IT ಕಾಯ್ದೆಯ ಸೆಕ್ಷನ್ 66A ಇನ್ನೂ ಬಳಕೆಯಾಗುತ್ತಿರುವುದು ಭಯಾನಕ ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ. ರೋಹಿಂಟನ್ ನಾರೀಮನ್, ಕೆ.ಎಮ್.ಜೋಸೆಫ್, ಬಿ.ಆರ್.ಗವಾಯಿ ಅವರಿದ್ದ ಸುಪ್ರೀಂ ಕೋರ್ಟ್ ಪೀಠ ಕೆಂದ್ರ ಸರ್ಕಾರಕ್ಕೆ ಈ ಸಂಬಂಧ ನೋಟಿಸ್ ಕೂಡ ನೀಡಿತು. 2015ರಲ್ಲಿಯೇ ರದ್ದಾದ ಕಾನೂನಿನಡಿ ಇನ್ನೂ FIR ದಾಖಲಾಗುತ್ತಿದ್ದರೆ ಅದು ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆಯಾಗುತ್ತದೆ. ನಾವು ಏನು ಕೇಳುತ್ತಿದ್ದೇವೆ, ನಮ್ಮ ಮುಂದೆ ಏನು ನಡೆಯುತ್ತಿದೆ ಇದು ಅತ್ಯಂತ ಆಘಾತಕಾರಿ ವಿಷಯ ಎಂದು ನ್ಯಾಯಮೂರ್ತಿ ರೋಹಿಂಟನ್ ನಾರೀಮನ್ ಬೇಸರ ವ್ಯಕ್ತಪಡಿಸಿದ್ದಾರೆ.
ಪೀಪಲ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (PUCL) ಎಂಬ ನಾಗರಿಕ ಹಕ್ಕುಗಳ ಹೋರಾಟ ಸಂಘಟನೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ 2 ವಾರಗಳಲ್ಲಿ ಉತ್ತರ ನೀಡುವಂತೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಇದನ್ನೂ ಓದಿ: ಸರ್ಕಾರದ ಹೊಸ ಐಟಿ ಮಾರ್ಗಸೂಚಿ: ಬಳಕೆದಾರರ ಖಾಸಗಿತನ ರಕ್ಷಿಸಲು ದೆಹಲಿ ಹೈಕೋರ್ಟ್‌ಗೆ ವಾಟ್ಸಾಪ್ ಮೊರೆ
ಸುಪ್ರೀಂ ಕೋರ್ಟ್‌ನಲ್ಲಿ ಸರ್ಕಾರವನ್ನು ಪ್ರತಿನಿಧಿಸಿ ಉತ್ತರಿಸಿದ ಆಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, “ಸುಪ್ರೀಂ ಕೋರ್ಟ್ 66A ಯನ್ನು ರದ್ದುಪಡಿಸಿದ್ದರೂ ಸೆಕ್ಷನ್ ಬಳಕೆಯಲ್ಲಿ ಇದೆ. 66A ಸೆಕ್ಷನ್‌ನಡಿ ಪ್ರಕರಣಗಳಲ್ಲಿ FIR ಕೂಡ ದಾಖಲಿಸಲಾಗುತ್ತಿದೆ. ಪ್ರಕರಣಗಳನ್ನು ದಾಖಲಿಸುವ ಸಂದರ್ಭದಲ್ಲಿ ಈ ಸೆಕ್ಷನ್‌ಅನ್ನು ಸುಪ್ರೀಂ ಕೋರ್ಟ್ ರದ್ದು ಪಡಿಸಿದೆ ಎಂಬ ಅಡಿ ಬರಹವನ್ನು ನಮೂದಿಸಲಾಗುತ್ತದೆ. ಸಂಸತ್ತಿನಲ್ಲಿ IT ಕಾಯ್ದೆ 2000 ಕ್ಕೆ ಬದಲಾವಣೆ ತಂದು 66A ಸೆಕ್ಷನ್ ಮುಂದೆ ಬ್ರಾಕೆಟ್‌ನಲ್ಲಿ ರದ್ದುಪಡಿಸಲಾಗಿದೆ ಎಂದು ತಿದ್ದುಪಡಿ ಮಾಡಿದರೆ ಮಾತ್ರ ಸೆಕ್ಷನ್ ರದ್ದಾಗಲಿದೆ” ಎಂದು ತಿಳಿಸಿದ್ದಾರೆ.
ರದ್ದಾಗಿರುವ ಸೆಕ್ಷನ್ 66A ಅಡಿಯಲ್ಲಿ ಕೇವಲ ಪ್ರಕರಣಗಳನ್ನು ಮಾತ್ರ ದಾಖಲಿಸಲಾಗುತ್ತಿಲ್ಲ. ಜಿಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣೆ ಕೂಡ ನಡೆಯುತ್ತಿದೆ. ಮಾರ್ಚ್ 10, 2021ರ ವೇಳೆಗೆ ದೇಶದಲ್ಲಿ ಸೆಕ್ಷನ್ 66A ಗೆ ಸಂಬಂಧಿಸಿದ 745 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜೊಂಬಿ ಟ್ರ್ಯಾಕರ್ ವೆಬ್‌ಸೈಟ್ ವರದಿ ಹೆಳುತ್ತದೆ ಎಂದು PUCL ಸಂಘಟನೆಯ ಪರವಾಗಿ ನ್ಯಾಯವಾದಿ ಅಪರ್ಣಾ ಭಟ್ ಸುಪ್ರೀಂ ಕೋರ್ಟ್‌ಗೆ ಅಂಕಿ ಅಂಶಗಳನ್ನು ಸಲ್ಲಿಸಿದ್ದಾರೆ.
ಸೆಕ್ಷನ್ 66A ಅಡಿಯಲ್ಲಿ ದೇಶದಾದ್ಯಂತ ದಾಖಲಾಗಿರುವ ಎಲ್ಲಾ FIR ಗಳ ಮತ್ತು ವಿಚಾರಣೆ ನಡೆಯುತ್ತಿರುವ ಪ್ರಕರಣಗಳ ಅಂಕಿ ಅಂಶವನ್ನು ಸಂಗ್ರಹಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಬೇಕು. ಸೆಕ್ಷನ್ 66A ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳನ್ನು ತಕ್ಷಣವೇ ಕೈಬಿಡಬೇಕೆಂದು ಕೇಂದ್ರ ಸರ್ಕಾರಕ್ಕೆ ಆದೇಶಿಸುವಂತೆ ಈ ಸಾರ್ವಜನಿಕ ಅರ್ಜಿಯಲ್ಲಿ ಕೋರಲಾಗಿದೆ.
IT ಕಾಯ್ದೆ 2000 ರ ಸೆಕ್ಷನ್ 66A ರದ್ದಾಗಿದೆ ಎಂಬ ಸುದ್ದಿಯನ್ನು ಎಲ್ಲಾ ಇಂಗ್ಲಿಷ್ ಪತ್ರಿಕೆ ಮತ್ತು ಪ್ರಾದೇಶಿಕ ಪತ್ರಿಕೆಯಲ್ಲಿ ಪ್ರಕಟಿಸುವಂತೆ ಸರ್ಕಾರಕ್ಕೆ ಆದೇಶಿಸಬೇಕೆಂದು PUCL ತನ್ನ ಅರ್ಜಿಯಲ್ಲಿ ಕೋರ್ಟ್‌ಗೆ ಮನವಿ ಮಾಡಿದೆ.
2018ರಲ್ಲಿ ಕೂಡ PUCL ಸಂಘಟನೆ ಇಂತಹದ್ದೇ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ದಾಖಲಿಸಿತ್ತು. 2019ರಲ್ಲಿ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ಎಲ್ಲಾ ಹೈಕೋರ್ಟ್‌ಗಳಲ್ಲಿ ಐಟಿ ಕಾಯ್ದೆಯ ಸೆಕ್ಷನ್ 66A ರದ್ದಾಗಿರುವ ಕುರಿತು ಮಾಹಿತಿ ಲಭ್ಯವಾಗಬೇಕು ಮತ್ತು ಸಂಬಂಧಿಸಿದ ದಾಖಲೆಗಳು ಸಾರ್ವಜನಿಕರಿಗೆ ಸಿಗಬೇಕು ಎಂದು ಆದೇಶಿಸಿತ್ತು.
ಇದನ್ನೂ ಓದಿ: ಹೊಸ ಐಟಿ ನಿಯಮ: ಏಪ್ರಿಲ್‌ನಲ್ಲಿ 59,350 ಕಂಟೆಂಟ್‌ಗಳನ್ನು ಕಿತ್ತು ಹಾಕಿದ ಗೂಗಲ್!
ಏನಿದು Section 66A of IT Act, 2000 ?
IT ಕಾಯ್ದೆಯ ಸೆಕ್ಷನ್ 66A ಯನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿ ವರ್ಷಗಳೇ ಕಳೆದಿವೆ. ಸಾಮಾಜಿಕ ಜಾಲತಾಣಗಳಲ್ಲಿ, ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಹಂಚಿಕೊಂಡ ಪೋಸ್ಟ್ ಅಥವಾ ಸಂದೇಶಗಳು ಆಕ್ಷೇಪಾರ್ಹವೆನಿಸಿದ ತಕ್ಷಣಕ್ಕೆ ಪೊಲೀಸರು ಯಾವುದೇ ವಿಚಾರಣೆಯನ್ನು ನಡೆಸದೇ ಬಂಧಿಸುವ ಅಧಿಕಾರವನ್ನು IT ಕಾಯ್ದೆಯ ಸೆಕ್ಷನ್ 66A ಪೊಲೀಸರಿಗೆ ನೀಡುತ್ತದೆ. ಸರ್ಕಾರದ ಯೋಜನೆಗಳನ್ನು ಟೀಕಿಸುವ, ವಿಮರ್ಶಿಸುವವರ ಮೇಲೆ ಈ ಸೆಕ್ಷನ್‌ನ ಪ್ರಹಾರ ಇದುವರೆಗೆ ನಡೆದುಬಂದಿದೆ. ಜನರ ಅಭಿವ್ಯಕ್ತಿ ಸ್ವಾತಂತ್ರಯವನ್ನೇ ಕಿತ್ತುಕೊಳ್ಳುವ ಐಟಿ ಕಾಯ್ದೆಯ ಸೆಕ್ಷನ್ 66A ಯನ್ನು ರದ್ದು ಮಾಡಿ ಸುಪ್ರೀಂ ಕೋರ್ಟ್ 2015 ರಲ್ಲಿ ತೀರ್ಪು ನೀಡಿದೆ. ಶ್ರೇಯಾ ಸಿಂಘಾಲ್ ವಿ. ಭಾರತ ಸರ್ಕಾರ ಪ್ರಕರಣದಲ್ಲಿ ಮಾರ್ಚ್ 24 2015 ರಂದು ಸುಪ್ರೀಂ ಕೋರ್ಟ್ ಐಟಿ ಕಾಯ್ದೆಯ 66A ಸೆಕ್ಷನ್ ಅಸಂವಿಧಾನಿಕವಾದುದು, ಜನರ ಮೂಲಭೂತ ಹಕ್ಕುಗಳನ್ನೇ ಕಿತ್ತುಕೊಳ್ಳುವ ಇಂತಹ ಕಾನೂನಗಳನ್ನು ಮುಂದೆ ಬಳಕೆ ಮಾಡಬಾರದೆಂದು ಭಾರತ ಸರ್ಕಾರಕ್ಕೆ ಆದೇಶಿಸಿದೆ.
ಇದನ್ನೂ ಓದಿ: ಭಾರತದಲ್ಲಿ ಕಾನೂನು ರಕ್ಷಣೆ ಕಳೆದುಕೊಂಡ ಟ್ವಿಟರ್!


