‘ಮತಗಳ್ಳತನ’ದ ಕುರಿತು ನಾನು ಆರೋಪ ಮಾಡಿದ್ದಕ್ಕೆ ಚುನಾವಣಾ ಆಯೋಗ ಪ್ರಮಾಣಪತ್ರ ಕೇಳಿದೆ. ಆದರೆ, ಬಿಜೆಪಿ ನಾಯಕ ಅನುರಾಗ್ ಠಾಕೂರ್ ಅದೇ ರೀತಿಯ ಆರೋಪ ಮಾಡಿದ್ದರೂ, ಅವರಿಂದ ಪ್ರಮಾಣಪತ್ರ ಕೇಳಿಲ್ಲ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಭಾನುವಾರ (ಆ.17) ಬಿಹಾರದ ಸಸರಾಮ್‌ನಲ್ಲಿ ‘ವೋಟರ್ ಅಧಿಕಾರ್’ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, “ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಮತಗಳ್ಳತನದ ಹೊರ ಅಸ್ತ್ರ. ಈ ಹಿಂದೆ ಮತಗಳ್ಳತನ ಗೌಪ್ಯವಾಗಿ ನಡೆಯುತ್ತಿತ್ತು. ಈಗ ಬಹಿರಂಗವಾಗಿ ನಡೆಯುತ್ತಿದೆ” ಎಂದಿದ್ದಾರೆ.
“ಗೌಪ್ಯತೆ ದೃಷ್ಟಿಯಿಂದ ಮತದಾರರ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡಲು ಸಾಧ್ಯವಿಲ್ಲ. ಎಲ್ಲಾ ಪಕ್ಷಗಳನ್ನು ನಾವು ಸಮಾನವಾಗಿ ಪರಿಗಣಿಸುತ್ತೇವೆ” ಎಂದು ಚುನಾವಣಾ ಆಯೋಗ ಹೇಳಿದೆ. ಹಾಗಾದರೆ, ಅವರು ಸಿಸಿಟಿವಿ ದೃಶ್ಯಾವಳಿಗೆ ಒಂದು ಕಾನೂನು ಮಾಡಿದ್ದರು. ಅದನ್ನು ಬದಲಾಯಿಸಿದ್ದು ಏಕೆ?” ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಚುನಾವಣಾ ಆಯುಕ್ತರ ವಿರುದ್ಧ ಯಾವುದೇ ಪ್ರಕರಣವನ್ನು ದಾಖಲಿಸಲಾಗುವುದಿಲ್ಲ, ಇದು ನಿಮಗೆ ಗೊತ್ತಾ? ಈ ಕಾನೂನನ್ನು ಯಾವಾಗ ಮಾಡಲಾಗಿದೆ ಎಂದು ನಿಮಗೆ ತಿಳಿದಿದೆಯಾ? ಈ ಕಾನೂನನ್ನು 2023ರಲ್ಲಿ ಮಾಡಲಾಗಿದೆ. 2023ರಲ್ಲಿ ಏಕೆ ಮಾಡಲಾಯಿತು ಗೊತ್ತಾ? ಎಂದು ರಾಹುಲ್ ಗಾಂಧಿ ಜನರನ್ನು ಕೇಳಿದ್ದಾರೆ.
ಏಕೆಂದರೆ, ನರೇಂದ್ರ ಮೋದಿ ಮತ್ತು ಅಮಿತ್ ಶಾ ಚುನಾವಣಾ ಆಯೋಗದ ವಿರುದ್ದ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಬಯಸಿದ್ದಾರೆ. ಏಕೆಂದರೆ, ಚುನಾವಣಾ ಆಯೋಗ ಅವರಿಗೆ ಸಹಾಯ ಮಾಡುತ್ತಿದೆ ಮತ್ತು ಅವರೊಂದಿಗೆ ಸೇರಿ ಮತಗಳನ್ನು ಕದಿಯುತ್ತಿದೆ. ಇದಕ್ಕಾಗಿಯೇ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ 2023ರಲ್ಲಿ ಸಿಸಿಟಿವಿ ಸಂಬಂಧಿತ ಕಾನೂನುಗಳನ್ನು ಉದ್ದೇಶಪೂರ್ವಕವಾಗಿ ಬದಲಾಯಿಸಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಪದಚ್ಯುತಿ ನಿರ್ಣಯ ಮಂಡಿಸಲು ಮುಂದಾದ ಪ್ರತಿಪಕ್ಷಗಳು: ವರದಿ


