ವಿಜಯಪುರ ಜಿಲ್ಲೆಯಲ್ಲಿ ರೈತರ ಭೂಮಿಯನ್ನು ವಕ್ಫ್ ಬೋರ್ಡ್ ಕಬಳಿಸಲು ಮುಂದಾಗಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿರುವ ಕಾನೂನು ಮತ್ತು ಸಂಸದೀಯ ಸಚಿವ ಹೆಚ್.ಕೆ ಪಾಟೀಲ್ “ರೈತರಿಗೆ ನೀಡಿರುವ ನೋಟಿಸ್‌ಗಳನ್ನು ವಾಪಸ್ ಪಡೆಯುತ್ತೇವೆ” ಎಂದಿದ್ದಾರೆ.
ಮಾಧ್ಯಗಳೊಂದಿಗೆ ಮಾತನಾಡಿದ ಅವರು “ರೈತರ ಜಮೀನನ್ನು ವಕ್ಫ್ ಬೋರ್ಡ್‌ಗೆ ಸೇರಿಸುವ ಯಾವುದೇ ಉದ್ದೇಶ ನಮ್ಮ ಸರ್ಕಾರಕ್ಕೆ ಇಲ್ಲ. ರೈತರಿಗೆ ನೋಟಿಸ್ ನೀಡಿದ್ದರೆ ಅದನ್ನು ವಾಪಸ್ ಪಡೆಯುತ್ತೇವೆ. ಯಾರ ಜಮೀನು ಇದೆಯೋ ಅದು ಅವರ ಬಳಿಯೇ ಇರಲಿದೆ” ಎಂದು ಹೇಳಿದ್ದಾರೆ.
ಸಚಿವ ಎಂ.ಬಿ ಪಾಟೀಲ್ ಎಲ್ಲಾ ಗೊಂದಲಗಳಿಗೆ ಉತ್ತರ ಕೊಟ್ಟಿದ್ದಾರೆ. ಹಾಗಾಗಿ, ಸಮಸ್ಯೆ ಬಗೆಹರಿದಿದೆ. ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಝಮೀರ್ ಏಕೆ ರಾಜೀನಾಮೆ ಕೊಡಬೇಕು?
ಸಚಿವ ಝಮೀರ್ ಅಹ್ಮದ್ ರಾಜೀನಾಮೆಗೆ ಬಿಜೆಪಿಯವರು ಆಗ್ರಹಿಸಿದ್ದಾರೆ ಎಂದು ಹೇಳಿದ್ದಕ್ಕೆ “ತಹಶೀಲ್ದಾರ್ ರೈತರಿಗೆ ನೋಟಿಸ್ ಕೊಟ್ಟಿದ್ದರೆ ಸಚಿವ ಝಮೀರ್ ಏಕೆ ರಾಜೀನಾಮೆ ನೀಡಬೇಕು? ಎಲ್ಲಿ ತಪ್ಪಾಗಿದೆ ಎಂದು ಪರಿಶೀಲಿಸಬೇಕಿದೆ. ತಹಶೀಲ್ದಾರ್ ಮೇಲೆ ಜಿಲ್ಲಾಧಿಕಾರಿ ಇದ್ದಾರೆ. ಅದರ ಮೇಲೆ ಸರ್ಕಾರ ಇದೆ. ಜಿಲ್ಲಾಧಿಕಾರಿ ಎಲ್ಲಿ ತಪ್ಪಾಗಿದೆ ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತಾರೆ” ಎಂದಿದ್ದಾರೆ.
ಇದನ್ನೂ ಓದಿ : ಒಳಮೀಸಲಾತಿ ಜಾರಿಗೆ ಸಚಿವ ಸಂಪುಟ ಅನುಮೋದನೆ


