ಮಹಿಷಾ ದಸರಾ
PC: Suddidina

ಕಳೆದ ಆರು ವರ್ಷದಿಂದ ನಡೆಸಿಕೊಂಡು ಬರುತ್ತಿರುವ ಮಹಿಷಾ ದಸರಾವನ್ನು ಈ ಬಾರಿ ಅಕ್ಟೋಬರ್‌ 15 ರಂದು ಮಾಡುತ್ತೇವೆ, ತಾಕತ್ತಿದ್ದರೆ ತಡೆಯಲಿ ಎಂದು ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಎಲ್. ನಾಗೇಂದ್ರ ಅವರಿಗೆ ದಲಿತ ವೆಲ್ಫೇರ್ ಟ್ರಸ್ಟ್ ವತಿಯಿಂದ ಮೈಸೂರಲ್ಲಿ ನಡೆದ ಪ್ರತ್ರಿಕಾಗೋಷ್ಠಿಯಲ್ಲಿ ಪ್ರಗತಿಪರ ಹೋರಾಟಗಾರರು ಸವಾಲು ಹಾಕಿದ್ದಾರೆ.

ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಪ್ರೊ. ಮಹೇಶ್ ಚಂದ್ರಗುರು “ಮೈಸೂರು ದಸರಾಗಿಂತ ಆಚರಣೆ ಮಾಡಬೇಕಾಗಿರುವುದು ಮಹಿಷಾ ದಸರಾ. ಇದನ್ನು ವಿರೋಧಿಸುವವರು ಕಂತ್ರಿಗಳು, ಸಂವಿಧಾನ ವಿರೋಧಿಗಳು, ಮೂಲ ನಿವಾಸಿಗಳ ವಿರೋಧಿಗಳು ಹಾಗೂ ಪ್ರಜಾಪ್ರಭುತ್ವ ವಿರೋಧಿಗಳು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಮಹಿಷಾ ದಸರಾ,’ ಮರೆತ ಇತಿಹಾಸದ ಮರುಶೋಧ: ಡಾ.ಎಚ್.ಡಿ ಉಮಾಶಂಕರ್‌

ನಾವು ಎಲ್ಲರೂ ಮರೆತಿರುವ ಚರಿತ್ರೆಯನ್ನು ನೆನಪಿಸಿಕೊಳ್ಳಲು ಈ ಮಹಿಷ ದಸರಾ ಆಚರಿಸುತ್ತಿದ್ದೇವೆ. ನಾವು ದೇಶದ ಮೂಲ ನಿವಾಸಿಗಳು. ಇಂದು ನಮ್ಮನ್ನು ಆಳುತ್ತಿರುವವರು ಮೂಲ ನಿವಾಸಿಗಳ ವಿರೋಧಿಗಳು. ಸರ್ಕಾರ ಮಹಿಷ ದಸರಾ ಆಚರಣೆಗೆ ಅಡ್ಡಿ ಮಾಡಬಾರದು ಎಂದು ಕೈ ಮುಗಿದು ಬೇಡುವುದಿಲ್ಲ, ಆದರೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದು ಪ್ರೊ. ಮಹೇಶ್ ಚಂದ್ರಗುರು ಹೇಳಿದ್ದಾರೆ.

ನಿಜದನಿ ದಿನಪತ್ರಿಕೆಯ ಸಂಪಾದಕ ಹಾಗೂ ಕರ್ನಾಟಕ ದಲಿತ ವೆಲ್ಫೇರ್‌ ಅಧ್ಯಕ್ಷರೂ ಆಗಿರುವ ಶಾಂತರಾಜು ಅವರು ನಾನುಗೌರಿ.ಕಾಂ ಜೊತೆ ಮಾತನಾಡಿ, “ನಾವು ಮಹಿಷಾ ದಸರವನ್ನು 2016 ರಿಂದಲೂ ಆಚರಿಸಿಕೊಂಡು ಬರುತ್ತಿದ್ದೇವೆ, ಯಾವುದೆ ರೀತಿಯ ಗೊಂದಲ ಸೃಷ್ಟಿಯಾಗಿರಲಿಲ್ಲ. ಆದರೆ ಕಳೆದ ಬಾರಿ ಸಂಸದ ಪ್ರತಾಪ್ ಸಿಂಹ ಅವರಿಂದಾಗಿ ದಿಡೀರನೆ ಗೊಂದಲ ಉಂಟಾಯಿತು. ಈ ಗೊಂದಲದ ನಡುವೆಯು ನಾವು ಆಚರಣೆ ಮಾಡಿದ್ದೇವೆ. ಅದಲ್ಲದೆ ಈ ಗೊಂದಲದ ನಂತರ ತೆಗೆದುಕೊಂಡ ತೀರ್ಮಾನದಂತೆ ಪ್ರತಿ ತಿಂಗಳು ಅಮವಾಸ್ಯೆಯ ಹಿಂದಿನ ದಿನ ಮಹಿಷಾನಿಗೆ ಪುಷ್ಪಾರ್ಚಣೆ ಮಾಡಿಕೊಂಡು ಬರುತ್ತಿದ್ದೇವೆ” ಎಂದು ಹೇಳಿದರು.

“ಮಹಿಷಾ ಸಾಮಾಜಿಕವಾಗಿ ಸಮಾನತೆಗೋಸ್ಕರ ಹೋರಾಟ ಮಾಡಿದ ವ್ಯಕ್ತಿಯಾಗಿದ್ದಾನೆ. ಆದ್ದರಿಂದಲೇ ಮೈಸೂರಿಗೆ ಮಹಿಷಾ ಮಂಡಲ, ಮಹಿಷಾಪುರ ಮುಂತಾದ ಹೆಸರು ಬಂದಿದೆ. ಮನುವಾದಿಗಳು ಸಾಮಾಜಿಕ ಸಮಾನತೆಗೆ ಹೋರಾಟ ಮಾಡಿದವರನ್ನು ರಾಕ್ಷಸರು ಎಂದು ಕರೆಯುತ್ತಾರೆ. ಇವತ್ತಿಗೂ ತಮಿಳುನಾಡಿನಿಂದ ಪ್ರತಿವರ್ಷ ಒಂದು ಗುಂಪು ಬಂದು ಮಹಿಷಾನಿಗೆ ಪೂಜೆ ಮಾಡಿ ಊಟ ಮಾಡಿಕೊಂಡು ಹೋಗುತ್ತಾರೆ, ಇವೆಲ್ಲವು ಗೊತ್ತಿರುವಂತಹ ವಿಚಾರ. ಪ್ರತಿ ವರ್ಷದಂತೆ ನಾವು ಈ ಬಾರಿಯು ಅಕ್ಟೋಬರ್ 15 ರಂದು ಮಹಿಷಾ ದಸರಾ ಆಚರಿಸುತ್ತೇವೆ” ಎಂದು ಶಾಂತರಾಜು ಹೇಳಿದ್ದಾರೆ.


ಇದನ್ನೂ ಓದಿ: ಮೂಲನಿವಾಸಿಗಳ ’ಮಹಿಷ ದಸರಾ’ದ ಇತಿಹಾಸ- ಪ್ರೊ.ಬಿ.ಪಿ.ಮಹೇಶ ಚಂದ್ರ ಗುರು

LEAVE A REPLY

Please enter your comment!
Please enter your name here