ಮಧುಗಿರಿ ಉಪವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್‌ಪಿ) ಎ.ರಾಮಚಂದ್ರಪ್ಪ(58) ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವರದಿಯಾಗಿದೆ. ಅವರು ತಮ್ಮ ಕಚೇರಿಯಲ್ಲೆ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿರುವ ವಿಡಿಯೋ ವೈರಲ್ ಆದ ನಂತರ ಅವರನ್ನು ಅಮಾನತು ಮಾಡಲಾಗಿತ್ತು. ಶನಿವಾರ ಬೆಳಗ್ಗೆ ತುಮಕೂರು ಜಿಲ್ಲೆಯ ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಲಾಗಿದ್ದು, ಪ್ರಸ್ತುತ ಮಧುಗಿರಿ ಜೈಲಿನಲ್ಲಿ ಇರಿಸಲಾಗಿದೆ ಎಂದು ವರದಿಯಾಗಿದೆ. ವೈರಲ್ ವಿಡಿಯೊ
ಗುರುವಾರದಂದು ಅವರ ವಿಡಿಯೊ ಹೊರಬಿದ್ದ ಬೆನ್ನಲ್ಲೇ ರಾಜ್ಯ ಪೊಲೀಸ್ ಮುಖ್ಯಸ್ಥ ಅಲೋಕ್ ಮೋಹನ್ ಅವರನ್ನು ಅಮಾನತುಗೊಳಿಸಿ, ಇಲಾಖಾ ತನಿಖೆಗೆ ಆದೇಶಿಸಿದ್ದರು. ವಿಡಿಯೋದಲ್ಲಿ ಕಾಣಿಸಿಕೊಂಡಿರುವ 30 ವರ್ಷದ ಮಹಿಳೆ ಶುಕ್ರವಾರ ಮಧುಗಿರಿ ಪೊಲೀಸ್ ಠಾಣೆಯಲ್ಲಿ ಡಿವೈಎಸ್ಪಿ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಅಧಿಕಾರದಲ್ಲಿರುವ ವ್ಯಕ್ತಿಯಿಂದ ಲೈಂಗಿಕ ಸಂಭೋಗ (BNS 68), ಲೈಂಗಿಕ ಕಿರುಕುಳ (BNS 75), ಮತ್ತು ಮಹಿಳೆಯ ಘನತೆಗೆ ಅವಮಾನಿಸುವ ಉದ್ದೇಶದಿಂದ ಪದ, ಸನ್ನೆ ಅಥವಾ ಕ್ರಿಯೆ (BNS 79) ಸೇರಿದಂತೆ ಅನೇಕ ವಿಭಾಗಗಳ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವೈರಲ್ ವಿಡಿಯೊ
ಪ್ರಕರಣದ ಕುರಿತು ಮಾತನಾಡಿದ ತುಮಕೂರು ಜಿಲ್ಲೆಯ ಪೊಲೀಸ್ ಅಧೀಕ್ಷಕ ಅಶೋಕ್ ಕೆ.ವಿ., “30 ವರ್ಷದ ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಡಿವೈಎಸ್‌ಪಿಯನ್ನು ಬಂಧಿಸಲಾಗಿದೆ. ಅವರನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ” ಎಂದು ಹೇಳಿದ್ದಾರೆ.
ಡಿವೈಎಸ್ಪಿ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ಸಮವಸ್ತ್ರದಲ್ಲಿದ್ದಾಗ ಕೃತ್ಯವನ್ನು ಎಸಗಿದ್ದು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ ಎನ್ನಲಾಗಿದೆ. 35 ಸೆಕೆಂಡುಗಳ ವೀಡಿಯೊವನ್ನು ಅವರ ಕಚೇರಿಯ ಹೊರಗಿನ ಕಿಟಕಿಯ ಮೂಲಕ ರೆಕಾರ್ಡ್ ಮಾಡಲಾಗಿದೆ. ವಿಡಿಯೊ ದಾಖಲೆ ಮಾಡುತ್ತಿರುವುದನ್ನು ಗಮನಿಸಿದ ಮಹಿಳೆಯು ಅಧಿಕಾರಿಗೆ ಎಚ್ಚರಿಸಿದ್ದರು.
ಮಹಿಳೆ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ದೂರು ನೀಡಲು ಡಿವೈಎಸ್ಪಿ ಕಚೇರಿಗೆ ಬಂದಿದ್ದರು ಪೊಲೀಸ್ ಮೂಲಗಳು ತಿಳಿಸಿವೆ ಎಂದು TNIE ವರದಿ ಉಲ್ಲೇಖಿಸಿದೆ. ಆರೋಪಿ ಅಧಿಕಾರಿಯನ್ನು ಅಮಾನತುಗೊಳಿಸಿರುವುದನ್ನು ಖಚಿತಪಡಿಸಿರುವ ಕೇಂದ್ರ ಶ್ರೇಣಿಯ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಲಾಭು ರಾಮ್, ‘‘ಘಟನೆ ಹಿನ್ನೆಲೆಯಲ್ಲಿ ಡಿವೈಎಸ್ಪಿ ಅವರನ್ನು ಅಮಾನತುಗೊಳಿಸಲಾಗಿದೆ,’’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಚುನಾವಣೆ | ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ


