ನೀವು ಬಿಜೆಪಿಗೆ ಮತ ನೀಡಿದರೆ “ಜೈ ಸಿಯಾ ರಾಂ” ಎನ್ನಲು ಅವಕಾಶವಿರುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಝಾರ್‌ಗ್ರಾಮ್ ಜಿಲ್ಲೆಯಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, “ನಿಮ್ಮ ಧರ್ಮವನ್ನು ನೀವು ಅನುಸರಿಸಬೇಕು ಎಂದಿದ್ದರೆ ಬಿಜೆಪಿಗೆ ಮತ ನೀಡಬೇಡಿ. ಬಿಜೆಪಿಗೆ ಮತ ನೀಡಿದರೆ ನೀವು ‘ಜೈ ಶ್ರೀರಾಂ’ ಎಂದಷ್ಟೇ ಹೇಳಬೇಕಾಗುತ್ತದೆ. ‘ಜೈ ಸಿಯಾ ರಾಂ’ ಎನ್ನಲು ನಿಮಗೆ ಅವಕಾಶ ಇರುವುದಿಲ್ಲ. ಭಗವಾನ್ ರಾಮ ಕೂಡ ಮಾತೆ ದುರ್ಗೆಯನ್ನು ಪೂಜಿಸುತ್ತಿದ್ದ. ಯಾಕೆಂದರೆ ದುರ್ಗೆಯ ಶ್ರೇಷ್ಟತೆ ತುಂಬಾ ದೊಡ್ಡದು” ಎಂದು ಹೇಳಿದ್ದಾರೆ.
“ಟಿಎಂಸಿ ಸರ್ಕಾರವು ಝಾರ್‌ಗ್ರಾಮ್ ಜಿಲ್ಲೆಯಿಂದ ಬಡತನವನ್ನು ತೊಲಗಿಸಿದೆ. ಮತ್ತೊಂದೆಡೆ, ಬಿಜೆಪಿಯು ನೋಟು ರದ್ದತಿ ಮತ್ತು ಜನಸಾಮಾನ್ಯರನ್ನು ತೊಂದರೆಗೀಡುಮಾಡುವ ನಿಯಮಗಳನ್ನು ಜಾರಿಗೆ ತಂದಿದೆ. ಈಗ ಆಟ ಆರಂಭವಾಗಿದೆ. ಈ ಆಟದಲ್ಲಿ ನೀವು ಪಶ್ಚಿಮ ಬಂಗಾಳದಿಂದ ಬಿಜೆಪಿಯನ್ನು ಉಚ್ಚಾಟಿಸಲಿದ್ದೀರಿ. ಆ ಪಕ್ಷದ ನಾಯಕರನ್ನು ಮನೆಗೆ ಕಳುಹಿಸಲಿದ್ದೀರಿ” ಎಂದು ಅವರು ಹೇಳಿದ್ದಾರೆ.
“ಚುನಾವಣೆಗೂ ಮುನ್ನ ನನ್ನನ್ನು ಹೊರಬರದಂತೆ ಮಾಡಲು ಅವರು (ಬಿಜೆಪಿಯವರು) ಬಯಸಿದ್ದರು. ಅವರು ನನ್ನ ಕಾಲಿಗೆ ಗಾಯವಾಗುವಂತೆ ಮಾಡಿದ್ದಾರೆ. ಆದರೆ ಅವರು ನನ್ನ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ನಾವು ಬಿಜೆಪಿಯನ್ನು ಸೋಲಿಸಲಿದ್ದೇವೆ” ಎಂದು ನಂದಿಗ್ರಾಮದಲ್ಲಿ ತಮ್ಮ ಮೇಲೆ ನಡೆದ ಹಲ್ಲೆಯನ್ನು ಉಲ್ಲೇಖಿಸಿದ್ದಾರೆ.
ಪಂಚರಾಜ್ಯ ಚುನಾವಣೆ ಘೋಷಣೆಯಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ ತಿಂಗಳಿನಲ್ಲಿ ಮತದಾನ ನಡೆಯಲಿದೆ. ಮೇ ತಿಂಗಳಿನಲ್ಲಿ ಫಲಿತಾಂಶ ಹೊರಬೀಳಲಿದೆ.
ಇದನ್ನೂ ಓದಿ: ಲೇಖಕ ಎಸ್.ಎಲ್.ಭೈರಪ್ಪ ವಿರುದ್ಧ ಮೂರು ದೂರು ದಾಖಲು



??