ಕೇಂದ್ರ ಸರ್ಕಾರದ ವಕ್ಫ್ ತಿದ್ದುಪಡಿ ಮಸೂದೆಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಯ ಅಧ್ಯಕ್ಷ ಜಗದಂಬಿಕಾ ಪಾಲ್ ಅವರು ಇಂದು (ನ.7) ಹುಬ್ಬಳ್ಳಿ ಮತ್ತು ವಿಜಯಪುರಕ್ಕೆ ಭೇಟಿ ನೀಡುತ್ತಿರುವುದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ.
“ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿನಂತಿ ಮೇರೆಗೆ ಜಗದಂಬಿಕಾ ಪಾಲ್ ಅವರು ಒಬ್ಬರೇ ತರಾತುರಿಯಲ್ಲಿ ಹುಬ್ಬಳ್ಳಿ ಮತ್ತು ವಿಜಯಪುರಕ್ಕೆ ಆಗಮಿಸುತ್ತಿರುವುದು ಸರಿಯಲ್ಲ. ಜಂಟಿ ಸಂಸದೀಯ ಸಮಿತಿ ಅಧ್ಯಕ್ಷರಾಗಿರುವ ಅವರು, ತಮ್ಮ ಸಮಿತಿಯ ಎಲ್ಲಾ ಸದಸ್ಯರನ್ನು ಕರೆದುಕೊಂಡು ಬರಲಿ” ಎಂದು ಕೆಪಿಸಿಸಿ ವಕ್ತಾರ ಎಸ್.ಎಂ ಪಾಟೀಲ ಗಣಿಹಾರ ಹೇಳಿದ್ದಾರೆ.
“ಅಧ್ಯಕ್ಷರೊಬ್ಬರೇ ಬಂದು ಕೇವಲ ಧರಣಿ ನಿರತ ಬಿಜೆಪಿಗರನ್ನು ಭೇಟಿಯಾಗುವುದು ಸರಿಯಲ್ಲ. ಇದು ಏಕಮುಖ ಆಗುತ್ತದೆ. ಅಲ್ಲದೆ, ಜಂಟಿ ಸಂಸದೀಯ ಸಮಿತಿ ಸದಸ್ಯರಿಗೆ ಮಾಡುತ್ತಿರುವ ಅವಮಾನ” ಎಂದು ಶಾಸಕ ಪ್ರೊ. ರಾಜು ಅಲಗೂರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಚಿವೆ ಶೋಭಾ ಕರಂದ್ಲಾಜೆ, “ಕರ್ನಾಟಕದ ಕಾಂಗ್ರೆಸ್ ಸರ್ಕಾರದಿಂದ ‘ಜಮೀನು ಜಿಹಾದ್’ ನಡೆಯುತ್ತಿದೆ. ಈ ಬಗ್ಗೆ ಪರಿಶೀಲಿಸಲು ಬರುವಂತೆ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷರಿಗೆ ನಾನು ಮನವಿ ಮಾಡಿದ್ದೆ. ಅದರಂತೆ ಅವರು ಬರುತ್ತಿದ್ದಾರೆ ಎಂದಿದ್ದಾರೆ.
ನಾಲ್ಕನೇ ದಿನಕ್ಕೆ ಕಾಲಿಟ್ಟ ಧರಣಿ
ವಕ್ಫ್ ಕಾಯ್ದೆ ರದ್ದುಗೊಳಿಸುವಂತೆ ಆಗ್ರಹಿಸಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಪ್ರತಿಭಟನೆ ಇಂದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಇದನ್ನೂ ಓದಿ : ಸಾಗರ | ಆರ್‌ಎಸ್‌ಎಸ್ ಮುಖಂಡ ವನಶ್ರೀ ಮಂಜಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲು


