ಬರಹಗಾರ, ಸಾಮಾಜಿಕ ಕಾರ್ಯಕರ್ತ, ಸಮಾಜವಾದಿ ಚಂಪಾ ನಮ್ಮನ್ನಗಲಿದ್ದಾರೆ. ಚಂದ್ರಶೇಖರ ಪಾಟೀಲರು ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದಾಗ ಸಾಹಿತ್ಯ ಪರಿಷತ್ತಿಗೆ ಶಕ್ತಿಯೇನೆಂಬುದನ್ನು ಅಂದಿನ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಧಾರ್ಮಿಕ ಮೂಲಭೂತವಾದಿಗಳಿಗೆ ತೋರಿಸಿಕೊಟ್ಟ ಪ್ರಸಂಗವನ್ನು ಇವತ್ತು ಮೆಲುಕು ಹಾಕುವುದು ಮುಖ್ಯವೆನಿಸುತ್ತದೆ.
ಕೆ.ಎಸ್ ನಿಸಾರ್ ಅಹಮದ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ 73ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 2006ರಲ್ಲಿ ಶಿವಮೊಗ್ಗದಲ್ಲಿ ನಡೆಯಿತು. ಅಂದಿನ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್‌ಗೆ ಅಧ್ಯಕ್ಷರಾಗಿದ್ದ ಡಿ.ಮಂಜುನಾಥ್ ಮಾಧ್ಯಮ ಕುರಿತು ಮಾತನಾಡಲು ಗೌರಿಲಂಕೇಶ್ ಮತ್ತು ಮಲೆನಾಡಿನ ಪರಿಸರ ಕುರಿತು ಮಾತನಾಡಲು ಕಲ್ಕುಳಿ ವಿಠ್ಠಲ ಹೆಗಡೆಯನ್ನು ಆಹ್ವಾನಿಸಿದ್ದಲ್ಲದೆ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದರು. ಇದನ್ನು ನೋಡಿ ಸಿಟ್ಟಾದ ಶಿವಮೊಗ್ಗ ಬಿಜೆಪಿ ಕಾರ್ಯಕರ್ತರು ಅಂದಿನ ಉಪಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಚಾಡಿ ಹೇಳಿ ಈ ಇಬ್ಬರೂ ಬರಕೂಡದೆಂದು ಹಠ ಹಿಡಿದರು. ಯಡಿಯೂರಪ್ಪನವರು ಡಿ.ಮಂಜುನಾಥ್‌ಗೆ ಹೇಳಿದಾಗ ಅವರು ಚಂಪಾರನ್ನು ಸಂಪರ್ಕಿಸಿ ಗೌರಿ ಮತ್ತು ವಿಠ್ಠಲ ಹೆಗಡೆ ಬಗ್ಗೆ ಬಿಜೆಪಿಯವರು ತೆಗೆದಿರುವ ತಕರಾರಿನ ವಿಷಯ ತಿಳಿಸಿದರು. ಅದಕ್ಕೆ ಚಂಪಾ ’ಏ ಅಂಗಾಗುವುದಿಲ್ಲರಿ, ಸಾಹಿತ್ಯ ಪರಿಷತ್ ಸ್ವಾಯತ್ತ ಸಂಸ್ಥೆ ಯಾರನ್ನು ಕರಿಬೇಕು ಕರಿಬಾರ್ದು ಅನ್ನದು ನಮಗೆ ಸೇರಿದ್ದು, ಒಂದು ವೇಳೆ ಅವರು ಹಠ ಹಿಡಿದರಪ್ಪ ಅಂದ್ರೆ ನಾವೇ ಸಾಹಿತ್ಯ ಸಮ್ಮೇಳನ ಮುಂದಕಾಕ್ತಿವಿ. ಗೌರಿ, ವಿಠ್ಠಲ ಹೆಗಡೆ ಬರಬಾರ್ದು ಅನ್ನುವುದಕ್ಕೆ ಇವುಂರ್‍ಯಾರು’ ಎಂದರು ಅಲ್ಲಿಗೆ ಬಿಜೆಪಿಗಳು ಸುಮ್ಮನಾದರು.

ಗೌರಿ ಬರುವ ದಿವಸ ಆಕೆಯ ಮೇಲೆ ದಾಳಿ ನಡೆಯಬಹುದೆಂದು ನಾನು ಮಿಳ್ಳಘಟ್ಟದ ರೇಣುಕಮ್ಮ, ರಾಧಮ್ಮ, ಜಾನಕಿ, ಗೌರಮ್ಮ ಇವರನ್ನೆಲ್ಲಾ ಗೌರಿಯ ಸುತ್ತ ಇದ್ದು ಕಾಯಲು ಕೇಳಿಕೊಂಡೆ. ಆಗ ರೇಣುಕಮ್ಮ ಎಂಬ ದಿಟ್ಟ ಮಹಿಳೆ ’ನೀನೇನು ಹೆದರಬೇಡ ಬುಡಣ್ಣ ಅವುನ್ಯಾವನು ಬತ್ತನೋ ನೋಡ್ತಿನಿ’ ಎನ್ನುತ್ತಾ ಬಂದು ಗೌರಿಗೆ ಬೆಂಗಾವಲಾದರು.
ಕುವೆಂಪು ರಂಗಮಂದಿರದಲ್ಲಿ ಪೊಲೀಸರ ರಕ್ಷಣೆಯಲ್ಲಿ ಗೌರಿ ಮಾತನಾಡಿದರು. ನಂತರ ಅವರ ಬೆಂಗಾವಲಿನಲ್ಲೇ ತರೀಕೆರೆವರೆಗೂ ಹೋದರು. ಇದೆಲ್ಲ ಗೌರಿಗೆ ಹೆಮ್ಮೆಯ ಸಂಗತಿಯಾಗಿತ್ತು.
ಆದರೆ ಕಲ್ಕುಳಿ ವಿಠ್ಠಲ ಹೆಗಡೆ ಭಾಷಣ ಮಾಡುವಾಗ ಯಾರೋ ವೇದಿಕೆಗೆ ಓಡಿ ಬರಲು ಯತ್ನಿಸಿದ. ಡಿ.ವೈ.ಎಸ್.ಪಿ ಚಂದ್ರಶೇಖರ್ ಸಮಯ ಪ್ರಜ್ಞೆ ಮೆರೆದು ಆಗಬಹುದಿದ್ದ ಕಹಿ ಘಟನೆಗೆ ತಡೆಹಾಕಿದರು. ಕಾಗೋಡು ತಿಮ್ಮಪ್ಪನವರೂ ಮೂಲಭೂತವಾದಿಗಳ ನಡವಳಿಕೆಯನ್ನು ಖಂಡಿಸಿದರು. ಚಂಪಾರ ದಿಟ್ಟ ನಡವಳಿಕೆಯಿಂದ ಸಾಹಿತ್ಯ ಪರಿಷತ್‌ನ ಪವರ್ರು ಸಾಮಾನ್ಯರ ಅರಿವಿಗೆ ಬಂತು.

ಇದನ್ನು ಶೃಂಗೇರಿಯಲ್ಲಿ 2020ರಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ವಿಠ್ಠಲ ಹೆಗಡೆ ಅವರು ಆಯ್ಕೆಯಾದಾಗ ನಡೆದ ಘಟನೆಗಳಿಗೆ ತುಲನೆ ಮಾಡಿ ನೋಡಬೇಕಿದೆ. ಇದಕ್ಕೆ ಅಡ್ಡಿಪಡಿಸಲು ಮುಂದಾದ ಸಿ.ಟಿ ರವಿ ಮತ್ತು ಇತರ ಬಿಜೆಪಿ ಕಾರ್ಯಕರ್ತರು, ಅಂದಿನ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನುಬಳಿಗಾರ್‌ಗೆ ಒತ್ತಡ ತಂದು ಹಣ ಬಿಡುಗಡೆಯಾಗದಂತೆ ಮಾಡಿದ್ದಲ್ಲದೆ, ಒಂದಿಷ್ಟು ಗಲಭೆಕೋರ ರನ್ನು ಕಳಿಸಿ ಸಾಹಿತ್ಯ ಸಮ್ಮೇಳನಕ್ಕೆ ಅಡ್ಡಿಪಡಿಸಿ ತಡೆದರು. ಇದಕ್ಕೆ ಸಾಹಿತ್ಯ ಪರಿಷತ್‌ನಿಂದ ಸರಿಯಾದ ಸ್ಪಷ್ಟೀಕರಣ ಕೂಡ ಬರಲಿಲ್ಲ. ಇದು ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ದುರಂತ ಕಹಿ ಘಟನೆಯಾಗಿ ದಾಖಲಾಗಿಹೋಯಿತು. ಇದಕ್ಕೆ ಮುಖ್ಯ ಕಾರಣರಾದ ಮನುಬಳಿಗಾರ್ ಮತ್ತು ಸಿ.ಟಿ ರವಿ ಅವರುಗಳನ್ನು ಸಾಹಿತ್ಯ ಲೋಕ ಎಂದಿಗೂ ಕ್ಷಮಿಸುವುದಿಲ್ಲ.
ಸ್ವಾಯತ್ತ ಸಂಸ್ಥೆಗಳು ತಮ್ಮ ಸ್ವತಂತ್ರವನ್ನು ಕಳೆದುಕೊಂಡು ಆಳುವ ಪಕ್ಷಗಳ, ಪ್ರಭುತ್ವಗಳ ಕೈಗೊಂಬೆಗಳಾಗಿ ಕುಣಿಯುತ್ತಿರುವ ಈ ಸಂದರ್ಭದಲ್ಲಿ ಚಂಪಾ ಮತ್ತು ಅವರ ದಿಟ್ಟ ನಡೆಗಳು ಮತ್ತೆಮತ್ತೆ ನೆನಪಾಗುತ್ತವೆ.
ಇದನ್ನೂ ಓದಿ: ಕಾಫಿ ವಲಯದ ಸಾಂಸ್ಕೃತಿಕ ಲೋಕ ಹೀಗಿತ್ತು: ಪ್ರಸಾದ್ ರಕ್ಷಿದಿ


