HomeUncategorized"ವಿಷಯಾಂತರ" ಸಣ್ಣ ಕತೆ...

“ವಿಷಯಾಂತರ” ಸಣ್ಣ ಕತೆ…

- Advertisement -
- Advertisement -

ತುಮಕೂರಿನ ಒಂದು ರಸ್ತೆ. ರಸ್ತೆ ಬದಿಯಲ್ಲಿ ದೊಂಬರಾಟ ನಡೆಯುತ್ತಿತ್ತು. ಒಬ್ಬ ವ್ಯಕ್ತಿ ಒಂದು ಉದ್ದದ ಕಟ್ಟಿಗೆಯ ಕಂಬವೊಂದನ್ನು ತನ್ನ ಬಾಯಲ್ಲಿ ಎತ್ತಿಹಿಡಿದಿದ್ದ. ಆ ಕೋಲಿನ ತುದಿಯಲ್ಲಿ ಒಂದು ಪುಟ್ಟ ಮಗು, ಒಂದು ವರ್ಷದ್ದಿರಬಹುದು. ಆ ಮಗುವನ್ನು ಕೋಲಿನ ತುದಿಯಲ್ಲಿ ಇರಿಸಿ ಬ್ಯಾಲೆನ್ಸ್ ಮಾಡಿದ. ಸುತ್ತ ಒಂದು ಹದಿನೈದು ಜನರು ನೋಡುತ್ತಿದ್ದರು. ಆ ಕೋಲನ್ನು ಸಾವಕಾಶವಾಗಿ ಕೆಳಗಿಳಿಸಿ ಮಗುವನ್ನು ಹಿಡಿದುಕೊಂಡ. ಪುಟ್ಟ ಬಾಲಕಿಯೊಬ್ಬಳು ತಂತಿಯ ಮೇಲೆ ನಡೆದು ತನ್ನ ಬ್ಯಾಲೆನ್ಸ್ ಪ್ರದರ್ಶಿಸಿದಳು. ಆ ವ್ಯಕ್ತಿ ಅವಳು ನಡೆದಾಡುತ್ತಿದ್ದಂತೆ ಕೆಳಗಿನಿಂದ ಹಿಂಬಾಲಿಸುತ್ತಿದ್ದ. ತನ್ನ ನಡೆದಾಟವನ್ನು ಯಶಸ್ವಿಯಾಗಿ ಮುಗಿಸಿ ಕೆಳಗಿಳಿದಳು. ಅಷ್ಟರಲ್ಲಿ ಒಬ್ಬ ಮಧ್ಯವಯಸ್ಕ ವ್ಯಕ್ತಿಯೂ ನೋಡುಗರಲ್ಲಿ ಬಂದು ಸೇರಿದ್ದ. ಅವನು ನೋಡುಗರ ಕಡೆ ಒಂದು ಸಲ ಕಣ್ಣಾಡಿಸಿದ. ನೋಡುಗರಲ್ಲಿ ಅಷ್ಟೇನೂ ಉತ್ಸಾಹ ಕಂಡುಬರುತ್ತಿರಲಿಲ್ಲ. ಒಂದೆರಡು ಚಪ್ಪಾಳೆ ಕೇಳಿತೇನೋ ಎನ್ನುವಷ್ಟು ಕಡಿಮೆಯಾಗಿತ್ತು ನೋಡುಗರ ಉತ್ಸಾಹ. ದೊಂಬರಾಟ ಮಾಡುವ ಜನರಿಗೂ ಉತ್ಸಾಹದ ಕೊರತೆ ಕಾಣಿಸಿತ್ತೋ ಇಲ್ಲವೋ, ಅವರು ತಮ್ಮ ಆಟವನ್ನು ಮುಂದುವರೆಸಿದರು. ಇತ್ತ ರಸ್ತೆಯಲ್ಲಿ ಹೆಚ್ಚಿನ ಜನರು ತಮ್ಮ ಸಂಚಾರವನ್ನು ಮುಂದುವರೆಸಿದ್ದರು. ನಡೆದುಕೊಂಡು ಹೋಗುವವರು ಒಂದು ಸಲ ಕಣ್ಣು ಹಾಯಿಸಿ ಮುಂದುಹೋದರೆ, ವಾಹನದಲ್ಲಿರುವವರಿಗೆ ಈ ಆಟ ಕಾಣಲೇ ಇಲ್ಲ.

ಬಾಲಕಿ ಕೆಳಗಿಳಿದ ಮೇಲೆ, ದೊಂಬರಾಟದ ಆ ವ್ಯಕ್ತಿ ಹಣ ಸಂಗ್ರಹಿಸಲು ಆರಂಭಿಸಿದ. ನೋಡುಗರಾರೂ ಸ್ಥಿತಿವಂತರಂತೆ ಕಾಣುತ್ತಿರಲಿಲ್ಲ. ಆದರೂ ಕೆಲವರು ಐದು, ಹತ್ತು ರೂಪಾಯಿಗಳನ್ನು ಆ ವ್ಯಕ್ತಿಯ ಕೈಗಿಟ್ಟರು. ಒಂದು ಬ್ಯಾಗ್ ಅನ್ನು ಹೆಗಲಿಗೆ ಹಾಕಿ ನಿಂತಿದ್ದ ಮಧ್ಯ ವಯಸ್ಕ ವ್ಯಕ್ತಿಯ ಹತ್ತಿರ ದೊಂಬರಾಟದವನು ಬಂದ. ಆಗ ಆ ಮಧ್ಯವಯಸ್ಕ ವ್ಯಕ್ತಿ ನೂರರ ಒಂದು ನೋಟನ್ನು ಇತರರಿಗೆ ಕಾಣದಂತೆ ಕೈಗಿತ್ತ. ದೊಂಬರಾಟದವನು ಒಂದುಕ್ಷಣ ಅನುಮಾನದಿಂದ ನೋಡಿದ. ಈವಯ್ಯ ನೂರರ ನೋಟನ್ನು ಕೊಟ್ಟು ತೊಂಬತ್ತು ರೂಪಾಯಿ ಕೇಳುವನೋ ಎನ್ನುವಂತಿತ್ತು ಅವನ ನೋಟ. ಮಧ್ಯವಯಸ್ಕ ವ್ಯಕ್ತಿ ಒಂದುಕ್ಷಣ ತಡವರಿಸಿ ದೊಂಬರಾಟದವನ ಹತ್ತಿರಕ್ಕೆ ಬಂದು ಅವನನ್ನು ಅಪ್ಪಿಕೊಂಡ. ಅಪ್ಪಿಕೊಳ್ಳಲು ಹೊರಟಾಗ ಕಂಡ ಹಿಂಜರಿಕೆ ಅಪ್ಪಿಕೊಂಡಾಗ ಇರಲಿಲ್ಲ. ದೊಂಬರಾಟದವನೂ ಈ ಅಪರಿಚಿತ ವ್ಯಕ್ತಿಯ ಅಪ್ಪುಗೆಯನ್ನು ಸಹಜವೆಂಬಂತೆ ಸ್ವೀಕರಿಸಿದ.

ದೊಂಬರಾಟದವನ ಹೆಂಗಸು, ಅಪರಿಚಿತ ವ್ಯಕ್ತಿಯ ಕಣ್ಣಲ್ಲಿ ನೀರು ಜಿನುಗಿದ್ದು ಕಂಡಳು. ಇವನು ತಾನು ಭಾವುಕನಾದದ್ದು ಗೊತ್ತಾದೊಡನೇ ಸಾವರಿಸಿಕೊಂಡು ಮುಗುಳ್ನಕ್ಕ. ಹನಿ ಜಿನುಗತೊಡಗಿ ಅಲ್ಲಿಯ ಜನರು ಕಾಲ್ಕೀಳಲು ಶುರು ಮಾಡಿದರು. ಮಧ್ಯವಯಸ್ಕ ವ್ಯಕ್ತಿಯೂ ಹೊರಡಲು ಅಣಿಯಾದ. ‘ಒಂದೀಟು ಚಾ ಕುಡುದು ಹೋಗಣ್ಣ’ ಹೆಣ್ಣಿನ ಧ್ವನಿ ಕೇಳಿತು; ದೊಂಬರಾಟದ ಹೆಂಗಸು. ಹೊರಡಲು ಅಣಿಯಾದ ಮಧ್ಯವಯಸ್ಕ ವ್ಯಕ್ತಿ ನಿಂತ. ಪಕ್ಕದಲ್ಲಿಯ ಚಾದಂಗಡಿಯಲ್ಲಿ ಎಲ್ಲರೂ ಸೇರಿದರು. ‘ಎಲ್ಲರಿಗೂ ಚಾ ಕೊಡು’ ಎಂದು ಆದೇಶಿಸಿದ ಮಧ್ಯವಯಸ್ಕ ವ್ಯಕ್ತಿ. ಅಲ್ಲಿಯೇ ಇದ್ದ ಒಂದು ಕಟ್ಟಿಗೆಯ ಬೆಂಚಿನ ಮೇಲೆ ಕುಳಿತುಕೊಂಡ. ದೊಂಬರಾಟದವನೂ ಆ ಬೆಂಚಿನ ಇನ್ನೊಂದು ತುದಿಯಲ್ಲಿ ಕುಳಿತ. ಹೆಂಗಸು, ಮಗುವನ್ನು ತೊಡೆಯ ಮೇಲಿರಿಸಿ ನೆಲದ ಮೇಲೆ ಕುಳಿತು ಚಾ ಕುಡಿಯತೊಡಗಿದಳು. ಬಾಲಕಿ ಚಾ ಕುಡಿಯುತ್ತ ಈ ಅಪರಿಚಿತ ವ್ಯಕ್ತಿಯನ್ನು ನೋಡುತ್ತಿದ್ದಳು.

ದೊಂಬರಾಟದವ ಮತ್ತು ಮಧ್ಯವಯಸ್ಕ ಇಬ್ಬರೂ ಪರಸ್ಪರ ನೋಡಿದರು. ದೊಂಬರಾಟದವನು ಒಂದು ಮಾಸಿದ ಬನಿಯನ್ನು, ಒಂದು ಹಳೆಯ ಪ್ಯಾಂಟ್ ಹಾಕಿಕೊಂಡಿದ್ದ. ಸುಮಾರು ಮೂವತ್ತು ವಯಸ್ಸಾಗಿರಬಹುದು ಆದರೆ ನಲವತ್ತರ ಅಂಚಿನಲ್ಲಿದ್ದಂತೆ ಕಾಣುತ್ತಿದ್ದ. ಜೀವನವಿಡೀ ದೈಹಿಕ ಶ್ರಮ ಮಾಡಿದ್ದು ಒಂದು ಸಲ ನೋಡಿದರೇ ಗೊತ್ತಾಗುತ್ತಿತ್ತು. ಶುಭ್ರವಾದ ಅಂಗಿ, ಕರಿ ಶೂಸ್, ಕರಿ ಪ್ಯಾಂಟ್ ಹಾಕಿಕೊಂಡಿದ್ದ ಈ ಮಧ್ಯವಯಸ್ಕ ವ್ಯಕ್ತಿ ಚಾ ಬಿಸಿಯಾಗಿದ್ದರೂ ಬೇಗ ಬೇಗ ಕುಡಿಯುತ್ತಿದ್ದ. ಒಂದು ರೀತಿಯ ಮುಜುಗರ ಎದ್ದು ಕಾಣುತ್ತಿತ್ತು. ಈಗತಾನೆ ತಂತಿಯ ಮೇಲೆ ನಡೆದ ಬಾಲಕಿ ತನ್ನ ಕಡೆ ನೋಡುತ್ತಿದ್ದನ್ನು ಗಮನಿಸಿ ಮುಗುಳ್ನಕ್ಕ. ‘ಯಾವೂರು ನಿಮ್ದು?’ ಕೇಳಿದ ದೊಂಬರಾಟದವ. ‘ಮೈಸೂರು’ ಎಂದು ತಡವರಿಸಿ ಉತ್ತರ ಬಂತು. ಚಾ ಗ್ಲಾಸು ಖಾಲಿಯಾದೊಡನೇ ಐವತ್ತು ರೂಪಾಯಿಗಳನ್ನು ಚಾದಂಗಡಿಯವನ ಕೈಗಿತ್ತು, ‘ಬರ್ತೀನಿ’ ಎಂದು ಎದ್ದು ಹೊರಟ. ಮಳೆ ನಿಂತಿತ್ತು. ಚಾ ಕುಡಿದು ದೊಂಬರಾಟದವರೂ ಎದ್ದರು. ಚಾದಂಗಡಿಯನ್ನು ಕಾರಣವಿಲ್ಲದೇ ನಕ್ಕ.

ತನ್ನ ಹುಚ್ಚುತನಕ್ಕೆ ಖುಷಿಪಟ್ಟುಕೊಂಡು ಬಿರಬಿರನೇ ಹೆಜ್ಜೆ ಹಾಕುತ್ತಿದ್ದ ಆ ಮಧ್ಯವಯಸ್ಕ. ಇತ್ತ ದೊಂಬರಾಟದವರು ತಮ್ಮ ಸಾಮಾನುಗಳನ್ನು ಒಂದೆಡೆ ಕಲೆಹಾಕುವಲ್ಲಿ ತೊಡಗಿಸಿಕೊಂಡರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಡ ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾದ ‘ಕಾಂಗ್ರೆಸ್‌’ ಸರಕಾರದ ‘ಗ್ಯಾರೆಂಟಿ ಯೋಜನೆ’ ಬಗ್ಗೆ ತೇಜಸ್ವಿ...

0
ಕರ್ನಾಟಕದ ಕಾಂಗ್ರೆಸ್‌ ಸರಕಾರ ಜಾರಿಗೆ ತಂದಿದ್ದ ಪಂಚ ಗ್ಯಾರೆಂಟಿಗಳ ಬಗ್ಗೆ ತುಚ್ಛವಾಗಿ ಮಾತನಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ರಾಜ್ಯದ ಕೋಟ್ಯಾಂತರ ಜನರಿಗೆ ಆಶ್ರಯವಾದ ಗ್ಯಾರೆಂಟಿ ಯೋಜನೆಗಳನ್ನು 'ಮತಿ ಹೀನ ಉಚಿತ ಕೊಡುಗೆ'...