Homeಮುಖಪುಟಶ್ವೇತಪತ್ರದಲ್ಲಿ ಆದರ್ಶ್ ಹಗರಣ ಉಲ್ಲೇಖಿಸಿದ್ದಕ್ಕೆ ಹೆದರಿ ಕಾಂಗ್ರೆಸ್ ತೊರೆದ ಚವಾಣ್: ಶರದ್ ಪವಾರ್

ಶ್ವೇತಪತ್ರದಲ್ಲಿ ಆದರ್ಶ್ ಹಗರಣ ಉಲ್ಲೇಖಿಸಿದ್ದಕ್ಕೆ ಹೆದರಿ ಕಾಂಗ್ರೆಸ್ ತೊರೆದ ಚವಾಣ್: ಶರದ್ ಪವಾರ್

- Advertisement -
- Advertisement -

ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿದ ಶ್ವೇತಪತ್ರದಲ್ಲಿ ಆದರ್ಶ್ ಹೌಸಿಂಗ್ ಸೊಸೈಟಿ ಹಗರಣವನ್ನು ಪ್ರಸ್ತಾಪಿಸಿದ್ದಕ್ಕೆ ಹೆದರಿ ಅಶೋಕ್ ಚವಾಣ್ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದಾರೆ ಎಂದು ಎನ್‌ಸಿಪಿ-ಶರದ್ಚಂದ್ರ ಪವಾರ್ ಮುಖ್ಯಸ್ಥ ಶರದ್ ಪವಾರ್ ಅವರು ಬುಧವಾರ ಹೇಳಿದ್ದಾರೆ.

ಕಳೆದ ವಾರವಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಅಶೋಕ್ ಚವಾಣ್ ಈ ಆರೋಪವನ್ನು ಅಲ್ಲಗಳೆದಿದ್ದಾರೆ.

ಅಶೋಕ್ ಚವಾಣ್ ಆದರ್ಶ್ ಹೌಸಿಂಗ್ ಸೊಸೈಟಿ ಹಗರಣ ಪ್ರಕರಣದ ಆರೋಪಿಯಾಗಿದ್ದಾರೆ. ದಕ್ಷಿಣ ಮುಂಬೈನಲ್ಲಿದ್ದ ರಕ್ಷಣಾ ಸಚಿವಾಲಯದ ಒಡೆತನದ ಭೂಮಿಯಲ್ಲಿ ಯಾವುದೇ ಅನುಮತಿ ಪಡೆಯದೆ
31 ಅಂತಸ್ತಿನ ಐಷಾರಾಮಿ ಕಟ್ಟಡ ನಿರ್ಮಿಸಿದ ಆರೋಪ ಅವರ ಮೇಲಿದೆ. ಈ ಹಗರಣವು 2010ರಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಸ್ಥಾನಕ್ಕೆ ಚವಾಣ್ ರಾಜೀನಾಮೆ ನೀಡಲು ಕಾರಣವಾಗಿತ್ತು.

ಕೊಲ್ಲಾಪುರದಲ್ಲಿ, ಕಾಂಗ್ರೆಸ್‌ನಿಂದ ಚವಾಣ್ ನಿರ್ಗಮನದ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪವಾರ್, ಈ ಬೆಳವಣಿಗೆ ಎಲ್ಲರಿಗೂ ಆಶ್ಚರ್ಯವಾಗಿದ್ದರೂ, ವೈಯಕ್ತಿಕವಾಗಿ ನನಗೆ ಆಶ್ಚರ್ಯವಾಗಿಲ್ಲ ಎಂದಿದ್ದಾರೆ.

“ಕೇಂದ್ರದ ಬಿಜೆಪಿ ಸರ್ಕಾರ ಕಳೆದ 10 ವರ್ಷಗಳ ತನ್ನ ಸಾಧನೆ ಮತ್ತು ವಿರೋಧ ಪಕ್ಷದ ಬಗ್ಗೆ ಅವರ ಅಭಿಪ್ರಾಯಗಳ ಕುರಿತು ಶ್ವೇತಪತ್ರ ಮಂಡಿಸಿತ್ತು. ಆ ಶ್ವೇತಪತ್ರದಲ್ಲಿ ಆದರ್ಶ್ ಹೌಸಿಂಗ್ ಸೊಸೈಟಿ ಮತ್ತು ಅಶೋಕ್ ಚವಾಣ್ ಅವರ ಉಲ್ಲೇಖವಿತ್ತು. ಇದು ಒಂದು ರೀತಿಯ ಬೆದರಿಕೆಯಾಗಿರಬಹುದು ಎಂದು ನಾವು ಊಹಿಸಿದ್ದೆವು. ಚವಾಣ್ ಅವರು ಕಾಂಗ್ರೆಸ್ ತೊರೆದಿರುವುದು ಆ ಬೆದರಿಕೆಯ ಪರಿಣಾಮವಾಗಿದೆ” ಎಂದು ಶರದ್ ಪವಾರ್ ಹೇಳಿದ್ದಾರೆ.

ಕಾಂಗ್ರೆಸ್‌ನಲ್ಲಿ ಎನ್‌ಸಿಪಿ ವಿಲೀನವಿಲ್ಲ

ಕಾಂಗ್ರೆಸ್‌ನೊಂದಿಗೆ ಎನ್‌ಸಿಪಿ ವಿಲೀನದ ವರದಿಗಳನ್ನು ತಳ್ಳಿ ಹಾಕಿದ ಪವಾರ್, “ನಾವಿಬ್ಬರೂ (ಕಾಂಗ್ರೆಸ್ ಮತ್ತು ಎನ್‌ಸಿಪಿ) ಒಟ್ಟಿಗೆ ಕೆಲಸ ಮಾಡುತ್ತೇವೆ. ನಾವು, ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ಕಾಂಗ್ರೆಸ್ ಈಗ ಪ್ರತ್ಯೇಕವಾಗಿಲ್ಲ. ಹೆಚ್ಚಿನ ಸಮಯ ನಾವು ಒಟ್ಟಿಗೆ ಕುಳಿತು ಚರ್ಚಿಸುತ್ತೇವೆ. ಅದರ ಅರ್ಥ ವಿಲೀನ ಎಂದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಬ್ಯಾಂಕ್ ಖಾತೆಗಳಿಂದ ₹65 ಕೋಟಿ ಕಡಿತಗೊಳಿಸಲು ಐಟಿ ಇಲಾಖೆ ಸೂಚನೆ: ಅಜಯ್ ಮಾಕನ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read