ಯಾವುದೇ ರೀತಿಯ ಹಿಂದಿ ಪ್ರಾಬಲ್ಯ ಮತ್ತು ಹೇರಿಕೆಯನ್ನು ತಮಿಳುನಾಡು ರಾಜ್ಯವು ತಿರಸ್ಕರಿಸುತ್ತದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಿಧಾನವಾಗಿಯಾದರೂ ಭಾಷೆಯನ್ನು ವಿರೋಧವಿಲ್ಲದೆ ಸ್ವೀಕರಿಸಬೇಕು ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಶನಿವಾರ ಹೇಳಿದ್ದಾರೆ.
ಅಧಿಕೃತ ಭಾಷೆ ಕುರಿತು ಸಂಸದೀಯ ಸಮಿತಿಯ 38ನೇ ಸಭೆಯಲ್ಲಿ, ‘ಹಿಂದಿಯನ್ನು ಸ್ವೀಕರಿಸುವುದು ನಿಧಾನವಾದರೂ ಅಂತಿಮವಾಗಿ ನಾವು ಅದನ್ನು ಯಾವುದೇ ವಿರೋಧವಿಲ್ಲದೆ ಸ್ವೀಕರಿಸಲೇಬೇಕು’ ಎಂಬ ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಬಲವಾಗಿ ಖಂಡಿಸಿದ್ದಾರೆ.
ಅಮಿತ್ ಶಾ ಅವರ ಅಭಿಪ್ರಾಯವನ್ನು ಆಕ್ಷೇಪಿಸಿದ ಸ್ಟಾಲಿನ್ ಅವರು, ”ಇದು ಹಿಂದಿ ಮಾತನಾಡದವರನ್ನು ದಮನಿಸುವ ರಾಜಾರೋಷ ಪ್ರಯತ್ನವಾಗಿದೆ. ತಮಿಳುನಾಡು ಯಾವುದೇ ರೂಪದಲ್ಲಿ ಹಿಂದಿಯ ಪ್ರಾಬಲ್ಯ ಮತ್ತು ಹೇರಿಕೆಯನ್ನು ವಿರೋಧಿಸುತ್ತದೆ. ಏಕೆಂದರೆ ಅದು ಇಂತಹ ಕ್ರಮವನ್ನು ಅನುಮೋದಿಸುವ ರಾಜ್ಯವಲ್ಲ. ನಮ್ಮ ಭಾಷೆ ಮತ್ತು ಪರಂಪರೆ ನಮ್ಮನ್ನು ವ್ಯಾಖ್ಯಾನಿಸುತ್ತವೆ. ನಮ್ಮನ್ನು ಹಿಂದಿಯ ಗುಲಾಮರಾಗಿಸಲು ಸಾಧ್ಯವಿಲ್ಲ. ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಂತೆ ಹಲವಾರು ರಾಜ್ಯಗಳೂ ಹಿಂದಿ ಹೇರಿಕೆಯನ್ನು ತೀವ್ರವಾಗಿ ವಿರೋಧಿಸುತ್ತಿವೆ. ಹಿಂದಿ ಹೇರಿಕೆಗೆ ಹೆಚ್ಚುತ್ತಿರುವ ಪ್ರತಿರೋಧವನ್ನು ಗಮನಕ್ಕೆ ತೆಗೆದುಕೊಳ್ಳಿ” ಎಂದು ಅವರು ಟ್ವೀಟ್ ಮಾಡಿದ್ದಾರೆ.
”1965ರ ಹಿಂದಿ ಹೇರಿಕೆ ವಿರುದ್ಧ ಆಂದೋಲನದ ಬೆಂಕಿಯನ್ನು ಮತ್ತೆ ಹೊತ್ತಿಸುವುದು ಅವಿವೇಕದ ನಡೆಯಾಗುತ್ತದೆ” ಎಂದು ಸ್ಟಾಲಿನ್ ಎಚ್ಚರಿಕೆ ನೀಡಿದ್ದಾರೆ.
”ಬಿಜೆಪಿ ನಾಯಕರು ಅನುಸರಿಸುತ್ತಿರುವ ಸೋಗಿನ ರಾಜಕೀಯದ ಬಗ್ಗೆ ಪ್ರತಿಯೊಬ್ಬರಿಗೂ ಗೊತ್ತಿದೆ. ತಮಿಳುನಾಡಿನಲ್ಲಿ ತಮಿಳನ್ನು ಪ್ರಾಚೀನ ಭಾಷೆ ಎಂದು ಪ್ರಶಂಸಿಸುವ ಅವರು ದಿಲ್ಲಿಯನ್ನು ತಲುಪಿದಾಗ ವಿಷವನ್ನು ಕಾರುತ್ತಾರೆ” ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
I strongly denounce Union Home Minister @AmitShah's audacious push for Hindi acceptance. It's a blatant attempt to subjugate non-Hindi speakers. Tamil Nadu rejects any form of Hindi hegemony and imposition. Our language and heritage define us – we won't be enslaved by Hindi!… pic.twitter.com/gNiJ2TGtKm
— M.K.Stalin (@mkstalin) August 5, 2023
1967ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಮೂಲಕ ಅಂತಿಮವಾಗಿ ದ್ರಾವಿಡ ಮುನ್ನೇತ್ರ ಕಳಗಂ ಅಧಿಕಾರಕ್ಕೆ ಬರಲು ಕಾರಣವಾದ ತಮಿಳುನಾಡಿನಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆಗಳನ್ನು ಸ್ಟಾಲಿನ್ ಉಲ್ಲೇಖಿಸಿದ್ದಾರೆ.
1960ರ ದಶಕದಿಂದಲೂ ಇಂಗ್ಲಿಷ್ ಮತ್ತು ತಮಿಳು ಎಂಬ ಎರಡು ಭಾಷೆಯ ಸೂತ್ರಕ್ಕೆ ತಮಿಳುನಾಡು ಹೊಂದಿಕೊಂಡಿದೆ. ಕಳೆದ ವರ್ಷ, ಸ್ಟಾಲಿನ್ ಅವರು ಮೋದಿಗೆ ಬರೆದ ಪತ್ರದಲ್ಲಿ, ಬಿಜೆಪಿ ಸರ್ಕಾರವು “ಒಂದು ರಾಷ್ಟ್ರ” ಎನ್ನುವ ಹೆಸರಿನಲ್ಲಿ ಹಿಂದಿ ಹೇರಿಕೆಯ ನಿರಂತರ ಪ್ರಯತ್ನಗಳು ಭಾರತದ ಸಮಗ್ರತೆಗೆ ಹಾನಿಕಾರಕವಾಗಿದೆ ಎಂದು ಬರೆದಿದ್ದಾರೆ.
ತಮಿಳು ಸೇರಿದಂತೆ ಎಲ್ಲಾ ಪ್ರಾದೇಶಿಕ ಭಾಷೆಗಳನ್ನು ಸಮಾನವಾಗಿ ಪರಿಗಣಿಸಬೇಕು ಮತ್ತು ಕೇಂದ್ರ ಸರ್ಕಾರದ ಅಧಿಕೃತ ಭಾಷೆಯ ಸ್ಥಾನಮಾನವನ್ನು ನೀಡಬೇಕು ಎಂದು ಅವರು ಪ್ರತಿಪಾದಿಸಿದರು.
ಈ ನಡುವೆ ಪಿಎಂಕೆ ಸ್ಥಾಪಕ ಎಸ್.ರಾಮದಾಸ್ ಅವರೂ ಶಾ ಹೇಳಿಕೆಯನ್ನು ಆಕ್ಷೇಪಿಸಿದ್ದಾರೆ. ”ಶಾ ಹೇಳಿಕೆಯು ಹಿಂದಿ ಭಾಷೆಯಲ್ಲಿ ಅವರ ವಿಶ್ವಾಸವನ್ನು ತೋರಿಸುವುದಿಲ್ಲ, ಬದಲಿಗೆ ಹಿಂದಿ ಹೇರುವ ಅವರ ಆಶಯವನ್ನು ಬಹಿರಂಗಗೊಳಿಸಿದೆ. ಹಿಂದಿಯನ್ನು ಹೇರುವ ಪ್ರಯತ್ನಗಳು ಭೂತಕಾಲದಂತೆ ಭವಿಷ್ಯದಲ್ಲಿಯೂ ಯಶಸ್ವಿಯಾಗುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ತಮಿಳುನಾಡು: ನಮ್ಮ ಸಚಿವರನ್ನು ವಜಾ ಮಾಡಲು ನೀವು ಯಾರು?; ರಾಜ್ಯಪಾಲರಿಗೆ ಸ್ಟಾಲಿನ್ ನೇರ ಪ್ರಶ್ನೆ


