Homeಚಳವಳಿನಾವು ಭಾರತೀಯರು ವೇದಿಕೆಯಿಂದ ಭಾರತ ಉಳಿಸಿ ಆಂದೋಲನ

ನಾವು ಭಾರತೀಯರು ವೇದಿಕೆಯಿಂದ ಭಾರತ ಉಳಿಸಿ ಆಂದೋಲನ

ಹಲವು ಹಕ್ಕೊತ್ತಾಯಗಳ ಈಡೇರಿಕೆಗೆ ಒತ್ತಾಯಿಸಿ ಬೃಹತ್ ಸಹಿ ಸಂಗ್ರಹಕ್ಕೆ ಮುಂದಾಗಿರುವ ವೇದಿಕೆಯು ಒಂದು ಲಕ್ಷ ಸಹಿ ಸಂಗ್ರಹಿಸುವ ಗುರಿ ಹೊಂದಿದೆ.

- Advertisement -
- Advertisement -

‘ದೇಶದ ಮರುನಿರ್ಮಾಣ – ಸಂವಿಧಾನದ ಅನುಷ್ಠಾನ’ ಘೋಷಣೆಯಡಿಯಲ್ಲಿ ನಾವು ಭಾರತೀಯರು ವೇದಿಕೆಯು ಭಾರತ ಉಳಿಸಿ ಆಂದೋಲನಕ್ಕೆ ಕರೆ ನೀಡಿದೆ. ಪ್ರಸ್ತುತ ಕೊರೊನಾ ಬಿಕ್ಕಟ್ಟು, ಆರ್ಥಿಕ ಸಮಸ್ಯೆ, ಸರ್ಕಾರದ ಏಕಮುಖ ನಿಲುವುಗಳಿಗೆ ಸಂಬಂಧಿಸಿದಂತೆ ತುರ್ತಾಗಿ ಗಮನ ಹರಿಸಬೇಕೆಂದು ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆಯಲಾಗಿದೆ. ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ವಿರೋಧಿ ಆಂದೋಲನದಲ್ಲಿ ಸಕ್ರಿಯವಾಗಿದ್ದ ವಿವಿಧ ಸಂಘಟನೆಗಳು ಹಾಗೂ ಸಕ್ರಿಯ ವ್ಯಕ್ತಿಗಳೆಲ್ಲರೂ ಸೇರಿ ಮಾಡಿಕೊಂಡಿರುವ ವೇದಿಕೆಯೇ ‘ನಾವು ಭಾರತೀಯರು’ ಆಗಿದೆ.

ಅದರ ವತಿಯಿಂದ ಈಗಾಗಲೇ ಚೀನಾ ಜೊತೆ ಸಂಘರ್ಷದಲ್ಲಿ ಮೃತರಾದ ಯೋಧರಿಗೆ, ಲಾಕ್‌ಡೌನ್‌ನಿಂದ ಜೀವ ಕಳೆದುಕೊಂಡ ವಲಸೆ ಕಾರ್ಮಿಕರಿಗೆ ಮತ್ತು ಕೊರೊನಾದಿಂದ ತೀರಿಕೊಂಡ ರೋಗಿಗಳಿಗೆ ಶ್ರದ್ಧಾಂಜಲಿ ಅರ್ಪಿಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆಗಸ್ಟ್‌ 9ರ ಕ್ವಿಟ್ ಇಂಡಿಯಾ ನೆನಪಿನಲ್ಲಿ ಸೇವ್ ಇಂಡಿಯಾ ಕಾರ್ಯಕ್ರಮವನ್ನು ಆಗಸ್ಟ್‌ 10ರಂದು ನಡೆಸಲಾಗುತ್ತಿದೆ ಎಂದು ಸಂಚಾಲಕರಲ್ಲೊಬ್ಬರಾದ ರಾಜಶೇಖರ್ ಅಕ್ಕಿ ತಿಳಿಸಿದ್ದಾರೆ. ರಾಜ್ಯದ ವಿವಿಧ ರೈತ, ದಲಿತ, ಪ್ರಗತಿಪರ, ಮುಸ್ಲಿಂ ಸಂಘಟನೆಗಳು ವೇದಿಕೆಯ ಭಾಗವಾಗಿದ್ದಾರೆಂದು ಅವರು ನುಡಿದರು.

ಇದೀಗ ಇನ್ನೈದು ದಿನಗಳಲ್ಲಿ ರಾಜ್ಯದ 1 ಲಕ್ಷ ಪ್ರಜ್ಞಾವಂತರ ಸಹಿ ಸಂಗ್ರಹದ ಮೂಲಕ ದೇಶದ ಆರ್ಥಿಕ ಸ್ಥಿತಿ ಸುಧಾರಣೆ ಮತ್ತು ಸಂವಿಧಾನದ ಸರಿ ಅನುಷ್ಟಾನಕ್ಕಾಗಿ ಆಗ್ರಹಿಸಲಾಗುತ್ತಿದೆ ಎಂದು ಸಂಚಾಲಕ ನಯೀಂ ಅವರು ನಾನುಗೌರಿ.ಕಾಂ ಜೊತೆಗೆ ಮಾತನಾಡಿ ತಿಳಿಸಿದರು.

ರಾಷ್ಟ್ರಪತಿಗಳಿಗೆ ಸಲ್ಲಿಸಲಾಗುವ ಮನವಿಯ ಪೂರ್ಣ ಪಾಠ ಕೆಳಗಿನಂತಿದ್ದು, ಸಹಿ ಸಂಗ್ರಹ ಮಾಡಬಯಸುವವರು ಈ ಕೆಳಗಿನ ಲಿಂಕನ್ನು ಬಳಸಿ ಎಂದು ಅವರು ಕೋರಿದ್ದಾರೆ.

ಸಹಿ ಮಾಡಲು ಕೋರಿರುವ ಲಿಂಕ್

 

‘ಇದು ತಮ್ಮ ಕಚೇರಿಗೆ ಪ್ರತಿದಿನವೂ ಬರುವ ಅನೇಕಾನೇಕ ಮನವಿ ಪತ್ರಗಳಂತಹದೇ ಮತ್ತೊಂದು ಮಾಮೂಲಿ ಮನವಿ ಪತ್ರವಲ್ಲ. ಈ ದೇಶದ ಜನಸಾಮಾನ್ಯರು ಬೇರಾವ ಮಾರ್ಗಗಳೂ ಇಲ್ಲದೇ ನೇರವಾಗಿ ತಮ್ಮ ಮುಂದಿಡುತ್ತಿರುವ ಮೊರೆ ಇದು. ನಮ್ಮದೇ ಸರ್ಕಾರವು ಜನತೆಯ ಹಕ್ಕುಗಳನ್ನು ಒಂದೇ ಸಮನೆ ಮೊಟಕುಗೊಳಿಸುತ್ತಿರುವುದಕ್ಕೆ ಕೊನೆ ಹಾಡಬೇಕೆಂದು ನಾವು ಆಗ್ರಹಿಸುತ್ತಿದ್ದೇವೆ’ ಎಂದು ವೇದಿಕೆ ತಿಳಿಸಿದೆ.

ಈ ಸಮಸ್ಯೆಗಳನ್ನು ಸರಿಪಡಿಸಲು ಕೂಡಲೇ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ನಾವು ಪ್ರೀತಿಸುವ, ಗೌರವಿಸುವ ಈ ದೇಶವು ಒಂದು ದೇಶವಾಗಿ ಉಳಿಯುವುದಿಲ್ಲವೆಂಬ ಭಯ ನಮ್ಮೆಲ್ಲರನ್ನೂ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಆರೋಗ್ಯದ ಬಿಕ್ಕಟ್ಟಿನ ನಡುವೆ, ಪುನಶ್ಚೇತನದ ಯಾವುದೇ ಖಚಿತವಾದ ಯೋಜನೆಯಿಲ್ಲದೆ ಹೇರಿದ ದಿಢೀರ್ ಲಾಕ್‌ಡೌನ್‌ನಿಂದಾಗಿ ದೇಶದ ಅರ್ಥ ವ್ಯವಸ್ಥೆ ಸಂಪೂರ್ಣವಾಗಿ ನೆಲಕಚ್ಚಿದೆ. ಮೊದಲೇ ಇದ್ದ 12 ಕೋಟಿ ನಿರುದ್ಯೋಗಿಗಳ ಜೊತೆಗೆ, ಮಹಾ ಪಿಡುಗಿನ ಫಲವಾಗಿ ಮತ್ತೆ 14 ಕೋಟಿ ಉದ್ಯೋಗಗಳು ನಷ್ಟವಾದವು. ದೇಶದ ಶೇ.77 ಭಾಗ ಸಂಪತ್ತು ಕೇವಲ 10% ಸಿರಿವಂತರ ಕೈಯಲ್ಲಿರುವಾಗ, ಬಡಜನರ ಪಾಲಿಗೆ ಬಂದೆರಗಿದ ಈ ಪ್ರಮಾಣದ ಹೆಚ್ಚುವರಿ ಉದ್ಯೋಗ ನಷ್ಟವು ಅಸಮಾನತೆಯನ್ನು ಹಲವಾರು ಪಟ್ಟು ಹೆಚ್ಚಿಸಿದೆ.  ಉದ್ಯೋಗದ ಪ್ರಶ್ನೆಯು ಭೀಕರವಾಗಿ ಕಾಡುತ್ತಿರುವಾಗಲೇ ಸರ್ಕಾರವು ಕೆಲವು ಸೂಕ್ಷ್ಮವಲಯಗಳನ್ನು ಹೊರತುಪಡಿಸಿ, ಮಿಕ್ಕಂತೆ ಎಲ್ಲಾ ಸಾರ್ವಜನಿಕ ಕ್ಷೇತ್ರದ ಕಂಪನಿಗಳನ್ನೂ ಖಾಸಗೀಕರಣಗೊಳಿಸುವ ತೀರ್ಮಾನವನ್ನು ಘೋಷಿಸಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಭಾರೀ ಸುದ್ದಿಯೊಂದಿಗೆ ಘೋಷಿಸಲಾದ, 20 ಲಕ್ಷ ಕೋಟಿ ರೂಪಾಯಿಯ ಪ್ಯಾಕೇಜು ದೊಡ್ಡ ಮೋಸವಾಗಿತ್ತು. ನಗದು ಚಲಾವಣೆ, ಸಾಲ ಇತ್ಯಾದಿ ಕ್ರಮಗಳನ್ನೂ, ಹೇಗೂ ನೀಡಲಾಗುತ್ತಿದ್ದ ಹಣಕಾಸಿನ ನೆರವನ್ನೂ ಒಟ್ಟು ಸೇರಿಸಿ ಅಂಕೆ-ಸಂಖ್ಯೆಗಳನ್ನು ಜೋಡಿಸಿದ ಪ್ಯಾಕೇಜ್ ಅದು. ಅದರ ಅತೀ ಕಡಿಮೆ ಭಾಗವಾಗಿದ್ದ ನೇರ ನಗದು ವರ್ಗಾವಣೆಯೂ ಪೂರ್ಣವಾಗಿ ಜಾರಿಯಾಗಲಿಲ್ಲ. ಸರ್ಕಾರ ಇನ್ನೊಂದು ಪ್ಯಾಕೇಜು ಪ್ರಕಟಿಸಲಿಕ್ಕಾಗಲಿ, ತೀರಾ ಅತಂತ್ರ ಸ್ಥಿತಿಯಲ್ಲಿರುವವರನ್ನು ರಕ್ಷಿಸುವುದಕ್ಕಾಗಲಿ ಆಸಕ್ತಿ ತೋರಿಸುತ್ತಿಲ್ಲ ಎಂದು ದೂರಲಾಗಿದೆ.

‘ರೈತರ (ಸಬಲೀಕರಣ ಮತ್ತು ರಕ್ಷಣೆ) ಒಡಂಬಡಿಕೆ ಹಾಗೂ ಬೆಲೆ ಖಾತ್ರಿ ಮತ್ತು ಕೃಷಿ ಸೇವೆಗಳ ಸುಗ್ರೀವಾಜ್ಞೆ 2020’ನ್ನೂ ಜಾರಿಗೊಳಿಸಲಾಗಿದೆ. ಅಸಂಖ್ಯಾತ ರೈತರನ್ನು ಜಮೀನಿನಿಂದ ಹೊರಗಟ್ಟುವಂತಹ ಅವಕಾಶಗಳನ್ನು ಒಳಗೊಂಡ ಅಪಾಯಕಾರಿ ಕಾಂಟ್ರಾಕ್ಟ್ ಫಾರ್ಮಿಂಗ್ಗೆ ಇದು ದಾರಿ ಮಾಡಿಕೊಡುತ್ತದೆ. ಇನ್ನು ಕೆಲವೇ ದಿನಗಳಲ್ಲಿ, ನೆಪಮಾತ್ರದ ‘ಚರ್ಚೆ ಮತ್ತು ಸಮಾಲೋಚನೆ’ಯ ಪ್ರಹಸನ ಮುಗಿದೊಡನೆ ಸರ್ಕಾರವು ಜಾರಿಗೊಳಿಸುವುದು ಖಾತ್ರಿಯಾಗಿರುವ ‘ಪರಿಸರ ಪರಿಣಾಮಗಳ ಮೌಲ್ಯಮಾಪನದ ಕರಡು ಆದೇಶ 2020’ ಮುಂದಿನ ದಿನಗಳಲ್ಲಿ ಪರಿಸರ ಸಂರಕ್ಷಣೆಯ ಎಲ್ಲ ಪ್ರಯತ್ನಗಳಿಗೆ, ಕಾಳಜಿಗಳಿಗೆ ಮಾರಕ ಹೊಡೆತ ನೀಡಲಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಬರಲಿರುವ ‘ಹೊಸ ಶಿಕ್ಷಣ ನೀತಿ’ಯು ಶಿಕ್ಷಣದ ಸುಧಾರಣೆ ಹೆಸರಿನಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಖಾಸಗೀಕರಣಕ್ಕೆ ಒಳಪಡಿಸಿ ಬಡವರಿಗೆ ಹಗಲುಗನಸು ಮಾಡುವ ಹುನ್ನಾರ ಹೊಂದಿದೆ. ಎಲ್ಲ ಪರಿಸ್ಥಿತಿಯಲ್ಲಿ ಈ ಸಲದ `ಕ್ವಿಟ್ ಇಂಡಿಯಾ’ ದಿನವನ್ನು `ದೇಶದ ಮರುನಿರ್ಮಾಣ – ಸಂವಿಧಾನದ ಅನುಷ್ಠಾನ’ ಎಂಬ ಘೋಷಣೆಯಡಿ `ಭಾರತ ಉಳಿಸಿ’ ದಿನವಾಗಿ ಆಚರಿಸುವ ಮೂಲಕ ನಮ್ಮ ಕಳಕಳಿಗಳನ್ನು ಮತ್ತೊಮ್ಮೆ ದೇಶವ್ಯಾಪಿ ಸಾರ್ವಜನಿಕವಾಗಿ ದಾಖಲಿಸುವುದರ ಹೊರತು ಬೇರೆ ದಾರಿಯಿಲ್ಲವಾಗಿದೆ ಎಂದು ಸವಿಸ್ತಾರ ಪತ್ರದಲ್ಲಿ ಬರೆಯಲಾಗಿದೆ.

ಹಕ್ಕೊತ್ತಾಯಗಳು

1. ಸಕಲರಿಗೂ ಸಮಾನ ವೈದ್ಯಕೀಯ ನೆರವನ್ನು ಒದಗಿಸುವ ಹೊಣೆಯನ್ನು ಸರ್ಕಾರ ವಹಿಸಿಕೊಳ್ಳಬೇಕು. ಇಡೀ ಆರೋಗ್ಯ ವ್ಯವಸ್ಥೆಯನ್ನು ತುರ್ತು ಪುನಶ್ಚೇತನಗೊಳಿಸಿ ಸರ್ಕಾರದ ಮೇಲ್ವಿಚಾರಣೆಗೆ ಒಳಪಡಿಸಬೇಕು. ಬಳಸದೇ ಇರುವ ಸುಸ್ಥಿತಿಯಲ್ಲಿರುವ ಸರ್ಕಾರೀ ಕಟ್ಟಡಗಳು ಮತ್ತು ಖಾಸಗಿ ಕಟ್ಟಡಗಳನ್ನು ಆಸ್ಪತ್ರೆಗಳಾಗಿ ಬದಲಿಸಿ ಅಲ್ಲಿ ಚಿಕಿತ್ಸೆಗೆ ಬೇಕಾದ ವ್ಯವಸ್ಥೆ ಮಾಡಬೇಕು. ಸರ್ಕಾರವು ನಿಗದಿ ಮಾಡಿದ ದರಕ್ಕೆ ಚಿಕಿತ್ಸೆ ನೀಡಲಾಗದ ಖಾಸಗಿ ಆಸ್ಪತ್ರೆಗಳಿಗೆ “ನಷ್ಟದಿಂದ ಮುಕ್ತಿ ನೀಡಿ” ಸರ್ಕಾರವೇ ನಡೆಸಬೇಕು.

2. ದೇಶದ ಜನಸಾಮಾನ್ಯರು ಬದುಕನ್ನೇ ಕಳೆದುಕೊಂಡು ತ್ಯಾಗ ಮಾಡುತ್ತಿರುವ ಹೊತ್ತಿನಲ್ಲಿ 1% ಶ್ರೀಮಂತರಿಗೆ ಕೇವಲ 2% ಆದರೂ ಸಂಪತ್ತಿನ ತೆರಿಗೆಯನ್ನು ಹಾಕಿ, ಸಂಪನ್ಮೂಲ ಕ್ರೋಢೀಕರಿಸಬೇಕು.

3. ಸ್ವಿಸ್ ಖಾತೆಗಳಲ್ಲಿ ನಮ್ಮ ಭ್ರಷ್ಟ ರಾಜಕಾರಣಿಗಳು, ಉದ್ದಿಮೆಪತಿಗಳು, ಅಧಿಕಾರಿಗಳು ಅಡಗಿಸಿ ಇಟ್ಟಿರುವ ಹಣವನ್ನು ಮತ್ತು ಬೋಗಸ್ ಕಂಪೆನಿಗಳ ಮೂಲಕ ಕಾರ್ಪೋರೇಟ್ ಕಂಪೆನಿಗಳು “ವಿದೇಶಿ ಹಣಕಾಸು ಬಂಡವಾಳ”ವೆಂಬ ಹೆಸರಿನಲ್ಲಿ ಇಲ್ಲಿಯೇ ಮರುಹೂಡಿಕೆ ಮಾಡುತ್ತಿರುವ ಭಾರತದ್ದೇ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಇವೆಲ್ಲದರಿಂದ ಕನಿಷ್ಠವೆಂದರೆ 30 ಲಕ್ಷ ಕೋಟಿ ರೂಪಾಯಿಗಳಷ್ಟು ಹಣ ಸಂಚಯವಾಗುತ್ತದೆ.

4. ಈ ಹಣವನ್ನು ಬಳಸಿ ಸರ್ಕಾರವು ಬದುಕಿನ ಆಧಾರ ಕಳೆದುಕೊಂಡಿರುವ ಜನಸಮುದಾಯಗಳ ನೆರವಿಗೆ ಈ ಕೂಡಲೇ ಮುಂದಾಗಬೇಕು. ದೇಶದ ಸಮಸ್ತ ಬಡ ಕುಟುಂಬಗಳಿಗೆ ತಿಂಗಳೊಂದಕ್ಕೆ 10 ಸಾವಿರ ರೂ.ಗಳಂತೆ ಮುಂದಿನ ನಾಲ್ಕು ತಿಂಗಳು ನೆರವುಧನ ನೀಡಬೇಕು.

5. ಎಲ್ಲಾ ಕಾರ್ಮಿಕ ಮತ್ತು ನೌಕರರ ಉದ್ಯೋಗ ಮತ್ತು ವೇತನದ ಭದ್ರತೆಗೆ ಕ್ರಮ ಕೈಗೊಳ್ಳಬೇಕು. ಸರ್ಕಾರೀ ವಲಯದ ಎಲ್ಲಾ ಗುತ್ತಿಗೆ, ಹೊರಗುತ್ತಿಗೆ ಹಾಗೂ ಗೌರವಧನ ನೌಕರರನ್ನು ಖಾಯಂಗೊಳಿಸುವ ಮೂಲಕ ಸರ್ಕಾರವು ಮಾದರಿ ಉದ್ಯೋಗದಾತನೆಂದು ತೋರಿಸಿಕೊಡಬೇಕು.

6. ಉದ್ಯೋಗ ಸೃಷ್ಟಿಗೆ ವಿಶೇಷ ಯೋಜನೆಗಳನ್ನು ರೂಪಿಸಬೇಕು. ಉದ್ಯೋಗ ಖಾತ್ರಿಗಾಗಿ ನರೇಗಾ ಯೋಜನೆಯನ್ನು ಬಲಪಡಿಸಬೇಕು ಮತ್ತು ನಗರಕ್ಕೂ ವಿಸ್ತರಿಸಬೇಕು.

7. ಸ್ಥಳೀಯ/ಪ್ರಾದೇಶಿಕ ಸಂಪನ್ಮೂಲ ಆಧರಿಸಿ ಉದ್ಯೋಗಗಳನ್ನು ಸೃಷ್ಟಿಸಿ, ಸ್ಥಳೀಯ/ಪ್ರಾದೇಶಿಕ ಮಟ್ಟದಲ್ಲಿ ಉದ್ಯೋಗ ಕಲ್ಪಿಸುವ ನೀತಿಯನ್ನು ಜಾರಿಗೆ ತರಬೇಕು.

8. ಇಡೀ ಕೃಷಿ ಕ್ಷೇತ್ರದ ಸಂಪೂರ್ಣ ಸಾಲಮನ್ನಾ ಘೋಷಿಸಬೇಕು. ಬೆಳೆ ಖಾತರಿ, ಬೆಲೆ ಖಾತರಿ, ಆದಾಯ ಖಾತರಿ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.

9. ಯಾವುದೇ ಕಾರಣಕ್ಕೂ ಜನಸಾಮಾನ್ಯರ ಮೇಲೆ ತೆರಿಗೆಯನ್ನು ಹೆಚ್ಚಿಸಬಾರದು. ಮೊದಲನೆಯ ಕ್ರಮವಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಈಗಿರುವುದಕ್ಕಿಂತ ಅರ್ಧದಷ್ಟು ಇಳಿಸುವುದು ನ್ಯಾಯಯುತವಾದುದು.

10. ಸರ್ಕಾರಿ ಮತ್ತು ಖಾಸಗೀ ಶಾಲೆ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ಬಡ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರವೇ ಭರಿಸಬೇಕು. ಖಾಸಗೀ ಶಾಲೆಗಳಿಗೆ ಕನಿಷ್ಠ ದರ ನಿಗದಿ ಮಾಡಿ ಸರ್ಕಾರವೇ ತುಂಬಿಕೊಡಬೇಕು.

ಆಗ್ರಹಗಳು

1 ಸಂವಿಧಾನ ನೀಡಿರುವ ಜನತೆಯ ಪ್ರತಿಭಟಿಸುವ ಹಕ್ಕನ್ನು ಸರ್ಕಾರ ಗೌರವಿಸಬೇಕು. ಕೊರೋನಾ ನೆಪದಲ್ಲಿ ಸಂವಿಧಾನಬಾಹಿರವಾಗಿ ಹಾಕಲಾಗಿರುವ 144ನೇ ಸೆಕ್ಷನ್‌ಅನ್ನು ತೆಗೆಯಬೇಕು. ತಮ್ಮ ಹಕ್ಕೊತ್ತಾಯಗಳನ್ನು ದಾಖಲಿಸಲು, ಆಗ್ರಹಿಸಲು ಜನರಿಗೆ ಮುಕ್ತ ಅವಕಾಶ ನೀಡಬೇಕು. ಬಂಧಿತ ಚಿಂತಕರನ್ನು ಹಾಗೂ ಹೋರಾಟಗಾರರನ್ನು ಈ ಕೂಡಲೇ ಬಿಡುಗಡೆ ಮಾಡಬೇಕು. ದುರ್ಬಳಕೆಯಾಗುತ್ತಿರುವ ಯುಎಪಿಎ ಕಾಯ್ದೆ ರದ್ದುಗೊಳಿಸಬೇಕು.

2. ಲೋಕಸಭೆ ಮತ್ತು ವಿಧಾನಸಭೆ ಕಾರ್ಯನಿರ್ವಹಿಸದೆ ದೇಶದ ಯಾವುದೇ ಕಾನೂನುಗಳಲ್ಲಿ ಬದಲಾವಣೆಗಳನ್ನು ತರಬಾರದು. ಕಾರ್ಮಿಕರ ಮತ್ತು ರೈತರ ಹಕ್ಕುಗಳನ್ನು ಕಸಿದುಕೊಳ್ಳಲು ತರಲಾಗಿರುವ ಎಲ್ಲಾ ಸುಗ್ರೀವಾಜ್ಞೆಗಳನ್ನೂ ಈ ಕೂಡಲೇ ಹಿಂತೆಗೆದುಕೊಳ್ಳಬೇಕು. ಭೂ ಸುಧಾರಣೆ ಕಾಯಿದೆಗೆ ತಂದಿರುವ ತಿದ್ದುಪಡಿಗಳನ್ನು ಹಿಂಪಡೆಯಬೇಕು ಹಾಗೂ ಕಾರ್ಮಿಕ ಕಾಯಿದೆಗಳಿಗೆ ಮಾಡಿರುವ ತಿದ್ದುಪಡಿಗಳನ್ನೂ ರದ್ದುಗೊಳಿಸಬೇಕು.

3. ಕೋರ್ಟುಗಳ ಪುನರ್ಚಾಲನೆಗೆ ಕ್ರಮ ಕೈಗೊಳ್ಳಬೇಕು. ಜನರ ಆಹಾರ, ಆರೋಗ್ಯ, ಉದ್ಯೋಗ ಹಾಗೂ ಶಿಕ್ಷಣದ ಸಾಂವಿಧಾನಿಕ ಹಕ್ಕನ್ನು ಖಾತ್ರಿಗೊಳಿಸಬೇಕು.

4. ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮತ್ತು ನಿರ್ದಿಷ್ಟ ಸಮುದಾಯಗಳನ್ನು ಗುರಿ ಮಾಡಿ ಸುಳ್ಳು ಪ್ರಚಾರ ಮಾಡುವ ಎಲ್ಲರನ್ನೂ ನಿಯಂತ್ರಣದಲ್ಲಿಡಲು, ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ಕಾರ್ಯಪ್ರವೃತ್ತವಾಗಬೇಕು.

5. ಈಗಾಗಲೇ ಸರ್ಕಾರದ ಹಸ್ತಕ್ಷೇಪದಿಂದ ಅರೆಜೀವವಾಗಿ ನಿಸ್ತೇಜಗೊಂಡಿರುವ ಸ್ವಾಯತ್ತ ಸಂಸ್ಥೆಗಳ ಸ್ವಾಯತ್ತತೆಯನ್ನು ಉಳಿಸಿ ಬೆಳೆಸಬೇಕು. ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸಿರುವ ಎಲ್ಲಾ ಕ್ರಮಗಳನ್ನು ಹಿಂತೆಗೆದುಕೊಂಡು, ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಅಧಿಕಾರವನ್ನು, ಅನುದಾನವನ್ನು ಖಾತರಿಗೊಳಿಸಬೇಕು. ಏಕೆಂದರೆ ರಾಜ್ಯಗಳ ಮತ್ತು ಚುನಾವಣಾ ಆಯೋಗ, ಸುಪ್ರೀಂಕೋರ್ಟು, ಮಿಲಿಟರಿ, ಪೊಲೀಸು, ಸಿಬಿಐ ಥರದ ಸ್ವಾಯತ್ತ ಸಂಸ್ಥೆಗಳ ಸ್ವಾಯತ್ತತೆ ಉಳಿಯದಿದ್ದರೆ ಭಾರತದ ಪ್ರಜಾಪ್ರಭುತ್ವವೇ ಉಳಿಯುವುದಿಲ್ಲ.


ಇದನ್ನೂ ಓದಿ: ಮೋದಿ ಭಾರತ ಯುವಜನರಿಗೆ ಉದ್ಯೋಗ ಕೊಡಲು ಸಾಧ್ಯವಿಲ್ಲ: ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಹತ್ಯೆ ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ: ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ

0
ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿ ಆದೇಶಿಸಿದ್ದು, ಸಿಐಡಿಯ ಎಸ್ಪಿ ವೆಂಕಟೇಶ್ ನೇತೃತ್ವದಲ್ಲಿ ತನಿಖೆ ಪ್ರಾರಂಭವಾಗಿದೆ ಎಂದು ತಿಳಿದು ಬಂದಿದೆ. ಏಪ್ರಿಲ್ 18ರಂದು ಸಂಜೆ ಹುಬ್ಬಳ್ಳಿಯ...