ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಹಾಡಿಗೆ ಪ್ರತಿಷ್ಟಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಿಕ್ಕ ಸಂದರ್ಭದಲ್ಲಿ ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆಯ ಚರ್ಚೆ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ತೆಲುಗು ಬಾವುಟ ಎತ್ತರದಲ್ಲಿ ಹಾರಾಡುತ್ತಿದೆ ಎಂದ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿಯವರನ್ನು ಗಾಯಕ ಅದ್ನಾನ್ ಸಾಮಿ ಟೀಕಿಸಿದ್ದರು. ಈಗ ನಟಿ ರಮ್ಯಾ ದಿವ್ಯಸ್ಪಂದನರವರು ಆಂಧ್ರ ಸಿಎಂ ಪರ ನಿಂತು ಟ್ವೀಟ್ ಮಾಡಿದ್ದಾರೆ.
ತೆಲಗು ಹಾಡಿಗೆ ಪ್ರಶಸ್ತಿ ಸಿಕ್ಕ ಸಂದರ್ಭದಲ್ಲಿ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿಯವರು ಚಿತ್ರತಂಡವನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದರು. “ತೆಲುಗು ಬಾವುಟ ಎತ್ತರದಲ್ಲಿ ಹಾರಾಡುತ್ತಿದೆ. ಆಂಧ್ರ ಪ್ರದೇಶ ಪರವಾಗಿ ಚಿತ್ರತಂಡದ ಎಂ.ಎಂ ಕೀರವಾಣಿ, ರಾಜಮೌಳಿ, ತಾರಕ್, ಚರಣ್ ಹಾಗೂ ಇಡೀ ‘RRR’ ತಂಡಕ್ಕೆ ಅಭಿನಂದನೆ. ನಿಮ್ಮ ಬಗ್ಗೆ ಹೆಮ್ಮೆ ಇದೆ” ಎಂದಿದ್ದರು.
ಇದಕ್ಕೆ ತಕರಾರು ತೆಗೆದಿದ್ದ ಗಾಯಕ, ಸಂಗೀತ ನಿರ್ದೇಶಕ ಅದ್ನಾನ್ ಸಾಮಿ, “ತೆಲುಗು ಬಾವುಟನಾ? ನೀವು ಹೇಳುತ್ತಿರುವುದು ಭಾರತದ ಬಾವುಟ ಅಲ್ಲವೇ? ಪ್ರಪಂಚದ ವಿಷಯಕ್ಕೆ ಬಂದರೆ ನಾವೆಲ್ಲಾ ಒಂದೇ ದೇಶ. ಮೊದಲು ನಾವು ಭಾರತೀಯರು. ದಯವಿಟ್ಟು ನೀವು ಭಾರತ ಬಿಟ್ಟು ಬೇರೆ ಇರಲು ಪ್ರಯತ್ನಿಸಬೇಡಿ. ಈ ವಿಭಜನೆಯ ಸಿದ್ದಾಂತವೂ ಅತಿ ಅಪಾಯಕಾರಿ ಎಂದು 1947ರಲ್ಲಿ ನಾವು ನೋಡಿದ್ದೇವೆ. ಜೈ ಹಿಂದ್” ಎಂದು ಟ್ವೀಟ್ ಮಾಡಿದ್ದರು.
Yes, we are are Indians but we are also Kannadigas, Tamils, Telugu, Bengali etc we all have our ‘flags’ just like we have our own language. We feel proud as Indians & also as people rooted by culture, language, flag. Unity in diversity ring a bell? https://t.co/8NbZPDiW3A
— Ramya/Divya Spandana (@divyaspandana) January 12, 2023
ಈ ಕುರಿತು ಪ್ರತಿಕ್ರಿಯಿಸಿರುವ ನಟಿ ರಮ್ಯಾ, “ಹೌದು ನಾವು ಭಾರತೀಯರು, ಜೊತೆಗೆ ಕನ್ನಡಿಗರು, ತೆಲುಗರು, ತಮಿಳರು ಬಂಗಾಳಿಗಳು ಇತ್ಯಾದಿಗಳು ಸಹ. ನಾವು ನಮ್ಮದೇಯಾದ ಭಾಷೆಗಳನ್ನು ಹೊಂದಿರುವಂತೆ ನಮ್ಮದೇ ಬಾವುಟಗಳನ್ನೂ ಸಹ ಹೊಂದಿದ್ದೇವೆ. ನಾವು ಭಾರತೀಯರೆನಿಸಿಕೊಳ್ಳುವುದಕ್ಕೆ ಮತ್ತು ಹಲವು ಸಂಸ್ಕೃತಿ, ಭಾಷೆ, ಧ್ವಜಗಳಗಳೊಂದಿಗೆ ಬೇರೂರಿರುವ ಜನರು ಎನಿಸಿಕೊಳ್ಳುವುದಕ್ಕೆ ಹೆಮ್ಮೆ ಇದೆ. ವಿವಿಧತೆಯಲ್ಲಿ ಏಕತೆ ಸಾಧಿಸುವುದು ಮುಖ್ಯವಲ್ಲವೇ” ಎಂದು ಪ್ರಶ್ನಿಸಿದ್ದಾರೆ.
ಪ್ರೀತಿಯ ಅದ್ನಾನ್ ಸಾಮಿಯವರೆ ತೆಲುಗು ಧ್ವಜ ಎಂದರೆ ಏನೆಂದು ಅರ್ಥಮಾಡಿಕೊಳ್ಳದ ನಿಮ್ಮ ಬುದ್ದಿಯನ್ನು ಇದು ತೋರಿಸುತ್ತಿದೆ. ತೆಲುಗು ಧ್ವಜ ಎಂದರೆ ನಮ್ಮ ಹೆಮ್ಮೆಯನ್ನು ಸೂಚಿಸುತ್ತದೆ. ನಿಮ್ಮಂತಹವರಿಂದ ನಾವು ದೇಶಪ್ರೇಮದ ಕುರಿತು ಉಪನ್ಯಾಸಗಳನ್ನು ಕೇಳಬೇಕಾಗಿಲ್ಲ. ಎರವಲು ಪಡೆದ ರಾಷ್ಟ್ರೀಯತೆಯನ್ನು ನೀವೇ ಇಟ್ಟುಕೊಳ್ಳುವುದು ಉತ್ತಮ ಎಂದು ಹೈದರಾಬಾದ್ ಚಿಂತಕರ ಒಕ್ಕೂಟ ಟೀಕಿಸಿದೆ.
ಈ ಹಿಂದೆಯೂ ಹಿಂದಿ ರಾಷ್ಟ್ರೀಯ ಭಾಷೆ ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಕಿಚ್ಚ ಸುದೀಪ್ ಮತ್ತು ಅಜಯ್ ದೇವಗನ್ ನಡುವೆ ವಾದ ವಿವಾದ ನಡೆದಿತ್ತು. ಹಿಂದಿ ರಾಷ್ಟ್ರೀಯ ಭಾಷೆ ಎಂಬುದನ್ನು ನಾವು ಒಪ್ಪುವುದಿಲ್ಲ ಎಂದು ಸುದೀಪ್ ಪ್ರತಿಪಾದಿಸಿದ್ದರು.
ಇದನ್ನೂ ಓದಿ; ಹಿಂದಿ ರಾಷ್ಟ್ರೀಯ ಭಾಷೆಯಲ್ಲ: ಸುದೀಪ್ ಹೇಳಿಕೆಗೆ ಅಜಯ್ ದೇವಗನ್ ಆಕ್ಷೇಪ- ಜನರ ತರಾಟೆ


