Homeಮುಖಪುಟಹೊಸ ವೈರಸ್‌ಗಳ ಹುಟ್ಟಿಗೆ ಕಾರಣವೇನು? ಇವುಗಳ ಮುಂದೆ ಮಾನವ ಬಲಹೀನನೆ?

ಹೊಸ ವೈರಸ್‌ಗಳ ಹುಟ್ಟಿಗೆ ಕಾರಣವೇನು? ಇವುಗಳ ಮುಂದೆ ಮಾನವ ಬಲಹೀನನೆ?

- Advertisement -
- Advertisement -

ಹೊಸ ಕೊರೊನಾ ವೈರಾಣು ಇಡೀ ಜಗತ್ತನ್ನೇ ಸ್ತಬ್ಧಗೊಳಿಸಿದೆ. ಈ ಹಿಂದೆ ಝೀಕಾ, ಎಬೊಲಾ, ಸಾರ್ಸ್‌ನಂತ ವೈರಾಣುಗಳು ನಡುಕ ಹುಟ್ಟಿಸಿ ಹೋಗಿದ್ದವು. ಮನುಷ್ಯರ ಸಾಧನೆ, ನಾಗರಿಕತೆ, ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರು, ʼನಿರ್ಜೀವಿʼ ವೈರಸ್‌ ಒಂದು ಇದನ್ನೆಲ್ಲಾ ಬುಡಮೇಲು ಮಾಡುತ್ತಿದೆ ಎನ್ನುವ ಪ್ರಶ್ನೆ ಕಾಡುವಂತಾಗಿದೆ. ನಾವು ಇಷ್ಟು ಬಲಹೀನ ಮತ್ತು ದುರ್ಬಲರೇ ಎನ್ನುವಂತಾಗಿದೆ. ಅನೇಕ ಬಾರಿ ನಮ್ಮ ಹೆಗ್ಗಳಿಕೆಯ ಯಶಸ್ಸು ಕಲ್ಲಿನ ಮೇಲೆ ಬರೆದದ್ದಲ್ಲ ಮರಳಿನ ಮೇಲೆ ಎನ್ನುವುದುಂಟು. ಯಾವಾಗ ಬೇಕಾದರು ಅಳಿಸಿ ಹೋಗಬಹುದು.

ಇದೇ ಸಂದರ್ಭದಲ್ಲಿ ಹೊಸ ಹೊಸ ಮಾರಕ ರೋಗಾಣುಗಳ ಹುಟ್ಟಿಗೆ ಕಾರಣವಾದರೂ ಏನು ಎನ್ನುವ ಪ್ರಶ್ನೆ ಹುಟ್ಟುತ್ತದೆ. ನಾವು ಕುಳಿತಿರುವ ಮರದ ಕೊಂಬೆಯನ್ನು ನಾವು ಕಡೆಯುತ್ತಿದ್ದೇವಾ? ಸೂಫಿ ಸಂತ ರೂಮಿ ಒಂದೆಡೆ ಹೀಗೆನ್ನುತ್ತಾನೆ “ಕೊನೆಗೂ ನನ್ನ ಶತ್ರು ನನಗೆ ಸಿಕ್ಕ, ನಾನೇ ಅವನು”. ಪರಿಸರ ಮತ್ತು ಪೃಕೃತಿ ಸಮತೋಲನ ಎಲ್ಲ ಜೀವಜಗತ್ತಿಗೆ ಆಧಾರ. ಪರಸ್ಪರ ಒಂದನ್ನೊಂದು ಅವಲಂಬಿಸಿ ಹೊಸೆದು ಹೆಣೆದು ಬದುಕುವ ಬಗೆ. ಎಲ್ಲವನ್ನು ಸಮಗ್ರವಾಗಿ ನೋಡುವ ಚಿಂತನೆ ನಮ್ಮಲ್ಲಿ ಬಹಳ ಕಡಿಮೆಯಾಗುತ್ತಿದೆ.

ಸೂಕ್ಷ್ಮ ಜೀವಿಯನ್ನು ಇರುವೆಯಲ್ಲಿ, ಇರುವೆಯನ್ನು ಮರದಲ್ಲಿ, ಮರವನ್ನು ಕಾಡಿನಲ್ಲಿ, ಕಾಡನ್ನು ಪೃಕೃತಿಯಲ್ಲಿ, ಪೃಕೃತಿಯನ್ನು ವಿಶ್ವದಲ್ಲಿ ಬೆರೆತಿರುವುದನ್ನು ಪರಿಸರ ವಿಜ್ಞಾನ ತೋರಿಸಿಕೊಡುತ್ತಿದೆ. ಈ ಮೂಲ ಬೆಸುಗೆಯನ್ನು ತುಂಡರಿಸುವುದರಿಂದ ಹೊಸ ರೋಗಾಣುಗಳು ಅಥವಾ ಸಾಧು ಜೀವಿಗಳು ಕ್ರೂರ ಜೀವಿಗಳಾಗುವುದು ಸಾಧ್ಯ.

ಲೈಮ್‌ ಕಾಯಿಲೆ

ಕಾಡಿನಲ್ಲಿರುವ ಉಣ್ಣೆಯಿಂದ ನಮ್ಮಲ್ಲಿ ಮಂಗನಕಾಯಿಲೆ, ಅದೇರೀತಿ ಬೇರೆ ಬೇರೆ ದೇಶಗಳಲ್ಲಿ ಇನ್ನೊಂದು ಜಾತಿಯ ಉಣ್ಣೆಯಿಂದ ಲೈಮ್‌ ಕಾಯಿಲೆ (lyme disease) ಎನ್ನುವ ಮಾರಕ ಕಾಯಿಲೆ ಇದೆ. ಮಂಗನಕಾಯಿಲೆಯ ವೈರಾಣು, ಅದಕ್ಕೆ ಲಸಿಕೆ ಬಗ್ಗೆ ಈಗ ಸಾಕಷ್ಟು ತಿಳಿದಿದ್ದರು, ಅದರ ಹುಟ್ಟು ಮತ್ತು ಹರಿವು ಇನ್ನು ನಿಗೂಢವಾಗಿದೆ.  ಇದೇ ರೀತಿಯ ಉಣ್ಣೆಯಿಂದ ಬರುವ ಲೈಮ್‌ ಕಾಯಿಲೆಯ ಬಗ್ಗೆ ಕೆಲವು ಅಧ್ಯಯನಗಳಿಂದ ಹೊಸ ಪ್ರಾಕೃತಿಕ ಸಂಬಂಧಗಳು ಹೊರಬಿದ್ದಿವೆ. ಈ ಉಣ್ಣೆ ಬದುಕಲು ಮತ್ತು ಹೇರಳವಾಗಿ ಸಂತಾನೋತ್ಪತ್ತಿ ಮಾಡಲು ಇಲಿಗಳ ರಕ್ತ ಬೇಕು. ಇಲಿಗಳ ಸಂತತಿ ಹೆಚ್ಚಿದ್ದರೆ ಉಣ್ಣೆಯ ಸಂತತಿ ಹೆಚ್ಚುತ್ತದೆ. ಪಾಶ್ಚಾತ್ಯ ದೇಶಗಳಲ್ಲಿ ಇಲಿಗಳನ್ನು ತಿನ್ನುವ ನರಿಗಳಿವೆ. ಆದರೆ ನರಿ ಬೇಟೆ ಪಾಶ್ಚಾತ್ಯರಲ್ಲಿ ಮೋಜಿನ ಆಟ. ಎಲ್ಲಿ ನರಿ ಸಂಖ್ಯೆ ಕಡಿಮೆಯಾಗುತ್ತದೆಯೋ ಅಲ್ಲಿ ಇಲಿ ಸಂಖ್ಯೆ ಹೆಚ್ಚಾಗುತ್ತದೆ. ಎಲ್ಲಿ ಇಲಿ ಹೆಚ್ಚಾಗುತ್ತದೆಯೋ ಉಣ್ಣೆಯೂ ಹೆಚ್ಚಾಗಿ ಮಾರಣಾಂತಿಕ ಲೈಮ್‌ ಕಾಯಿಲೆ ಹೆಚ್ಚಾಗುವ ಸಾಧ್ಯತೆಯನ್ನು ಸಂಶೋಧನೆಗಳು ತಿಳಿಸಿವೆ.

ಇತ್ತೀಚೆಗೆ ಮಲೇರಿಯಾ ರಹಿತ ಕಾಫಿ ಎನ್ನುವ ಸುದ್ದಿಯಾಯಿತು. ಇದಕ್ಕೆ ಕಾರಣ ಕಾಡು ನಾಶಮಾಡಿ, ಕಾಫಿ ಬೆಳೆದಾಗ ಕಾಡಿನ ಸೊಳ್ಳೆ ಊರಿಗೆ ಬಂದು ಮಲೇರಿಯಾ ಕಾಯಿಲೆ ಹರಡುವುದು. ಹಾಗೆಯೇ ಕಾಡು ನಾಶವಾದಾಗ ಸೊಳ್ಳೆ ತಿನ್ನುವ ಕಪ್ಪೆ ನಾಶವಾಗುವುದು ಕಾರಣ. ಇದಕ್ಕೆ ಕಾಡನ್ನು ಉಳಿಸಿಕೊಂಡು ಬೆಳೆದ ಕಾಫಿಯನ್ನು ಮಲೇರಿಯಾ ಮುಕ್ತ ಕಾಫಿ ಎನ್ನುವುದಾಗಿದೆ. ಹಿಂದೊಮ್ಮೆ ಡಾಲ್ಡಾ ಎಣ್ಣೆ ಒರಾಂಗುಟನ್‌ನನ್ನು ಕೊಲ್ಲುತ್ತದೆ ಎನ್ನುವ ಸುದ್ದಿ ಬಂದಿತ್ತು. ಕಾರಣ ಡಾಲ್ಡಾ ಮಾಡಲು ಕಾಡು ಕಡಿದು ತಾಳೆ ಎಣ್ಣೆ ಬೆಳೆಯಬೇಕಾಗುತ್ತದೆ. ಬಾರ್ನಿಯೊ ಕಾಡು ಒರಾಂಗುಟನ್‌ ಬದುಕುವ ತಾಣ. ಅಲ್ಲಿ ಕಾಡನ್ನು ಕಡೆದು ಅಥವಾ ಬೆಂಕಿ ಹಚ್ಚಿ ಸರ್ವನಾಶ ಮಾಡಿ ತಾಳೆ ಬೆಳೆದಾಗ ಜೀವ ಸಂಕುಲ ನಾಶವಾಗುತ್ತದೆ.

ಎಲ್‌ ನಿನ್ಯೊ (El nino), ಲಾ ನಿನ್ಯಾ( La nina) ಜಾಗತಿಕ ತಾಪಮಾನದಿಂದ ಉಂಟಾಗಿರುವ ಸಾಗರದ ಪ್ರಕ್ರಿಯೆ. ಇದರಿಂದ ಪ್ರಕೃತಿಯಲ್ಲಿ ಅನೇಕ ಏರು ಪೇರುಗಳನ್ನು ಕಾಣಬಹುದು. ಅದೇ ರೀತಿ ಇಂಡಿಯನ್‌ ಓಶನ್‌ ಡೈಪೊಲ್‌ ಎನ್ನುವ ಸಾಗರ ತಾಪಮಾನದ ಅಲೆಗಳಿಂದ ಇತ್ತಿಚೆಗೆ ಆಸ್ಟ್ರೇಲಿಯಾ ಖಂಡಕ್ಕೆ ಬೆಂಕಿ ಬಿದ್ದದ್ದು ಹೊರ ನೋಟಕ್ಕೆ ಕಾಣುವ ಕಾರ್ಯಕಾರಣ ಸಂಬಂಧಗಳನ್ನು ಬುಡಮೇಲು ಮಾಡುತ್ತದೆ.

ಎಲ್‌ ನಿನ್ಯೊ
ಲಾ ನಿನ್ಯಾ

ಬಾವಲಿಯಲ್ಲಿ ಅನೇಕ ರೀತಿಯ ಕರೊನಾದಂತಹ ವೈರಾಣುಗಳು ಮನೆಮಾಡಿವೆ. ಪರಸ್ಪರ ಹೊಂದಿಕೊಂಡು ಬಾವಲಿಯ ಜೊತೆ ಬದುಕುತ್ತಿವೆ. ಹೀಗಾಗಿ ಬಾವಲಿಗೆ ಮಾತ್ರ ಕ್ಯಾನ್ಸರ್‌ ಬರುವುದಿಲ್ಲ ಎನ್ನುವುದು ಒಂದು ರೋಚಕ ಸಂಗತಿಯೇ. ಆದರೆ ಬಾವಲಿಯ ಪ್ರಕೃತಿ ತಾಣವನ್ನು ಉಲ್ಲಂಘಿಸಿದಾಗ ಅತ್ತಿಂದತ್ತ ವೈರಾಣುಗಳು ಕಾಲಿಟ್ಟಲ್ಲಿ ಮನುಕುಲಕೆ ನಡುಕ ಉಂಟಾಗುತ್ತದೆ. ಮುಂದೆ ನಮ್ಮ ವಿಜ್ಞಾನ ಹೆಚ್ಚು ಹೆಚ್ಚು ಇಂತಹ ಬೆಸುಗೆಯ ಬಗ್ಗೆ ಬೆಳಕು ಚೆಲ್ಲಬೇಕಾಗಿದೆ. ಫ್ರಾನ್ಸಿಸ್‌ ಬೇಕನ್‌ ಬಹಳ ವರ್ಷಗಳ ಹಿಂದೆ ಪ್ರಕೃತಿಯನ್ನು ನಿಯಂತ್ರಿಸುವುದು ಅದನ್ನು ವಿಧೇಯಿಸುವುದರಿಂದ ಮಾತ್ರ ಸಾಧ್ಯ ಎಂದಿದ್ದ. (Nature to be commanded must be obeyed)

(ಲೇಖಕರು ಚಿಂತಕರು ಮತ್ತು ಬರಹಗಾರರು.)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...