HomeUncategorizedತಮಿಳುನಾಡು: ನಮ್ಮ ಸಚಿವರನ್ನು ವಜಾ ಮಾಡಲು ನೀವು ಯಾರು?; ರಾಜ್ಯಪಾಲರಿಗೆ ಸ್ಟಾಲಿನ್ ನೇರ ಪ್ರಶ್ನೆ

ತಮಿಳುನಾಡು: ನಮ್ಮ ಸಚಿವರನ್ನು ವಜಾ ಮಾಡಲು ನೀವು ಯಾರು?; ರಾಜ್ಯಪಾಲರಿಗೆ ಸ್ಟಾಲಿನ್ ನೇರ ಪ್ರಶ್ನೆ

- Advertisement -
- Advertisement -

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ತಮ್ಮ ಶಿಫಾರಸು ಇಲ್ಲದೆ ವಿ ಸೆಂಥಿಲ್ ಬಾಲಾಜಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿದ ರಾಜ್ಯಪಾಲ ಆರ್.ಎನ್.ರವಿ ಅವರ ವಿರುದ್ದ ಗರಂ ಆಗಿದ್ದಾರೆ. ಶುಕ್ರವಾರ ರಾಜ್ಯಪಾಲ ರವಿ ಅವರು, ಸಚಿವ ಸೆಂಥಿಲ್‌ ಬಾಲಾಜಿ ವಜಾ ಆದೇಶ ಪ್ರಕಟಿಸಿದ್ದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಯಿತು. ಸಿಎಂ ಸ್ಟಾಲಿನ್ ಸಮೇತ ತಮಿಳುನಾಡು ಸರ್ಕಾರ ರಾಜ್ಯಪಾಲರ೫ ವಿರುದ್ಧ ಹೇಳಿಕೆ ನೀಡಲು ಆರಂಭಿಸಿದ್ದಾರೆ. ಈಗ ರಾಜ್ಯಪಾಲ ರವಿ ಅವರಿಗೆ ಸ್ಟಾಲಿನ್ ನೇರ ಉತ್ತರ ಕೊಟ್ಟಿದ್ದಾರೆ.

ಸೆಂಥಿಲ್‌ ಬಾಲಾಜಿ ಅವರನ್ನು ಸಂಪುಟದಿಂದ ವಜಾಗೊಳಿಸಿದ್ದ ಆದೇಶವನ್ನ ತಾತ್ಕಾಲಿಕವಾಗಿ ತಡೆಹಿಡಿಯಲು ರಾಜ್ಯಪಾಲ ಆರ್‌.ಎನ್.ರವಿ ನಿರ್ಧಾರ ಮಾಡಿದ್ದಾರೆ. ಆದರೂ ವಿವಾದದ ಕಿಚ್ಚು ಮಾತ್ರ ತಣ್ಣಗಾಗುತ್ತಿಲ್ಲ. ಡಿಎಂಕೆ ಸರ್ಕಾರ ಈಗ ಕಾನೂನು ಹೋರಾಟಕ್ಕೆ ಸಿದ್ಧವಾಗಿದೆ. ಅಲ್ಲದೆ ನೇರವಾಗಿ ರಾಜ್ಯಪಾಲರಿಗೆ ಪತ್ರ ಬರೆದಿರುವ ಸ್ಟಾಲಿನ್ ‘ನಮ್ಮ ಸರ್ಕಾರದ ಸಚಿವರನ್ನು ವಜಾ ಮಾಡಲು ನೀವು ಯಾರು? ಆ ಅಧಿಕಾರ ನಿಮಗೆ ಇಲ್ಲ’ ಎಂದಿದ್ದಾರೆ.

ರಾಜ್ಯಪಾಲರ ನಿರ್ಧಾರದ ಬಗ್ಗೆ ಸ್ವತಃ ಬಿಜೆಪಿಯ ಕೆಲವು ನಾಯಕರಲ್ಲಿ ಅಸಮಾಧಾನ ಮೂಡಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಕರೆ ಮಾಡಿ ಇಂತಹ ನಿರ್ಧಾರ ತಗೆದುಕೊಳ್ಳದಿರುವಂತೆ ತಿಳಿಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೆ ಅಮಿತ್ ಶಾ ಅವರ ಸಲಹೆ ಮೇರೆಗೆ ತಮಿಳುನಾಡು ರಾಜ್ಯಪಾಲ ರವಿ ನಿರ್ಧಾರ ಬದಲಾಯಿಸಿದ್ದು, ತಮ್ಮ ವಜಾ ಆದೇಶವನ್ನು ತಾತ್ಕಾಲಿಕವಾಗಿ ಅಮಾನತು ಮಾಡಿದ್ದಾರೆ. ಆದರೆ ಇದೀಗ ಡಿಎಂಕೆ ಈ ವಿಚಾರವನ್ನೇ ಹಿಡಿದುಕೊಂಡು ಹೋರಾಟ ಸಂಘಟಿಸಲು ಸಿದ್ಧತೆ ನಡೆಸಿದೆ. ಹೀಗಾಗಿ ‘ಸಚಿವರ ನೇಮಕ ಹಾಗೂ ವಜಾಗೊಳಿಸುವುದು ಮುಖ್ಯಮಂತ್ರಿ ವಿವೇಚನಾಧಿಕಾರ’ ಎಂದು ಸ್ಟಾಲಿನ್ ವಾಗ್ದಾಳಿ ನಡೆಸಿದ್ದಾರೆ.

ವಜಾ ಪತ್ರ: ರಾಜ್ಯಪಾಲ ಆರ್.ಎನ್.ರವಿ ಅವರು ಗುರುವಾರ ಸಚಿವ ಬಾಲಾಜಿ ಅವರನ್ನ ಸಂಪುಟದಿಂದ ವಜಾ ಮಾಡಿದ್ದರು. ಜೊತೆಗೆ ರಾಜಭವನದಿಂದ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿ ‘ಬಾಲಾಜಿ ಉದ್ಯೋಗಕ್ಕಾಗಿ ನಗದು ತೆಗೆದುಕೊಳ್ಳುವುದು ಮತ್ತು ಮನಿ ಲಾಂಡರಿಂಗ್ ಸೇರಿ ಹಲವು ಭ್ರಷ್ಟಾಚಾರ ಪ್ರಕರಣಗಳಲ್ಲಿ ಗಂಭೀರ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದು. ಹೀಗಾಗಿ ರಾಜ್ಯಪಾಲರು ತಕ್ಷಣದಿಂದ ಜಾರಿಗೆ ಬರುವಂತೆ ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಸಂಪುಟದಿಂದ ವಜಾ ಮಾಡಿದ್ದಾರೆ’ ಎಂದು ತಿಳಿಸಲಾಗಿತ್ತು.

ಡಿಎಂಕೆ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಈ ತಿಕ್ಕಾಟ ಇದೇ ಮೊದಲೇನಲ್ಲ, ಸರ್ಕಾರ ಅಸ್ತಿತ್ವಕ್ಕೆ ಬಂದ ಕೆಲವು ತಿಂಗಳಲ್ಲಿ ತಿಕ್ಕಾಟ ಶುರುವಾಗಿತ್ತು. ತಮಿಳುನಾಡು ರಾಜ್ಯಪಾಲರು ಹಾಗೂ ತಮಿಳುನಾಡು ಸರ್ಕಾರದ ನಡುವೆ ದೊಡ್ಡ ಸಂಘರ್ಷ ನಡೆಯುತ್ತಿದೆ. ಈ ಮಧ್ಯೆ ಉದ್ಯೋಗಕ್ಕಾಗಿ ನಗದು ತೆಗೆದುಕೊಳ್ಳುವುದು & ಮನಿ ಲಾಂಡರಿಂಗ್ ಸೇರಿ ಹಲವು ಆರೋಪದ ಅಡಿಯಲ್ಲಿ ಸಚಿವ ಸೆಂಥಿಲ್ ಬಾಲಾಜಿ ಬಂಧನವಾಗಿತ್ತು. ಈ ಘಟನೆ ಬಳಿಕ ಸರ್ಕಾರ ಮತ್ತು ರಾಜ್ಯಪಾಲರ ಮಧ್ಯೆ ತಿಕ್ಕಾಟ ಬಲು ಜೋರಾಗಿ ನಡೆಯುತ್ತಿತ್ತು. ಗುರುವಾರ ತಮಿಳುನಾಡು ರಾಜ್ಯಪಾಲರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸಚಿವ ಸೆಂಥಿಲ್ ಬಾಲಾಜಿರನ್ನು ವಜಾ ಮಾಡಿ ಆದೇಶ ಹೊರಡಿಸಿದ್ದರು. ರಾಜ್ಯಪಾಲರ ಕಚೇರಿಯಿಂದ ಅಧಿಕೃತ ಹೇಳಿಕೆ ಕೂಡ ನೀಡಲಾಗಿತ್ತು. ಈಗ ಅದೇ ನಿರ್ಧಾರ ಉಲ್ಟಾ ಆದಂತೆ ಕಾಣುತ್ತಿದೆ.

ಡಿಎಂಕೆ ನಾಯಕರು ತಮಿಳುನಾಡು ರಾಜ್ಯಪಾಲರ ವಿರುದ್ಧ ಕೆಂಡವಾಗಿದ್ದು, ಈ ವಿಚಾರವನ್ನ ನ್ಯಾಯಾಲಯದ ತನಕ ಕೊಂಡೊಯ್ಯಲು ಸಿದ್ಧತೆ ನಡೆಸಿದ್ದಾರೆ. ರಾಜ್ಯಪಾಲ ರವಿ ಅವರು ತೆಗೆದುಕೊಂಡ ಏಕಪಕ್ಷೀಯವಾದ ನಿರ್ಧಾರ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಡಿಎಂಕೆ ನಾಯಕರ ಗಂಭೀರ ಆರೋಪವಾಗಿದೆ. ಹೀಗಾಗಿ ಜಟಾಪಟಿ ಜೋರಾಗಿದ್ದು, ಗಲಾಟೆಗೆ ಮುಂದೆ ವಿಪರೀತವಾಗುವ ಮುನ್ಸೂಚನೆ ಸಿಗುತ್ತಿದೆ.

ಇದನ್ನೂ ಓದಿ: ಸಿಎಂ ಶಿಫಾರಸಿಲ್ಲದೆಯೇ ಸೆಂಥಿಲ್‌ರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದ ಆದೇಶ ವಾಪಸ್ ಪಡೆದ ತಮಿಳುನಾಡು ರಾಜ್ಯಪಾಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read