ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿರುವ ಸಂಗಮ್ ಶಾಲೆ ಬಳಿ, ನಟ ಸುದೀಪ್ ಅಭಿಮಾನಿ ರತ್ನಾಕರ್ ಮೇಲೆ ವಿನಯ್ ಗುರೂಜಿ ಬೆಂಬಲಿಗರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಕೆಲ ದಿನಗಳ ಹಿಂದೆ ವಿನಯ್ ಗುರೂಜಿ, ಹುಲಿ ಬಂದರೆ ನಟ ಸುದೀಪ ಕೂಡ ಓಡಿ ಹೋಗ್ತಾರೆ ಎಂದು ವ್ಯಂಗ್ಯವಾಗಿ ಟೀಕೆ ಮಾಡಿದ್ದರು. ಇದನ್ನು ಖಂಡಿಸಿದ್ದ ಸುದೀಪ್ ಅಭಿಮಾನಿ ರತ್ನಾಕರ್, ಫೇಸ್ ಬುಕ್ ನಲ್ಲಿ ವಿನಯ್ ಗುರೂಜ ಹೇಳಿಕೆಯನ್ನು ಪೋಸ್ಟ್ ಮಾಡಿ ವಿರೋಧಿಸಿದ್ದರು. ಇದರಿಂದ ರೊಚ್ಚಿಗೆದ್ದ ವಿನಯ್ ಗುರೂಜಿ ಬೆಂಬಲಿಗರು ರತ್ನಾಕರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಕುಂದಾಪುರದ ಸಂಗಮ್ ಶಾಲೆ ಬಳಿ ರತ್ನಾಕರ್ ಪೂಜಾರಿ ಮೇಲೆ, ಗುರೂಜಿಯ ಹತ್ತು ಮಂದಿ ಬೆಂಬಲಿಗರು ಸೈಲನ್ಸರ್ ರಾಡ್ ನಿಂದ ಹೊಡೆದು, ಹಲ್ಲೆ ಮಾಡಿ, ಪರಾರಿಯಾಗಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಈಗ ಗುರುರಾಜ್ ಪುತ್ರನ್(28), ಸಂತೋಷ್ (30), ಪ್ರದೀಪ್ (29) ಬಂಧಿಸಲಾಗಿದೆ. ಬಂಧಿತರೆಲ್ಲರೂ ಕುಂದಾಪುರ ತಾಲೂಕಿನ ಚಿಕನ್ ಸಾಲ್ ನಿವಾಸಿಗಳು ಎಂದು ತಿಳಿದು ಬಂದಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ಎರಡು ತಂಡಗಳ ರಚನೆ ಮಾಡಿದ್ದಾರೆ. ಇನ್ನು ಸಾಮಾಜಿಕ ಜಾಲತಾಣವನ್ನು ವಿವೇಚನೆಯಿಂದ ಬಳಸುವಂತೆ ಪೊಲೀಸ್ ಇಲಾಖೆ ಕರೆ ನೀಡಿದೆ.


