Homeಕರ್ನಾಟಕಸಾರ್ವಜನಿಕ ಸಾರಿಗೆ ವ್ಯವಸ್ಥೆ ’ಜನಸ್ನೇಹಿ’ಯಾಗುವುದು ಯಾವಾಗ?

ಸಾರ್ವಜನಿಕ ಸಾರಿಗೆ ವ್ಯವಸ್ಥೆ ’ಜನಸ್ನೇಹಿ’ಯಾಗುವುದು ಯಾವಾಗ?

’ಸೇವೆ’ ಎಂಬುದನ್ನು ಮರೆತು, ’ಲಾಭ’ಕ್ಕೆ ಮುಂದಾದ ಬಿಎಂಟಿಸಿ-ನಮ್ಮ ಮೆಟ್ರೋ

- Advertisement -
- Advertisement -

ದೇಶದ ’ಸಿಲಿಕಾನ್ ವ್ಯಾಲಿ’ ಎಂದು ಕರೆಯಲ್ಪಡುವ ಬೆಂಗಳೂರು, ದೇಶದ 3ನೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾಗಿದೆ. ಏಷ್ಯಾದ 15ನೇ ಅತಿಹೆಚ್ಚು ಜನಸಂಖ್ಯೆಯ ನಗರ ಸಮೂಹವಾಗಿದೆ. ವಿಶ್ವದ 18ನೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಈ ನಗರವು ವರ್ಷವಿಡೀ ತನ್ನ ಆಹ್ಲಾದಕರ ವಾತಾವರಣಕ್ಕೆ ಹೆಸರುವಾಸಿಯಾಗಿದೆ. ವಿಶ್ವದ 10 ಅಗ್ರ ಆದ್ಯತೆಯ ಉದ್ಯಮಶೀಲ ನಗರಗಳಲ್ಲಿ ಒಂದಾಗಿದೆ. ಹೀಗೆ ಹಲವು ಸಕಾರಣಗಳಿಗೆ ಪ್ರಸಿದ್ಧಿಯಾಗಿ, ತನ್ನ ವಿಶ್ವದರ್ಜೆಯ ಮೂಲ ಸೌಕರ್ಯಗಳಿಗೆ ಹೆಸರುವಾಸಿಯಾಗಿದ್ದರೂ, ಅವೈಜ್ಞಾನಿಕ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮತ್ತು ಕೆಟ್ಟ ಟ್ರಾಫಿಕ್ ನಿರ್ವಹಣೆ ಕಾರಣಕ್ಕೆ ಅಷ್ಟೇ ಕುಖ್ಯಾತವಾಗಿದೆ.

ನಗರವೊಂದು ಯಾವ ಮಟ್ಟದಲ್ಲಿ ’ಜನಸ್ನೇಹಿ’ಯಾಗಿದೆ ಎಂಬುದನ್ನು ಅಲ್ಲಿನ ಮೂಲಸೌಕರ್ಯಗಳು ನಿರ್ಧರಿಸುತ್ತವೆ. ಜನಸಂಖ್ಯೆಗೆ ಅಗತ್ಯವಿರುವಷ್ಟು ರಸ್ತೆ, ಉತ್ತಮ ಸಾರಿಗೆ ಮತ್ತು ಪಾದಚಾರಿ ಮಾರ್ಗದ ಜತೆಗೆ, ಎಲ್ಲ ವರ್ಗದ ಜನರನ್ನೂ ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಬೇಕಾಗುತ್ತದೆ. ಆದರೆ, ದೇಶದ ಬಹುತೇಕ ನಗರಗಳಲ್ಲಿ ಸ್ಥಳೀಯ ಆಡಳಿತಗಳು ’ಜನಸ್ನೇಹಿ’ಯಾಗಿಲ್ಲ ಎನ್ನುವುದಕ್ಕೆ ಹಲವು ಉದಾಹರಣೆಗಳು ನಮ್ಮ ಕಣ್ಣಮುಂದಿವೆ. ಅಂತಹ ’ಮೆಟ್ರೋಪಾಲಿಟನ್’ ನಗರ ಪಟ್ಟಿಯಲ್ಲಿ ಬೆಂಗಳೂರು ಸಹ ಅಗ್ರಸ್ಥಾನದಲ್ಲಿದೆ.

ಬೆಂಗಳೂರು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದು, ದೇಶ-ವಿದೇಶಗಳ ಕಂಪನಿಗಳು ಇಲ್ಲಿ ನೆಲೆ ಕಂಡುಕೊಂಡಿವೆ. ಸ್ಥಳೀಯರ ಜೊತೆಗೆ ದೇಶದ ವಿವಿಧ ರಾಜ್ಯಗಳ ವಲಸಿಗರು ಸೇರಿ ಒಂದೂಕಾಲು ಕೋಟಿಗೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಇಲ್ಲಿ, ಸರಿಸುಮಾರು 50 ಲಕ್ಷಕ್ಕೂ ಹೆಚ್ಚು ವಾಹನಗಳಿವೆ ಎನ್ನುತ್ತವೆ ವರದಿಗಳು. ಅಂದರೆ, ಅಂದಾಜಿನ ಪ್ರಕಾರ ಬೆಂಗಳೂರಿನ ಪ್ರತಿ ಇಬ್ಬರಿಗೆ ಒಂದು ಕಾರ್ ಅಥವಾ ಬೈಕ್ ಇದೆ. ಇಲ್ಲಿನ ಜನರು ಇಷ್ಟೊಂದು ಖಾಸಗಿ ವಾಹನಗಳ ಮೇಲೆ ಅವಲಂಬಿತರಾಗಿರುವುದು ಏಕೆ ಎಂಬುದಕ್ಕೆ ಹಲವು ಕಾರಣಗಳಿದ್ದರೂ, ನಮ್ಮ ’ಸಾರ್ವಜನಿಕ ಸಾರಿಗೆ’ ವ್ಯವಸ್ಥೆ ಜನಸ್ನೇಹಿಯಾಗದೇ ಇರುವುದು ಪ್ರಮುಖ ಅಂಶವಾಗಿದೆ.

ವಿಶ್ವ ದರ್ಜೆಯ ಮೆಟ್ರೋ ರೈಲು, ಬೆಂಗಳೂರಿಗೆಂದೇ ಪ್ರತ್ಯೇಕ ಬಸ್ ಸಂಸ್ಥೆಯಾದ ಬಿಎಂಟಿಸಿ, ಉಪನಗರ ರೈಲು ಸೇವೆ, ಆಟೋ, ಕ್ಯಾಬ್ ಜೊತೆಗೆ ಆಪ್ ಆಧಾರಿತ ಸಂಚಾರ ವ್ಯವಸ್ಥೆಯಿದ್ದರೂ ಬೆಂಗಳೂರಿನ ಸಾರಿಗೆ ವ್ಯವಸ್ಥೆ ಜನಸ್ನೇಹಿಯಾಗಿಲ್ಲವೇ ಎಂದು ಯಾರಾದರೂ ಪ್ರಶ್ನಿಸಿದರೆ- ಇಲ್ಲ ಎಂದು ಖಚಿತವಾಗಿ ಹೇಳಿಬಿಡಬಹುದು. ಏಕೆಂದರೆ, ಸಮೂಹ ಸಾರಿಗೆಯನ್ನೇ ಪ್ರತಿನಿತ್ಯ ಅವಲಂಬಿಸಿರುವ ಲಕ್ಷಾಂತರ ಜನರು ಸಾರಿಗೆ ಸಂಸ್ಥೆಗಳ ಅಸಮರ್ಪಕ ನಿರ್ವಹಣೆ ಮತ್ತು ನಿರ್ಲಕ್ಷ್ಯದ ಕಾರಣಕ್ಕೆ ಹೈರಾಣಾಗಿದ್ದಾರೆ. ಸಂಸ್ಥೆಗಳು ನಿಗದಿಪಡಿಸಿದ ಟಿಕೆಟ್ ಹಣ ತೆತ್ತು, ತುಂಬಿ ತುಳುಕುವ ಬಸ್ ಮತ್ತು ಮೆಟ್ರೋ ರೈಲಿನಲ್ಲಿ ಪ್ರಯಾಸಪಡುತ್ತಿದ್ದಾರೆ. ಇದರಿಂದ ಬೇಸತ್ತಿರುವ ಹಲವರು, ಸಾಲ ಮಾಡಿಯಾದರೂ ಸರಿ ಸ್ವಂತ ವಾಹನ ಇಟ್ಟುಕೊಳ್ಳತ್ತಿದ್ದಾರೆ. ಇದರಿಂದ ನಗರದಲ್ಲಿ ಖಾಸಗಿ ವಾಹನಗಳ ಬಳಕೆ ಹೆಚ್ಚಾಗಿದ್ದು, ಇಡೀ ದೇಶದಲ್ಲೇ ಅತ್ಯಂತ ಕೆಟ್ಟ ಟ್ರಾಫಿಕ್ ನಿರ್ವಹಣೆ ಎಂಬ ಕುಖ್ಯಾತಿಗೂ ಬೆಂಗಳೂರು ತುತ್ತಾಗಿದೆ.

ಸುಧಾರಿಸದ ಬಿಎಂಟಿಸಿ ಸೇವೆ; ಲಾಭದ ಬಗ್ಗೆ ಮಾತ್ರ ಚಿಂತೆ!

ಮೈಸೂರು ರಾಜ್ಯ ಸರ್ಕಾರವು 1956ರಲ್ಲಿ ಬೆಂಗಳೂರಿಗೆಂದೇ ಪ್ರತ್ಯೇಕವಾಗಿ ನಗರ ಸಾರಿಗೆಯನ್ನು ಆರಂಭಿಸಿ, ಅದಕ್ಕೆ ಬೆಂಗಳೂರು ಸಾರಿಗೆ ಸೇವೆ (ಬಿಟಿಎಸ್) ಎಂದು ನಾಮಕರಣ ಮಾಡಿತು. ನಂತರ, 1997ರಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಆರಂಭವಾದ ಬಳಿಕ, ಬಿಟಿಎಸ್‌ಅನ್ನು ಬಿಎಂಟಿಸಿ ಎಂದು ಹೆಸರು ಬದಲಿಸುವ ಮೂಲಕ ಕೆಎಸ್‌ಆರ್‌ಟಿಸಿಯ ಒಂದು ವಿಭಾಗವನ್ನಾಗಿ ಮಾಡಲಾಯಿತು. ಇಡೀ ದೇಶದಲ್ಲೇ ಪ್ರತ್ಯೇಕ ನಗರ ಸಾರಿಗೆ ಎಂಬ ಹೆಗ್ಗಳಿಕೆ ಈ ಸಾರಿಗೆ ಸಂಸ್ಥೆಗಿದೆ.

ಇಷ್ಟೆಲ್ಲಾ ಹಿರಿಮೆಗಳನ್ನು ಹೊಂದಿರುವ ಬಿಎಂಟಿಸಿ ಮಾತ್ರ ಸಾಕಷ್ಟು ಸುಧಾರಿಸಬೇಕಿದೆ. ಬಸ್ ಮತ್ತು ನಿಲ್ದಾಣಗಳ ನಿರ್ವಹಣೆ, ಸಮಯ ಹೊಂದಾಣಿಕೆ, ಪ್ರಯಾಣಿಕರ ಜೊತೆಗಿನ ಸಿಬ್ಬಂದಿ ವರ್ತನೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳಬೇಕಿದೆ. 6027 ಬಸ್‌ಗಳು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಕಾರ್ಯಾಚರಣೆ ಮಾಡುತ್ತಿವೆ ಎಂದು ಸಂಸ್ಥೆ ತನ್ನ ಅಧಿಕೃತ ವೆಬ್‌ಸೈಟಿನಲ್ಲಿ ಮಾಹಿತಿ ನೀಡಿದೆ. ಪ್ರತಿನಿತ್ಯ 40 ಲಕ್ಷ ಜನ ಪ್ರಯಾಣಿಕರು ಬಿಎಂಟಿಸಿ ಸಾರಿಗೆ ವ್ಯವಸ್ಥೆಯನ್ನು ಬಳಸುತ್ತಿದ್ದು, ಕೇವಲ ಆರು ಸಾವಿರ ಬಸ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ನಿಗಮದಲ್ಲಿ ಸಿಬ್ಬಂದಿಗಳ ಕೊರತೆಯೂ ಇದ್ದು, ಜನರಿಗೆ ಅಗತ್ಯವಿರುವ ಸಮಯದಲ್ಲಿ ಸೇವೆ ಸಿಗುತ್ತಿಲ್ಲ ಎಂಬುದು ಹಲವರ ದೂರಾಗಿದೆ; ಒಳಗೆ ಇಳಿದಷ್ಟೂ ಈ ಆರೋಪದಲ್ಲಿ ಸತ್ಯ ಇರುವುದು ನಮಗೆಲ್ಲಾ ಗೋಚರಿಸುತ್ತದೆ.

ಬಿಎಂಟಿಸಿ ಇಂದು ಬೆಂಗಳೂರು ನಗರ ಮಾತ್ರವಲ್ಲದೆ, ನಗರದ ಹೊರವಲಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವು ತಾಲೂಕುಗಳಿಗೂ ತನ್ನ ಸೇವೆಯನ್ನು ವಿಸ್ತರಿಸಿದೆ. ಒಟ್ಟು 49 ಡಿಪೋಗಳಲ್ಲಿ 28,286 ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಕಚೇರಿ ಮತ್ತು ಶಾಲಾ-ಕಾಲೇಜು ಆರಂಭವಾಗುವ ಮುಂಜಾನೆ ಮತ್ತು ಜನರು ಮನೆಗೆ ಮರಳುವ ಸಂಜೆ ಹೊತ್ತಿನಲ್ಲಿ ಅಗತ್ಯವಿರುವಷ್ಟು ಬಸ್‌ಗಳನ್ನು ಓಡಿಸುತ್ತಿಲ್ಲ. 11 ಗಂಟೆಯ ನಂತರ ಸಂಚಾರ ಸಾಕಷ್ಟು ವಿರಳವಾಗಿರುತ್ತದೆ..

ನಗರದ ಹೊರ ವಲಯಗಳಾದ ಆನೇಕಲ್, ಬನ್ನೇರುಘಟ್ಟ, ಕೆಂಗೇರಿ, ಬಿಡದಿ, ಕೆಆರ್ ಪುರಂ, ಹೊಸಕೋಟೆ, ಯಲಹಂಕ, ದೊಡ್ಡಬಳ್ಳಾಪುರ, ನೆಲಮಂಗಲ ಮಾರ್ಗವಾಗಿ ಸಂಚರಿಸುವ ಬಸ್‌ಗಳು ’ಪೀಕ್ ಹವರ್’ನಲ್ಲಿ ತುಂಬಿ ತುಳುಕುತ್ತಿರುತ್ತವೆ. ಒಂದೂವರೆಯಿಂದ ಎರಡು ಗಂಟೆಗಳ ಕಾಲ ಬಹುತೇಕ ಪ್ರಯಾಣಿಕರು ನಿಂತೆ ಪ್ರಯಾಣ ನಡೆಸಬೇಕಾಗಿದೆ. ಬೆಳಗ್ಗೆ 7:30ರಿಂದ 11 ಗಂಟೆ ಮತ್ತು ಸಂಜೆ 4:30ರಿಂದ ರಾತ್ರಿ 9 ಗಂಟೆವರೆಗೆ ನಗರದ ಯಾವುದೇ ಬಸ್ ನೋಡಿದರೂ ತುಂಬಿರುತ್ತವೆ. ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣ ಸೇರಿದಂತೆ ಎಲ್ಲ ಪ್ರಮುಖ ನಿಲ್ದಾಣಗಳು ಮತ್ತು ಜಂಕ್ಷನ್‌ಗಳಲ್ಲಿ ಬಿಎಂಟಿಸಿ ಬಸ್‌ಗಾಗಿ ಸಾವಿರಾರು ಜನ ಕಾದುಕುಳಿತು, ಬಸ್ ಬಂದಕೂಡಲೇ ಸೀಟು ಹಿಡಿಯುವುದಕ್ಕೆ ಹರಸಾಹಸ ಪಡುತ್ತಾರೆ. ಇದರಿಂದ, ಸಹ ಪ್ರಯಾಣಿಕರ ಜೊತೆಗೆ ಜಗಳವೂ ಸಾಮಾನ್ಯ ಎಂಬಂತಾಗಿದೆ.

ಈ ಬಗ್ಗೆ ’ನ್ಯಾಯಪಥ’ ಪತ್ರಿಕೆಯೊಂದಿಗೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತೆ ಗಾಯತ್ರಿ, “ನಾನು ಸರ್ಕಾರೇತರ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಅಸಂಘಟಿತ ವಲಯದ ಕಾರ್ಮಿಕರಿಗೆ ’ಕಾರ್ಮಿಕ ಇಲಾಖೆ’ ನೀಡುವ ಸವಲತ್ತುಗಳ ಕುರಿತು ಜಾಗೃತಿ ಮೂಡಿಸುತ್ತೇನೆ. ಪ್ರತಿನಿತ್ಯ ನೆಲಮಂಗಲದಿಂದ ವಿಜಯನಗರಕ್ಕೆ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಮಾಡಬೇಕು. ನಂತರ, ಅಲ್ಲಿಂದ ನಗರದ ವಿವಿಧ ಭಾಗಗಳಲ್ಲಿರುವ ಸ್ಲಂಗಳಿಗೆ ತೆರಳಲು ಬಿಎಂಟಿಸಿಯನ್ನೇ ಅವಲಂಬಿಸಿದ್ದೇನೆ. ಬೆಳಗ್ಗೆ ಎಂಟು ಗಂಟೆಗೆ ಮನೆ ಬಿಟ್ಟರೂ ಕಚೇರಿ ತಲುಪುವುದಕ್ಕೆ ಒಮ್ಮೊಮ್ಮೆ ಎರಡೂವರೆ ಗಂಟೆ ಬೇಕಾಗುತ್ತದೆ. ನೆಲಮಂಗಲದಿಂದ ವಿಜಯನಗರಕ್ಕೆ ಎರಡು ಬಸ್ ಬದಲಿಸಬೇಕು. ಹಲವು ಬಾರಿ ನೆಲಮಂಗಲದಿಂದ ಯಶವಂತಪುರದವರೆಗೂ ನಿಂತುಕೊಂಡೆ ಪ್ರಯಾಣ ಮಾಡಬೇಕು. ಬೆಳಗ್ಗೆ ಮತ್ತು ಸಂಜೆ ಬರುವ ಬಸ್‌ಗಳು ಪ್ರತಿದಿನವೂ ತುಂಬಿರುತ್ತದೆ. ತಡವಾಗಿ ಬರುವ ಬಸ್‌ಗೆ ಹತ್ತಲು ಎರಡು ಬಸ್‌ಗಳಷ್ಟು ಜನ ಕಾದು ನಿಂತಿರುತ್ತಾರೆ. ಅವರನ್ನೆಲ್ಲಾ ಹಿಂದಿಕ್ಕಿ ಸೀಟು ಹಿಡಿಯುವುದು ನಮ್ಮಂಥವರಿಗೆ ಸಾಧ್ಯವಿಲ್ಲ. ಬಸ್‌ನಲ್ಲಿ ಜಾಗ ಹಿಡಿದು ಒಂದು ಕಡೆ ನಿಲ್ಲುವುದೂ ಕಷ್ಟ, ತುಂಬಿತುಳುಕುತ್ತಿರುವ ಬಸ್ಸಿನಲ್ಲೇ ಬ್ಯಾಗ್‌ನಲ್ಲಿರುವ ನಮ್ಮ ಆಧಾರ್ ಕಾರ್ಡ್ ಹುಡುಕಿ ಕಂಡಕ್ಟ್‌ರ್‌ಗೆ ತೋರಿಸಬೇಕು. ಸ್ವಲ್ಪ ತಡವಾದರೂ ಅವರು ಬಾಯಿಗೆ ಬಂದಂತೆ ಪ್ರಯಾಣಿಕರ ಮುಂದೆ ಅವಮಾನಿಸುತ್ತಾರೆ, ಶಕ್ತಿ ಯೋಜನೆ ಆರಂಭವಾಗುವುದಕ್ಕೂ ಮೊದಲು ಚಿಲ್ಲರೆ ಇಟ್ಟುಕೊಂಡೇ ಬಸ್ ಹತ್ತಬೇಕಿತ್ತು. ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ಕಂಡಕ್ಟರ್‌ಗಳು ಬಾಯಿಗೆ ಬಂದಂತೆ ಮಾತನಾಡುತ್ತಿದ್ದರು” ಎಂದು ಅವರು ತಮ್ಮ ಅಳಲು ತೋಡಿಕೊಂಡರು.

ಹಲವು ವರ್ಷಗಳಿಂದ ಚಿಕ್ಕಪೇಟೆಯ ’ಆಡಿಟರ್’ ಕಚೇರಿಯಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿರುವ ಮಂಜುನಾಥ್ ಮಾತನಾಡಿ, “ಕಳೆದ ಏಳೆಂಟು ವರ್ಷಗಳಿಂದ ದೊಡ್ಡಬಳ್ಳಾಪುರದಿಂದ ಪ್ರತಿನಿತ್ಯ ಬೆಂಗಳೂರಿಗೆ ಸಂಚರಿಸುತ್ತಿದ್ದೇನೆ. ಕೆಲಸ ಮತ್ತು ಕಾಲೇಜಿಗೆ ಯಲಹಂಕ ಮಾರ್ಗವಾಗಿ ಬೆಂಗಳೂರಿಗೆ ನೂರಾರು ಜನ ಪ್ರಯಾಣಿಸುತ್ತಾರೆ. ಬೆಳಗ್ಗೆ ಏಳಕ್ಕೆ ಹೊರಡುವ ಬಿಎಂಟಿಸಿ ಬಸ್‌ಗಳು ತುಂಬಿರುತ್ತವೆ. ಬೆಳಗಿನ ಹೊತ್ತು ಹೆಚ್ಚುವರಿ ಬಸ್‌ಗಳನ್ನು ಬಿಡುವಂತೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇಲ್ಲಿಂದ ಬೆಂಗಳೂರಿಗೆ ಸಂಚರಿಸುವ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಮತ್ತು ಎಲ್ಲ ಎಕ್ಸ್‌ಪ್ರೆಸ್ ಬಸ್‌ಗಳಲ್ಲಿ ನಿಂತುಕೊಳ್ಳಲೂ ಸ್ಥಳವಿರುವುದಿಲ್ಲ. ಕೋವಿಡ್ ಲಾಕ್‌ಡೌನ್ ಬಳಿಕ ಬಸ್‌ಗಳ ಸಂಖ್ಯೆ ಮತ್ತಷ್ಟು ಕಡಿಮೆಯಾಗಿವೆ” ಎಂದರು.

ಬದಲಾಗದ ಸಿಬ್ಬಂದಿಗಳ ವರ್ತನೆ

ಕಳೆದ ತಿಂಗಳು, 5 ರೂಪಾಯಿ ಚಿಲ್ಲರೆ ವಿಚಾರಕ್ಕೆ ಬಿಎಂಟಿಸಿ ಕಂಡಕ್ಟರ್‌ರೊಬ್ಬರು ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದರು. ನಂತರ, ಅವರನ್ನು ಇಲಾಖೆ ಅಮಾನತು ಮಾಡಿದೆ. ಆಗಸ್ಟ್ 6ರಂದು ಘಟನೆ ನಡೆದಿದ್ದು, ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು. ಅಭಿನವ್ ರಾಜ್ ಎಂಬ ಪ್ರಯಾಣಿಕ ಹಲ್ಲೆಗೊಳಗಾದ ವ್ಯಕ್ತಿ. ಚಿಲ್ಲರೆ ವಿಚಾರಕ್ಕೆ ಪ್ರಯಾಣಿಕನ ಮೇಲೆ ನಿರ್ವಾಹಕ ಹಲ್ಲೆ ನಡೆಸಿದ್ದರು.

ಪ್ರಯಾಣಿಕ ಕೆ.ಆರ್ ಪುರಂ ರೈಲ್ವೆ ನಿಲ್ದಾಣದಿಂದ ಮಾರತ್ತಹಳ್ಳಿ ಕಲಾಮಂದಿರಕ್ಕೆ ಟಿಕೆಟ್ ತೆಗೆದುಕೊಂಡಿದ್ದರು. ಟಿಕೆಟ್ ದರ 15 ಇತ್ತು. ಆತ 20ರೂ ಕೊಟ್ಟಿದ್ದರು. ಬಾಕಿ 5 ವಾಪಸ್ ಕೇಳಿದ್ದಕ್ಕೆ ಕಂಡಕ್ಟರ್ ಹಲ್ಲೆ ನಡೆಸಿದ್ದಾರೆ ಎಂದು ಆ ಯುವಕ ಆರೋಪಿಸಿದ್ದರು.

ಮಾರ್ಚ್‌ನಲ್ಲಿ ನಡೆದ ಮತ್ತೊಂದು ಪ್ರಕರಣದಲ್ಲಿ, ಮಹಿಳಾ ಪ್ರಯಾಣಿಕರೊಬ್ಬರಿಗೆ ತಾಳ್ಮೆ ಕಳೆದುಕೊಂಡಿದ್ದ ಕಂಡಕ್ಟರ್ ಹಿಗ್ಗಾಮುಗ್ಗಾ ಥಳಿಸಿದ್ದರು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಸಂಸ್ಥೆ ಅವರನ್ನು ಅಮಾನತು ಮಾಡಿದೆ.

ಬಿಳೇಕಳ್ಳಿಯಿಂದ ಶಿವಾಜಿನಗರಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ ಸಂಚರಿಸುತ್ತಿದ್ದ ಮಹಿಳೆಯೊಬ್ಬರು ಬಿಎಂಟಿಸಿ ಬಸ್ ಕಂಡಕ್ಟರ್ ಜೊತೆ ವಾಗ್ವಾದ ನಡೆಸಿದ್ದರು. ಬಿಎಂಟಿಸಿಯ ಡಿಪೋ ಸಂಖ್ಯೆ 34ಕ್ಕೆ ಸೇರಿದ ಕೆಎ 57 ಎಫ್ 1602 ಬಸ್‌ನಲ್ಲಿ ಈ ಘಟನೆ ನಡೆದಿತ್ತು. ಬಳಿಕ, ಕಂಡಕ್ಟರ್ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿದ್ದರು.

ಈ ಎರಡು ಪ್ರಕರಣಗಳು ಮಾತ್ರವಲ್ಲ, ಪ್ರಯಾಣಿಕರ ಜೊತೆಗೆ ಬಿಎಂಟಿಸಿ ಸಿಬ್ಬಂದಿಯ ಅನುಚಿತ ವರ್ತನೆಯ ಹಲವು ಪ್ರಕರಣಗಳು ಆಗಿದ್ದಾಂಗೆ ವರದಿಯಾಗುತ್ತಲೇ ಇರುತ್ತವೆ.

ಬಿಎಂಟಿಸಿಯಲ್ಲಿ 49 ಡಿಪೋಗಳಿವೆ; ಅವುಗಳಲ್ಲಿ ಹೆಚ್ಚಿನವು ಮೆಜೆಸ್ಟಿಕ್ ಮತ್ತು ಕೆಆರ್ ಮಾರ್ಕೆಟ್ ಮಾರ್ಗದಲ್ಲಿ ಅಥವಾ ಪ್ರಮುಖ ನಿಲ್ದಾಣಗಳಾದ ಶಾಂತಿನಗರ, ಶಿವಾಜಿನಗರ ಮಾರ್ಗದಲ್ಲಿ ಸಂಚರಿಸುತ್ತವೆ. ಹೆಬ್ಬಾಳದಿಂದ ಯಶವಂತಪುರಕ್ಕೆ ತೆರಳಬೇಕೆಂದರೆ ಅಥವಾ ಹೆಬ್ಬಾಳದಿಂದ ವಿಜಯನಗರ ತಲುಪಬೇಕಾದರೆ ಎರಡುಮೂರು ಬಸ್ ಬದಲಿಸಬೇಕಾಗುತ್ತದೆ. ನೇರ ಬಸ್ ಇಲ್ಲದೇ ಇರುವುದರಿಂದ, ಪ್ರತಿ ಬಾರಿ ಬಸ್‌ಗೆ ಹೊಸದಾಗಿ ಟಿಕೆಟ್ ಖರೀದಿಸಬೇಕು. ಬಸ್ ನಿಲ್ದಾಣಕ್ಕೆ ಸಾಕಷ್ಟು ನಡೆಯಬೇಕು. ಈ ಎಲ್ಲ ಕಾರಣಕ್ಕೆ ಹಲವರು ಸ್ವಂತ ವಾಹನ ಖರೀದಿಸುವುದಕ್ಕೆ ಮುಂದಾಗುತ್ತಾರೆ.

2024ರ ಜೂನ್ 29ರಂದು ಬಿಎಂಟಿಸಿ ಹೊರಡಿಸಿರುವ ಮಾಹಿತಿ ಪ್ರಕಾರ, 5637 ಬಸ್‌ಗಳನ್ನು ಸಂಚಾರಕ್ಕೆ ವೇಳಾಪಟ್ಟಿ ಮಾಡಲಾಗಿದೆ. ಸಂಸ್ಥೆಯಲ್ಲಿ 6027 ಬಸ್‌ಗಳಿವೆ. ಪ್ರತಿದಿನ 11.22 ಲಕ್ಷ ಕಿ.ಮೀ ಸಂಚರಿಸುತ್ತಿದ್ದು, 5.66 ಕೋಟಿ ಆದಾಯ ಬರುತ್ತಿದೆ. 28,286 ನೌಕರರಿದ್ದಾರೆ.

’ಬಸ್‌ಗಳಿಗೆ ಕೊಡಬೇಕಾದ ಮಹತ್ವ ಕೊಡುತ್ತಿಲ್ಲ..’: ಶಾಹೀನ್ ಶಾ, ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ

“ಬೆಂಗಳೂರಿನ ಅತಿಮುಖ್ಯ ಸಾರಿಗೆ ವ್ಯವಸ್ಥೆ ಮೆಟ್ರೋ ರೈಲು ಕೇವಲ 42 ಕಿ.ಮೀ ಮಾತ್ರ ಇದೆ. ಎರಡನೇ ಹಂತದ ಸೇವೆಗೆ ಲಭ್ಯವಾದರೂ 22 ಕಿ.ಮೀ ಮಾತ್ರ ಹೆಚ್ಚಿನ ಸೇವೆ ಸಿಗುತ್ತದೆ. ಅದು ಸಂಪರ್ಕಿಸುವ ಪ್ರದೇಶದ ವ್ಯಾಪ್ತಿ ಕೂಡ ಕಡಿಮೆ ಇದೆ. ನಗರದಲ್ಲಿ ಹೆಚ್ಚು ಜನ ಬಸ್ ಬಳಸುತ್ತಿರುವುದರಿಂದ ನಾವು ಬಸ್ ಪ್ರಯಾಣಿಕ ವೇದಿಕೆ ಮಾಡಿಕೊಂಡು, ಅದರ ಕಡೆಗೆ ಹೆಚ್ಚಿನ ಗಮನ ಕೊಡುತ್ತಿದ್ದೇವೆ.

“ನಿಗಮ ಆರಂಭವಾಗಿ ಇಷ್ಟು ವರ್ಷವಾದರೂ ಕೇವಲ ಆರು ಸಾವಿರ ಬಸ್‌ಗಳಷ್ಟೇ ಇವೆ. ನಗರದಲ್ಲಿ ಒಂದೂಕಾಲು ಕೋಟಿ ಜನರಿದ್ದಾರೆ. ಇಷ್ಟು ಜನರಿಗೆ 14ರಿಂದ 15 ಸಾವಿರ ಬಸ್‌ಗಳ ಅಗತ್ಯವಿದೆ. ಬಸ್ ಖರೀದಿಸುತ್ತೀವಿ ಎಂದು ಸರ್ಕಾರ ಹೇಳುತ್ತಿದೆಯಾದರೂ ನಿರೀಕ್ಷೆಗೆ ತಕ್ಕಂತೆ ಕಾರ್ಯರೂಪಕ್ಕೆ ತರುತ್ತಿಲ್ಲ. ಇದರಿಂದ ಬಸ್‌ಗಳ ಫ್ರೀಕ್ವೆನ್ಸಿ ಕಡಿಮೆ, ಡ್ರೈವರ್-ಕಂಡಕ್ಟರ್‌ಗಳ ಮೇಲಿನ ಒತ್ತಡ ಹೆಚ್ಚಾಗುತ್ತಿದೆ. ಈ ನಗರದಲ್ಲಿರುವ ಅತಿಯಾದ ಟ್ರಾಫಿಕ್‌ನಲ್ಲೂ ಇಷ್ಟು ದೊಡ್ಡ ಬಸ್ ಓಡಿಸುವ ಅವರ ಕೆಲಸವೂ ಕಷ್ಟದ್ದೇ ಆಗಿದೆ. ಇದಕ್ಕೆಲ್ಲಾ ಕಾರಣ, ನಮಗೆ ಅಗತ್ಯವಿರುವಷ್ಟು ಬಸ್‌ಗಳು ಮತ್ತು ಸಿಬ್ಬಂದಿ ಇಲ್ಲದೇ ಇರುವುದು.

“ಪ್ರತಿದಿನ ಸುಮಾರು 40 ಲಕ್ಷ ಜನ ಬಸ್‌ನಲ್ಲಿ ಓಡಾಡುತ್ತಾರೆ. ಅದಕ್ಕೆ ಎಷ್ಟು ಮಹತ್ವ ಕೊಡಬೇಕೋ ಅಷ್ಟನ್ನು ಕೊಡುತ್ತಿಲ್ಲ. ನಮ್ಮ ಸರ್ಕಾರದ ಆದ್ಯತೆ, ಪಾಲಿಸಿ ಮತ್ತು ಹಣವನ್ನೂ ಕೂಡ ನಾವು ಯಾವುದಕ್ಕಾಗಿ ಖರ್ಚು ಮಾಡಬೇಕೋ ಅದಕ್ಕೆ ಮಾಡುತ್ತಿಲ್ಲ. ಕಾರು ಮತ್ತು ಬೈಕ್‌ಗಳಿಗೆ ಆದ್ಯತೆ ನೀಡುತ್ತಿದ್ದೇವೆ. ಯಾವ ಯೋಜನೆಯನ್ನು ಜಾರಿ ಮಾಡಿದರೂ ಬಸ್‌ಗಳಿಗೆ ನೀಡಬೇಕಾದ ಆದ್ಯತೆ ನೀಡುತ್ತಿಲ್ಲ.

“ನಮ್ಮಲ್ಲಿ ಪಾದಚಾರಿ ಮಾರ್ಗಗಳ ಅಭಿವೃದ್ಧಿಗೆ ಈವರೆಗೆ ಆದ್ಯತೆ ನೀಡಿಲ್ಲ. ಪಾದಚಾರಿ ಮಾರ್ಗ ಇಲ್ಲವೆಂದರೆ ಅದರ ಪರಿಣಾಮ ಬಸ್ ಪ್ರಯಾಣಿಕರ ಮೇಲೆ ಬೀರುತ್ತದೆ. ಏಕೆಂದರೆ, ಮನೆಯಿಂದ ಬಸ್ ನಿಲ್ದಾಣಕ್ಕೆ, ಮತ್ತೊಂದು ನಿಲ್ದಾಣಕ್ಕೆ, ಕೆಲಸ ಮತ್ತು ಕಾಲೇಜಿಗೆ ತೆರಳುವ ನಾವು ಪಾದಚಾರಿ ಮಾರ್ಗದಲ್ಲೇ ಹೋಗಬೇಕು. ನಗರದ ಹಲವು ಕಡೆ ಪಾದಚಾರಿ ಮಾರ್ಗವಿಲ್ಲ. ಇದ್ದರೂ, ಅವುಗಳನ್ನು ಸರಿಯಾಗಿ ವಿನ್ಯಾಸ ಮಾಡಿಲ್ಲ; ಕೆಲವು ಕಡೆ ನಿರ್ವಹಣೆ ಮಾಡಿಲ್ಲ.

“ಇನ್ನು, ಹಲವು ಕಡೆ ಸ್ಕೈವಾಕ್ ಮಾಡುತ್ತಿದ್ದಾರೆ. ಅದನ್ನು ಎಷ್ಟು ಜನ ಬಳಸಲು ಸಾಧ್ಯ? ಪ್ರಾಥಮಿಕವಾಗಿ ಅದರ ಉದ್ದೇಶವೇ ಉಳಿದ ಗಾಡಿಗಳು ತಡೆರಹಿತವಾಗಿ ಸಾಗಬೇಕು ಎಂಬುದಾಗಿದೆ. ಜನರು ಖಾಸಗಿ ವಾಹನಗಳಿಗೆ ಅಡ್ಡ ಬರಬಾರದು ಎಂಬುದು ಮುಖ್ಯ ಉದ್ದೇಶ. ನಮ್ಮ ಎಲ್ಲ ಸಂಚಾರ ನಿಯಂತ್ರಣ ಯೋಜನೆಗಳು ಇದೇ ರೀತಿ ಆಗುತ್ತಿವೆ. ಎಲ್ಲ ಗಾಡಿಗಳು ಒಂದೇ ಬಗೆಯವಲ್ಲ ಎಂಬುದನ್ನು ಯೋಜನೆಗಳನ್ನು ರೂಪಿಸುವವರು ಅರ್ಥ ಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಯಾವ ವಾಹನ ರಸ್ತೆಯಲ್ಲಿ ಹೆಚ್ಚಾಗಿ ಕಾಣಿಸುತ್ತಿದೆಯೋ ಅದರ ಬಗ್ಗೆ ಯೋಚಿಸುತ್ತಾರೆ. ನಗರದಲ್ಲಿ ಬಹುತೇಕರ ಬಳಿ ಖಾಸಗಿ ವಾಹನಗಳಿವೆ. ಲಕ್ಷಾಂತರ ಕಾರು ಮತ್ತು ಬೈಕ್‌ಗಳು ರಸ್ತೆಯಲ್ಲಿವೆ. ಈ ಎಲ್ಲವನ್ನೂ ನಾವು ಸಮಾನವಾಗಿ ನೋಡಿದ್ದೇ ಆದರೆ, ಬಸ್‌ಗಳಿಗೆ ಕಡಿಮೆ ಆದ್ಯತೆ ಸಿಗುತ್ತಿದೆ.

ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಭಯೋತ್ಪಾದನೆ

“ಬಸ್ ಖಾಸಗಿ ವಾಹನಗಳಂತಲ್ಲ; ಅವುಗಳು ಹೆಚ್ಚು ಜನರನ್ನು ಹೊತ್ತೊಯ್ಯುತ್ತದೆ. ಹೆಚ್ಚು ಜನರಿಗೆ ಸೇವೆ ನೀಡುತ್ತಿರುವ ಬಸ್‌ಗೆ ಮೊದಲ ಆದ್ಯತೆ ನೀಡಬೇಕು. ನಮ್ಮ ಯೋಜನೆ, ವಿನ್ಯಾಸ, ಹಣ ಮತ್ತು ಪಾಸಿಲಿಯಲ್ಲಿ ಸಾರ್ವಜನಿಕ ಸಾರಿಗೆಗೆ ಹೆಚ್ಚಿನ ಮಹತ್ವ ನೀಡಬೇಕು. ಆದರೆ. ಈ ಯಾವ ಹಂತದಲ್ಲೂ ಬಸ್‌ಗೆ ಸಿಗಬೇಕಾದ ಆದ್ಯತೆ ಸಿಗುತ್ತಲೇ ಇಲ್ಲ.

“2019ರಲ್ಲಿ ಜಾರಿಯಾದ ’ಬಸ್ ಪಥ’ ಯೋಜನೆ ಯಶಸ್ವಿಯಾಗಿತ್ತು; ಕೋವಿಡ್ ನಂತರ ಅದನ್ನು ಬಂದ್ ಮಾಡಲಾಗಿದೆ. ಟಿನ್ ಫ್ಯಾಕ್ಟರಿಯಿಂದ ಸಿಲ್ಕ್ ಬೋರ್ಡ್‌ವರೆಗೆ 22 ಕಿಮೀ ಅಷ್ಟು ಕಡಿಮೆ ಅಂತರದಲ್ಲಿ ಜಾರಿ ಮಾಡಿದ ಯೋಜನೆಯಿಂದಾಗಿ ಸಾಕಷ್ಟು ಸಕಾರಾತ್ಮಕ ಫಲಿತಾಂಶ ಬಂದಿತ್ತು. ಟ್ರಿಪ್ ಸಮಯದಲ್ಲಿ ಸಾಕಷ್ಟು ಉಳಿತಾಯವಾಗಿ, ಹೆಚ್ಚೆಚ್ಚು ಜನ ಬಸ್ ಬಳಸಲು ಆರಂಭಿಸಿದರು. ಇದನ್ನು ಇಡೀ ನಗರದಲ್ಲಿ ಜಾರಿ ಮಾಡುತ್ತೇವೆ ಎಂದು ಆಗ ಹೇಳಿದ್ದರು. ಎಲ್ಲೆಲ್ಲಿ ಈ ಯೋಜನೆ ಕಾರ್ಯಗತಗೊಳಿಸಬಹುದು ಎಂದು ಯೋಚಿಸಿ ಆರು ವರ್ಷ ಕಳೆದರೂ ಈವರೆಗೆ ಅದರ ಬಗ್ಗೆ ಯಾವುದೇ ಕ್ರಿಯಾಯೋಜನೆಯಿಲ್ಲ. ಇದರಿಂದ ಉತ್ತಮ ಫಲಿತಾಂಶ ಬರುತ್ತದೆ ಎಂದು ಸರ್ಕಾರ ಮತ್ತು ಆಡಳಿತಗಾರರಿಗೂ ಗೊತ್ತು. ಹೆಚ್ಚು ಜನರಿಗೆ ಉಪಯೋಗವಾಗುವ ಈ ಯೋಜನೆಯ ಬಗ್ಗೆ ಯಾಕಿಷ್ಟು ನಿರ್ಲಕ್ಷ್ಯ ಎಂಬುದು ತಿಳಿಯುತ್ತಿಲ್ಲ.

“ಬಸ್ ಪ್ರಯಾಣ ನಿಧಾನ ಎಂಬುದು ನಮ್ಮೆಲ್ಲರ ಸಾಮಾನ್ಯ ದೂರಾಗಿದೆ. ಆದರೆ, ಲಕ್ಷಾಂತರ ಕಾರುಗಳ ಜೊತೆಗೆ ಸಾವಿರ ಸಂಖ್ಯೆಯಲ್ಲಿರುವ ಬಸ್‌ಗಳು ಸ್ಪರ್ಧಿಸಬೇಕು. ಜನರಿಗೆ ಸೇವೆ ಸಲ್ಲಿಸುತ್ತಿರುವ ಬಸ್ ಖಾಸಗಿ ವಾಹನಗಳ ಜೊತೆಗೆ ಯಾಕೆ ಸ್ಪರ್ಧಿಸಬೇಕು. ಬಸ್‌ಗಳಿಗೆಂದೇ ಬೇಕಾಗಿರುವ ಜಾಗವನ್ನು ಪ್ರತ್ಯೇಕವಾಗಿ ನೀಡಿದರೆ ಬಸ್ ವೇಗವಾಗಿ ಚಲಿಸುವ ಮೂಲಕ ಹೆಚ್ಚೆಚ್ಚು ಜನ ಸಾರ್ವಜನಿಕ ಸಾರಿಗೆಯನ್ನು ಬಳಸುತ್ತಾರೆ.

“ಬಸ್ ಪಥ ಮಾಡಿದರೆ ಖಾಸಗಿ ವಾಹನಗಳಿಗೆ ರಸ್ತೆಯಲ್ಲಿ ಜಾಗವಿರುವುದಿಲ್ಲ ಎಂದು ಹಲವರು ದೂರುತ್ತಾರೆ. ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಿ ಎಂದು ಕೇಳಿದಾಗೂ ಸರ್ಕಾರ ಇದೇ ಕಾರಣ ನೀಡುತ್ತಿದೆ. ಅತಿಹೆಚ್ಚು ಜನರನ್ನು ಸಾಗಿಸುವ ಬಸ್‌ಗಳಿಗೆ ಜಾಗ ಇಲ್ಲ ಎಂದರೆ ಹೇಗೆ? ನಮ್ಮ ಪಾಲಿಸಿಗಳಲ್ಲೆ ಇಂತ ಸಮಸ್ಯೆ ಇದೆ.

“ನಗರದ ಎಲ್ಲ ಫ್ಲೈಓವರ್ ಮತ್ತು ಬಿಡ್ಜ್‌ಗಳು ಎಲ್ಲವೂ ಕೂಡ ಖಾಸಗಿ ವಾಹನಗಳನ್ನು ಗಮನದಲ್ಲಿ ಇಟ್ಟುಕೊಂಡು ಕಟ್ಟಲಾಗಿದೆ. ಸಿಗ್ನಲ್‌ನಿಂದ 200 ಮೀಟರ್ ದೂರದಲ್ಲಿ ಬಸ್ ನಿಲ್ದಾಣ ಇರಬೇಕು ಎಂಬುದು ನಿಯಮವಿದೆ. ಅಂಡರ್‌ಪಾಸ್‌ಗಳ ಪಕ್ಕದಲ್ಲಿ ಬಸ್ ನಿಲ್ದಾಣ ಮಾಡಿದರೆ ಟ್ರಾಫಿಕ್ ನಿರ್ವಹಣೆ ಕಷ್ಟವಾಗುತ್ತದೆ ಎಂದು ಹೇಳಿ ಬಸ್ ನಿಲ್ದಾಣವನ್ನು ದೂರ ಇಡುತ್ತಾರೆ. ಇದರಿಂದ, ಸಿಗ್ನಲ್‌ನಿಂದ ಬಸ್ ನಿಲ್ದಾಣವು ಅರ್ಧದಿಂದ ಮುಕ್ಕಾಲು ಕಿಲೋ ಮೀಟರ್ ದೂರಕ್ಕೆ ಹೋಗಿವೆ. ಈ ರೀತಿಯ ಪಾಲಿಸಿ ಮತ್ತು ನಿರ್ಧಾರಗಳಿಂದ ಬಸ್ ಬಳಕೆದಾರರಿಗೆ ತೊಂದರೆ ಆಗುತ್ತಿದೆ. ಈ ಬಗ್ಗೆ ಯಾರೂ ಗಂಭೀರವಾಗಿ ಯೋಚನೆಯನ್ನೇ ಮಾಡುತ್ತಿಲ್ಲ. ತುಂಬಾ ಟ್ರಾಫಿಕ್ ಆಗುತ್ತಿದೆ ಎನ್ನುವ ಕಾರಣಕ್ಕೆ ವೈಜ್ಞಾನಿಕ ಕಾರಣ ಇಲ್ಲದೆ ಬಸ್ ನಿಲ್ದಾಣಗಳನ್ನು ಸ್ಥಳಾಂತರಿಸುತ್ತಿದ್ದಾರೆ.

“ನಮ್ಮಲ್ಲಿನ ಇನ್ನೊಂದು ಮುಖ್ಯ ಸಮಸ್ಯೆ ಏಕಮುಖ ಸಂಚಾರ. ಹೀಗೆ ಮಾಡುವುದರಿಂದ ಹೋಗೋ ಬಸ್ ಒಂದು ಕಡೆ ಇದ್ದರೆ ಬರುವ ಬಸ್ ಮತ್ತೊಂದು ಮಾರ್ಗವಾಗಿ ಸಂಚರಿಸುತ್ತಿದೆ. ಇದರಿಂದ ನಾವು ಮನೆ ತಲುಪಬೇಕಾದ ಮಾರ್ಗದ ಅಂತರ ಜಾಸ್ತಿಯಾಗುತ್ತದೆ. ಇದರಿಂದ ಜನ ಹೆಚ್ಚು ನಡೆಯುವುದಕ್ಕೆ ತಯಾರಿರಬೇಕು ಅಥವಾ ಬಸ್ ಬಿಟ್ಟು ಬೇರೆ ವ್ಯವಸ್ಥೆ ಮಾಡಿಕೊಳ್ಳಬೇಕು. ನಾವು ಒಂದೊಂದು ನಿರ್ಧಾರ ಮಾಡಬೇಕಾದರೂ ಬೈಕ್ ಮತ್ತು ಕಾರಿನವರಿಗೆ ಆದ್ಯತೆ ನೀಡುತ್ತಾ, ಬಸ್ ಪ್ರಯಾಣಿಕರ ಹಿತ ನಿರ್ಲಕ್ಷ್ಯ ಮಾಡುತ್ತಿದ್ದೇವೆ.

“ಪೀಕ್ ಹವರ್ಸ್ ಗಮನದಲ್ಲಿ ಇಟ್ಟುಕೊಂಡು ಉಳಿದ ಸಮಯವನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಈ ಸಮಯದಲ್ಲಿ ಆಫೀಸ್, ಶಾಲಾ-ಕಾಲೇಜಿಗೆ ಹೋಗುವವರು ಮಾತ್ರ ಪ್ರಯಾಣಿಸುತ್ತಾರೆ. ಆದರೆ, ಮಹಿಳೆಯರು, ಮನೆ ಕೆಲಸದವರು, ಕೂಲಿ ಮಾಡುವವರು ಸೇರಿದಂತೆ ಅಸಂಘಟಿತ ವಲಯದ ಸಾಕಷ್ಟು ಕಾರ್ಮಿಕರು ವಿವಿಧ ಸಂದರ್ಭಗಳಲ್ಲಿ ಪ್ರಯಾಣ ಮಾಡುತ್ತಲೇ ಇರುತ್ತಾರೆ. ಇವರ ಅಗತ್ಯಗಳನ್ನು ಬಿಎಂಟಿಸಿ ಗಮನಿಸುತ್ತಿಲ್ಲ. ಬಿಎಂಟಿಸಿ ಕೂಡಾ ಲಾಭವನ್ನೇ ನಿರೀಕ್ಷೆ ಮಾಡುತ್ತದೆ. ಏಕೆಂದರೆ, ಅದನ್ನು ವಿನ್ಯಾಸ ಮಾಡಿರುವುದೇ ಹಾಗೆ” ಎಂದು ಹೇಳುತ್ತಾರೆ ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆಯ ಶಾಹೀನ್ ಶಾ.

ಟಿಕೆಟ್ ದರ ಇಳಿಸಿ, ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು: ಎಸ್ ಬಾಬು, ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ

“ನಿಗಮವು ಸಮಯಕ್ಕೆ ಸರಿಯಾಗಿ ಬಸ್ ಓಡಿಸುವ ಜೊತೆಗೆ, ಹೆಚ್ಚಿನ ಬಸ್‌ಗಳನ್ನು ರಸ್ತೆಗೆ ಇಳಿಸಬೇಕು. ಟಿಕೆಟ್ ದರ ಅರ್ಧಕ್ಕರ್ಧ ಇಳಿಸಿ, ಬಸ್‌ಗಳನ್ನು ದುಪ್ಪಟ್ಟು ಮಾಡಿದರೆ ಮಾಲಿನ್ಯ ಕೂಡ ಕಡಿಮೆಯಾಗುತ್ತದೆ. ಬೆಂಗಳೂರಿನ ನಿವಾಸಿಗಳ ಬಹುತೇಕರ ಮನೆಯಲ್ಲಿ ಎರಡುಮೂರು ವಾಹನಗಳಿವೆ. ಬಿಎಂಟಿಸಿ ಬಸ್‌ಗಳನ್ನು ಹೆಚ್ಚಿಸಿದ್ದೇ ಆದಲ್ಲಿ, ಈಗಿರುವ ಪೆಟ್ರೋಲ್ ದರದ ಕಾರಣಕ್ಕೆ ಬಹಳಷ್ಟು ಜನರು ತಮ್ಮ ಸ್ವಂತ ವಾಹನ ಬಿಟ್ಟು ಬಸ್ ಹತ್ತುತ್ತಾರೆ.

“ಮುಖ್ಯವಾಗಿ, ನಗರದಲ್ಲಿ ಪ್ರತ್ಯೇಕವಾಗಿ ’ಬಸ್ ಪಥ’ ಮಾಡಬೇಕು. ಆಗ ಟ್ರಾಫಿಕ್ ತೊಂದರೆ ಆಗುವುದಿಲ್ಲ. ಮಳೆಗಾಲದಲ್ಲಿ ಹಲವು ಬಸ್‌ಗಳು ಸೋರುತ್ತಿದ್ದು, ಅವುಗಳನ್ನು ಸರಿಪಡಿಸಬೇಕು. ಸಿಗ್ನಲ್‌ಗಳಲ್ಲೆ ಪ್ರಯಾಣಿಕರನ್ನು ಇಳಿಸುತ್ತಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ಅದನ್ನು ಮೊದಲು ತಪ್ಪಿಸಬೇಕು.

“ಬೆಂಗಳೂರಿನ ಸಣ್ಣಸಣ್ಣ ಪ್ರದೇಶಗಳಿಗೆ ಬಿಎಂಟಿಸಿ ಮಿನಿ ಬಸ್ ವ್ಯವಸ್ಥೆ ಮಾಡಬೇಕು. ಜನ ಆಗ ಬಸ್ ಬಳಸುತ್ತಾರೆ. ಮುಖ್ಯವಾಗಿ ಬಸ್‌ಗಳನ್ನು ನಿಲ್ದಾಣದಲ್ಲೇ ನಿಲ್ಲಿಸಬೇಕು. ಒಂದೇ ಬಾರಿಗೆ ಮೂರ್ನಾಲ್ಕು ಬಸ್‌ಗಳು ಬಂದು ಜನರಿಗೆ ಗೊಂದಲ ಮೂಡಿಸುತ್ತಾರೆ. ಇಂತಹ ಸಣ್ಣಸಣ್ಣ ಸಮಸ್ಯೆಗಳನ್ನು ಬಿಎಂಟಿಸಿ ಪರಿಹರಿಸಬೇಕು.

“ಕಂಡಕ್ಟರ್‌ಗಳಿಗೆ ಚಿಲ್ಲರೆ ವ್ಯವಸ್ಥೆಯನ್ನು ಬಿಎಂಟಿಸಿ ಮಾಡಬೇಕು. ಅವರಿಗೆ ಕನಿಷ್ಠ ನೂರಿನ್ನೂರು ರೂಪಾಯಿ ಐದು ರೂಪಾಯಿ ಕಾಯಿನ್‌ಗಳನ್ನು ಕೊಟ್ಟರೆ, ಪ್ರಯಾಣಿಕರು ಮತ್ತು ಕಂಡಕ್ಟರ್ ನಡುವಿನ ಜಗಳ ತಪ್ಪಿಸಬಹುದು. ಎಲ್ಲ ಟಿಕೆಟ್‌ಗಳು ಐದು, ಹತ್ತು, ಹದಿನೈದು ರೂಪಾಯಿ ಬೆಲೆ ಇದೆ. ಯುಪಿಐ ಬಳಸುವ ಹಲವರು ಜನರು ಪ್ರಯಾಣ ಮಾಡುತ್ತಾರೆ. ಆದರೆ, ಬಿಎಂಟಿಸಿ ಕ್ಯೂಆರ್ ಕೋಡ್ ವ್ಯವಸ್ಥೆಯನ್ನೇ ಮಾಡಿಲ್ಲ. ಇಲಾಖೆಯೇ ಚಿಲ್ಲರೆ ವ್ಯವಸ್ಥೆ ಮಾಡಿದರೆ ಜಗಳಗಳನ್ನು ತಪ್ಪಿಸಬಹುದು” ಎನ್ನುತ್ತಾರೆ ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆಯ ಎಸ್ ಬಾಬು.

ಪ್ರಯಾಣಿಕರ ಹಿತ ಮರೆತ ನಮ್ಮ ಮೆಟ್ರೋ

ಬೆಂಗಳೂರಿನಲ್ಲಿ ’ನಮ್ಮ ಮೆಟ್ರೋ’ ಆರಂಭವಾದ ನಂತರ ವರ್ಷದಿಂದ ವರ್ಷಕ್ಕೆ ಲಾಭದತ್ತ ಸಾಗುತ್ತಿದೆ. 2023ರ ಮಾರ್ಚ್ ತಿಂಗಳ ಆರ್ಥಿಕ ವರ್ಷಾಂತ್ಯಕ್ಕೆ 59 ಕೋಟಿ ಲಾಭ ಗಳಿಸಲಾಗಿದೆ ಎಂದು ನಮ್ಮ ಮೆಟ್ರೋ ಪ್ರಕಟಣೆಯಲ್ಲಿ ತಿಳಿಸಿದೆ. ಹಸಿರು ಮತ್ತು ನೀಲಿ ಮಾರ್ಗದ ಕಾರ್ಯಾಚರಣೆ ಪೂರ್ಣಪ್ರಮಾಣದಲ್ಲಿ ಆರಂಭವಾಗಿರುವುದರಿಂದ ಮೆಟ್ರೋ ಬಳಸುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

ನಮ್ಮ ಮೆಟ್ರೊ ಬೆಂಗಳೂರು ಹಲವು ಪ್ರಮುಖ ಪ್ರದೇಶಗಳಲ್ಲಿ ಪ್ರಯಾಣಿಕರ ಜೀವನಾಡಿಯಾಗುತ್ತಿದೆ. ಟ್ರಾಫಿಕ್ ಕಿರಿಕಿರಿ ಇಲ್ಲದೆ ಹೆಚ್ಚಿನ ವೇಗ, ಮಧ್ಯಮ ವೆಚ್ಚದ ಸಾರಿಗೆ ವಿಧಾನವು ಪ್ರಯಾಣಿಕರಿಗೆ ವರದಾನವಾಗಿದೆ. ಹಲವು ಜನರಿಗೆ ಮೆಟ್ರೋ ಸಂಚಾರ ಸುರಕ್ಷಿತ, ವಿಶ್ವಾಸಾರ್ಹ, ಆರಾಮದಾಯಕ ಮತ್ತು ವೇಗದ ಪ್ರಯಾಣದ ಜೊತೆಗೆ, ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ನೀಡುತ್ತಿದೆ. ಇಷ್ಟೆಲ್ಲಾ ಸಕಾರಾತ್ಮಕ ಅಂಶಗಳ ಕಾರಣಕ್ಕೆ ಲಾಭ ಗಳಿಸುತ್ತಿರುವ ಮೆಟ್ರೋ ಪ್ರಯಾಣಿಕರ ಹಿತ ಮರೆತಿದೆ ಎಂದರೆ ತಪ್ಪಾಗಲಾರದು.

ರೈಲು ಸಂಚಾರದ ’ಫ್ರೀಕ್ವೆನ್ಸಿ’ ಸರಿದೂಗಿಸದ ನಮ್ಮ ಮೆಟ್ರೋ!

ಬೆಳಗ್ಗೆ ಏಳರಿಂದ 11 ಗಂಟೆ ಮತ್ತು ಸಂಜೆ ಐದರಿಂದ ರಾತ್ರಿ 9 ಗಂಟೆಯವರೆಗೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮೆಟ್ರೋ ರೈಲು ಬಳಸುತ್ತಾರೆ. ಐಟಿ ವಲಯವಾದ ವೈಟ್‌ಫೀಲ್ಡ್ ಕಡೆಯಿಂದ ಪ್ರತಿದಿನ ಸಾವಿರಾರು ಜನ ನಗರಕ್ಕೆ ಬರಲು ಮತ್ತು ನಗರದ ಹೊರವಲಯವಾದ ಕೆಂಗೇರಿ, ಚಲ್ಲಘಟ್ಟಕ್ಕೆ ತೆರಳಲು ಮೆಟ್ರೋ ಅವಲಂಬಿಸಿದ್ದಾರೆ (ವಿರುದ್ಧ ದಿಕ್ಕಿನಲ್ಲಿಯೂ ಜನ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಾರೆ). ನೀಲಿ ಮಾರ್ಗದ ತಮಕೂರು ರಸ್ತೆಯಲ್ಲೂ ಹೆಚ್ಚಿನ ಜನ ನಮ್ಮ ಮೆಟ್ರೋ ನಂಬಿಕೊಂಡಿದ್ದಾರೆ. ಆದರೆ, ಯಾವುದೇ ಸಮಯದಲ್ಲಿ ಮೆಟ್ರೋ ಹತ್ತಿದರೂ, ಆರಂಭದ ಒಂದು ಸ್ಟೇಷನ್ ಹೊರತುಪಡಿಸಿ, ಉಳಿದ ಯಾವ ನಿಲ್ದಾಣಗಳಲ್ಲೂ ಪ್ರಯಾಣಿಕರಿಗೆ ಸೀಟು ಸಿಗುವುದಿಲ್ಲ. ಗರಿಷ್ಠ 60 ಟಿಕೆಟ್ ನಿಗದಿಪಡಿಸಿದ್ದು, ಪೀಕ್ ಹವರ್‌ನಲ್ಲಂತೂ ನಿಂತುಕೊಂಡೇ ಪ್ರಯಾಣ ಮಾಡಬೇಕು.

ಬಿಎಂಟಿಸಿಗೆ ಹೋಲಿಸಿದರೆ, ನಗರದಲ್ಲಿ ಮೆಟ್ರೋ ಸೇವೆಯ ಜಾಲ ಕಡಿಮೆ ಇದೆ. ಎರಡು ಹಂತಗಳ ಅಂತರ ಹೆಚ್ಚೆಂದರೆ 80 ಕಿ.ಮೀ. ಆಗಿದೆ. ಆದರೂ ಪ್ರತಿನಿತ್ಯ ಏಳೆಂಟು ಲಕ್ಷ ಪ್ರಯಾಣಿಕರು ಮೆಟ್ರೋ ಬಳಸುತ್ತಿದ್ದಾರೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಈ ವರ್ಷದ ಆಗಸ್ಟ್ 14 ರಂದು, ಒಟ್ಟು 917,365 ಪ್ರಯಾಣಿಕರನ್ನು ತಲುಪುವ ಮೂಲಕ ನಮ್ಮ ಮೆಟ್ರೋ ದಾಖಲೆಯ ರೈಡರ್‌ಶಿಪ್‌ಅನ್ನು ಸಾಧಿಸಿದೆ. ಬೆಂಗಳೂರಿನ ಚಲ್ಲಘಟ್ಟದಿಂದ ಪೂರ್ವದ ಕಾಡುಗೋಡಿ(ವೈಟ್‌ಫೀಲ್ಡ್)ವರೆಗೆ ವ್ಯಾಪಿಸಿರುವ ನೇರಳೆ ಮಾರ್ಗದಲ್ಲಿ ಸರಾಸರಿ 443,000 ಪ್ರಯಾಣಿಕರು ಸೇವೆ ಪಡೆದುಕೊಂಡಿದ್ದಾರೆ. ನಗರದ ವಾಯುವ್ಯದಲ್ಲಿರುವ ನಾಗಸಂದ್ರದಿಂದ ದಕ್ಷಿಣದ ಸಿಲ್ಕ್ ಇನ್‌ಸ್ಟಿಟ್ಯೂಟ್‌ಗೆ ಸಾಗುವ ಗ್ರೀನ್ ಲೈನ್‌ನಲ್ಲಿ 301,000 ಪ್ರಯಾಣಿಕರು ಮೆಟ್ರೋ ಬಳಸಿದ್ದಾರೆ. ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್ ಇಂಟರ್‌ಚೇಂಜ್) 172,000 ಜನರ ವಿನಿಮಯ ಕಂಡಿದೆ. ಒಂದೇ ದಿನ ಹತ್ತಿರತ್ತಿರ 7-8 ಲಕ್ಷ ಜನ ಮೆಟ್ರೋ ಬಳಸುತ್ತಿರುವುದರಿಂದ ಸಂಸ್ಥೆ ಲಾಭದ ಕಡೆಗೆ ಸಾಗುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಆದರೆ, ಮೆಟ್ರೋ ಆರಾಮದಾಯಕ ಎನ್ನುವ ಕಾರಣಕ್ಕೆ ನಿಂತುಕೊಂಡೇ ಪ್ರಯಾಣ ಮಾಡಬೇಕಾ ಎನ್ನುವುದು ಹಲವರ ಅಸಮಾಧಾನವಾಗಿದೆ.

ಪ್ರಸ್ತುತ ನಗರದಲ್ಲಿ, ಮೆಟ್ರೋ ಕಾರ್ಯಾಚರಣೆ ಜಾಲವು 73 ಕಿಲೋಮೀಟರ್‌ಗಳನ್ನು ವ್ಯಾಪಿಸಿದೆ. ಇದು ಪರ್ಪಲ್ ಲೈನ್ (42.17 ಕಿಮೀ, 37 ನಿಲ್ದಾಣಗಳು) ಮತ್ತು ಗ್ರೀನ್ ಲೈನ್ (30 ಕಿಮೀ, 29 ನಿಲ್ದಾಣಗಳು) ಅನ್ನು ಒಳಗೊಂಡಿದೆ.

ಯಾವ ಹಂತದಲ್ಲಿ ಹೊಸ ಮೆಟ್ರೋ ಕಾಮಗಾರಿ?

ನಮ್ಮ ಮೆಟ್ರೋ ಮಾರ್ಗಗಳಲ್ಲಿ, ನೇರಳೆ ಮತ್ತು ಹಸಿರು ಮಾರ್ಗಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿವೆ. ಪೂರ್ವದಿಂದ ಪಶ್ಚಿಮಕ್ಕೆ ಜೋಡಿಸಲಾದ ನೇರಳೆ ರೇಖೆಯು ವೈಟ್‌ಫೀಲ್ಡ್ (ಕಾಡುಗೋಡಿ) ಅನ್ನು ಚಲ್ಲಘಟ್ಟಕ್ಕೆ ಸಂಪರ್ಕಿಸುತ್ತದೆ ಮತ್ತು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತದೆ. ಉತ್ತರದಿಂದ ದಕ್ಷಿಣಕ್ಕೆ ಜೋಡಿಸಲಾದ ಹಸಿರು ಮಾರ್ಗವು ನಾಗಸಂದ್ರವನ್ನು ಸಿಲ್ಕ್ ಇನ್‌ಸ್ಟಿಟ್ಯೂಟ್‌ಗೆ ಸಂಪರ್ಕಿಸುತ್ತದೆ; ಈ ಮಾರ್ಗ ಭಾಗಶಃ ಕಾರ್ಯನಿರ್ವಹಿಸುತ್ತಿದೆ. ಎರಡನೇ ಹಂತದ ನಂತರ ಮಾದಾವರದಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್‌ವರೆಗೆ ಮಾರ್ಗ ವಿಸ್ತರಿಸಿದಾಗ ಇದು ಸಂಪೂರ್ಣ ಕಾರ್ಯಾರಂಭ ಮಾಡಲಿದೆ.

ನೇರಳೆ ಮಾರ್ಗವು 43.49 ಕಿಮೀ ಮತ್ತು ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ವರೆಗೆ 37 ನಿಲ್ದಾಣಗಳನ್ನು ಹೊಂದಿದೆ. ಪರ್ಪಲ್ ಲೈನ್‌ನ ಹೆಚ್ಚಿನ ಭಾಗವು ಎತ್ತರದಲ್ಲಿದೆ, ಮೂವತ್ತೊಂದು ಎತ್ತರದ ನಿಲ್ದಾಣಗಳು, ಪ್ರಥಮ ದರ್ಜೆಯ ಒಂದು ನಿಲ್ದಾಣ ಮತ್ತು ಐದು ಭೂಗತ ನಿಲ್ದಾಣಗಳನ್ನು ಹೊಂದಿದೆ.

ನೇರಳೆ ಮಾರ್ಗದ ಮಾಹಿತಿ

ಬೆಂಗಳೂರು ಮೆಟ್ರೋ ನೇರಳೆ ಮಾರ್ಗದ ರೈಲು ಸಂಚಾರವು ಪೀಕ್ ಹವರ್ಸ್‌ನಲ್ಲಿ, ವೈಟ್ ಫೀಲ್ಡ್ (ಕಾಡುಗೋಡಿ)ಯಿಂದ ಪಟ್ಟಂದೂರು ಅಗ್ರಹಾರಕ್ಕೆ 10 ನಿಮಿಷಕ್ಕೊಂದು ರೈಲು ಸಂಚರಿಸುತ್ತದೆ. ಪ್ರಯಾಣದ ಅವಧಿ ಸುಮಾರು 85 ನಿಮಿಷಗಳು ತೆಗೆದುಕೊಳ್ಳುತ್ತದೆ. ಟಿಕೆಟ್ ದರ 57 ರಿಂದ 60 ಇದೆ.

ಪಟ್ಟಂದೂರು ಅಗ್ರಹಾರದಿಂದ ಮೈಸೂರು ರಸ್ತೆಗೆ 5 ನಿಮಿಷಕ್ಕೊಂದು ರೈಲು ಸಂಚರಿಸುತ್ತದೆ. ಮೆಜೆಸ್ಟಿಕ್‌ನಿಂದ ಎಂಜಿ ರಸ್ತೆಗೆ 3 ನಿಮಿಷಗಳಿಗೆ ಒಂದು ಬೆಳಿಗ್ಗೆ ಪೀಕ್ ಹವರ್ಸ್‌ನಲ್ಲಿ ಮಾತ್ರ ರೈಲು ಸೇವೆಯಿದ್ದು, ಮೈಸೂರು ರಸ್ತೆಯಿಂದ ಚಲ್ಲಘಟ್ಟಕ್ಕೆ 10 ನಿಮಿಷಗಳಿಗೆ ಒಮ್ಮೆ ರೈಲು ಸೇವೆಯಿದೆ.

ಪೀಕ್ ಹವರ್ಸ್ ಹೊರತುಪಡಿಸಿ ಇತರ ಸಮಯಗಳಲ್ಲಿ, ಇದು ಸುಮಾರು 8-10 ನಿಮಿಷಗಳು ತೆಗೆದುಕೊಂಡರೆ, ಮುಂಜಾನೆ ಮತ್ತು ರಾತ್ರಿ 10 ಗಂಟೆ ಬಳಿಕ ಸುಮಾರು 15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಬೆಂಗಳೂರು ಮೆಟ್ರೋ ಹಸಿರು ಮಾರ್ಗ

ಬೆಂಗಳೂರು ಮೆಟ್ರೋ ಗ್ರೀನ್‌ಲೈನ್ 29 ಸಕ್ರಿಯ ನಿಲ್ದಾಣಗಳೊಂದಿಗೆ 30.5 ಕಿಮೀ ಆಗಿದೆ. ಅದರಲ್ಲಿ 26 ಎತ್ತರದ ನಿಲ್ದಾಣಗಳು ಮತ್ತು 3 ಭೂಗತ ನಿಲ್ದಾಣಗಳಾಗಿವೆ. ಇದು ವಾಯುವ್ಯದಲ್ಲಿರುವ ನಾಗಸಂದ್ರವನ್ನು ದಕ್ಷಿಣದ ಸಿಲ್ಕ್ ಇನ್‌ಸ್ಟಿಟ್ಯೂಟ್‌ಗೆ ಸಂಪರ್ಕಿಸುತ್ತದೆ. ಈ ಮಾರ್ಗವು ಉತ್ತರದ ಕೈಗಾರಿಕಾ ಕೇಂದ್ರಗಳಾದ ಪೀಣ್ಯ, ಯಲಹಂಕವನ್ನು ಮೆಜೆಸ್ಟಿಕ್‌ಗೆ ಮತ್ತು ದಕ್ಷಿಣ ಬೆಂಗಳೂರು, ಬಸವನಗುಡಿ, ಜಯನಗರ ಮತ್ತು ಬನಶಂಕರಿ ವಸತಿ ಪ್ರದೇಶಗಳೊಂದಿಗೆ ಸಂಪರ್ಕಿಸುತ್ತದೆ.

ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 5ರಿಂದ ರಾತ್ರಿ 10.35ರವರೆಗೆ ಕಾರ್ಯಾಚರಣೆ ನಡೆಸುತ್ತಿದೆ. ಎರಡನೇ ಮತ್ತು ನಾಲ್ಕನೇ ಶನಿವಾರ: ಬೆಳಿಗ್ಗೆ 6ರಿಂದ ರಾತ್ರಿ 10.35ರವರೆಗೆ, ಭಾನುವಾರ ಬೆಳಿಗ್ಗೆ 7ರಿಂದ ರಾತ್ರಿ 11ರವರೆಗೆ ರೈಲು ಸೇವೆ ಇರಲಿದೆ. ಬೆಳಗ್ಗೆ 5ರಿಂದ 8 ಮತ್ತು ಸಂಜೆ ಎಂಟರಿಂದ ರಾತ್ರಿ 11 ವರೆಗೆ 10 ನಿಮಿಷಗಳಿಗೊಮ್ಮೆ ರೈಲು ಸಂಚರಿಸಲಿದೆ. ಬೆಳಗ್ಗೆ 8 ಮತ್ತು ರಾತ್ರಿ 8ರ ನಡುವಿನ ಪ್ರತಿ ರೈಲಿನ ಅಂತರ 15 ನಿಮಿಷಗಳಾಗಿದೆ. ಟಿಕೆಟ್ ದರ ಕನಿಷ್ಠ 10 ರಿಂದ ಗರಿಷ್ಠ 60 ಆಗಿದೆ. ನಾಗಸಂದ್ರದಿಂದ ಸಿಲ್ಕ್ ಸಂಸ್ಥೆಗೆ ಒಟ್ಟು ಪ್ರಯಾಣದ ಸಮಯ 70 ನಿಮಿಷಗಳು ತೆಗೆದುಕೊಳ್ಳುತ್ತದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...