Homeಮುಖಪುಟ'ರಾಜ್ಯದ ಪರವಾಗಿ ಪ್ರತಿಭಟಿಸುತ್ತಿದ್ದೇವೆ, ನೀವೂ ಧ್ವನಿಯಾಗಿ'; ಕೇಂದ್ರದ ವಿರುದ್ಧದ ಪ್ರತಿಭಟನೆಗೆ ಬಿಜೆಪಿಯನ್ನು ಆಹ್ವಾನಿಸಿದ ಸಿಎಂ

‘ರಾಜ್ಯದ ಪರವಾಗಿ ಪ್ರತಿಭಟಿಸುತ್ತಿದ್ದೇವೆ, ನೀವೂ ಧ್ವನಿಯಾಗಿ’; ಕೇಂದ್ರದ ವಿರುದ್ಧದ ಪ್ರತಿಭಟನೆಗೆ ಬಿಜೆಪಿಯನ್ನು ಆಹ್ವಾನಿಸಿದ ಸಿಎಂ

- Advertisement -
- Advertisement -

‘ನಮ್ಮ ರಾಜ್ಯಕ್ಕೆ ನಿರಂತರವಾಗಿ ಆಗುತ್ತಿರುವ ಅನ್ಯಾಯ, ತಾರತಮ್ಯ, ಮಲತಾಯಿ ಧೋರಣೆ ವಿರೋಧಿಸಿ ರಾಜ್ಯದ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಫೆಬ್ರವರಿ 07ರಂದು ನವದೆಹಲಿಯ ಜಂತರ್ ಮಂತರ್ ನಲ್ಲಿ ಬೆಳಿಗ್ಗೆ 11.00 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಶಾಸಕರು, ಸಂಸದರು, ನಾಯಕರಿಗೂ ಈ ಮೂಲಕ ನಾವು ಪ್ರತಿಭಟನೆಗೆ ಕರೆ ಕೊಡುತ್ತಿದ್ದೇವೆ. ನಾವು ಬಿಜೆಪಿ ವಿರುದ್ಧ ಪ್ರತಿಭಟನೆ ಮಾಡುತ್ತಿಲ್ಲ. ರಾಜ್ಯದ ಪರವಾಗಿ ಪ್ರತಿಭಟಿಸುತ್ತಿದ್ದೇವೆ. ನೀವೂ ರಾಜ್ಯದ ಜನರ ಧ್ವನಿಯಾಗಿ, ರಾಜ್ಯದ ಜನರ ಪರವಾಗಿ ನಿಲ್ಲಿ ಎಂದು ಬಿಜೆಪಿಯವರಿಗೆ ಕರೆ ಕೊಡುತ್ತೇವೆ. ಕನ್ನಡಿಗರಿಗೆ ದ್ರೋಹ ಮಾಡಬೇಡಿ, ಬನ್ನಿ ರಾಜ್ಯದ ಪರವಾಗಿ ಧ್ವನಿ ಎತ್ತೋಣ ಎಂದು ಕರೆಯುತ್ತಿದ್ದೇವೆ. ಪ್ರತಿಭಟಿಸದೆ ಸುಮ್ಮನಿದ್ದರೆ ಕನ್ನಡಿಗರಿಗೆ ದ್ರೋಹ ಮಾಡಿದಂತಾಗುತ್ತದೆ’ ಎಂದು ಹೇಳಿದ್ದಾರೆ.

‘ರಾಜ್ಯದ ಜನತೆ ನಮಗೆ ಕೊಟ್ಟ ಅವಕಾಶಕ್ಕೆ ನ್ಯಾಯ ಒದಗಿಸಬೇಕಾದುದ್ದು ನಮ್ಮ ಕರ್ತವ್ಯ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ನ್ಯಾಯ ಒದಗಿಸಿಕೊಡಲಿದೆ ಎಂದು ಇಲ್ಲಿಯವರೆಗೂ ತಾಳ್ಮೆಯಿಂದ ಕಾಯುತ್ತಿದ್ದೆವು. ಕಳೆದ ಸಾಲಿನ ಬಜೆಟ್ ನಲ್ಲಿ ಹೇಳಿದಂತೆ ನಡೆದುಕೊಳ್ಳುತ್ತಾರೆ ಎಂದು ಕಾದಿದ್ದೆವು. ಆದರೆ ಇದುವರೆಗೂ ಅನ್ಯಾಯ ಸರಿ ಪಡಿಸಿಲ್ಲ. ಇದರ ವಿರುದ್ಧ ಧ್ವನಿ ಎತ್ತಲೇಬೇಕಾಗಿದೆ. ಹೋರಾಟಕ್ಕೆ ಜೊತೆ ನೀಡಲು ಇಡೀ ಸರ್ಕಾರ ಪಕ್ಷ ಭೇದ ಮರೆತು ಆಹ್ವಾನ ನೀಡಿದ್ದೇವೆ. ಕನ್ನಡಿಗರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕಿದೆ. ಕೇಂದ್ರದ ಕಿವಿಯನ್ನು ತೆರೆಸಲು ಹೋರಾಡುತ್ತಿದ್ದೇವೆ’ ಎಂದು ಹೇಳಿದರು.

‘ಭದ್ರಾ ಯೋಜನೆಗೆ ₹5,300 ಕೋಟಿ ಕೊಡುತ್ತೇವೆ ಎಂದು ಕಳೆದ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿ ಈವರಗೆ ಒಂದು ರೂಪಾಯಿ ಕೂಡ ಬಿಡುಗಡೆ ಮಾಡಿಲ್ಲ. ಬರ ಪರಿಹಾರದ ಹಣವೂ ಇಲ್ಲ. ನರೇಗಾ ಅಡಿ 150 ಮಾನವ ದಿನಗಳಿಗೆ ಕೂಲಿ ಕೊಡಲು ಕೂಡ ಅನುಮತಿ ನೀಡಿಲ್ಲ. ಇಂಥ ಹಲವು ಕಾರಣಗಳಿಗಾಗಿ ಅನಿವಾರ್ಯವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದರು.

‘ದೇಶದ ಜನರ ಗಮನ ಸೆಳೆಯಬೇಕು, ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಬಗ್ಗೆ, ಹಣಕಾಸು ಹಂಚಿಕೆಯಲ್ಲಾಗಿರುವ ತಾರತಮ್ಯ, ಬರ ಪರಿಹಾರದಲ್ಲಿ ತೋರಿರುವ ಮಲತಾಯಿ ಧೋರಣೆ ಬಗ್ಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಎಲ್ಲ ಶಾಸಕರು, ಮೇಲ್ಮನೆ ಶಾಸಕರು ಭಾಗವಹಿಸುತ್ತಿದ್ದಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಸಂವಿಧಾನದ ಮೂಲಕ ಕೇಂದ್ರ ಮತ್ತು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸೇರಿ ಜನರ ಸೇವೆಯನ್ನು ಮಾಡಲು ಒಪ್ಪಿಕೊಂಡಿದ್ದೇವೆ. ಕೇಂದ್ರ ಸರ್ಕಾರದ ತೆರಿಗೆ ಹಣವೆಂದರೆ ರಾಜ್ಯಗಳಿಂದ ಬರುವ ತೆರಿಗೆ ಹಣ, ಸೆಸ್, ಪೆಟ್ರೋಲ್ ಡೀಸೆಲ್, ಸರ್ಚಾರ್ಜ್. ಇವುಗಳಿಂದ ಸಂಗ್ರಹವಾಗುವ ಹಣವನ್ನು ಕೇಂದ್ರ ಮತ್ತು ರಾಜ್ಯಗಳಿಗೆ ಹಂಚಿಕೆಯಾಗಬೇಕೆಂದು ಹಣಕಾಸು ಆಯೋಗ ರಚನೆಯಾಗಿದೆ. ಸಂವಿಧಾನದ 7ನೇ ಪರಿಚ್ಛೇಧ ಅದನ್ನು ಸ್ವತಂತ್ರ ಸಂಸ್ಥೆಯಾಗಿಸಿದೆ. ಇಲ್ಲಿಯವರೆಗೆ 15 ಹಣಕಾಸು ಆಯೋಗಗಳು ಆಗಿವೆ. ಪ್ರಸ್ತುತ 16ನೇ ಹಣಕಾಸು ಆಯೋಗ ರಚನೆಯಾಗಿದ್ದು, ಅಧ್ಯಕ್ಷರ ನೇಮಕವಾಗಿದೆ’ ಎಂದು ವಿವರಿಸಿದರು.

’14ನೇ ಹಣಕಾಸು ಆಯೋಗದಲ್ಲಿ ರಾಜ್ಯದ ತೆರಿಗೆಯ ಪಾಲು ಶೇ 4.71% ಇದ್ದದ್ದು, 15ನೇ ಹಣಕಾಸು ಆಯೋಗದಲ್ಲಿ 3.64% ಗೆ ಇಳಿಕೆಯಾಯಿತು. ಅಂದರೆ ಶೇ 1.07% ಕಡಿಮೆಯಾಗಿದೆ. ಅದರಿಂದ 4 ವರ್ಷಗಳಲ್ಲಿ 45,000 ಕೋಟಿ ರೂ. ರಾಜ್ಯಕ್ಕೆ ಕಡಿತ ಆಯಿತು. ಇದು ಕೇವಲ ನಗದು ಹಂಚಿಕೆಯೊಂದರಲ್ಲೇ ಆಗಿರುವ ಅನ್ಯಾಯ. ಅಂದಾಜಿನ ಪ್ರಕಾರ ಈ ವರ್ಷ ನಗದು ಹಂಚಿಕೆಯಲ್ಲಿ 62,098 ಕೋಟಿ ರೂ.ಗಳು ಕರ್ನಾಟಕಕ್ಕೆ ಕಡಿಮೆಯಾಗಲಿದೆ’ ಎಂದು ಹೇಳಿದರು.

‘ಹಣಕಾಸು ಆಯೋಗ ನಗದು ಹಂಚಿಕೆ ಮಾಡುವಾಗ ಶೇ 4.71 ರಿಂದ ಶೇ 3.74 ಕ್ಕೆ ಇಳಿಕೆ ಮಾಡಿದ್ದರಿಂದ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಲು 5,495 ಕೋಟಿ ರೂ.ಗಳ ವಿಶೇಷ ಅನುದಾನ ನೀಡಲು ಶಿಫಾರಸ್ಸು ಮಾಡಲಾಗಿತ್ತು. ಮಧ್ಯಂತರ ಬಜೆಟ್ ನಲ್ಲಿ ಈ ಬಗ್ಗೆ ಶಿಫಾರಸ್ಸು ಮಾಡಿದರು. ಈ ಹಣವೂ ರಾಜ್ಯಕ್ಕೆ ಬರಲಿಲ್ಲ. ಈ ಮೊತ್ತವನ್ನು ಕೇಂದ್ರ ಸರ್ಕಾರವನ್ನು ಕೇಳಿ ಪಡೆಯಲು ವಿಧಾನಸಭೆಯಲ್ಲಿ ವಿಷಯ ಮಂಡಿಸಿದ್ದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದನ್ನು ತಿರಸ್ಕರಿಸಿದರು. ಅಂತಿಮ ವರದಿಯಲ್ಲಿ 3000 ಕೋಟಿ ರೂ. ಫೆರಿಫೆರಲ್ ರಿಂಗ್ ರೋಡಿಗೆ, ಕೆರೆಗಳನ್ನು ಅಭಿವೃದ್ಧಿ ಪಡಿಸಲು ರೂ.3,000 ಕೋಟಿ ಸೇರಿ 6000 ಕೋಟಿ ರೂ. ಗಳನ್ನು ಹೆಚ್ವರಿಯಾಗಿ ಕೊಡಲು ಶಿಫಾರಸು ಮಾಡಲಾಯಿತು. ಈ ಹಣವೂ ಬರಲಿಲ್ಲ’ ಎಂದರು.

‘ಮೋದಿ ಅವರು ಪ್ರಧಾನಿ ಆದ ಬಳಿಕ 2020-21 ರಿಂದ 2025-26 ರವೆಗಿನ ಅವಧಿಗೆ ರಚನೆಯಾದ 15ನೇ ಹಣಕಾಸು ಆಯೋಗದ ತೆರಿಗೆ ಪಾಲು ಹಂಚಿಕೆಯಲ್ಲಿ 62,098 ಕೋಟಿ ರೂ.ಗಳಷ್ಟು ರಾಜ್ಯಕ್ಕೆ ನಷ್ಟವಾಗಿದೆ.
ಅಂತೆಯೇ 2020-21 ಹಾಗೂ 2021-22 ನೇ ಸಾಲಿಗೆ ವಿಶೇಷ ಅನುದಾನ ಕೊಡದೆ ರಾಜ್ಯಕ್ಕೆ 11,495 ಕೋಟಿ ರೂ.ಗಳು ನಷ್ಟವಾಗಿದೆ. ಒಟ್ಟಾರೆ 15ನೇ ಹಣಕಾಸು ಆಯೋಗದಲ್ಲಿ ರಾಜ್ಯದ ಪಾಲಿನಲ್ಲಿ 73,593 ಕೋಟಿ ರೂ.ಗಳು ಕಡಿಮೆಯಾಗಿದೆ. ಜಿಎಸ್‌ಟಿ ಜಾರಿಗೆ ಬಂದಾಗ ಇದು ಅವೈಜ್ಞಾನಿಕ ಎಂದು ನಾವು ಸಾರಿ ಸಾರಿ ಹೇಳಿದೆವು. ಆಗ ರಾಜ್ಯದ ತೆರಿಗೆ ಬೆಳವಣಿಗೆ ದರ 15% ಇತ್ತು. ಇದರಿಂದ ತೆರಿಗೆ, ಕೇಂದ್ರದ ಅನುದಾನವೂ ಹೆಚ್ಚಾಗತ್ತೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ, ಅದನ್ನೂ ಪರಿಹಾರ ರೂಪದಲ್ಲಿ ರಾಜ್ಯಕ್ಕೆ ತುಂಬಿ ಕೊಡುವುದಾಗಿ ಕೇಂದ್ರ ಹೇಳಿತ್ತು.‌ ಈ ಪರಿಹಾರ ಜೂನ್ 2022 ಕ್ಕೆ ನಿಲ್ಲಿಸಿದ್ದಾರೆ. ಈಗ ಪರಿಹಾರ ಕೊಡುತ್ತಿಲ್ಲ. 5 ವರ್ಷಗಳ ಕಾಲ ಮಾತ್ರ ಪರಿಹಾರ ಕೊಟ್ಟರು. ಇದರಿಂದಾಗಿ ಈಗ ನಮ್ಮ ತೆರಿಗೆ ಬೆಳವಣಿಗೆ 15% ಗೆ ಮತ್ತೆ ತಲುಪಲು ಆಗಲೇ ಇಲ್ಲ. ಹೀಗಾಗಿ ಪರಿಹಾರ ಮುಂದುವರಿಸಿ ಎಂದು ಕೇಳಿದೆವು. ಇವತ್ತಿನವರೆಗೂ ಮುಂದುವರೆಸುವ ಬಗ್ಗೆ ತೀರ್ಮಾನವನ್ನೇ ಮಾಡಿಲ್ಲ. ಈಗಲೂ ನಮಗೆ, ನಮ್ಮ ರಾಜ್ಯಕ್ಕೆ ಜಿಎಸ್‌ಟಿ ನಲ್ಲಿ ಅನ್ಯಾಯ ಆಗುತ್ತಲೇ ಇದೆ’ ಎಂದು ವಿವರಿಸಿದರು.

‘ರಾಜ್ಯದಿಂದ ಪ್ರತಿ ವರ್ಷ ಕೇಂದ್ರಕ್ಕೆ ₹4,30,000 ಕೋಟಿ ತೆರಿಗೆ ವಸೂಲಿ ಆಗಿ ಹೋಗುತ್ತಿದೆ. ತೆರಿಗೆ ಸಂಗ್ರಹಣೆಯಲ್ಲಿ ಮಹಾರಾಷ್ಟ್ರ ಬಿಟ್ಟರೆ ನಮ್ಮ ರಾಜ್ಯ ಎರಡನೇ ಸ್ಥಾನದಲ್ಲಿದೆ. ನಮಗೆ ಈ ವರ್ಷ ತೆರಿಗೆ ಪಾಲಿನಲ್ಲಿ ರೂ.37,252 ಕೋಟಿ ಬರುವುದು. ಕೇಂದ್ರ ಪುರಸ್ಕೃತ ಯೋಜನೆಯಲ್ಲಿ 13,005 ಕೋಟಿ ರೂಪಾಯಿ, ಎರಡೂ ಸೇರಿ ಕೇವಲ 50,257 ಕೋಟಿ ರೂಪಾಯಿ ರಾಜ್ಯಕ್ಕೆ ಬಂದಿದೆ. ರಾಜ್ಯಕ್ಕೆ ಇದು ಭೀಕರ ಅನ್ಯಾಯ ಅಲ್ಲವೇ? ಒಟ್ಟು ಲೆಕ್ಕದಲ್ಲಿ ರಾಜ್ಯದಿಂದ ₹100 ಕೇಂದ್ರಕ್ಕೆ ಹೋದರೆ ಅದರಲ್ಲಿ ನಮಗೆ ₹12- 13 ಮಾತ್ರ ವಾಪಾಸ್ ಬರುತ್ತಿದೆ. ಉಳಿದದ್ದು ಕೇಂದ್ರ ಸರ್ಕಾರ ಇಟ್ಟುಕೊಳ್ಳುತ್ತಿದೆ ಎಂದು ಕೇಂದ್ರ ಸರ್ಕಾರವೇ ಅಂಕಿ ಅಂಶಗಳನ್ನು ನೀಡಿದೆ. 2017-18 ರಲ್ಲಿ ಕೇಂದ್ರದ ಬಜೆಟ್ ಗಾತ್ರ ₹21,46,735 ಕೋಟಿ ಇತ್ತು. ಆಗ ರಾಜ್ಯಕ್ಕೆ ತೆರಿಗೆ ಪಾಲು ₹31,908 ಕೋಟಿ, ಅನುದಾನ ಹಾಗೂ ನಗದು ಹಂಚಿಕೆ ₹16,072 ಕೋಟಿ, ಎರಡೂ ಸೇರಿಸಿ ₹47,990 ಕೋಟಿ ಸಿಕ್ಕಿತ್ತು’ ಎಂದರು.

‘2023-24 ಸಾಲಿನಲ್ಲಿ ₹45,03,097 ಕೋಟಿ ಕೇಂದ್ರ ಬಜೆಟ್ ಆಗಿದ್ದು, ರಾಜ್ಯಕ್ಕೆ ₹50,257 ಕೋಟಿ ಮಾತ್ರ ಸಿಗುವ ಅಂದಾಜಿದೆ. ತೆರಿಗೆ ಹಂಚಿಕೆ 2.2 ಇಂದ 2024-25 ಕ್ಕೆ 1.23 ಗೆ ಇಳಿದಿದೆ. ಇದರಿಂದಾಗಿ ರಾಜ್ಯಕ್ಕೆ ಆಗುವ ಅನ್ಯಾಯದ ಪ್ರಮಾಣ ಹೆಚ್ಚುತ್ತಲೇ ಇದೆ. ಬಜೆಟ್ ಗಾತ್ರ ಡಬಲ್ ಆದಾಗ, ರಾಜ್ಯದ ತೆರಿಗೆಯ ಪಾಲು ದುಪ್ಪಟ್ಟಾಗಬೇಕಿತ್ತು. ಆದರೆ, ಈಗ ಅರ್ಧಕ್ಕಿಂತ ಹೆಚ್ಚು ಕಡಿಮೆ ಆಗಿದೆ. ಸೆಸ್, ಸರ್ ಚಾರ್ಜ್ ಪ್ರತೀ ವರ್ಷ ಹೆಚ್ಚಿಸಿಕೊಂಡು ಹೋಗುತ್ತಿದ್ದಾರೆ. ಸೆಸ್, ಸರ್ ಚಾರ್ಜ್ ಮೂಲಕ ಕೇಂದ್ರ ವಸೂಲಿ ಮಾಡುವ ತೆರಿಗೆಯಲ್ಲಿ ರಾಜ್ಯಗಳಿಗೆ ನಯಾಪೈಸೆ ವಾಪಾಸ್ ಬರಲ್ಲ. ಆದರೆ ಸೆಸ್, ಸರ್ ಚಾರ್ಜ್ ಎರಡೂ ಕೊಡೋದು ರಾಜ್ಯಗಳೇ.
ಆದ್ದರಿಂದ 16ನೇ ಹಣಕಾಸು ಆಯೋಗದ ಮುಂದೆ ಸೆಸ್ ಹಾಗೂ ಸರ್ ಚಾರ್ಜ್ ನಲ್ಲೂ ಪಾಲು ಕೊಡಲೇಬೇಕು ಎಂದು ಒತ್ತಾಯಿಸುತ್ತೇವೆ. ಈ ಬಗ್ಗೆ ಗಟ್ಟಿಯಾಗಿ ಧ್ವನಿ ಎತ್ತಲಿದ್ದೇವೆ. ಇದರ ಜತೆಗೆ ಶೇ.1 ರಷ್ಟು ರಕ್ಷಣಾ ಇಲಾಖೆಗೆ ಇಟ್ಟುಕೊಳ್ಳುತ್ತಾರೆ. ಹೀಗೆ ಮೋದಿ ಅವರು ಬಂದ ನಂತರ ರಚನೆಯಾದ 15ನೇ ಹಣಕಾಸು ಆಯೋಗದ ಬಳಿಕ ರಾಜ್ಯಕ್ಕೆ 1,87,867 ಕೋಟಿ ರೂ. ಅನ್ಯಾಯವಾಗಿದೆ’ ಎಂದು ಸಿದ್ದರಾಮಯ್ಯ ಅಂಕಿ ಅಂಶಗಳ ಸಹಿತ ವಿವರಿಸಿದರು.

‘ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ರೂಪಾಯಿ ಕೊಡುತ್ತೇವೆ ಎಂದು ತಿಳಿಸಿದ್ದರು. ಬಸವರಾಜ ಬೊಮ್ಮಾಯಿ ಅವರು ರಾಜ್ಯ ಬಜೆಟ್ ಮಂಡಿಸುವಾಗ ಇದನ್ನೇ ಪುನಃ ನೀರಾವರಿ ಯೋಜನೆಯ ಅನುದಾನ ಎಂದು ಉಲ್ಲೇಖಿಸಿದ್ದರು. ₹2.5 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸುವ ಯೋಜನೆ ಇದು. ಆದರೆ ಇದುವರೆಗೂ ಒಂದೇ ಒಂದು ರೂಪಾಯಿ ಬಂದಿಲ್ಲ. ಈಗಲಾದರೂ ಬಿಡುಗಡೆ ಮಾಡಿ ಎಂದು ನಾನು ಒತ್ತಾಯಿಸುತ್ತೇನೆ. ಮಹದಾಯಿ ಯೋಜನೆಯ ಪರಿಸರ ತೀರುವಳಿ ಇಂದಿನವರೆಗೆ ಆಗಿಲ್ಲ. ಯೋಜನೆ ಪ್ರಾರಂಭಿಸಲು ತೀರುವಳಿ ಕೊಡಿ ಎಂದರೆ ಕೊಟ್ಟಿಲ್ಲ. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿಲ್ಲ. ಇಂದಿನವರೆಗೆ ಗೆಜೆಟ್ ನೋಟಿಫಿಕೇಶನ್ ಮಾಡಿಕೊಟ್ಟಿಲ್ಲ.
ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಮೇಕೆದಾಟುಗೆ ಇವತ್ತಿನವರೆಗೂ ಅನುಮತಿ ಕೊಟ್ಟಿಲ್ಲ. 236 ತಾಲ್ಲೂಕುಗಳಲ್ಲಿ 223 ತಾಲ್ಲೂಕುಗಳು ಬರಗಾಲ ಪೀಡಿತವಾಗಿದೆ. 123 ತೀವ್ರ ಬರಗಾಲ ಪೀಡಿತವಾಗಿದ್ದರೂ ಕೇಂದ್ರದಿಂದ ನಯಾಪೈಸೆ ಬಂದಿಲ್ಲ’ ಎಂದು ಹೇಳಿದರು.

‘ಸೆಪ್ಟೆಂಬರ್ 23 ರಂದು ಕೇಂದ್ರ ತಂಡ ಬಂದು ಬರಗಾಲ ಅಧ್ಯಯನ ಮಾಡಿ ಕೇಂದ್ರಕ್ಕೆ ವರದಿ ಕೊಟ್ಟಿದೆ. ಬಳಿಕ ಶಬರಿ ಕಾದಂತೆ ನಮ್ಮ ಮಂತ್ರಿಗಳು ಭೇಟಿಗೆ ಕಾದು ವಾಪಾಸ್ ಬಂದಿದ್ದಾರೆ. ಭೇಟಿ ಮಾಡಿದಾಗ ಸಭೆ ಕರೆಯುತ್ತೇನೆ ಎಂದ ಅಮಿತ್ ಶಾ ಇವತ್ತಿನವರೆಗೂ ಸಭೆಯನ್ನೇ ಕರೆದಿಲ್ಲ. ಸಭೆ ಕರೆಯದೆ ಬರ ಪರಿಹಾರ ಬರುವುದೇ ಇಲ್ಲ.
ಅಮಿತ್ ಶಾ ಅವರು ಇವತ್ತಿನವರೆಗೂ ಪ್ರಾಥಮಿಕ ಸಭೆಯನ್ನೇ ಕರೆದಿಲ್ಲ. ಪ್ರಧಾನಿ ಮೋದಿ ಅವರು ಬೆಂಗಳೂರಿಗೆ ಬಂದಾಗಲೂ ಮನವಿ ಮಾಡಿದ್ದೆ. 35 ಸಾವಿರ ಕೋಟಿ ಬೆಳೆ ನಷ್ಟ ಆಗಿದೆ. ಇದಕ್ಕೆ ₹17,901 ಕೋಟಿ  ಪರಿಹಾರವನ್ನು ಕೇಂದ್ರದಿಂದ ಕೇಳಿದ್ದೇವೆ. ಎನ್‌ಡಿಆರ್‌ಎಫ್‌ ನಿಂದ ನಯಾ ಪೈಸೆ ಬಿಡುಗಡೆ ಮಾಡಿಲ್ಲ. 2019 ರಲ್ಲಿ ಪ್ರವಾಹ ಬಂದಾಗ ಯಡಿಯೂರಪ್ಪ ಅವರು ಪ್ರಧಾನಿ ಮೋದಿ ಅವರಿಗೆ ಎನ್‌ಡಿಆರ್‌ಎಫ್‌ಗಾಗಿ ಗೋಗರೆದರೂ ಪರಿಹಾರ ಕೊಡಲಿಲ್ಲ’ ಎಂದು ಹೇಳಿದರು.

‘ಉತ್ತರದ ರಾಜ್ಯಗಳಿಗೆ ಅನುದಾನ ಕೊಡಬೇಡಿ ಎಂದು ಹೇಳುವುದಿಲ್ಲ. ಆದರೆ ದಕ್ಷಿಣ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಿ. ಚಿನ್ನದ ಮೊಟ್ಟೆ ಇಡುವ ಕೋಳಿ ಎಂದು ಕತ್ತು ಕುಯ್ಯಬಾರದು, ಹಾಲು ಕೊಡುವ ಕೆಚ್ಚಲನ್ನೇ ಕತ್ತರಿಸಬಾರದು ಎನ್ನುವುದು ನಮ್ಮ ಮನವಿ. ನಮ್ಮ ನಿರಂತರ ಬೇಡಿಕೆ, ಮನವಿಗಳಿಗೂ ಕೇಂದ್ರ ಬೆಲೆ ಕೊಟ್ಟಿಲ್ಲ. ಯಡಿಯೂರಪ್ಪ, ಬೊಮ್ಮಾಯಿಯವರು ಪ್ರಧಾನಿಗಳ ಮುಂದೆ ಬಾಯಿ ಬಿಡುವುದಿಲ್ಲ. ವಿರೋಧಪಕ್ಷದ ನಾಯಕ ಆರ್.ಅಶೋಕ್ ಗೆ ಈ ವಿಷಯಗಳೆಲ್ಲಾ ಅರ್ಥವೇ ಆಗಲ್ಲ. ಪ್ರಲ್ಹಾದ್ ಜೋಷಿ ಮತ್ತು ಶೋಭಾ ಕರಂದ್ಲಾಜೆ ರಾಜ್ಯದಿಂದ ಕೇಂದ್ರ ಮಂತ್ರಿಗಳಾಗಿದ್ದಾರೆ. 27 ಜನ ಸಂಸದರು ಸಂಸತ್ತಿನಲ್ಲಿ ಮಾತೇ ಆಡಿಲ್ಲ. ಜನ ಇವರನ್ನು ಆಯ್ಕೆ ಮಾಡಿ ಕಳುಹಿಸಿದರೆ ಕಣ್ಣುಮುಚ್ಚಿ ಕುಳಿತಿದ್ದಾರೆ. ಇವರು ರಾಜ್ಯದ ಪರವಾಗಿ ಪಾರ್ಲಿಮೆಂಟಿನಲ್ಲಿ ಬಾಯಿಯನ್ನೇ ಬಿಡುತ್ತಿಲ್ಲ. ₹11 ಸಾವಿರ ಕೋಟಿ ಕೇಂದ್ರ ಹಣಕಾಸು ಸಚಿವರಿಂದಲೇ ತಿರಸ್ಕಾರವಾಗಿದೆ. ರಾಜ್ಯದಿಂದ ಆಯ್ಕೆ ಆದ ನಿರ್ಮಲಾ ಸೀತಾರಾಮನ್ ರಿಂದಲೇ ರಾಜ್ಯಕ್ಕೆ ಹೆಚ್ಚು ಅನ್ಯಾಯ ಆಗಿದೆ’ ಎಂದು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದರು.

‘ನರೇಂದ್ರ ಮೋದಿಯವರು ಸೂಕ್ಷ್ಮ ಇದ್ದಾರೆ, ಪ್ರತಿಭಟನೆ ಬಳಿಕವಾದರೂ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸಿ ಕರ್ನಾಟಕದ ಪಾಲಿನ ಹಣವನ್ನು ವಾಪಾಸ್ ಕೊಡಬಹುದು ಎಂಬ ಆಶಾಭಾವನೆ ಇದೆ.
ಮುಂಬರುವ ಅಧಿವೇಶನದಲ್ಲಿ ಶ್ವೇತಪತ್ರ ಹೊರಡಿಸಲು ರಾಜ್ಯ ಸರ್ಕಾರವು ಚಿಂತನೆ ನಡೆಸಿದೆ’ ಎಂದು ಹೇಳಿದರು.

ಇದನ್ನೂ ಓದಿ; ತೆರಿಗೆ ಹಂಚಿಕೆ ತಾರತಮ್ಯ ಇಲ್ಲ ಎಂದ ವಿತ್ತ ಸಚಿವೆ; ‘ಪಟ್ಟಭದ್ರ ಹಿತಾಸಕ್ತಿಗಳ ವಿನಾಶಕಾರಿ ನಿರೂಪಣೆ’ ಎಂದು ಆರೋಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ: ಆರು ಜನ ಹಿರಿಯರು ಸೇರಿದಂತೆ 41 ಜನ ನಕ್ಸಲ್ ಕಾರ್ಯಕರ್ತರು ಪೊಲೀಸರಿಗೆ ಶರಣು

ದೇಶದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಪ್ರಮುಖ ಬೆಳವಣಿಗೆಯಲ್ಲಿ, ಆರು ಜನ ಹಿರಿಯರು ಸೇರಿದಂತೆ 41 ಜನ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಕಾರ್ಯಕರ್ತರು ತೆಲಂಗಾಣ ಪೊಲೀಸರ ಮುಂದೆ ಇಂದು ಶರಣಾಗಿದ್ದಾರೆ. ಶರಣಾಗತಿ ಪ್ರಕ್ರಿಯೆಯ...

‘ವೀಸಾ ಅವಧಿ ಮುಗಿಯುವ ಮೊದಲು ಪಾಕ್ ಮಹಿಳೆಯ ಪೌರತ್ವ ಅರ್ಜಿ ಪರಿಗಣಿಸಿ..’; ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೂಚನೆ

ಭಾರತದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಯ ಹೊಸ ಪೌರತ್ವ ಅರ್ಜಿಯನ್ನು ಸಕ್ರಿಯವಾಗಿ ಪರಿಗಣಿಸುವ ಜೊತೆಗೆ ಅವರ ದೀರ್ಘಾವಧಿಯ ವೀಸಾ ಅವಧಿ ಮುಗಿಯುವ ಮೊದಲೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು, ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯ ಮತ್ತು...

ಎಚ್‌ಐವಿ ಪಾಸಿಟಿವ್ ಎಂದು ವಜಾಗೊಳಿಸಲಾದ ಬಿಎಸ್‌ಎಫ್ ಯೋಧನನ್ನು ಮತ್ತೆ ನೇಮಿಸುವಂತೆ ಹೈಕೋರ್ಟ್ ಆದೇಶ

ಜುಲೈ 2017 ರಲ್ಲಿ ಎಚ್‌ಐವಿ ಪಾಸಿಟಿವ್ ಎಂಬ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾದ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್‌ ಒಬ್ಬರನ್ನು ಮರುನೇಮಕ ಮಾಡುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.  ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್...

ವೈದ್ಯೆ ಬುರ್ಖಾ ಎಳೆದ ನಿತೀಶ್‌ಕುಮಾರ್: ಶ್ರೀನಗರದಲ್ಲಿ ದೂರು ದಾಖಲಿಸಿದ ಇಲ್ತಿಜಾ ಮುಫ್ತಿ

ಪಾಟ್ನಾದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದ ಸಂದರ್ಭದಲ್ಲಿ ಮುಸ್ಲಿಂ ಮಹಿಳಾ ವೈದ್ಯರ ನಿಖಾಬ್ (ಬುರ್ಖಾ) ಎಳೆಯುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಲು ಪೀಪಲ್ಸ್ ಡೆಮಾಕ್ರಟಿಕ್...

ಪ್ರಶ್ನೆಗಾಗಿ ಕಾಸು ಪ್ರಕರಣ: ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲು ಅನುಮತಿಸಿದ್ದ ಲೋಕಪಾಲ್ ಆದೇಶ ರದ್ದು ಪಡಿಸಿದ ದೆಹಲಿ ಹೈಕೋರ್ಟ್

‘ಪ್ರಶ್ನೆಗಾಗಿ ಕಾಸು’ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ಸಿಬಿಐಗೆ ಅನುಮತಿ ನೀಡಿದ್ದ ಲೋಕಪಾಲ್ ಆದೇಶವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದಾಗಿ ಮೊಯಿತ್ರಾ ಅವರಿಗೆ ಈ...

ಜಮ್ಮು-ಕಾಶ್ಮೀರ: ಪತ್ರಕರ್ತನ ಮೊಬೈಲ್ ಫೋನ್ ವಶಪಡಿಸಿಕೊಂಡ ಪೊಲೀಸರು

ಕಿಶ್ತ್ವಾರ್‌ನಲ್ಲಿನ ವಿದ್ಯುತ್ ಯೋಜನೆಯಲ್ಲಿ ಸ್ವಜನಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳ ಕುರಿತು ವರದಿ ಮಾಡುತ್ತಿದ್ದಾಗ, ದಿ ವೈರ್ ಸುದ್ದಿ ಪೋರ್ಟಲ್‌ನ ಪತ್ರಕರ್ತ ಜೆಹಾಂಗೀರ್ ಅಲಿ ಅವರ ಮೊಬೈಲ್ ಫೋನ್ ಅನ್ನು ಬುಧವಾರ (ಡಿಸೆಂಬರ್ 17)...

ಕೇರಳದಲ್ಲಿ ಗುಂಪುಹತ್ಯೆ: ಛತ್ತೀಸ್‌ಗಢ ವಲಸೆ ಕಾರ್ಮಿಕನನ್ನು ‘ಕಳ್ಳ’ ಎಂದು ಥಳಿಸಿ ಕೊಂದ ಗುಂಪು 

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಗುರುವಾರ ಛತ್ತೀಸ್‌ಗಢದಿಂದ ಬಂದ ವಲಸೆ ಕಾರ್ಮಿಕನೊಬ್ಬನನ್ನು ಕಳ್ಳನೆಂದು ಶಂಕಿಸಿ ಗುಂಪೊಂದು ಥಳಿಸಿ ಕೊಂದಿದೆ. ಕೊಲೆಯಾದ ವ್ಯಕ್ತಿಯನ್ನು ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದ್ದು, ಕಳೆದ ಒಂದು ತಿಂಗಳಿನಿಂದ ಪಾಲಕ್ಕಾಡ್‌ನ ಕಾಂಜಿಕೋಡ್‌ನಲ್ಲಿರುವ...

ನೋಯ್ಡಾ ಪೊಲೀಸ್ ಠಾಣೆಯೊಳಗೆ ವಕೀಲೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸಿಸಿಟಿವಿ ದೃಶ್ಯಾವಳಿ ಕೇಳಿದ ಸುಪ್ರೀಂ ಕೋರ್ಟ್

ಮಹಿಳಾ ವಕೀಲೆಯೊಬ್ಬರನ್ನು 14 ಗಂಟೆಗಳ ಕಾಲ ಅಕ್ರಮವಾಗಿ ಬಂಧಿಸಿ ಪೊಲೀಸರು ಲೈಂಗಿಕ ದೌರ್ಜನ್ಯ esgi, ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಆರೋಪದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋಡರ್ಟ್, ಮುಚ್ಚಿದ ಕವರ್‌ನಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು...

ಹಾಲು ಉತ್ಪಾದಕರಿಗೆ 1 ಲೀಟರ್ ಹಾಲಿನ ಪ್ರೋತ್ಸಾಹಧನ 5 ರಿಂದ 7 ರೂಗೆ ಏರಿಕೆ: ಅಧಿವೇಶನದಲ್ಲಿ ಸಿದ್ದರಾಮಯ್ಯ ಘೋಷಣೆ

ರೈತರ ಹಿತದೃಷ್ಠಿಯಿಂದ 1 ಲೀಟರ್ ಹಾಲಿಗೆ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಏರಿಕೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿ ಅಧಿವೇಶನದ ಕೊನೆಯ ದಿನ ಮಾತನಾಡಿದ ಅವರು, ರೈತರಿಗೆ ಹಸುಗಳನ್ನು ಸಾಕಿ...

ಬಾಂಗ್ಲಾ ದಂಗೆ: ಮಾಧ್ಯಮ ಸಂಸ್ಥೆಗಳಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ಉರಿಯುತ್ತಿದ್ದ ಕಚೇರಿಗಳಿಂದ 25 ಕ್ಕೂ ಹೆಚ್ಚು ಪತ್ರಕರ್ತರ ರಕ್ಷಣೆ

ಜುಲೈ ದಂಗೆಯ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ನಿಧನದ ಸುದ್ದಿ ಕೇಳಿದ ಬೆನ್ನಲ್ಲೇ ಶುಕ್ರವಾರ ಬಾಂಗ್ಲಾದೇಶದ ವಿವಿಧ ಭಾಗಗಳಲ್ಲಿ ತೀವ್ರ ಪ್ರತಿಭಟನೆಗಳು ಆರಂಭವಾಗಿದ್ದು ಹಿಂಸಾಚಾರಕ್ಕೆ ನಾಂದಿ ಹಾಡಿವೆ. ಅನೇಕ ಪ್ರತಿಭಟನಾಕಾರರು ಬೀದಿಗಿಳಿದಿದ್ದು,...