ಭೂಕುಸಿತದಿಂದ ಹಾನಿಗೊಂಡಿರುವ ವಯನಾಡಿನ ಗ್ರಾಮಗಳಲ್ಲಿ ಬದುಕುಳಿದವರು ಮತ್ತು ಬಲಿಪಶುಗಳಿಗಾಗಿ ಸವಾಲಿನ ಹುಡುಕಾಟವು ಮುಂದುವರಿದಿದ್ದು, ಸಾಂಪ್ರದಾಯಿಕ ವಿಧಾನಗಳಿಂದ ಇನ್ನೂ ತಲುಪದ ಪ್ರದೇಶಗಳಿಗೆ ಆಹಾರ ಪ್ಯಾಕೆಟ್‌ಗಳನ್ನು ಸಾಗಿಸಲು ಅಧಿಕಾರಿಗಳು ಮಾನವರಹಿತ ವೈಮಾನಿಕ ವಾಹನಗಳತ್ತ (ಡ್ರೋಣ್) ಮುಖ ಮಾಡಿದ್ದಾರೆ.
ಕಾಣೆಯಾದವರಿಗಾಗಿ ಹುಡುಕುತ್ತಿರುವ ನೂರಾರು ಸಿಬ್ಬಂದಿಯನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ, ಅಧಿಕಾರಿಗಳು ಒಂದು ಸಮಯದಲ್ಲಿ 10 ಜನರಿಗೆ ಆಹಾರದ ಪ್ಯಾಕೆಟ್‌ಗಳನ್ನು ಸಾಗಿಸುವ ಸಾಮರ್ಥ್ಯವಿರುವ ಆಧುನಿಕ ಡ್ರೋನ್‌ಗಳನ್ನು ಬಳಸಿಕೊಂಡಿದ್ದಾರೆ.
“ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಸ್ವಯಂಸೇವಕರನ್ನು ಬೆಂಬಲಿಸಲು ಕ್ಷಿಪ್ರ ಆಹಾರ ಮತ್ತು ನೀರಿನ ವಿತರಣಾ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಡ್ರೋನ್ ಕಾರ್ಯಾಚರಣೆಗಳು ಹಿಟಾಚಿ ಮತ್ತು ಜೆಸಿಬಿ ಉಪಕರಣಗಳಂತಹ ಭಾರೀ ಯಂತ್ರೋಪಕರಣಗಳನ್ನು ನಿರ್ವಹಿಸುವ ಸಿಬ್ಬಂದಿಗೆ ಆಹಾರವನ್ನು ನೇರವಾಗಿ ತಲುಪಿಸಲು ಸಾಧ್ಯವಾಗಿಸಿತು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೆಪ್ಪಾಡಿ ಪಾಲಿಟೆಕ್ನಿಕ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮುದಾಯ ಅಡುಗೆಮನೆಯಲ್ಲಿ ರಕ್ಷಣಾ ಕಾರ್ಯಕರ್ತರಿಗೆ ಆಹಾರವನ್ನು ತಯಾರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಆಹಾರ ಸುರಕ್ಷತೆ ಇಲಾಖೆಯ ಮೇಲ್ವಿಚಾರಣೆಯಲ್ಲಿ, ಕೇರಳ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಪ್ರತಿದಿನ ಸುಮಾರು 7,000 ಆಹಾರ ಪ್ಯಾಕೆಟ್‌ಗಳನ್ನು ತಯಾರಿಸುತ್ತಿದೆ. ನಂತರ ಅವುಗಳನ್ನು ಅಗತ್ಯವಿರುವವರಿಗೆ ವಿತರಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಭಾನುವಾರ ಸಂಜೆಯವರೆಗಿನ ಸರ್ಕಾರದ ಅಂಕಿಅಂಶಗಳ ಪ್ರಕಾರ, ಜುಲೈ 30 ರಂದು ಸಂಭವಿಸಿದ ಭೂಕುಸಿತಕ್ಕೆ ಬಲಿಯಾದವರ ಒಟ್ಟು 221ಕ್ಕೂ ಹೆಚ್ಚು ದೇಹಗಳು ಮತ್ತು 166 ದೇಹದ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅಧಿಕಾರಿಗಳು ಅವರಲ್ಲಿ ಕೆಲವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಸಾಧ್ಯವಾದ ನಂತರ ಕಾಣೆಯಾದವರ ಸಂಖ್ಯೆ ಹಿಂದಿನ 206 ರಿಂದ 180 ಕ್ಕೆ ಇಳಿದಿದೆ ಎಂದು ಅವರು ಭಾನುವಾರ ತಿಳಿಸಿದ್ದಾರೆ.
ಇದನ್ನೂ ಓದಿ; ಬಾಂಗ್ಲಾದಲ್ಲಿ ಹಿಂಸೆಗೆ ತಿರುಗಿದ ‘ಅಸಹಕಾರ ಚಳವಳಿ’ : 98 ಮಂದಿ ಸಾವು


