ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ವಕ್ಫ್ (ತಿದ್ದುಪಡಿ) ಮಸೂದೆಯನ್ನು ಸಂವಿಧಾನದ ಮೇಲಿನ “ಲಜ್ಜೆಗೆಟ್ಟ ದಾಳಿ” ಎಂದು ಕರೆದಿದ್ದು, ಈ ಮಸೂದೆ ಸಮಾಜವನ್ನು “ಶಾಶ್ವತ ಧ್ರುವೀಕರಣ” ಸ್ಥಿತಿಯಲ್ಲಿಡುವ ಬಿಜೆಪಿಯ ಕಾರ್ಯತಂತ್ರದ ಭಾಗವಾಗಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಲೋಕಸಭೆಯು ವಕ್ಫ್ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದ ಕೆಲವೇ ಗಂಟೆಗಳಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮಸೂದೆಯನ್ನು “ಬಲವಂತವಾಗಿ” ಅಂಗೀಕರಿಸಲಾಗಿದೆ ಎಂದು ಹೇಳಿದ್ದಾರೆ. ವಕ್ಫ್ ತಿದ್ದುಪಡಿ ಮಸೂದೆ
ನವದೆಹಲಿಯ ಸಂವಿದಾನ್ ಸದನ್‌ನಲ್ಲಿ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಕಾಂಗ್ರೆಸ್ ಸಂಸದರನ್ನು ಉದ್ದೇಶಿಸಿ ಮಾತನಾಡಿದ ಅವರು, ಒಂದು ರಾಷ್ಟ್ರ, ಒಂದು ಚುನಾವಣಾ ಮಸೂದೆಯು ಸಂವಿಧಾನದ ಮತ್ತೊಂದು ಬುಡಮೇಲು ಮಾಡುವ ಮಸೂದೆಯಾಗಿದ್ದು, ಪಕ್ಷವು ಅದನ್ನು ತೀವ್ರವಾಗಿ ವಿರೋಧಿಸುತ್ತದೆ ಎಂದು ಹೇಳಿದ್ದಾರೆ.
“ಶಿಕ್ಷಣ, ನಾಗರಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳು, ನಮ್ಮ ಒಕ್ಕೂಟ ರಚನೆ ಅಥವಾ ಚುನಾವಣೆಗಳನ್ನು ನಡೆಸುವುದಿರಲಿ, ಮೋದಿ ಸರ್ಕಾರವು ದೇಶವನ್ನು ಪ್ರಪಾತಕ್ಕೆ ತಳ್ಳುತ್ತಿದೆ. ಈ ವೇಳೆ ನಮ್ಮ ಸಂವಿಧಾನ ಕಾಗದದ ಮೇಲಷ್ಟೆ ಉಳಿಯುತ್ತದೆ. ಅದನ್ನು ಸಹ ಕೆಡವುವುದು ಅವರ ಉದ್ದೇಶ ಎಂದು ನಮಗೆ ತಿಳಿದಿದೆ” ಎಂದು ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಎಲ್ಲಾ ಪಕ್ಷದ ಸಂಸದರು ಸಭೆಯಲ್ಲಿ ಹಾಜರಿದ್ದರು.
2004-2014ರ ಅವಧಿಯಲ್ಲಿ ಪ್ರಧಾನಿ ತೆಗೆದುಕೊಂಡ ಹಲವಾರು ಉಪಕ್ರಮಗಳನ್ನು ತಮ್ಮದೇ ಆದ ವೈಯಕ್ತಿಕ ಸಾಧನೆಗಳೆಂದು ಮರುಬ್ರಾಂಡ್ ಮಾಡಿ, ಮರುಪ್ಯಾಕ್ ಮಾಡಿ ಮತ್ತು ಮಾರುಕಟ್ಟೆ ಮಾಡಿದ್ದಾರೆ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ. ಈ ಎಲ್ಲವನ್ನೂ ನಮ್ಮದೇ ಆದ ಸಾರ್ವಜನಿಕ ಸಂಪರ್ಕ ಚಟುವಟಿಕೆಗಳ ಮೂಲಕ ಬಹಿರಂಗಪಡಿಸಬೇಕಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಸಂಸತ್ತಿನ ಎರಡೂ ಸದನಗಳ ಕಾರ್ಯನಿರ್ವಹಣೆಯ ಕುರಿತು ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ಕಾಂಗ್ರೆಸ್ ಪಕ್ಷವು ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಅವಕಾಶ ನೀಡದಂತೆ ಆಡಳಿತರೂಢ ಸಂಸದರು ಆಗಾಗ್ಗೆ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಸದಸ್ಯರು ಕಾಂಗ್ರೆಸ್ ಆಡಳಿತದ ರಾಜ್ಯ ಸರ್ಕಾರಗಳನ್ನು “ಸಂಪೂರ್ಣ ಸುಳ್ಳುಗಳೊಂದಿಗೆ” ಆಕ್ರಮಣಕಾರಿಯಾಗಿ ಗುರಿಯಾಗಿಸಿಕೊಂಡಿದ್ದಾರೆ ಎಂದು ಹೇಳಿದ ಅವರು, ಪಕ್ಷದ ಸಂಸದರು ಕೂಡಾ ಅವರಿಗೆ ಸಮಾನವಾಗಿ ಆಕ್ರಮಣಕಾರಿಯಾಗಿರಲು ಮತ್ತು ಬಿಜೆಪಿ ಆಡಳಿತದ ರಾಜ್ಯಗಳಲ್ಲಿನ ವೈಫಲ್ಯಗಳು ಮತ್ತು ದುರಾಡಳಿತವನ್ನು ಎತ್ತುವಂತೆ ಒತ್ತಾಯಿಸಿದ್ದಾರೆ.
12 ಗಂಟೆಗಳ ಚರ್ಚೆಯ ನಂತರ ಲೋಕಸಭೆಯು ವಕ್ಫ್ (ತಿದ್ದುಪಡಿ) ಮಸೂದೆಯನ್ನು ಮಧ್ಯರಾತ್ರಿಯ ನಂತರ ಅಂಗೀಕರಿಸಿತು. ವಿರೋಧ ಪಕ್ಷದ ಸದಸ್ಯರು ಮಂಡಿಸಿದ ಎಲ್ಲಾ ತಿದ್ದುಪಡಿಗಳನ್ನು ಧ್ವನಿ ಮತಗಳಿಂದ ತಿರಸ್ಕರಿಸಿದ ನಂತರ ಮಸೂದೆಯನ್ನು ಅಂಗೀಕರಿಸಲಾಯಿತು. ಮಸೂದೆ ಪರವಾಗಿ 288 ಮತ್ತು ವಿರುದ್ಧ 232 ಮತಗಳು ಬಿದ್ದ ನಂತರ ಮಸೂದೆಯನ್ನು ಅಂಗೀಕರಿಸಲಾಯಿತು. ಮಸೂದೆಯು ಗುರುವಾರ ರಾಜ್ಯಸಭೆಯಲ್ಲಿ ಮಂಡನೆಯಾಗಲಿದೆ. ವಕ್ಫ್ ತಿದ್ದುಪಡಿ ಮಸೂದೆ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಒಬ್ಬ ಮುಸ್ಲಿಂ ಸಂಸದನಿಲ್ಲದ ಬಿಜೆಪಿ ವಕ್ಫ್ ಆಸ್ತಿ ರಕ್ಷಣೆ ಮಾಡುತ್ತದೆ ಎನ್ನುವುದು ವಿಪರ್ಯಾಸ: ಡಿಎಂಕೆ ಸಂಸದ ಎ. ರಾಜ
ಒಬ್ಬ ಮುಸ್ಲಿಂ ಸಂಸದನಿಲ್ಲದ ಬಿಜೆಪಿ ವಕ್ಫ್ ಆಸ್ತಿ ರಕ್ಷಣೆ ಮಾಡುತ್ತದೆ ಎನ್ನುವುದು ವಿಪರ್ಯಾಸ: ಡಿಎಂಕೆ ಸಂಸದ ಎ. ರಾಜ

