ನಾನುಗೌರಿ ಬಯಲಿಗೆಳೆದ ಗೃಹಸಚಿವರ ವಿವಾದಾತ್ಮಕ ವೀಡಿಯೊ ಟ್ವೀಟ್‌ ಡಿಲಿಟ್‌ ಮಾಡಿದ ವಿಎಚ್‌ಪಿ ಮುಖಂಡ
PC:deccanherald

‘ನಿಮ್ಮ ಮೇಲೆ ಯಾವುದೇ ಕೇಸಿದ್ದರೂ, ಎಲ್ಲಾ ತೆಗೆದು ಹಾಕುತ್ತೇವೆʼ ಎಂದು ಸ್ವತಃ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರು ಹೇಳಿರುವ ವಿವಾದಾತ್ಮಕ ವಿಡಿಯೋವೊಂದನ್ನು ಅಕಸ್ಮಾತಾಗಿ ವಿಎಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ಇದನ್ನು ನಾನುಗೌರಿ.ಕಾಮ್ ಬಯಲಿಗೆಳೆದಿದ್ದು, ಪ್ರಸ್ತುತ ವಿಡಿಯೊವನ್ನು ತನ್ನ ಟ್ವಿಟ್ಟರ್‌ನಿಂದ ಶರಣ್ ಪಂಪ್ವೆಲ್ ಡಿಲೀಟ್ ಮಾಡಿದ್ದಾರೆ.

ಪ್ರವಾಹ ಪರಿಸ್ಥಿತಿ ಬಗ್ಗೆ ಪರಿಶೀಲಿಸಲು ಗೃಹಸಚಿವ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿಯವರು ಉಡುಪಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಅದರ ಬಗ್ಗೆ ತನ್ನ ಟ್ವಿಟ್ಟರಿನಲ್ಲಿ ಡಿ.ಜೆ.ಹಳ್ಳಿಯಲ್ಲಿ ನಡೆದ ಗಲಭೆಯನ್ನು ಉಲ್ಲೇಖಿಸಿ “ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಮತ್ತು SDPI ಸಂಘಟನೆಯನ್ನು ನಿಷೇಧಿಸಬೇಕು ಮತ್ತು ಈ ಘಟನೆಯ ಹಿಂದೆ ರಾಷ್ಟ್ರವಿದ್ರೋಹಿ ಸಂಘಟನೆ ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್ಐ, ಭಯೋದ್ಪಾದಕರ ಕೈವಾಡವಿರುದರಿಂದ ಈ ಘಟನೆಯನ್ನು ರಾಷ್ಟ್ರೀಯ ತನಿಖಾ ದಳದ (NIA ) ಮುಖಾಂತರ ತನಿಖೆಗೆ ನಡೆಸಲು ಮಾನ್ಯ ಗೃಹಸಚಿವರಿಗೆ ಆಗ್ರಹಿಸಿದ್ದೇವೆ” ಎಂದು ಟ್ವೀಟ್ ಮಾಡಿದ್ದರು. ಟ್ವೀಟ್‌ನ ಆರ್ಕೈವ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ.

ಇದನ್ನು ಗಮನಿಸಿ ನಾನುಗೌರಿ ತಂಡ “ವಿವಾದಾತ್ಮಕ ವಿಡಿಯೋ: ಗಲಭೆಗಳಲ್ಲಿ ಭಾಗಿಯಾದ ಆರೋಪಿಗೆ ʼಎಲ್ಲಾ ಕೇಸು ತೆಗೆದು ಹಾಕುತ್ತೇವೆʼ ಎಂದ ಗೃಹ ಸಚಿವರು!” ಎಂಬ ಶಿರ್ಷಿಕೆಯ ವರದಿಯನ್ನು ಮಾಡಿತ್ತು. ವರದಿ ವೈರಲಾಗುತ್ತಿದ್ದಂತೆ ಶರಣ್ ಪಂಪ್‌ವೆಲ್ ಟ್ವಿಟ್ಟರ್‌ನಲ್ಲಿರುವ ತನ್ನ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಅಲ್ಲದೆ ಅಲ್ಲಿ ಬೇರೆಯೆ ಹೊಸ ಟ್ವೀಟ್ ಹಾಕಿದ್ದಾರೆ.

ಹೊಸ ಟ್ವೀಟ್‌ನಲ್ಲಿ ಶರಣ್ ಪಂಪ್‌ವೆಲ್, “ಮೂರೂ ದಿವಸಗಳ ಹಿಂದೆ ದೇಶದ ಗೃಹ ಇಲಾಖೆಯು ದೇಶದಲ್ಲಿ ಕೋಮುಗಲಭೆ ಸೃಷ್ಟಿಸಲು ISI ಸಂಚು ರೂಪಿಸುತ್ತದೆ ಎಂದು ವರದಿ ನೀಡಿತ್ತು. ಹಾಗಾಗಿ ಘಟನೆಯ ಹಿಂದೆ ಪಾಕಿಸ್ತಾನ ಗುಪ್ತಚರ ಸಂಸ್ಥೆಯಾದ ISI ಯ ಕೈವಾಡವಿದೆ ಎಂದು ಸಂಶಯ ವ್ಯಕ್ತವಾಗಿರುತ್ತದೆ, #ಡಿಜೆಹಳ್ಳಿಜಿಹಾದಿಗಳಅಟ್ಟಹಾಸ” ಎಂದು ಟ್ವೀಟ್ ಮಾಡಿದ್ದಾರೆ.

ಡಿಲೀಟ್ ಮಾಡಿರುವ ವಿಡಿಯೋದಲ್ಲಿ ಗೃಹಸಚಿವ ಬಸವರಾಜ ಬೊಮ್ಮಾಯಿಯವರು ಉಡುಪಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹಲವು ಗಲಭೆಗಳಲ್ಲಿ ಭಾಗಿಯಾಗಿ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್‌ ಎದುರು ‘ನೋಡ್ರಿ ನಿಮ್ಮ ಮೇಲೆ ಯಾವುದೇ ಕೇಸು ಇದ್ದರೂ ತೆಗೆದು ಹಾಕುತ್ತೇವೆ’ ಎಂದು ಹೇಳಿದ್ದಾರೆ. ವಿಡಿಯೋವನ್ನು ಕೆಳಗೆ ನೋಡಬಹುದಾಗಿದೆ.

ಒಂದು ಕಡೆ ಎಸ್‌ಡಿಪಿಐ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಸಿದ್ದರಾಮಯ್ಯ ಸರ್ಕಾರ ಕೈಬಿಟ್ಟಿತೆಂದು ವಿರುದ್ಧ ಟೀಕಿಸುವ ಬಿಜೆಪಿ ಸರ್ಕಾರ ಮತ್ತು ಅದರ ಸದಸ್ಯರು ಈಗ ಬಲಪಂಥೀಯ ಕಾರ್ಯಕರ್ತರು ಭಾಗಿಯಾದ ಪ್ರಕರಣಗಳನ್ನು ವಾಪಸ್ ಪಡೆಯುವುದಾಗಿ ಅದೇ ಪಕ್ಷಕ್ಕೆ ಸೇರಿದ ಗೃಹ ಸಚಿವರೇ ಹೇಳುತ್ತಿದ್ದಾರೆ. ಹಾಗಾಗಿ ಈ ವಿಡಿಯೋಗೆ ವಿಶೇಷ ಮಹತ್ವ ಬಂದಿದೆ.

ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಯ ಮೇಲೆ ಆರೋಪ ಮಾಡುತ್ತಿರುವ ಬಿಜೆಪಿ ನಾಯಕರುಗಳು ಮತ್ತು ಇತರರು ಇದೀಗ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಶರಣ್‌  ಪಂಪ್‌ವೆಲ್‌ ವಿರುದ್ಧದ ಕೇಸುಗಳನ್ನು ವಾಪಸ್ ಪಡೆಯುತ್ತೇವೆ ಎಂದು ಸ್ವತಃ ಗೃಹ ಸಚಿವರು ಹೇಳಿರುವುದಕ್ಕೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಕಾದು ನೋಡಬೇಕು.


 

 

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts

LEAVE A REPLY

Please enter your comment!
Please enter your name here