ಬಿಹಾರ ವಿಧಾನಸಭಾ ಚುನಾವಣೆ ಗರಿಗೆದರಿದ್ದು ಪ್ರಧಾನಿ ನರೇಂದ್ರ ಮೋದಿ ಇಂದು ಬಿಹಾರಕ್ಕೆ ತೆರಳಿ ಎನ್‌ಡಿಎ ಪರವಾಗಿ ಪ್ರಚಾರ ಭಾಷಣ ಮಾಡಿದರು. ಸಾಸಾರಾಮ್ನಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, “ಚುನಾವಣೆ ಬಂದರೆ ಒಂದಷ್ಟು ಮುಖಂಡರು ಕಾಣಿಸಿಕೊಳ್ಳುತ್ತಾರೆ. ಪ್ರತೀ ಚುನಾವಣೆಯಲ್ಲೂ ಇದು ಸಾಮಾನ್ಯ” ಎಂದು ಹೇಳಿದ್ದಾರೆ.
“ಮತ್ತೊಮ್ಮ ಎನ್‌ಡಿಎ ಸರ್ಕಾರ” ಎಂಬ ಘೋಷಣೆಯೊಂದಿಗೆ ಭಾಷಣ ಪ್ರಾರಂಭಿಸಿದ ಮೋದಿ, ವಿಪಕ್ಷಗಳಾದ ಆರ್ಜೆಡಿ ಮತ್ತು ಕಾಂಗ್ರೆಸ್ ಮೇಲೆ ತೀವ್ರ ವಾಗ್ದಾಳಿ ನಡೆಸಿದರು. “ಬಿಹಾರವನ್ನು ಶಿಲಾಯುಗಕ್ಕೆ ತಳ್ಳಿದವರು ಮತ್ತು ಸಂವಿಧಾನಕ್ಕೆ 370ನೇ ಆರ್ಟಿಕಲ್ ಅನ್ನು ಪುನಃ ಸೇರಿಸುತ್ತೇನೆ ಎನ್ನುವವರಿಗೆ ಬಿಹಾರದ ಜನರ ಬಳಿ ಮತ ಕೇಳುವ ಯಾವ ಮುಖವೂ ಇಲ್ಲ ಎಂದು ಮೋದಿ ಟೀಕಿಸಿದರು. ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕಾಶ್ಮೀರಕ್ಕೆ ಸಂವಿಧಾನದಲ್ಲಿನ ವಿಶೇಷ ಸ್ಥಾನಮಾನವನ್ನು ಮತ್ತೇ ನೀಡುತ್ತೇವೆ ಎಂದು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ’ಮೈ ಫ್ರೆಂಡ್ ಭಾರತವನ್ನಷ್ಟೇ ಹೊಲಸು ಎಂದರು; ನನ್ನನ್ನು ಇನ್ನೂ ಪ್ರೀತಿಸುತ್ತಿದ್ದಾರೆ’
“ಆರ್ಟಿಕಲ್ 370 ಅನ್ನು ರದ್ದುಗೊಳಿಸುವ ನಿರ್ಧಾರವನ್ನು ಹಿಂಪಡೆಯುತ್ತೇವೆ ಎಂದು ಹೇಳುತ್ತಿದ್ದಾರೆ. ಆಶ್ಚರ್ಯ ಎಂದರೆ ಅಂಥ ಹೇಳಿಕೆಗಳನ್ನ ನೀಡಿಯೂ ಬಿಹಾರದ ಜನರ ಬಳಿ ಮತ ಕೇಳುವ ಧೈರ್ಯ ಇದೆಯಲ್ಲಾ” ಎಂದು ಮೋದಿ ಆಶ್ಚರ್ಯ ವ್ಯಕ್ತಪಡಿಸಿದರು.
ಲಾಲೂ ಪ್ರಸಾದ್ ಯಾದವ್ ನೇತೃತ್ವದ ಆರ್ಜೆಡಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ನರೇಂದ್ರ ಮೋದಿ, ಬಿಹಾರವನ್ನು ರೋಗಗ್ರಸ್ತ ರಾಜ್ಯವನ್ನಾಗಿ ಮಾಡಿದವರಿಗೆ ಜನರು ಮತ್ತೆ ಅವಕಾಶ ಕೊಡುವುದಿಲ್ಲ ಎಂದು ಹೇಳಿದರು.
ಆರ್ಜೆಡಿ ಆಡಳಿತದಲ್ಲಿ “ಸೂರ್ಯಾಸ್ತ ಆಯಿತೆಂದರೆ ಎಲ್ಲವೂ ನಿಂತೇ ಹೋಯಿತು ಎಂದರ್ಥ. ಯಾವ ಕಾನೂನೂ ಬಳಕೆಯಲ್ಲಿರಲಿಲ್ಲ. ಸುಲಿಗೆ, ಕೊಲೆ, ಅಪಹರಣ ಸಾಮಾನ್ಯವಾಗಿದ್ದವು. ಬಿಹಾರದ ಈಗಿನ ತಲೆಮಾರಿನ ಜನರು ಮತ ಹಾಕುವ ಮುನ್ನ ಆ ಕತ್ತಲ ಯುಗವನ್ನೊಮ್ಮೆ ನೆನಪಿಸಿಕೊಳ್ಳಬೇಕು” ಎಂದು ಕರೆ ನೀಡಿದರು.
ಇದನ್ನೂ ಓದಿ: ನಮ್ಮ ಜನತೆಗೆ ಉಚಿತ ಕೊರೊನಾ ಲಸಿಕೆ ಕೊಡಿಸುವ ಧಮ್ ಇದೆಯೇ ನಳಿನ್ ಕುಮಾರ್?- ಸಿದ್ದರಾಮಯ್ಯ
ಕೇಂದ್ರ ಸರ್ಕಾರದ ಕೃಷಿ ಮಸೂದೆಗಳಿಗೆ ವಿರೋಧ ಪಕ್ಷಗಳು ಮಾಡುತ್ತಿರುವ ವಿರೋಧಗಳನ್ನು ಅಲ್ಲಗಳೆದ ಮೋದಿ “ಮಂಡಿ (ಎಪಿಎಂಸಿ ಮಾರುಕಟ್ಟೆ) ಮತ್ತು ಎಂಎಸ್ಪಿ ಇವರಿಗೆ ಟೀಕಿಸಲು ಒಂದು ನೆಪ ಮಾತ್ರ. ಇವರಿಗೆ ಮಧ್ಯವರ್ತಿಗಳನ್ನ ಕಾಪಾಡುವ ಉದ್ದೇಶ ಮಾತ್ರ ಇದೆ” ಎಂದು ಆರೋಪಿಸಿದರು.
ಬಿಹಾರದ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದು ಸ್ವತಂತ್ರವಾಗಿ ಸ್ಪರ್ಧಿಸುತ್ತಿರುವ ಎಲ್ಜೆಪಿಯ ಕುರಿತು ಮಾತನಾಡಿದ ಮೋದಿ, “ಚುನಾವಣೆ ಬಂದರೆ ಒಂದಷ್ಟು ಮುಖಂಡರು ಕಾಣಿಸಿಕೊಳ್ಳುತ್ತಾರೆ. ವಾಸ್ತವದಲ್ಲಿರುವುದಕ್ಕಿಂತ ಅವರನ್ನು ದೊಡ್ಡವರನ್ನಾಗಿ ಬಿಂಬಿಸಲಾಗುತ್ತದೆ. ಪ್ರತೀ ಚುನಾವಣೆಯಲ್ಲೂ ಇದು ಸಾಮಾನ್ಯ. ಇಂಥ ವದಂತಿ ಮತ್ತು ಮಿಥ್ಯೆಗಳನ್ನ ಬಿಹಾರದ ಬುದ್ಧಿವಂತ ಮತದಾರರು ನಂಬುವುದಿಲ್ಲ” ಎಂದು ಹೇಳಿದರು.
ಇದನ್ನೂ ಓದಿ: ನಾನುಗೌರಿ ಬಯಲಿಗೆಳೆದ ಗೃಹಸಚಿವರ ವಿವಾದಾತ್ಮಕ ವೀಡಿಯೊ ಟ್ವೀಟ್ ಡಿಲಿಟ್ ಮಾಡಿದ ವಿಎಚ್‌ಪಿ ಮುಖಂಡ


