಯಲು ವಿಜಯಾ ಅವರು ಕಾರಣ. ಅದ್ಭುತ ಓದುಗರಾಗಿದ್ದ ಅವರು, ಅಂಬೇಡ್ಕರ್ ಅವರ ಮೂಲ ಬರಹಗಳನ್ನೇ ಅಧ್ಯಯನ ಮಾಡಿ, ನಮಗೆಲ್ಲ ವಿಚಾರಗಳನ್ನು ತಿಳಿಸಿಕೊಟ್ಟರು” ಎಂದು ಸ್ಮರಿಸುತ್ತಾರೆ ರಘೋತ್ತಮ ಹೊ.ಬ.
ಕಾನ್ಶಿ ಫೌಂಡೇಷನ್‌ನಲ್ಲಿ ಅಂತ್ಯ ಸಂಸ್ಕಾರ
ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವಿಜಯ ಮಹೇಶ್ ಅವರು ಭಾನುವಾರ ನಿಧನರಾದರು. ಅವರು ಬೆಂಗಳೂರಿನ ಬಳಿ ಕನಕಪುರದಲ್ಲಿ ಸ್ಥಾಪಿಸಿದ್ದ ಕಾನ್ಶಿ ಫೌಂಡೇಷನ್‌ನಲ್ಲಿ ಸೋಮವಾರ ಅವರ ಅಂತ್ಯ ಸಂಸ್ಕಾರ ನೆರವೇರಿತು.
ಇದನ್ನೂ ಓದಿ: ಭಾರತದ ಆರ್ಥಿಕತೆ – ಸುಧಾರಣಾಪೂರ್ವ ಮತ್ತು ಸುಧಾರಣೋತ್ತರ ಕಾಲಘಟ್ಟ; ಒಂದು ಮೌಲ್ಯಮಾಪನ


