Homeಅಂತರಾಷ್ಟ್ರೀಯಇರಾನ್- ಅಮೆರಿಕ ಯುದ್ಧದಲ್ಲಿ ಅಮೆರಿಕದ ಕಾಲಾಳು ಆಗಲು ಹೊರಟ ಭಾರತ

ಇರಾನ್- ಅಮೆರಿಕ ಯುದ್ಧದಲ್ಲಿ ಅಮೆರಿಕದ ಕಾಲಾಳು ಆಗಲು ಹೊರಟ ಭಾರತ

ಭಾರತವು ಜೂನ್ 21ರಂದು ತನ್ನ ಯುದ್ಧ ನೌಕೆಗಳಾದ ಚೆನ್ನೈ ಮತ್ತು ಸುನೈನಾವನ್ನು ಪರ್ಶಿಯನ್ ಕೊಲ್ಲಿಗೆ ಕಳುಹಿಸಲು ನಿರ್ಧರಿಸಿದೆ. ಈ ಕಾರ್ಯಾಚರಣೆಗೆ ‘ಆಪರೇಶನ್ ಸಂಕಲ್ಪ್’ ಎಂದು ಹೆಸರಿಡಲಾಗಿದೆ

- Advertisement -

| ಭರತ್ ಹೆಬ್ಬಾಳ್ |

ದಶಕಗಳಿಂದ ಒಂದಲ್ಲಾ ಒಂದು ರೀತಿಯ ನಿರಂತರ ಯುದ್ಧಗಳಿಂದ ತತ್ತರಿಸುತ್ತಿರುವ ಮಧ್ಯಪ್ರಾಚ್ಯ ಏಶಿಯಾದಲ್ಲಿ ಮತ್ತೊಮ್ಮೆ ಯುದ್ದದ ಕಾರ್ಮೋಡಗಳು ಆವರಿಸುತ್ತಿವೆ. 2015ರ ಜುಲೈ ತಿಂಗಳಲ್ಲಿ ಆರು ರಾಷ್ಟ್ರಗಳ ಸಂಧಾನ ಮಾತುಕತೆಗಳ ನಂತರ ಅಸ್ತಿತ್ವಕ್ಕೆ ಬಂದಿದ್ದ Joint Comprehensive Plan of Action (JCPOA) ಒಪ್ಪಂದವನ್ನು ಮೇ 2018ರಲ್ಲಿ ಟ್ರಂಪ್ ಆಡಳಿತ ಏಕಪಕ್ಷೀಯವಾಗಿ ಮುರಿದು ಹಾಕಿತ್ತು. ಇದರ ನಂತರದ ಮಾತುಕತೆಗಳಲ್ಲಿ ಇರಾನಿನ ಸಂಪೂರ್ಣ ಶರಣಾಗತಿಯನ್ನು ಬಯಸುತ್ತಿರುವ ಅಮೆರಿಕ, ಕಳೆದೆರಡು ತಿಂಗಳುಗಳಿಂದ ಪರ್ಶಿಯನ್ ಕೊಲ್ಲಿಯಲ್ಲಿ ನಡೆಯುತ್ತಿರುವ ಪಾಶ್ಚಾತ್ಯ ಕಚ್ಚಾ ತೈಲ ಟ್ಯಾಂಕರ್‍ಗಳ ಹಡಗುಗಳ ಮೇಲಿನ ಅಜ್ಞಾತ ದಾಳಿಗಳನ್ನು ಇರಾನಿನ ಮೇಲೆ ಕಟ್ಟಿತ್ತು.

ಅಮೆರಿಕ ಈ ರೀತಿಯ ತಂತ್ರಗಳನ್ನು ಇತಿಹಾಸದಲ್ಲಿ ಬಹಳಷ್ಟು ಮಾಡಿದೆ. ಉದಾಹರಣೆಗೆ ವಿಯೆಟ್ನಾಮ್ ಯುದ್ಧಕ್ಕೆ ನೆಪ ಮಾಡಿಕೊಂಡಿದ್ದು, ಇದೇ ರೀತಿಯ ತನ್ನ ಹಡಗುಗಳ ಮೇಲೆ ನಡೆದಿದೆ ಎನ್ನಲಾದ ಅಜ್ಞಾತ ದಾಳಿ (ಟೊಂಕಿನ್ ಕೊಲ್ಲಿಯ ಘಟನೆ). ಈ ದಾಳಿಗಳನ್ನು ಇರಾನ್ ನಿರಾಕರಿಸುತ್ತಲೇ ಬಂದಿದೆ ಮತ್ತು ಇದು ಯುದ್ಧಕ್ಕಾಗಿ ಅಮೆರಿಕ ಮಾಡುತ್ತಿರುವ ಷಡ್ಯಂತ್ರ ಎಂದು ಆರೋಪಿಸಿತ್ತು. ಇದರ ಮುಂದುವರೆದ ಭಾಗವಾಗಿಯೇ ಇರಾನ್, ಜೂನ್ 20ರಂದು ಅಮೆರಿಕಾದ ಮಾನವರಹಿತ ಗೂಢಚಾರಿ ವಿಮಾನವನ್ನು (RQ-4A Global Hawk Drone) ತನ್ನ ಸಯ್ಯದ್-2ಸಿ ಕ್ಷಿಪಣಿ ಉಪಯೋಗಿಸಿ ಹೊಡೆದುರುಳಿಸಿದೆ. ಈಗಾಗಲೇ ಅಮೆರಿಕಾದ ‘ಗರಿಷ್ಠ ಒತ್ತಡ’ ತಂತ್ರಗಾರಿಕೆಯ ಭಾಗವಾದ ತೀವ್ರ ಆರ್ಥಿಕ ನಿಬರ್ಂಧಗಳನ್ನು (ಭಯೋತ್ಪಾದನೆ) ಎದುರಿಸುತ್ತಿರುವ ಇರಾನ್ ಈಗ ‘ಗರಿಷ್ಠ ಪ್ರತಿ-ಒತ್ತಡ’ ಪ್ರದರ್ಶಿಸಲು ಸಜ್ಜಾಗುತ್ತಿದೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ.

ತನ್ನ ವಾಯುಪ್ರದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಡ್ರೋನ್ ಹೊಡೆದು ಉರುಳಿಸಲಾಯಿತು ಎಂದು ಇರಾನ್ ಹೇಳಿಕೆ ಕೊಟ್ಟಿದೆ. ಅಮೆರಿಕ ಇದು ಅಂತರ್ರಾಷ್ಟ್ರೀಯ ನೀರಿಗೆ (International Waters) ಸೇರಿದ ಜಾಗ ಎಂದು ಹೇಳಿಕೆ ಕೊಟ್ಟಿದೆ. ವಾಸ್ತವದಲ್ಲಿ ಆ ಪ್ರದೇಶದಲ್ಲಿ ಅಂತರ್ರಾಷ್ಟ್ರೀಯ ನೀರಿನ ಜಾಗ ಆಗಿರುವುದು ಸಾಧ್ಯವೇ ಇಲ್ಲ. ಪರ್ಶಿಯನ್ ಕೊಲ್ಲಿಯಲ್ಲಿ ಹಾದುಹೋಗಬೇಕಾದರೆ ಅಲ್ಲಿರುವ ಕೊಲ್ಲಿಯ ಅತಿ ಸಣ್ಣ ಜಾಗ ಇರುವುದೇ 39 ಕಿಲೋಮೀಟರ್‍ಗಳ ಉದ್ದಗಲ. ಅದರ ಒಂದು ಭಾಗ ಇರಾನಿನದ್ದು, ಇನ್ನೊಂದು ಭಾಗ ಒಮಾನ್ ರಾಷ್ಟ್ರದ್ದು! ವಿಶ್ವದ 33% ಕಚ್ಚಾ ತೈಲ ಪರ್ಶಿಯನ್ ಕೊಲ್ಲಿಯಿಂದಲೇ ಹಾದುಹೋಗಬೇಕು.

ಈಗಾಗಲೇ ಇರಾನ್ ರಾಷ್ಟ್ರದಿಂದ ಕಚ್ಚಾ ತೈಲ ಆಮದು ನಿಲ್ಲಿಸುವಂತೆ ಎಲ್ಲಾ ದೇಶಗಳಿಗೂ ಅಮೆರಿಕ ಆದೇಶಿಸಿದೆ. ಆದೇಶ ಮೀರಿದರೆ ಆರ್ಥಿಕ ನಿಬರ್ಂಧಗಳನ್ನು ವಿಧಿಸುವುದಾಗಿ ಎಚ್ಚರಿಕೆಯನ್ನು ನೀಡಿದೆ. ತನ್ನನ್ನು ಕಚ್ಚಾ ತೈಲದ ಮಾರುಕಟ್ಟೆಯಿಂದ ನಿಬರ್ಂಧಿಸಿದರೆ ಪರ್ಶಿಯನ್ ಕೊಲ್ಲಿಯಲ್ಲಿ ಬೇರೆಯವರ ಕಚ್ಚಾ ತೈಲ ಹಾದುಹೋಗುವದಕ್ಕೆ ನಾವು ಬಿಡುವುದಿಲ್ಲ ಎಂದು ಇರಾನ್ ಕೂಡ ಎಚ್ಚರಿಸುತ್ತಲೇ ಬಂದಿದೆ. ಘಟನೆಯ ನಂತರ ಇರಾನಿನ ಮೇಜರ್ ಜನರಲ್ ಮೊಹಮ್ಮದ್ ಬಕೇರಿ ‘ಇರಾನ್ ಯಾವುದೇ ದೇಶದೊಂದಿಗೆ ಯುದ್ಧವನ್ನು ಬಯಸುತ್ತಿಲ್ಲ, ಆದರೆ ಇರಾನ್ ಅನ್ನು ರಕ್ಷಿಸಿಕೊಳ್ಳಲು ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ, ಇರಾನ್ ಕೊಲ್ಲಿಯಿಂದ ತೈಲ ರಫ್ತು ಮಾಡುವುದನ್ನು ತಡೆಯಲು ನಿರ್ಧರಿಸಿದರೆ, ಆ ನಿರ್ಣಯವನ್ನು ದೇಶ ಹಾಗೂ ಸಶಸ್ತ್ರ ಪಡೆಗಳು ಪೂರ್ಣವಾಗಿ ಸಾಕಾರಗೊಳಿಸಿ ಸಾರ್ವಜನಿಕವಾಗಿ ಘೋಷಿಸಲಾಗುವುದು’ ಎಂಬ ಹೇಳಿಕೆ ಕೊಟ್ಟಿದ್ದಾರೆ.

ಈ ಘಟನೆಯ ನಂತರ ದೊಡ್ಡಣ್ಣ ಟ್ರಂಪ್ ‘ಇರಾನ್ ಬಹಳ ದೊಡ್ಡ ತಪ್ಪು’ ಮಾಡಿದೆ ಎಂದು ಟ್ವೀಟ್ ಮಾಡಿದ್ದರು. ನಂತರ ಇರಾನಿನ ಮೇಲೆ ದಾಳಿ ಮಾಡಲು ಆದೇಶಿಸಿ, ಆ ಆದೇಶವನ್ನು ಹಿಂಪಡೆದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಆದೇಶ ಹಿಂಪಡೆಯುವುದರ ಹಿಂದೆ ಅಮೆರಿಕಾದ ಚುನಾವಣೆ ಕಾರಣ ಎಂದು ಹೇಳಲಾಗುತ್ತಿದ್ದರೂ, ಪರ್ಶಿಯನ್ ಕೊಲ್ಲಿಯನ್ನು ಇರಾನ್ ಮುಚ್ಚಿದರೆ ಅಮೆರಿಕಾದ ಆರ್ಥಿಕತೆ ಮತ್ತು ವಿಶ್ವದ ಆರ್ಥಿಕತೆ ಕುಸಿಯುವ ಭಯ ಇದರ ಹಿಂದಿರುವ ನಿಜವಾದ ಕಾರಣ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಈ ಕೊಲ್ಲಿಯ ಮಾರ್ಗ ಮುಚ್ಚಿದರೆ ಪ್ರಪಂಚದ 1.2 ದಶಲಕ್ಷ ಕೋಟಿ ಡರ್ರೈವೇಟಿವ್ಸ್ ಮಾರುಕಟ್ಟೆಯ ವಹಿವಾಟು ಅಂತಃಸ್ಫೋಟಗೊಂಡು ಪ್ರಪಂಚದ ಬ್ಯಾಂಕಿಂಗ್ ವ್ಯವಸ್ಥೆಯೇ ಕುಸಿದು ಬೀಳುತ್ತದೆ ಮತ್ತು ಪ್ರಪಂಚದ 80 ಟ್ರಿಲಿಯನ್ ಜಿಡಿಪಿ ಪ್ರಪಾತಕ್ಕೆ ಕುಸಿದು, ಕಂಡು ಕೇಳರಿಯದ ಆರ್ಥಿಕ ಹಿನ್ನಡೆ ಆಗುತ್ತದೆ ಎಂಬ ಸುಳಿವು ಸಿಕ್ಕ ನಂತರ ದಾಳಿ ನಡೆಸಲುದ್ದೇಶಿಸಿದ್ದ 10 ನಿಮಿಷದ ಮುಂಚೆ ಟ್ರಂಪ್ ತನ್ನ ಆದೇಶವನ್ನು ಹಿಂಪಡೆದುಕೊಂಡಿದ್ದಾರೆ. ಈ ಕೊಲ್ಲಿಯನ್ನು ಮುಚ್ಚಲು ಇರಾನ್ ತನ್ನ ಪಾಶ್ಚಾತ್ಯ ಗಡಿಯ ಉದ್ದಗಲಕ್ಕೂ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಸಿದ್ಧಪಡಿಸಿಕೊಂಡಿದೆ ಮತ್ತು ಸಮಯ ಬಂದರೆ ಕೊಲ್ಲಿಯನ್ನು ಮುಚ್ಚುವುದಾಗಿಯೂ ಎಚ್ಚರಿಕೆ ನೀಡಿದೆ.

ಈ ಪರಿಸ್ಥಿತಿಯಲ್ಲಿ ಅನಾವರಣಗೊಳ್ಳುತ್ತಿರುವ ಬಿಕ್ಕಟ್ಟಿನ ಒಂದು ಅತ್ಯಂತ ಕಳವಳಕಾರಿ ಬೆಳೆವಣಿಗೆಯೆಂದರೆ ಭಾರತದ ನಿಗೂಢ ನಡೆ. ಭಾರತವು ಜೂನ್ 21ರಂದು ತನ್ನ ಯುದ್ಧ ನೌಕೆಗಳಾದ ಚೆನ್ನೈ ಮತ್ತು ಸುನೈನಾವನ್ನು ಪರ್ಶಿಯನ್ ಕೊಲ್ಲಿಗೆ ಕಳುಹಿಸಲು ನಿರ್ಧರಿಸಿದೆ. ಈ ಕಾರ್ಯಾಚರಣೆಗೆ ‘ಆಪರೇಶನ್ ಸಂಕಲ್ಪ್’ ಎಂದು ಹೆಸರಿಡಲಾಗಿದೆ ಹಾಗೂ ಯುದ್ಧ ನೌಕೆಗಳು ಓಮೆನ್ ಭಾಗದ ನೀರಿನಲ್ಲಿ ನಿಯೋಜಿಸಲ್ಪಟ್ಟಿರುತ್ತದೆ ಎಂದು ವಿವರಿಸಲಾಗಿದೆ. ತೀಕ್ಷ್ಣಗೊಳ್ಳುತ್ತಿರುವ ಜಾಗತಿಕ ರಾಜಕೀಯದಲ್ಲಿ ರಶಿಯ, ಸಿರಿಯ, ಚೀನಾ, ಇರಾನ್ ಒಂದು ಕಡೆಯಾದರೆ, ಅಮೆರಿಕ, ಯುರೋಪಿಯನ್ ಯೂನಿಯನ್‍ನ ಕೆಲವು ಮುಖ್ಯ ರಾಷ್ಟ್ರಗಳು, ಬ್ರಿಟನ್, ಇಸ್ರೇಲ್ ಸೌದಿ ಮತ್ತದರ ಹಿಂಬಾಲಕ ಅರಬ್ ರಾಷ್ಟ್ರಗಳು ಇನ್ನೊಂದು ಕಡೆ.

ಪಾಕಿಸ್ತಾನ ರಶಿಯ ಮತ್ತು ಚೀನಾಗೆ ಹತ್ತಿರವಾಗುತ್ತಿದ್ದರೆ, ಭಾರತ ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ಒಂದು ವಿಚಿತ್ರ ಡಬಲ್ ಗೇಮ್ ಆಟದಲ್ಲಿ ತೊಡಗಿದೆ. ಹಿಂದಿನಿಂದಲೂ ಉತ್ತಮ ಬಾಂಧವ್ಯ ಹೊಂದಿದ್ದ ಈ ದೇಶಗಳ ಮಧ್ಯೆ ಆರ್ಥಿಕ ನಿರ್ಬಂಧಗಳಾಚೆಗೂ ವ್ಯಾಪಾರ ವಹಿವಾಟು ವಿವಿಧ ವಿನಿಮಯಗಳನ್ನು ಬಳಸಿ ನಡೆಸಲಾಗುತ್ತಿತ್ತು. ಆದರೆ ಕಳೆದ ಮೇ ತಿಂಗಳಿನಿಂದ ಇರಾನ್‍ನಿಂದ ಕಚ್ಚಾ ತೈಲ ಖರೀದಿಸುವುದನ್ನು ನಿಲ್ಲಿಸಿರುವ ಭಾರತವು ಇರಾನಿನ ಕಟು ವೈರಿಗಳಾದ ಇಸ್ರೇಲ್ ಮತ್ತು ಯುದ್ಧಕೋರ ಅಮೆರಿಕ ಜೊತೆಗೂಡಿ ಅಮೆರಿಕ ಕೇಂದ್ರಿತ ಏಕ ಧ್ರುವಿ ಪ್ರಪಂಚದ ದೃಷ್ಟಿಕೋನದಲ್ಲಿ ಏಶಿಯಾ ಖಂಡದ ಪಾಳೆಗಾರನಾಗಲು ಹೊರಟಿದೆ. ಸ್ವಾತಂತ್ರ್ಯದ ನಂತರದ ಶೀತಲ ಸಮರದಲ್ಲಿ ಆಲಿಪ್ತ ಚಳುವಳಿಯನ್ನು ಸೃಷ್ಟಿಸುವಲ್ಲಿ ಮುಖ್ಯ ಪಾತ್ರ ವಹಿಸಿ ಚಳವಳಿಯನ್ನು ಮುನ್ನಡೆಸುತ್ತಿದ್ದ ಭಾರತ ಈಗ ಅಮೆರಿಕದ ಕಾಲಾಳು ಆಗಲು ಹೊರಟಿದೆ.

ಮೋದಿ ಅಧಿಕಾರಕ್ಕೆ ಬಂದ ನಂತರ ಅಮೆರಿಕ ಜೊತೆ ಮಾಡಿಕೊಂಡಿರುವ ಎರಡು ಒಪ್ಪಂದಗಳು (LEMOA and COMCASA) ಇದಕ್ಕೆ ಸಾಕ್ಷಿ. LEMOA ಒಪ್ಪಂದ ಅಮೆರಿಕಾಗೆ ಭಾರತದ ಸೇನಾ ಸೌಕರ್ಯಗಳನ್ನು ಉಪಯೋಗಿಸಿಕೊಳ್ಳುವ ಹಕ್ಕು ನೀಡುತ್ತದೆ ಮತ್ತು COMCASA ಅತಿ ಸೂಕ್ಷ್ಮ ಮಿಲಿಟರಿ ಗುಪ್ತಚರ ವಿವರಗಳನ್ನು ಹಂಚಿಕೊಳ್ಳುವ ಒಪ್ಪಂದವಾಗಿದೆ. ಬಹುಮುಖ್ಯವಾಗಿ ಇದು ಮೋದಿ ಮತ್ತೆ ಅಧಿಕಾರಕ್ಕೆ ಬಂದ ನಂತರ ಭಾರತ ಎಸಗುತ್ತಿರುವ ಚಾರಿತ್ರಿಕ ದ್ರೋಹ ಎಂದು ದಾಖಲಾಗುತ್ತದೆ. ಏಕೆಂದರೆ ಇನ್ನು ಮುಂದೆ ನಮ್ಮ ವಿದೇಶಾಂಗ ನೀತಿಯು ಅಮೆರಿಕದ ವ್ಯೂಹದ ಭಾಗವಾಗಿರುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ.

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ ಮಹಿಳೆ | Naanu Gauri

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ...

0
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನಿರಾಕರಿಸಿದ ಕಾರಣಕ್ಕೆ ಮಹಿಳೆಯೊಬ್ಬರು ರಸ್ತೆಯಲ್ಲೇ ಆರು ತಿಂಗಳ ಶಿಶುವಿಗೆ ಜನ್ಮ ನೀಡಿರುವ ಅಘಾತಕಾರಿ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಆರು ತಿಂಗಳ ಗರ್ಭಿಣಿಯಾಗಿದ್ದ ಕಲ್ಲೋ ಬಾಯಿಯನ್ನು...
Wordpress Social Share Plugin powered by Ultimatelysocial