ಕಳೆದ 10 ವರ್ಷಗಳಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಪಶ್ಚಿಮ ಘಟ್ಟದಲ್ಲಿ 58.22 ಚದರ ಕಿಲೋಮೀಟರ್ ಅರಣ್ಯ ನಾಶವಾಗಿದೆ ಎಂದು ಭಾರತೀಯ ರಾಜ್ಯ ಅರಣ್ಯ ವರದಿ (ಐಎಸ್‌ಎಫ್‌ಆರ್) -2023 ಹೇಳಿದೆ.
ಭಾರತೀಯ ಅರಣ್ಯ ಸಮೀಕ್ಷೆ (ಐಎಫ್‌ಎಸ್)ಯ ಭಾಗವಾಗಿ ಸಿದ್ದಪಡಿಸಲಾದ ವರದಿಯನ್ನು ಶನಿವಾರ (ಡಿ.21) ಉತ್ತರಾಖಂಡದ ಡೆಹ್ರಾಡೂನ್‌ನ ಅರಣ್ಯ ಸಂಶೋಧನಾ ಸಂಸ್ಥೆಯಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ ಸಚಿವ ಭೂಪೇಂದರ್ ಯಾದವ್ ಬಿಡುಗಡೆ ಮಾಡಿದರು.

ವರದಿಯಲ್ಲಿ, ಕಳೆದ 10 ವರ್ಷದ ಅವಧಿಯಲ್ಲಿ ಪಶ್ಚಿಮ ಘಟ್ಟದಲ್ಲಿ ಅತ್ಯಂತ ದಟ್ಟಾರಣ್ಯಗಳು 3,465.12 ಚ.ಕಿ.ಮೀಗಳಷ್ಟು ಹೆಚ್ಚಾದರೆ, ಮಧ್ಯಮ ದಟ್ಟಾರಣ್ಯಗಳು ಮತ್ತು ತೆರೆದ ಅರಣ್ಯಗಳು ಕ್ರಮವಾಗಿ 1,043.23 ಚ.ಕಿ.ಮೀ ಮತ್ತು 2,480.11 ಚ.ಕಿ.ಮೀ ಕಡಿಮೆಯಾಗಿದೆ ಎಂದು ಹೇಳಲಾಗಿದೆ.
ಪಶ್ಚಿಮ ಘಟ್ಟ ವ್ಯಾಪ್ತಿಯ ಆರು ರಾಜ್ಯಗಳ 45 ಘಟ್ಟ ಜಿಲ್ಲೆಗಳ ಪೈಕಿ ಮಧ್ಯಮ ದಟ್ಟಾರಣ್ಯ ಹಾಗೂ ತೆರೆದ ಅರಣ್ಯ ಹೊಂದಿದ 25 ಜಿಲ್ಲೆಗಳು ಅರಣ್ಯ ನಾಶಕ್ಕೆ ಸಾಕ್ಷಿಯಾಗಿವೆ. ಗರಿಷ್ಠ ಪ್ರಮಾಣದಲ್ಲಿ ಅರಣ್ಯ ಪ್ರದೇಶವನ್ನು ಕಳೆದುಕೊಂಡಿರುವ ಪ್ರದೇಶಗಳಾಗಿ ತಮಿಳುನಾಡಿನ ನೀಲಗಿರಿ (123 ಚ.ಕಿ.ಮೀಗಿಂತ ಹೆಚ್ಚು), ಕೇರಳದ ಇಡುಕ್ಕಿ (98 ಚ.ಕಿ.ಮೀ), ಮಹಾರಾಷ್ಟ್ರದ ಪುಣೆ (83 ಚ.ಕಿ.ಮೀ), ಹಾಗೂ ಕರ್ನಾಟಕದ ಶಿವಮೊಗ್ಗ ಜಿಲ್ಲೆಗಳನ್ನು (74.5 ಚ.ಕಿ.ಮೀ) ಗುರುತಿಸಲಾಗಿದೆ.
ಪ್ರಸ್ತುತ ಅಂದಾಜಿನ ಪ್ರಕಾರ, ಒಟ್ಟು ಅರಣ್ಯ ಮತ್ತು ಮರಗಳ ವ್ಯಾಪ್ತಿಯು 827,357 ಚದರ ಕಿ.ಮೀ ಇದೆ. ಇದು ದೇಶದ ಭೌಗೋಳಿಕ ಪ್ರದೇಶದ ಶೇಕಡಾ 25.17 ಆಗಿದೆ. ಅರಣ್ಯ ಪ್ರದೇಶವು ಸುಮಾರು 715,343 ಚದರ ಕಿ.ಮೀ (21.76%) ವಿಸ್ತೀರ್ಣವನ್ನು ಹೊಂದಿದೆ. ಮರಗಳ ಹೊದಿಕೆಯು 112,014 ಚದರ ಕಿ.ಮೀ (3.41%) ವಿಸ್ತೀರ್ಣವನ್ನು ಆವರಿಸಿದೆ.
2021ಕ್ಕೆ ಹೋಲಿಸಿದರೆ, ದೇಶದ ಒಟ್ಟು ಅರಣ್ಯ ಮತ್ತು ಮರಗಳ ಹೊದಿಕೆಯಲ್ಲಿ 1,445 ಚದರ ಕಿ.ಮೀ ಹೆಚ್ಚಳವಾಗಿದೆ. ಮಹಾರಾಷ್ಟ್ರ (65,383 ಚದರ ಕಿ.ಮೀ) ಅತಿದೊಡ್ಡ ಅರಣ್ಯ ಮತ್ತು ಮರಗಳನ್ನು ಹೊಂದಿರುವ ಮೊದಲ ಮೂರು ರಾಜ್ಯಗಳಲ್ಲಿ ಒಂದಾಗಿದೆ ಎಂದು ಐಎಸ್‌ಎಫ್‌ಆರ್ ಎತ್ತಿ ತೋರಿಸಿದೆ.
ವರದಿಯು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ (WGESA) ಅರಣ್ಯ ವ್ಯಾಪ್ತಿಯ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸಿದೆ. ಪಶ್ಚಿಮಘಟ್ಟ ಭಾರತದ ಅತ್ಯಂತ ಅಮೂಲ್ಯ ಜೀವವೈವಿಧ್ಯದ ತಾಣವಾಗಿದೆ. ಇದು ಗೋವಾ, ಗುಜರಾತ್, ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ತಮಿಳುನಾಡು ಈ ಆರು ರಾಜ್ಯಗಳ 45 ಜಿಲ್ಲೆಗಳು ಆವರಿಸಿದೆ.
ಭಾರತೀಯ ರಾಜ್ಯ ಅರಣ್ಯ ವರದಿ (ಐಎಸ್‌ಎಫ್‌ಆರ್)
1987ರಿಂದ ಎರಡು ವರ್ಷಕೊಮ್ಮೆ ಭಾರತೀಯ ಅರಣ್ಯ ಸಮೀಕ್ಷೆ(ಎಫ್‌ಎಸ್‌ಐ) ವತಿಯಿಂದ ಭಾರತೀಯ ರಾಜ್ಯ ಅರಣ್ಯ ವರದಿ ( ಐಎಸ್‌ಎಫ್‌ಆರ್) ಪ್ರಕಟಿಸಲಾಗುತ್ತಿದೆ. ಎಫ್‌ಎಸ್‌ಐ ರಿಮೋಟ್ ಸೆನ್ಸಿಂಗ್‌ನ ವ್ಯಾಖ್ಯಾನದ ಆಧಾರದ ಮೇಲೆ ದೇಶದ ಅರಣ್ಯ ಮತ್ತು ಮರದ ಸಂಪನ್ಮೂಲಗಳ ಆಳವಾದ ಮೌಲ್ಯಮಾಪನವನ್ನು ನಡೆಸುತ್ತದೆ. ಉಪಗ್ರಹ ಡೇಟಾ ಮತ್ತು ಕ್ಷೇತ್ರ ಆಧಾರಿತ ರಾಷ್ಟ್ರೀಯ ಅರಣ್ಯ ದಾಸ್ತಾನು (ಎನ್‌ಎಫ್‌ಐಐ) ಫಲಿತಾಂಶಗಳನ್ನು ಐಎಸ್‌ಎಫ್‌ಆರ್‌ನಲ್ಲಿ ಪ್ರಕಟಿಸಲಾಗುತ್ತದೆ.
ಈ ಬಾರಿ ಪ್ರಕಟಿಸಿರುವುದು 18ನೇ ಐಎಸ್‌ಎಫ್‌ಆರ್ ಆಗಿದೆ. ಇದು ಭಾರತದ ಅರಣ್ಯ ಪ್ರದೇಶ, ಮರಗಳ ಹೊದಿಕೆ, ಮ್ಯಾಂಗ್ರೋವ್ ಹೊದಿಕೆ, ಅರಣ್ಯ ಹೊದಿಕೆ ಹೆಚ್ಚಳ, ಭಾರತದ ಕಾಡುಗಳಲ್ಲಿನ ಇಂಗಾಲದ ಸಂಗ್ರಹ, ಅರಣ್ಯ ಬೆಂಕಿಯ ನಿದರ್ಶನಗಳು, ಕೃಷಿ ಅರಣ್ಯ ಇತ್ಯಾದಿಗಳ ಮಾಹಿತಿಯನ್ನು ಒಳಗೊಂಡಿದೆ.
ಇದನ್ನೂ ಓದಿ : ಚುನಾವಣಾ ದಾಖಲೆಗಳನ್ನು ಒದಗಿಸುವಂತೆ ಹೈಕೋರ್ಟ್ ನಿರ್ದೇಶನ; ನಿಯಮವನ್ನೆ ಬದಲಾಯಿಸಿದ ಕೇಂದ್ರ ಸರ್ಕಾರ!


