ರಾಜ್ಯ ಬಿಜೆಪಿ ಸರ್ಕಾರ ಮತ್ತು ಯಡಿಯೂರಪ್ಪನವರ ವಿರುದ್ಧ ಗಂಭೀರವಾದ ಆರೋಪಗಳನ್ನು ಮಾಡುತ್ತಿರುವ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಈಗ ಮತ್ತೊಂದು ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. “ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಬಿಹಾರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಮತ್ತು ಮೋದಿ ಶಕ್ತಿಯನ್ನು ಕುಗ್ಗಿಸಲು ಹಣ ನೀಡಿದ್ದಾರೆ” ಎಂದು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ವಿಜಯೇಂದ್ರ ತಮ್ಮ ಆಪ್ತರ ಮೂಲಕ ಹಣ ಕಳುಹಿಸಿದ್ದಾರೆ. ಆರ್‌ಜೆಡಿ, ಕಾಂಗ್ರೆಸ್‌ಗೆ ವಿಜಯೇಂದ್ರ ಫಂಡಿಂಗ್ ಮಾಡಿದ್ದಾರೆ. ಈ ಬಗ್ಗೆಯೂ ತನಿಖೆ ಆಗಬೇಕು” ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ರೈತರು, ಜನಸಾಮಾನ್ಯರು ಮೂಢಾತ್ಮರಲ್ಲ, ಬದಲಿಗೆ ಮೋದಿಶಾ ವಂಚಕಾತ್ಮರು | ದೇವನೂರ ಮಹಾದೇವ
“ಪಕ್ಷದಿಂದ ನನಗೆ ನೋಟಿಸ್ ಬಂದಿರುವುದು ನಿಜ. ಅದಕ್ಕೆ ಪ್ರತಿಕ್ರಿಯೆಯಾಗಿ ಹನ್ನೊಂದು ಪುಟಗಳ ಉತ್ತರ ನೀಡಿದ್ದೇನೆ. ಯಡಿಯೂರಪ್ಪ ಅವರ ಕುಟುಂಬ ರಾಜಕಾರಣದ ಬಗ್ಗೆ 45 ಪ್ಯಾರಾಗಳಲ್ಲಿ ವಿವರಿಸಿದ್ದೇನೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಸರ್ಕಾರಕ್ಕೆ ಹೇಗೆ ಕೆಟ್ಟ ಹೆಸರು ಬರುತ್ತಿದೆ ಎಂಬುದನ್ನು ಪತ್ರದಲ್ಲಿ ಪ್ರಸ್ತಾಪಿಸಿದ್ದೇನೆ. ಸರ್ಕಾರದಲ್ಲಿ ಕುಟುಂಬದ ಹಸ್ತಕ್ಷೇಪ ಇರಬಾರದು ಎನ್ನುವುದು ನರೇಂದ್ರ ಮೋದಿ ಆಶಯ. ಆದರೆ, ಅವರ ಆಶಯದಂತೆ ಇಲ್ಲಿ ಸರ್ಕಾರ ಇಲ್ಲ. ಯಡಿಯೂರಪ್ಪ ಅವರ ಕುಟುಂಬ ಬಿಜೆಪಿ ಶಾಸಕರನ್ನು ಗೌರವಿಸುತ್ತಿಲ್ಲ. ಯಡಿಯೂರಪ್ಪ ಅವರ ಕುಟುಂಬದ ಬಗ್ಗೆಯೂ ತನಿಖೆ ಮಾಡಬೇಕು ಮತ್ತು ಭ್ರಷ್ಟಾಚಾರ, ಹಸ್ತಕ್ಷೇಪ, ವರ್ಗಾವಣೆ ದಂಧೆ ಬಗ್ಗೆಯೂ ತನಿಖೆ ಮಾಡಬೇಕು ಒತ್ತಾಯಿಸಿದ್ದೇನೆ” ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ’ಅಮಿತಾಬ್, ಅಕ್ಷಯ್‌ಗೆ ಮೋದಿ ಸರ್ಕಾರದ ವಿರುದ್ಧ ಮಾತನಾಡಲು ಧೈರ್ಯವಿಲ್ಲವೇ?’
“ನೋಟಿಸ್‌ಗೆ ಉತ್ತರ ಕೊಡುವಾಗ ಪತ್ರದಲ್ಲಿ ಎಲ್ಲೂ ಕ್ಷಮೆ ಯಾಚಿಸಿಲ್ಲ. ಸಿಡಿ, ಇಡಿ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಿದ್ದೇನೆ. ಮಾರಿಷಸ್ ವಿಚಾರವನ್ನೂ ಬರೆದಿದ್ದೇನೆ. ಮಾರಿಷಸ್‌ಗೆ ಯಾಕೆ ಹೋಗಿದ್ದರು. ಎಷ್ಟು ಮಂದಿ ಹೋಗಿದ್ದರು. ಯಾವ ವಿಮಾನದಲ್ಲಿ ಹೋಗಿದ್ದರು, ಮಾಜಿ ಗೃಹ ಸಚಿವರೊಬ್ಬರ ಆಪ್ತ ಸಹಾಯಕನ ಮೂಲಕ ಮಾರಿಷಸ್‌ಗೆ ಹೋಗಿ ಏನೇನು ತೆಗೆದುಕೊಂಡಿದ್ದಾರೆ ಎಲ್ಲವನ್ನೂ ಪತ್ರದಲ್ಲಿ ಉಲ್ಲೇಖಿಸಿದ್ದೇನೆ. ಇದರ ಬಗ್ಗೆಯೂ ತನಿಖೆ ಮಾಡಲು ಆಗ್ರಹಿಸಿದ್ದೇನೆ” ಎಂದು ಹೇಳಿದರು.
ಇದನ್ನೂ ಓದಿ: ‘ಹೌದು ಮೈಲಾರ್ಡ್, ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರೆಲ್ಲಾ ಒಟ್ಟಾಗಿ ಸಂಚು ಹೂಡಿದರು’


