ಕರ್ನಾಟಕದ ಹಲವು ನಗರಗಳಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಟಾರು ಕಿತ್ತುಹೋದ, ಗುಂಡಿ ಬಿದ್ದ ರಸ್ತೆಗಳು ಸರ್ವೇಸಾಮಾನ್ಯವಾಗಿವೆಯಲ್ಲವೇ? ರಸ್ತೆ ನಿರ್ಮಿಸಿದ ಕೆಲವೇ ದಿನಗಳಲ್ಲಿ ಒಂದೇ ಮಳೆಗೆ ಕೊಚ್ಚಿಹೋದ ಉದಾಹರಣೆಗಳು ನೂರಾರಿವೆ. ಡ್ಯಾಂಗಳು, ನಾಲೆಗಳ ನಿರ್ಮಾಣ ಸೇರಿ ಹಲವು ಕಟ್ಟಡಗಳಲ್ಲಿ ಕಳಪೆ ಕಾಮಗಾರಿ ಎದ್ದು ಕಾಣುತ್ತಿರುತ್ತದೆ. ಇದಕ್ಕೆಲ್ಲ ಜನತೆ ಒಂದಷ್ಟು ದಿನ ಸ್ಥಳೀಯ ಕಾಂಟ್ರಾಕ್ಟರ್‌ಗಳನ್ನು ದೂರುತ್ತಿರುತ್ತಾರೆ. ಗುತ್ತಿಗೆದಾರರೆಂದರೆ ಭ್ರಷ್ಟಾಚಾರಿಗಳೆಂಬ ಕಲ್ಪನೆ ಜನರ ಮನಸ್ಸಿನಲ್ಲಿದೆ. ಆದರೀಗ ಕರ್ನಾಟಕದಲ್ಲಿ ಅದೇ ಗುತ್ತಿಗೆದಾರರ ಪರ ಜನರು ಸಹಾನುಭೂತಿ ತೋರಿಸುವಂತಹ ಪರಿಸ್ಥಿತಿಯನ್ನು ಆಳುವ ಬಿಜೆಪಿ ಸರ್ಕಾರ ತಂದಿಟ್ಟಿದೆ.
ರಾಜ್ಯದ ಗುತ್ತಿಗೆ ಕಾಮಗಾರಿಗಳಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ; ಸಚಿವರು, ಶಾಸಕರು ಮತ್ತು ಅಧಿಕಾರಿಗಳು 40% ಕಮಿಷನ್ ಕೀಳುತ್ತಿದ್ದಾರೆ; ಹೀಗಾಗಿ ಗುಣಮಟ್ಟದ ಕಾಮಗಾರಿ ನಡೆಸಲಾಗುತ್ತಿಲ್ಲ; ಹಾಗಾಗಿ ಸರ್ಕಾರ ಈ ಕುರಿತು ತನಿಖೆ ನಡೆಸಿ ಭ್ರಷ್ಟಾಚಾರ ನಿಲ್ಲಿಸಬೇಕು ಎಂದು ಕಳೆದ ಆರು ತಿಂಗಳಿನಿಂದ ರಾಜ್ಯದ ಗುತ್ತಿಗೆದಾರರ ಸಂಘದ ಹಲವರು ಪ್ರಧಾನಿ, ಮುಖ್ಯಮಂತ್ರಿಗಳಿಗೆ ಪದೇಪದೇ ಪತ್ರ ಬರೆಯುತ್ತಿದ್ದಾರೆ. ಕಮಿಷನ್ ದಂಧೆಯಲ್ಲಿ ಭಾಗಿಯಾಗಿರುವ ಹಲವು ಪ್ರಭಾವಿ ಸಚಿವರ, ಶಾಸಕರು ಹೆಸರು ಉಲ್ಲೇಖಿಸಿ ದಾಖಲೆಗಳನ್ನು ಮುಂದಿಡುತ್ತಿದ್ದಾರೆ. ಇದರಿಂದ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗುತ್ತಿದೆ. ಇದೇ ಸಂದರ್ಭದಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪನವರ ಕಮಿಷನ್ ಭ್ರಷ್ಟಾಚಾರದಿಂದ ನೊಂದು ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರನೊಬ್ಬ ಮೋದಿಗೆ ಪತ್ರ ಬರೆದಿದ್ದರು. ಅದೂ ಪ್ರಯೋಜನವಾಗದೆ, ಕೊನೆಗೆ ದಾರಿಕಾಣದೆ ಆತ್ಮಹತ್ಯೆ ಮಾಡಿಕೊಂಡ ಅವರು ಅದಕ್ಕೆ ಈಶ್ವರಪ್ಪನವರನ್ನು ದೂರಿದ್ದರು. ಇದು ಈಶ್ವರಪ್ಪನವರ ರಾಜೀನಾಮೆಗೆ ಎಡೆಮಾಡಿಕೊಟ್ಟಿದೆ. ಇದರ ನಂತರ 40% ಕಮಿಷನ್ ವಿಚಾರ ಮತ್ತಷ್ಟು ಗಂಭೀರತೆ ಪಡೆದುಕೊಂಡಿದೆ.
40% ಕಮಿಷನ್ ನಿಜವೇ?
ಈ ಕುರಿತು ಮಾಹಿತಿ ಪಡೆಯಲು ಮಂಡ್ಯದ ಕ್ಲಾಸ್ ಒನ್ ಗುತ್ತಿಗೆದಾರರನ್ನುಮಾತನಾಡಿಸಲಾಯಿತು.
ಅವರು “ಯಾವುದೇ ಕಾಮಗಾರಿ ಮಂಜೂರಾದ ನಂತರ ವರ್ಕ್ ಎಸ್ಟಿಮೇಟ್ ಮತ್ತು ಅಗ್ರಿಮೆಂಟ್ ಆಗುವ ಸಂದರ್ಭದಲ್ಲಿ ಎಕ್ಸಿಕ್ಯುಟಿವ್ ಎಂಜಿನಿಯರ್‌ಗೆ 1.5-2%, ಸೂಪರಿಂಡೆಂಟ್ ಇಂಜಿನಿಯರ್‌ಗೆ 1%, ಬೆಂಗಳೂರಿನಲ್ಲಿರುವ ಚೀಫ್ ಇಂಜಿನಿಯರ್‌ಗೆ 1% ಕಮಿಷನ್ ಕೊಡಲೇಬೇಕು ಎಂದರು. ಕೆಲಸ ಮುಗಿದ ಮೇಲೆ ಇಂಜಿನಿಯರ್‌ಗಳು ಬಿಲ್ ಬರೆಯುವಾಗ 5% ತೆಗೆದುಕೊಳ್ಳೂತ್ತಾರೆ. ಎಂಡಿ ಸಹಿ ಆದಾಗ
ತಾಲ್ಲೂಕು ಮಟ್ಟದ ಎಇಇ ಎಂಬ ಆಫೀಸರ್ 3% ತೆಗೆದುಕೊಳ್ಳುತ್ತಾರೆ. ಆಡಿಟ್ ಮಾಡುವವರಿಗೆ
0.5%, ಅಕೌಂಟ್ ಸೂಪರಿಂಡೆಂಟ್‌ಗೆ 0.5% ಮತ್ತು ಎಕ್ಸಿಕ್ಯುಟಿವ್ ಎಂಜಿನಿಯರ್‌ಗೆ 3% ಕಮಿಷನ್ ಕೊಡಬೇಕು” ಎಂದು ಹೇಳಿದರು.

“ಇದಾದ ನಂತರ ಜಿ.ಪಂಗೆ ಅಪ್ರೂವಲ್‌ಗೆ ಹೋಗುತ್ತದೆ. ಮುಖ್ಯ ಲೆಕ್ಕ ಪರಿಶೋಧಕರಿಗೆ 1%, ಜಿಲ್ಲಾ ಖಜಾನೆಗೆ ಹೋದಾಗ 1% ಕಮಿಷನ್ ಕೊಡಬೇಕು. ಅಂದರೆ ಅಧಿಕಾರಿಗಳಿಗೆ ಸುಮಾರು 15-16% ಕಮಿಷನ್ ಕೊಡಬೇಕು. ನಂತರ ಶಾಸಕರು 5% ತೆಗೆದುಕೊಳ್ಳುತ್ತಾರೆ. ಇನ್ನು ರೆಡಿ ಗ್ರಾಂಟ್ಸ್ ಇಲ್ಲದಿದ್ದ ಸಂದರ್ಭದಲ್ಲಿ ವಿಶೇಷ ಗ್ರಾಂಟ್‌ಗೆ ಎಲ್‌ಓಸಿ ತರಲು ಬೆಂಗಳೂರಿಗೆ ಹೋಗಬೇಕು. ಆಗ ಸಚಿವರಿಗೆ ಮೊದಲು 5% ಕಮಿಷನ್ ಇತ್ತು. ಈ ಮೊದಲು ನಾವೇ ಈಶ್ವರಪ್ಪನವರಿಗೆ 5% ಕೊಟ್ಟು 2 ಕೋಟಿ ಅನುದಾನ ತಂದಿದ್ದೇವೆ. ಈಗ ಅದು 10% ವರೆಗೂ ಹೆಚ್ಚಾಗಿದೆ”.
“ಸಚಿವರಿಗೆ 10%, ಶಾಸಕರಿಗೆ 5%, ಅಗ್ರಿಮೆಂಟ್ ಮಾಡುವಾಗ ಇಂಜಿನಿಯರ್‌ಗಳಿಗೆ 4%, ಬಿಲ್ ಮಾಡುವಾಗ ಇಂಜಿನಿಯರ್‌ಗಳಿಗೆ 5% ಎಇಇಗಳಿಗೆ 3%, ಮತ್ತೆ ಕೆಳಗಿನ ಅಧಿಕಾರಿಗಳಿಗೆ 4% ಹೀಗೆ ಒಟ್ಟು 31% ಗೂ ಹೆಚ್ಚು ಕಮಿಷನ್ ಹೋಗುತ್ತಿದೆ. ಅಲ್ಲದೆ ಟ್ಯಾಕ್ಸ್, ರಾಯಲ್ಟಿ, ಕಾರ್ಮಿಕರ ಇಎಸ್‌ಐ ಸೇರಿ 40% ಮೀರುತ್ತದೆ. ಇಂತಹ ಸಂದರ್ಭದಲ್ಲಿ ಗುತ್ತಿಗೆದಾರರು ಬೀದಿಗೆ ಬರದೆ ಇರಲು ಸಾಧ್ಯವೇ” ಎಂದು ಪ್ರಶ್ನಿಸುತ್ತಾರೆ.
“ಈ ಕಮಿಷನ್ ಪದ್ಧತಿ ಹಿಂದಿನಿಂದಲೂ ಇದೆ. ಆದರೆ ಮೊದಲು ಹೆಚ್ಚಿನ ಸಚಿವರು, ಶಾಸಕರು, ಸಂಸದರು ಕಮಿಷನ್ ಕೇಳುತ್ತಿರಲಿಲ್ಲ. ಏಕೆಂದರೆ ಆಗ ಎಲ್‌ಓಸಿ ನೀಡುವ ಅಧಿಕಾರ ಅಧಿಕಾರಿಗಳಿಗೆ ಇತ್ತು. ಅವರಿಗೆ 1-2% ಲಂಚ ಕೊಟ್ಟು ತರುತ್ತಿದ್ದೆವು. ಆದರೆ ಈಗ ಆ ಅಧಿಕಾರ ಸಚಿವರ ಕೈಗೆ ಹೋದ ನಂತರ ಪರ್ಸೆಂಟೇಜ್ ಭ್ರಷ್ಟಾಚಾರ ಹೆಚ್ಚಾಗಿದೆ. 10%ಗಿಂತ ಕಡಿಮೆ ತೆಗೆದುಕೊಳ್ಳುವುದಿಲ್ಲ ಎಂದರು.
ಈ ಕಮಿಷನ್ ಭ್ರಷ್ಟಾಚಾರದ ಕುರಿತು ಪ್ರಧಾನಿಯವರಿಗೆ ಮೊದಲು ದೂರು ಸಲ್ಲಿಸಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣನವರು ಮಾತನಾಡಿ “ನಾವು ಸಲ್ಲಿಸಿರುವ ದಾಖಲೆಗಳಲ್ಲಿ ತಪ್ಪಿದ್ದರೆ ತನಿಖೆ ನಡೆಸಿ. ನಾವು ಹೇಳಿದ್ದು ತಪ್ಪಾಗಿದ್ದರೆ ನೀವು ಹೇಳುವ ಶಿಕ್ಷೆ ಅನುಭವಿಸಲು ಸಿದ್ಧ ಎಂದು ಸಾರ್ವಜನಿಕವಾಗಿ ಘೋಷಿಸಿದ್ದೇವೆ. ನರೇಂದ್ರ ಮೋದಿಯವರು ಬೆಂಗಳೂರಿನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಈ ಹಿಂದಿನ ಸರ್ಕಾರವನ್ನು 10% ಕಮಿಷನ್ ಸರ್ಕಾರ ಎಂದು ಟೀಕಿಸಿದ್ದರು. ನಾವೀಗ ಮೋದಿಯವರ ಪಕ್ಷವೇ ರಾಜ್ಯದಲ್ಲಿ ಅಧಿಕಾರದಲ್ಲಿದ್ದು, ಅವರು ನಡೆಸುತ್ತಿರುವ 40% ಕಮಿಷನ್ ಭ್ರಷ್ಟಾಚಾರದ ಬಗ್ಗೆ ದಾಖಲೆ ಸಮೇತ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲವೇಕೆ” ಎಂದು ಪ್ರಶ್ನಿಸಿದ್ದಾರೆ.
ಇದರಿಂದ ಕರುನಾಡಿಗೇನು ಕಷ್ಟ?
55,000 ಕೋಟಿ ರೂಗಳಷ್ಟು ಹಣವನ್ನು ಈ ಬಾರಿಯ ಬಜೆಟ್‌ನಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಕೇಂದ್ರ ಸರ್ಕಾರವೂ ಸಹ ಅಷ್ಟೇ ಪ್ರಮಾಣದ ಅನುದಾನ ನೀಡುತ್ತದೆ. ಅಂದರೆ ರಾಜ್ಯದ ಮೂಲ ಸೌಕರ್ಯಕ್ಕಾಗಿ ಇವೆರಡು ಸೇರಿ ಅಂದಾಜು 1 ಲಕ್ಷ ಕೋಟಿ ಹಣ ಬಿಡುಗಡೆಯಾಗುತ್ತದೆ. ಇದರಲ್ಲಿ 40% ಕಮಿಷನ್ ಅಥವಾ ಲಂಚ ಅಂದರೇ ಕನಿಷ್ಠ ವರ್ಷಕ್ಕೆ 40,000 ಕೋಟಿ ರೂ ಸರ್ಕಾರದ (ಸಾರ್ವಜನಿಕರ) ಹಣವನ್ನು ಆಡಳಿತ ಪಕ್ಷದ ರಾಜಕಾರಣಿಗಳು ಮತ್ತು ಅಧಿಕಾರಿಗಳು ನುಂಗಿ ಹಾಕುತ್ತಾರೆ ಎಂದರ್ಥ ಎನ್ನುತ್ತಾರೆ ಪ್ರಾಧ್ಯಾಪಕರಾದ ಬಿ.ಸಿ ಬಸವರಾಜ್.

ಈ 40,000 ಕೋಟಿ ರೂ ಅಂದರೆ ಈ ವರ್ಷದ ಕರ್ನಾಟಕದ ಬಜೆಟ್‌ನಲ್ಲಿ ಆರೋಗ್ಯಕ್ಕೆ ಕೊಟ್ಟಿರುವುದಕ್ಕಿಂತಲೂ (14,368 ಕೋಟಿ ರೂ) ಮೂರು ಪಟ್ಟು ಜಾಸ್ತಿ. ಗ್ರಾಮೀಣಾಭಿವೃದ್ಧಿಗೆ ಕೊಟ್ಟಿರುವದಕ್ಕಿಂತಲೂ (9,275 ಕೋಟಿ ರೂ) ನಾಲ್ಕು ಪಟ್ಟು ಜಾಸ್ತಿ ಮತ್ತು ಶಿಕ್ಷಣಕ್ಕೆ ಕೊಟ್ಟಿರುವುದಕ್ಕಿಂತಲೂ (8,000 ಕೋಟಿ ರೂ) ಜಾಸ್ತಿ ಹಣವಾಗಿದೆ. ರಸ್ತೆ, ನೀರಾವರಿಗೂ ಇಷ್ಟು ಹಣವನ್ನು ಸರ್ಕಾರ ನೀಡಿಲ್ಲ. ಆದರೆ ಜನರ ತೆರಿಗೆಯಾದ, ಸಾರ್ವಜನಿಕರ ಕಲ್ಯಾಣಕ್ಕೆ ಬಳಕೆಯಾಗಬೇಕಾದ 40,000 ಕೋಟಿ ರೂ.ಹಣವನ್ನು ಕೆಲವೇ ಕೆಲವು ಭ್ರಷ್ಟಾಚಾರಿಗಳು ತಿಂದುಹಾಕುತ್ತಿರುವುದು ದೊಡ್ಡ ದುರಂತವಾಗಿದೆ.
ಜನರು ದುಬಾರಿ ತೆರಿಗೆ ತೆತ್ತರೂ ಸಹ ರಸ್ತೆ, ಶಾಲೆ-ಆಸ್ಪತ್ರೆ, ನೀರಾವರಿಯಂತಹ ಉತ್ತಮ ಮೂಲ ಸೌಲಭ್ಯಗಳಿಂದ ವಂಚಿತರಾಗುತ್ತಾರೆ. 40% ಕಮಿಷನ್ ಕೊಟ್ಟು, ತಾನೊಂದಿಷ್ಟು ಲಾಭ ಇಟ್ಟುಕೊಂಡ ಗುತ್ತಿಗೆದಾರ ಮಾಡುವ ಕಳಪೆ ಕಾಮಗಾರಿಯಲ್ಲಿ ನಿರ್ಮಿಸಿದ ರಸ್ತೆಗಳು, ಕಟ್ಟಡಗಳು ಖರೀದಿಸಿದ ಉಪಕರಣಗಳು ಬೇಗನೇ ಹಾಳಾಗುತ್ತವೆ. ಹದಗೆಟ್ಟ ರಸ್ತೆಗಳಿಂದ ಬೆಂಗಳೂರಿನಲ್ಲಿ ದ್ವಿಚಕ್ರ ವಾಹನಸವಾರರು ಸಾವನ್ನಪ್ಪುತ್ತಿರುವುದನ್ನು ನೋಡುತ್ತಿದ್ದೇವೆ. ಅಷ್ಟೇ ಅಲ್ಲದೆ ಮತ್ತು ಅವುಗಳ ರಿಪೇರಿಗೆ, ಪುನರ್ ನಿರ್ಮಾಣಕ್ಕೆಂದು ಸರ್ಕಾರ ಜನರ ಬಳಿಯಿಂದಲೇ ದುಬಾರಿ ತೆರಿಗೆ ಸಂಗ್ರಹಿಸುತ್ತದೆ. ಈ ಸುಳಿಗೆ ಜನರು ಸಿಕ್ಕಿಕೊಳ್ಳಲಿದ್ದಾರೆ.
ಹಣಕಾಸಿನ ಕೊರತೆಯ ನೆಪವೊಡ್ಡಿ ಸಾವಿರಾರು ಸರ್ಕಾರಿ ಉದ್ಯೋಗಗಳನ್ನು ತುಂಬದೇ ಖಾಲಿ ಬಿಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ವೈದ್ಯರಿಲ್ಲ, ಬೆಡ್‌ಗಳಿಲ್ಲ ಎಂಬುದನ್ನು ಕೊರೊನಾ ಸಾಂಕ್ರಾಮಿಕ ತೋರಿಸಿಕೊಟ್ಟಿದೆ. ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ಕಾರ್ಮಿಕರು, ಗುತ್ತಿಗೆ ನೌಕರರು, ಅತಿಥಿ ಉಪನ್ಯಾಸಕರು ಸಂಬಳ ಹೆಚ್ಚಳಕ್ಕಾಗಿ ದಿನನಿತ್ಯ ಹೋರಾಡುತ್ತಿದ್ದಾರೆ. ಇದಕ್ಕೆಲ್ಲ ಹಣ ಇಲ್ಲ ಎನ್ನುವ ಸರ್ಕಾರದ ಸಚಿವರು 40% ಕಮಿಷನ್ ತಿನ್ನುತ್ತಿರುವುದು ವಿಪರ್ಯಾಸವಲ್ಲವೇ?
ಈ ಭ್ರಷ್ಟಾಚಾರ ತಡೆಯಲು ಸಾಧ್ಯವೇ?
ಟೆಂಡರ್‌ಗಳಲ್ಲಿ ಪಾರದರ್ಶಕತೆ ತರುವ ಕಾನೂನು ಕಳೆದ 20 ವರ್ಷಗಳಿಂದ ಅಸ್ತಿತ್ವದಲ್ಲಿದೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ ಮತ್ತು ಭ್ರಷ್ಟಾಚಾರ ಕಡಿಮೆಯಾಗಿಲ್ಲ. ಏಕಂದರೆ ಯಾವುದೇ ಗುತ್ತಿಗೆ ನೀಡುವಾಗ ಟೆಂಡರ್ ಎನ್ನುವುದು ಅದರ ಒಂದು ಭಾಗ ಅಷ್ಟೇ. ಆದರೆ ಟೆಂಡರ್ ಪೂರ್ವ ಮತ್ತು ಟೆಂಡರ್ ನಂತರದ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರವನ್ನು ತಡೆಯಲು ನಮ್ಮಲ್ಲಿ ಯಾವುದೇ ವ್ಯವಸ್ಥೆ ಇಲ್ಲ ಎನ್ನುತ್ತಾರೆ ಮಾಜಿ ಐಎಎಸ್ ಅಧಿಕಾರಿಯಾಗಿರುವ ಮತ್ತು ಹಾಲಿ ಭ್ರಷ್ಟಾಚಾರದ ವಿರುದ್ಧ ಕೆಲಸ ಮಾಡುತ್ತಿರುವ ರಘುನಂದನ್‌ರವರು.

ನ್ಯಾಯಪಥದೊಂದಿಗೆ ಮಾತನಾಡಿದ ಅವರು, “ಟೆಂಡರ್‌ನಲ್ಲಿ ಎಲ್1 ಎಂದು ಆಯ್ಕೆಯಾದ ನಂತರವೂ ನೇರವಾಗಿ ನಮಗೆ ವರ್ಕ್ ಆರ್ಡರ್ ಕೊಡುವ ಬದಲು, ಸಚಿವರ ಕಚೇರಿಯಿಂದ ’ಬನ್ನಿ ಮಾತಾಡೋಣ’ ಎಂದು ಕರೆ ಬರುತ್ತದೆ. ಅಂದರೆ ನಾವು ಅಲ್ಲಿ ಇಂತಿಷ್ಟು ಕಮಿಷನ್ ಕೊಡಬೇಕೆಂದೆ ಅರ್ಥ. ಇಲ್ಲದಿದ್ದಲ್ಲಿ ನಿಮಗೆ ವರ್ಕ್ ಆರ್ಡರ್ ಕೊಡದೆ ಸತಾಯಿಸಲಾಗುತ್ತದೆ. ಹಾಗಾಗಿ ಭ್ರಷ್ಟಾಚಾರ ಮಿತಿಮೀರಿದೆ” ಎನ್ನುತ್ತಾರೆ.
“ಈ ರೀತಿಯ ಭ್ರಷ್ಟಾಚಾರವನ್ನು ಕೊನೆಗೊಳಿಸುವುದಕ್ಕಾಗಿ ಕೆಲವು ಅಧಿಕಾರಿಗಳು public procurement billಅನ್ನು 2012ರಲ್ಲಿ ಮನಮೋಹನ್ ಸರ್ಕಾರದ ಅವಧಿಯಲ್ಲಿ ರೂಪಿಸಿದ್ದರು. ಅದು ಒಂದು ಒಳ್ಳೆಯ ಮಸೂದೆ ಆಗಿತ್ತು. ಆದರೆ ಅದು ಕಾನೂನಾಗಿ ಅಂಗೀಕಾರವಾಗಲಿಲ್ಲ. ಅದರಲ್ಲಿ ಟೆಂಡರ್ ಮಾತ್ರವಲ್ಲದೆ, ಟೆಂಡರ್ ಪೂರ್ವ ಮತ್ತು ಟೆಂಡರ್ ನಂತರದ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರವನ್ನು ತಡೆಯುವ ಅಂಶಗಳು ಇದ್ದವು. ಅದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಿದಲ್ಲಿ ಈ ಸಮಸ್ಯೆಗೆ ಪರಿಹಾರವಿದೆ” ಎಂದರು.
“ಈ ಗುತ್ತಿಗೆಯಲ್ಲಿ ಎಲ್ಲಾ ಸರ್ಕಾರಗಳು ಒಂದಷ್ಟು ಮಟ್ಟದ ಭ್ರಷ್ಟಾಚಾರದಲ್ಲಿ ಭಾಗಿಯಾಗಿವೆ. ಇಂದು ಬಿಜೆಪಿ ಸರ್ಕಾರ ನಡೆಸುತ್ತಿರುವುದು ಹೈಪರ್ ಭ್ರಷ್ಟಾಚಾರವಾಗಿದೆ. ಇಲ್ಲಿ ಸರಣಿ ರೀತಿಯಲ್ಲಿ ವ್ಯವಸ್ಥಿತವಾಗಿ ಕಮಿಷನ್ ದಂಧೆ ನಡೆಯುತ್ತಿದೆ. ಒಂದೆಡೆ ಚುನಾವಣಾ ಬಾಂಡ್‌ಗಳ ಮೂಲಕ ಮಾಡುವ ಬಿಜೆಪಿ ಗುತ್ತಿಗೆಯಲ್ಲಿಯೂ ಮತ್ತು ಪಾಲಿಸಿ ಲೆವೆಲ್‌ಗಳಲ್ಲಿಯೂ ಭ್ರಷ್ಟಾಚಾರವನ್ನು ಲೀಗಲೈಸ್ ಮಾಡುತ್ತಿದೆ. ಆಪ್ ಹೊರತುಪಡಿಸಿ ಉಳಿದ ಯಾವ ಪಕ್ಷಗಳು ಭ್ರಷ್ಟಾಚಾರದ ಬಗ್ಗೆ ದನಿಯೆತ್ತುತ್ತಿಲ್ಲ. ಬದಲಿಗೆ ನಾವಿನ್ನು ಹಿಜಾಬ್-ಹಲಾಲ್ ಎಂಬ ಚರ್ಚೆಯಲ್ಲಿ ಮುಳುಗಿರುವುದು ದುರಂತ” ಎಂದರು.
“ಹಲವು ದೇಶಗಳಲ್ಲಿ ಭ್ರಷ್ಟಾಚಾರವನ್ನು ತಡೆಯುವದಕ್ಕಾಗಿ ಖರೀದಿ ಸಮಿತಿ ರಚಿಸಿ ಇಂಟಿಗ್ರಿಟಿ ಚೆಕ್ ಎಂದು ಮಾಡುತ್ತಾರೆ. ಅಂದರೆ ಯಾವುದೇ ಖರೀದಿ ತೀರ್ಮಾನವನ್ನು ಒಬ್ಬರು ಮಾಡದೇ ಸಮಿತಿ ಮಾಡಬೇಕಿರುತ್ತದೆ. ಇನ್ನು ಆ ಸಮಿತಿ ರಚಿಸುವಾಗಲೇ ಅದರಲ್ಲಿ ಯಾರು ಯಾರು ಇರಬೇಕೆಂದು ಇಂಟಿಗ್ರಿಟಿ ಚೆಕ್ ನಡೆಸಲಾಗುತ್ತಿದೆ. ಇದನ್ನು ಭಾರತದಲ್ಲಿಯೂ ಕಾನೂನಾಗಿ ತರಬೇಕು” ಎಂದು ರಘುನಂದನ್‌ರವರು ತಿಳಿಸಿದರು.
ಇದು ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ-ಅವಮಾನ
40% ಕಮಿಷನ್ ವಿಚಾರ ಎಂದರೆ ಇದು ಕರ್ನಾಟಕಕ್ಕೆ ಆಗುತ್ತಿರುವ ಘೋರ ಅನ್ಯಾಯವಾಗಿದೆ. ನಮ್ಮನ್ನು ರಸ್ತೆಯಲ್ಲಿ ನಿಲ್ಲಿಸಿ, ನಮ್ಮ ಬಳಿಯ ದುಡ್ಡನ್ನು ದೋಚುವುದಕ್ಕೂ ಇದಕ್ಕೂ ಯಾವ ವ್ಯತ್ಯಾಸವೂ ಇಲ್ಲ ಎನ್ನುತ್ತಾರೆ ಜಾಗೃತ ಕರ್ನಾಟಕ ಸಂಘಟನೆಯ ಸಂಚಾಲಕರಾದ ರಾಜಶೇಖರ್ ಅಕ್ಕಿಯವರು.
“’ನಾವು 40% ಕಮಿಷನ್ ತೆಗೆದುಕೊಂಡು ಭ್ರಷ್ಟಾಚಾರ ಮಾಡ್ತೀವಿ, ನೀವು ರಸ್ತೆಗಳಲ್ಲಿಯ ಗುಂಡಿಗಳಲ್ಲಿ ಬಿದ್ದು ಸಾಯಿರಿ’, ’ನಾವು 40% ಕಮಿಷನ್ ತೆಗೆದುಕೊಂಡು ಭ್ರಷ್ಟಾಚಾರ ಮಾಡ್ತೀವಿ, ನೀವು ಆಸ್ಪತ್ರೆಗಳಲ್ಲಿ ಬೆಡ್‌ಗಳಿಲ್ಲದೇ ರಸ್ತೆಯಲ್ಲಿಯೇ ಪ್ರಾಣಬಿಡಿ, ’ನಾವು 40% ಕಮಿಷನ್ ತೆಗೆದುಕೊಂಡು ಭ್ರಷ್ಟಾಚಾರ ಮಾಡ್ತೀವಿ, ಸರಕಾರಿ ಶಾಲೆಗಳನ್ನು ಮುಚ್ತೀವಿ, ನೀವು ಲಕ್ಷಲಕ್ಷ ಕೊಟ್ಟು ಮಕ್ಕಳನ್ನು ಖಾಸಗಿ ಶಾಲೆಯಲ್ಲಿ ಓದಿಸಿ, ’ನಾವು 40% ಕಮಿಷನ್ ತೆಗೆದುಕೊಂಡು ಭ್ರಷ್ಟಾಚಾರ ಮಾಡ್ತೀವಿ, ನೀವು ತೆಪ್ಪಗಿರಿ, ಮಾತನಾಡಿದರೆ ಕಪಾಳಕ್ಕೆ ಕೊಡ್ತೀವಿ’ ಎಂದು ಹೇಳ್ತಿದಾರೆ. ಕರ್ನಾಟಕ ಈ ಅನ್ಯಾಯವನ್ನು ಸಹಿಸಿಕೊಳ್ಳುವುದಿಲ್ಲ ಎಂದು ಗಟ್ಟಿ ದನಿಯಲ್ಲಿ ಹೇಳಬೇಕಿದೆ. ಜನರ ಭಾವನೆಗಳಿಗೆ ಮನ್ನಣೆ ನೀಡಿ, ಅವನ್ನು ಮುಖ್ಯವಾಹಿನಿಗೆ ತರಬೇಕಿದೆ. ಆ ಕಾರಣಕ್ಕಾಗಿ ಜಾಗೃತ ಕರ್ನಾಟಕ ರಾಜ್ಯಾದ್ಯಂತ ಕ್ಯಾಂಪೇನ್ ನಡೆಸಲಿದೆ. ಭ್ರಷ್ಟರಿಗೆ ಪಾಠ ಕಲಿಸಲಿದೆ ಹಾಗೂ ಕರ್ನಾಟಕ ಅವಮಾನವನ್ನು ಸಹಿಸಿಕೊಳ್ಳುವುದಿಲ್ಲ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ” ಎಂದು ತಿಳಿಸಿದರು.
ಹೋರಾಟಕ್ಕಿಳಿದ ಗುತ್ತಿಗೆದಾರರು: ಜನರು ಎಚ್ಚೆತ್ತುಕೊಳ್ಳುವುದು ಯಾವಾಗ?
“ಕಳಪೆ ಕಾಮಗಾರಿಗೆ ಜನ ಗುತ್ತಿಗೆದಾರರನ್ನು ಹೊಣೆ ಮಾಡುತ್ತಾರೆ. ಆದರೆ ಗುತ್ತಿಗೆದಾರರಿಂದ ಸರ್ಕಾರ 40% ಕಮಿಷನ್ ದೋಚುತ್ತಿದೆ. ಇಂತ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಗುತ್ತಿಗೆದಾರರ ಸಹಿಸುವುದಿಲ್ಲ. ಮೇ 11ರಂದು ಗುತ್ತಿಗೆದಾರರ ಸಂಘದ ಕಾರ್ಯಕಾರಿ ಸಮಿತಿ ಸಭೆ ನಡೆಸುತ್ತಿದ್ದೇವೆ. ಆ ನಂತರ ಒಂದು ತಿಂಗಳ ಕಾಲ ಎಲ್ಲಾ
ಕಾಮಗಾರಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುತ್ತೇವೆ. ಮೇ 25 ರಂದು 50,000ಕ್ಕೂ ಹೆಚ್ಚು ಗುತ್ತಿಗೆದಾರರು ಸೇರಿ ಸಮಾವೇಶ ನಡೆಸುತ್ತೇವೆ” ಎನ್ನುತ್ತಾರೆ ಡಿ.ಕೆಂಪಣ್ಣನವರು.

ಸ್ವಿಸ್ ಬ್ಯಾಂಕ್‌ನಲ್ಲಿರುವ ಮತ್ತು ಭಾರತದಲ್ಲಿರುವ ಕಪ್ಪು ಹಣವನ್ನು ಭಾರತದ ಬೊಕ್ಕಸಕ್ಕೆ ತಂದು ಹಾಕಿದರೆ, ಚಿನ್ನವಾಗಿ ಕನ್ವರ್ಟ್ ಮಾಡಿದರೆ ದೇಶದ ಎಲ್ಲಾ ರಸ್ತೆಗಳನ್ನು ಚಿನ್ನದಲ್ಲಿ ನಿರ್ಮಿಸಬಹುದು ಎಂದು ಅವಿವೇಕಿಯೊಬ್ಬ ಭಾಷಣ ಬಿಗಿದು, ಅದಕ್ಕಾಗಿ ನೀವೆಲ್ಲರೂ ಮೋದಿಯವರನ್ನು ಪ್ರಧಾನಿ ಮಾಡಬೇಕೆಂದು ಕೇಳಿಕೊಳ್ಳುವ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಅಂತೆಯೆ ಜನ ಮೋದಿಯವರನ್ನು ಪ್ರಧಾನಿ ಮಾಡಿದ ನಂತರ ಚಿನ್ನದ ರಸ್ತೆ ಇರಲಿ, ಮಾಮೂಲಿ ರಸ್ತೆ ಮಾಡುವ ದುಡ್ಡಿನಲ್ಲಿಯೂ ಬಿಜೆಪಿಯವರು 40% ಕಮಿಷನ್ ತಿನ್ನುತ್ತಿದ್ದಾರೆ. ನಾನು ತಿನ್ನೋಲ್ಲ, ಬೇರೆಯವರು ತಿನ್ನಲು ಬಿಡುವುದಿಲ್ಲ ಎಂದು ಭಾಷಣ ಮಾಡಿದ ಮೋದಿಯವರು ಈಗ ಕಣ್ಮುಚ್ಚಿ ಕುಳಿತಿದ್ದಾರೆ. ಇದು ಹೀಗೆ ಮುಂದುವರೆದಲ್ಲಿ ರಾಜ್ಯ ಮತ್ತು ದೇಶ ಸಾಲದ ಸುಳಿಗೆ ಸಿಲುಕಿ ಈಗ ಶ್ರೀಲಂಕಾ ಎದುರಿಸುತ್ತಿರುವ ಪರಿಸ್ಥಿತಿಗಿಂತ ಹೀನಾಯ ಮಟ್ಟಕ್ಕೆ ತಲುಪುತ್ತದೆ. ಅದಕ್ಕೂ ಮುಂಚೆಯೇ ಜನತೆ ಎಚ್ಚೆತ್ತುಕೊಂಡು ದನಿ ಎತ್ತಬೇಕಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ಸಂತೋಷ್ ಸಾವು ಪ್ರಕರಣ: ಆರೋಪಿ ನಂ.1 ಈಶ್ವರಪ್ಪನವರಿಂದ ಅಧಿಕೃತ…


