ಇದೇ ಮೊದಲ ಬಾರಿಗೆ ಸಾಮಾಜಿಕ ಮಾದ್ಯಮ ವೇದಿಕೆ ಎಕ್ಸ್ (X) ಭಾರತ ಸರಕಾರ ನಿರ್ದಿಷ್ಟ ಖಾತೆಗಳು ಮತ್ತು ಪೋಸ್ಟ್‌ಗಳನ್ನು ಭಾರತದಲ್ಲಿ ತಡೆಹಿಡಿಯಲು ಎಕ್ಸ್‌ಗೆ ಆದೇಶಗಳನ್ನು ಹೊರಡಿಸಿದೆ ಎಂದು ಸಾರ್ವಜನಿಕವಾಗಿ ಹೇಳಿಕೊಂಡಿದ್ದು, ಬಿಜೆಪಿ ಸರಕಾರದ ವಿರುದ್ಧದ ಧ್ವನಿಗಳನ್ನು ಹತ್ತಿಕ್ಕಲಾಗುತ್ತದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಮತ್ತೆ ಪುಷ್ಠಿ ಸಿಕ್ಕಂತಾಗಿದೆ.
ಈ ಹಿಂದೆ ಟ್ವಿಟರ್ ಎಂದು ಕರೆಯಲ್ಪಡುತ್ತಿದ್ದ ಸಾಮಾಜಿಕ ಮಾದ್ಯಮ ವೇದಿಕೆ ಎಕ್ಸ್ (X)ನ ಜಾಗತಿಕ ಸರ್ಕಾರಿ ವ್ಯವಹಾರಗಳ ಪುಟವು( Global Government Affairs page ) ನರೇಂದ್ರ ಮೋದಿ ಸರ್ಕಾರವು ನಿರ್ದಿಷ್ಟ ಖಾತೆಗಳು ಮತ್ತು ಪೋಸ್ಟ್‌ಗಳನ್ನು ತಡೆಹಿಡಿಯಲು ಎಕ್ಸ್‌ಗೆ ಆದೇಶಗಳನ್ನು ಹೊರಡಿಸಿದೆ, ಇದನ್ನು ಮಾಡಲು ವಿಫಲವಾದರೆ ಅಧಿಕಾರಿಗಳಿಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದೆ ಎಂದು ಹೇಳಿಕೊಂಡಿದೆ.
ಭಾರತೀಯ ಸರ್ಕಾರವು ಎಕ್ಸ್‌ಗೆ ನಿರ್ದಿಷ್ಟ ಖಾತೆಗಳು ಮತ್ತು ಪೋಸ್ಟ್‌ಗಳನ್ನು ತೆಗೆದುಹಾಕಲು, ನಿರ್ಬಂಧಿಸಲು ಆದೇಶಗಳನ್ನು ಹೊರಡಿಸಿದೆ, ತಪ್ಪಿದ್ದಲ್ಲಿ ಗಮನಾರ್ಹ ದಂಡಗಳು ಮತ್ತು ಜೈಲುವಾಸ ಸೇರಿದಂತೆ ಶಿಕ್ಷೆಯ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಹೇಳಿದೆ. ಆದೇಶಗಳ ಅನುಸರಣೆಯ ಭಾಗವಾಗಿ, ನಾವು ಭಾರತದಲ್ಲಿ ಮಾತ್ರ ಈ ಖಾತೆಗಳು ಮತ್ತು ಪೋಸ್ಟ್‌ಗಳನ್ನು ತಡೆಹಿಡಿಯುತ್ತೇವೆ, ಆದರೆ ನಾವು ಈ ಕ್ರಮಗಳನ್ನು ಒಪ್ಪುವುದಿಲ್ಲ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವಿಸ್ತರಿಸಬೇಕು ಎಂದು ಎಕ್ಸ್ ಹೇಳಿಕೊಂಡಿದೆ.
ಭಾರತ ಸರ್ಕಾರದ ಆದೇಶಗಳು ಎಕ್ಸ್‌ಗೆ ಕಾನೂನು ನಿರ್ಬಂಧಗಳು ಅಡೆತಡೆಗಳನ್ನು ಉಂಟುಮಾಡುತ್ತವೆ ಎಂದು ಅದು ಹೇಳಿದೆ. ಪಾರದರ್ಶಕತೆಗಾಗಿ ನಿರ್ಬಂಧಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದು ಅತ್ಯಗತ್ಯ ಎಂದು ನಾವು ನಂಬುತ್ತೇವೆ. ಇಲ್ಲದಿದ್ದರೆ ಇದು ಹೊಣೆಗಾರಿಕೆಯ ಕೊರತೆ ಮತ್ತು ಅನಿಯಂತ್ರಿತ ನಿರ್ಧಾರಕ್ಕೆ ಕಾರಣವಾಗಬಹುದು ಎಂದು ಎಕ್ಸ್ ಹೇಳಿದೆ.
ನಮ್ಮ ನಿಲುವಿಗೆ ಅನುಗುಣವಾಗಿ, ಭಾರತ ಸರ್ಕಾರದ ಆದೇಶಗಳನ್ನು ಪ್ರಶ್ನಿಸುವ ರಿಟ್ ಮೇಲ್ಮನವಿಯು ಬಾಕಿ ಉಳಿದಿದೆ. ನಮ್ಮ ನೀತಿಗಳಿಗೆ ಅನುಸಾರವಾಗಿ ಈ ಸೂಚನೆಯನ್ನು ನಾವು ಬಳಕೆದಾರರಿಗೆ ಒದಗಿಸಿದ್ದೇವೆ ಎಂದು ಎಕ್ಸ್ ಹೇಳಿಕೊಂಡಿದೆ.
ಈ ಹಿಂದೆ ಟ್ವಿಟರ್ ಎಂದು ಕರೆಯಲ್ಪಡುತ್ತಿದ್ದ ಎಕ್ಸ್‌ನ ಮಾಲಿಕತ್ವವನ್ನು ಎಲೋನ್ ಮಸ್ಕ್ ವಹಿಸಿಕೊಂಡ ನಂತರ ಪ್ರತಿಪಕ್ಷದ ನಾಯಕರುಗಳು, ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಮತ್ತು ಸರಕಾರದ ವಿರುದ್ಧ ಪೋಸ್ಟ್ ಹಾಕುವವರನ್ನು ಎಕ್ಸ್ ನಿರ್ಬಂಧಿಸುತ್ತದೆ ಎಂಬ ಆರೋಪದ ನಡುವೆ, ಖಾತೆಗಳನ್ನು ತಡೆಹಿಡಿಯುವಂತೆ ಕೇಳುವ ಭಾರತೀಯ ಸರ್ಕಾರದ ಆದೇಶದ ಕುರಿತು ಎಕ್ಸ್ ಅಧಿಕೃತವಾಗಿ ಮಾತನಾಡಿರುವುದು ಇದೇ ಮೊದಲಾಗಿದೆ.
‘ದೆಹಲಿ ಚಲೋ’ ಪ್ರತಿಭಟನೆಗೆ ಮುಂಚಿತವಾಗಿ ರೈತ ಸಂಘಟನೆಗಳು ಮತ್ತು ಒಕ್ಕೂಟಗಳ ಅಧಿಕೃತ ಪುಟಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಎಕ್ಸ್‌ನಲ್ಲಿನ ಹನ್ನೆರಡು ಖಾತೆಗಳನ್ನು ಭಾರತದಲ್ಲಿ ತಡೆಹಿಡಿಯಲಾಗಿದೆ ಎಂಬ ಕಳವಳದ ಬೆನ್ನಲ್ಲಿ ಈ ಬೆಳವಣಿಗೆ ನಡೆದಿದೆ. ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ರೈತರ ಎಕ್ಸ್ ಖಾತೆಗಳನ್ನು ನಿರ್ಬಂಧಿಸುವಂತೆ ಸೂಚಿಸಿತ್ತು.
ಇದನ್ನು ಓದಿ: ಬಲಪಂಥೀಯ ವಿದ್ಯಾರ್ಥಿಗಳ ಸಂಭ್ರಮಾಚರಣೆಗೆ ವಿರೋಧಿಸಿ ಸ್ಟೇಟಸ್ ಪೋಸ್ಟ್ ಮಾಡಿದ್ದ IIPS ವಿದ್ಯಾರ್ಥಿಯ ಬಂಧನ


