ಫೇಸ್‌ಬುಕ್ ಮಾಲಿಕತ್ವದ ವಾಟ್ಸಾಪ್ ಬಳಕೆದಾರರ ವೈಯಕ್ತಿಕ ಮಾಹಿತಿಗಳನ್ನು ಕಲೆ ಹಾಕುತ್ತದೆ/ಮಾರುತ್ತದೆ, ಚಾಟ್‌ಗಳನ್ನು ನೋಡುತ್ತದೆ ಎಂಬ ಟೀಕೆಗಳ ವ್ಯಕ್ತವಾದ ಹಿನ್ನೆಲೆಯಲ್ಲಿ ಇದರ ಅಪ್‌ಡೇಟ್ ದಿನಾಂಕವನ್ನು ಮುಂದೂಡಿದೆ. ಈ ಹಿಂದೆ ಇದಕ್ಕಾಗಿ 2021ರ ಫೆಬ್ರವರಿ 8ರವರೆಗೆ ಗಡುವು ನೀಡಿದ್ದು, ಬಳಕೆದಾರರು ಈ ಷರತ್ತುಗಳನ್ನು ಒಪ್ಪಿಕೊಳ್ಳಲೇಬೇಕಿದೆ. ಇಲ್ಲದಿದ್ದಲ್ಲಿ ಅಂತಹ ವಾಟ್ಸಾಪ್ ಖಾತೆಗಳನ್ನು ಡಿಲೀಟ್ ಮಾಡುವುದಾಗಿ ಅದು ಎಚ್ಚರಿಸಿತ್ತು.
ವಾಟ್ಸ್ಆ್ಯಪ್ ಹೊಸ ಅಪ್‌ಡೇಟ್‌ನಲ್ಲಿ ಫೇಸ್‌ಬುಕ್ ಜತೆಗೆ ಬಳಕೆದಾರರ ದತ್ತಾಂಶವನ್ನು ಹಂಚಿಕೊಳ್ಳುತ್ತದೆ ಎನ್ನಲಾಗಿತ್ತು. ಇದರಿಂದ ಕೆರಳಿದ ಕೋಟ್ಯಾಂತರ ಬಳಕೆದಾರರು ವಾಟ್ಸಾಪ್ ತ್ಯಜಿಸಿ ಸಿಗ್ನಲ್ ಎಂಬ ಸುರಕ್ಷತಾ ಆಪ್‌ಗೆ ಸೇರಿಕೊಂಡಿದ್ದರು. ಹಾಗಾಗಿ ಭಾರತ ಸೇರಿದಂತೆ ಆರು ರಾಷ್ಟ್ರಗಳಲ್ಲಿ ಅತಿ ಹೆಚ್ಚು ಡೌನ್‌ಲೋಡ್ ಆಪ್‌ಗಳ ಪಟ್ಟಿಯಲ್ಲಿ ಸಿಗ್ನಲ್ ನಂಬರ್ ಒನ್ ಸ್ಥಾನಕ್ಕೇರಿತ್ತು.
ಇದನ್ನೂ ಓದಿ: ಸ್ನೇಹಿತರು-ಸಂಬಂಧಿಕರೊಂದಿಗಿನ ಚಾಟ್‌ಗಳು ಸುರಕ್ಷಿತ: ಸ್ಪಷ್ಟನೆ ನೀಡಿದ ವಾಟ್ಸಾಪ್!
ವಾಟ್ಸ್ಆ್ಯಪ್ ಹೊಸ ನೀತಿ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ, ಹೇಳಿಕೆ ಬಿಡುಗಡೆ ಮಾಡಿದ್ದ ವಾಟ್ಸಾಪ್, “ತನ್ನ ಗೌಪ್ಯತಾ ನೀತಿಗಳಲ್ಲಿ ತಂದ ಬದಲಾವಣೆಗಳಲ್ಲಿ ಕೆಲವನ್ನು ತಿದ್ದುಪಡಿ ಮಾಡುತ್ತಿದ್ದೇವೆ. ನಿಮ್ಮ ಸ್ನೇಹಿತರು-ಸಂಬಂಧಿಕರೊಂದಿಗಿನ ಚಾಟ್‌ಗಳು ಸುರಕ್ಷಿತವಾಗಿರಲಿವೆ, ಎಂಡ್ ಟು ಎಂಡ್ encryption 100% ಮುಂದುವರೆಯಲಿದೆ” ಎಂದು ಟ್ವೀಟ್ ಮಾಡಿತ್ತು.
ಫೆಬ್ರವರಿಯಿಂದ ಹೊಸ ಅಪ್‌ಡೇಟ್ ಮಾಡಿಕೊಳ್ಳಬೇಕು ಎಂದು ಘೋಷಿಸಿದ್ದ ವಾಟ್ಸಾಪ್, ಈಗ ಮೇ ತಿಂಗಳವರೆಗೆ ಅಪ್‌ಡೇಟ್ ಪ್ರಕ್ರಿಯೆಯನ್ನು ಮುಂದೂಡುವುದಾಗಿ ಶುಕ್ರವಾರ ಹೇಳಿದೆ. “ಬಳಕೆದಾರರ ವ್ಯವಹಾರಗಳಿಗೆ ಸಂಬಂಧಿಸಿದ ಸಂದೇಶ ಕಳುಹಿಸಲು ಹೊಸ ಅಪ್‌ಡೇಟ್ ಅವಕಾಶ ನೀಡಲಿದೆ. ಇದು ವೈಯಕ್ತಿಕ ಸಂವಹನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಎಂಡ್ ಟು ಎಂಡ್ encryption ಮುಂದುವರಿಯುತ್ತದೆ. ಹೊಸ ಅಪ್‌ಡೇಟ್ ಮೂಲಕ ದತ್ತಾಂಶಗಳನ್ನು ಫೇಸ್‌ಬುಕ್‌ನೊಂದಿಗೆ ಹಂಚಿಕೊಳ್ಳುವುದಿಲ್ಲ” ಎಂದು ವಾಟ್ಸಾಪ್ ಮತ್ತೊಮ್ಮೆ ಹೇಳಿಕೆ ನೀಡಿದೆ.
ಇದನ್ನೂ ಓದಿ: ವಾಟ್ಸಾಪ್ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ಸಿಗ್ನಲ್: ಭಾರತ ಸೇರಿ 7 ದೇಶಗಳಲ್ಲಿ ಸಿಗ್ನಲ್ ಪಾರುಪತ್ಯ ಶುರು
“ಪ್ರತಿಯೊಬ್ಬರೂ ಇಂದು ವಾಟ್ಸಾಪ್‌ನಲ್ಲಿ ವ್ಯವಹಾರವನ್ನು ಹೊಂದಿಲ್ಲ. ಆದರೆ, ಭವಿಷ್ಯದಲ್ಲಿ ಹೆಚ್ಚಿನ ಜನರು ವಾಟ್ಸಾಪ್ ಮೂಲಕ ವ್ಯವಹರಿಸಲು ಮುಂದಾಗಲಿದ್ದಾರೆ ಎಂಬುದಾಗಿ ನಾವು ಭಾವಿಸುತ್ತೇವೆ” ಎಂದು ವಾಟ್ಸಾಪ್ ಅಭಿಪ್ರಾಯ ವ್ಯಕ್ತಪಡಿಸಿದೆ.
We will make sure users have plenty of time to review and understand the terms. Rest assured we never planned to delete any accounts based on this and will not do so in the future.
— WhatsApp (@WhatsApp) January 15, 2021
ಒಂದು ವಾರದ ಹಿಂದೆ ವಾಟ್ಸಾಪ್ ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರಿಗೆ ನೋಟಿಸ್ ಮೂಲಕ ತನ್ನ ಗೌಪ್ಯತಾ ನೀತಿಗಳನ್ನು ಬದಲಿಸುತ್ತಿರುವುದಾಗಿ ಮಾಹಿತಿ ನೀಡಿತ್ತು. “ಪ್ರಸ್ತುತ ಕೆಲವು ವರ್ಗಗಳ ಮಾಹಿತಿಯನ್ನು ಫೇಸ್‌ಬುಕ್ ಕಂಪನಿಗಳೊಂದಿಗೆ ಹಂಚಿಕೊಳ್ಳುತ್ತೇವೆ. ಇತರ ಕಂಪನಿಗಳೊಂದಿಗೆ ನಾವು ಹಂಚಿಕೊಳ್ಳುವ ಮಾಹಿತಿಯು ನಿಮ್ಮ ಖಾತೆ ನೋಂದಣಿ ಮಾಹಿತಿಯನ್ನು ಒಳಗೊಂಡಿದೆ (ಉದಾಹರಣೆಗೆ ನಿಮ್ಮ ಫೋನ್ ಸಂಖ್ಯೆ), ವಹಿವಾಟು ಡೇಟಾ, ಸೇವೆ-ಸಂಬಂಧಿತ ಮಾಹಿತಿ, ನಮ್ಮ ಸೇವೆಗಳನ್ನು ಬಳಸುವಾಗ ನೀವು ಇತರರೊಂದಿಗೆ ಹೇಗೆ ವರ್ತಿಸುತ್ತೀರಿ (ವ್ಯವಹಾರಗಳು ಸೇರಿದಂತೆ), ಮೊಬೈಲ್ ಸಾಧನ ಮಾಹಿತಿ, ನಿಮ್ಮ ಐಪಿ ವಿಳಾಸ, ಮತ್ತು ಗೌಪ್ಯತೆ ನೀತಿ ವಿಭಾಗದಲ್ಲಿ ಗುರುತಿಸಲಾದ ಇತರ ಮಾಹಿತಿಯನ್ನು ‘ನಾವು ಸಂಗ್ರಹಿಸುವ ಮಾಹಿತಿ‘ ಅಥವಾ ನಿಮಗೆ ಸೂಚನೆಯ ಮೇರೆಗೆ ಅಥವಾ ನಿಮ್ಮ ಒಪ್ಪಿಗೆಯ ಆಧಾರದ ಮೇಲೆ ಪಡೆಯಲಾಗಿದೆ” ಎಂದು ವಾಟ್ಸಾಪ್ ತಿಳಿಸಿತ್ತು.
ಇದನ್ನೂ ಓದಿ: ವಾಟ್ಸಾಪ್‌ಗೆ ಗುಡ್‌ಬೈ ಹೇಳಿ, ಸಿಗ್ನಲ್‌ಗೆ ಹೆಲೋ ಹೇಳಿ: ಏನಿದು ಸಿಗ್ನಲ್ ಆಪ್?


