ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಕ್ಕಾಗಿ ಹಣ ಸಂಗ್ರಹಿಸುವ ಕಾರ್ಯ ಆರಂಭವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಪರ-ವಿರೋಧದ ಚರ್ಚೆಗಳು ಆರಂಭವಾಗಿವೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಸೇರಿದಂತೆ ಬಹುತೇಕರು “90ರ ದಶಕದಲ್ಲಿ ರಾಮಮಂದಿರ ನಿರ್ಮಾಣಕ್ಕೆಂದು ಸಂಗ್ರಹ ಮಾಡಿದ ಹಣದ ಲೆಕ್ಕ ಏನಾಯ್ತು?” ಎಂದು ಪ್ರಶ್ನಿಸಿದ್ದಾರೆ. ಜೊತೆಗೆ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡುವುದಿಲ್ಲ ಎಂದೂ ಹೇಳಿದ್ದಾರೆ.
ಅಡ್ವಾಣಿ ನೇತೃತ್ವದಲ್ಲಿ 90 ರ ದಶಕದಲ್ಲಿ ಸಂಗ್ರಹವಾಗಿದ್ದ ಹಣದ ಲೆಕ್ಕ ನೀಡಿ ಎಂದು ದೇಶದಾದ್ಯಂತ ಬಹುಪಾಲು ಪ್ರಜ್ಞಾವಂತರು ಪ್ರಶ್ನೆ ಕೇಳುತ್ತಿದ್ದಾರೆ. ಇದರ ಬೆನ್ನಲ್ಲೇ ಎನ್‌ಡಿಟಿವಿ ಕೂಡ ವಿಶ್ವ ಹಿಂದೂ ಪರಿಷತ್ ಮುಖಂಡರು ಮತ್ತು ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರನ್ನು ಪ್ರಶ್ನಿಸಿದ್ದರು. ಆದರೆ ಅವರು ಇದಕ್ಕೆ ಸ್ಪಷ್ಟ ಉತ್ತರ ನೀಡದೇ ಹಾರಿಕೆಯ ಮಾತುಗಳನ್ನಾಡಿ ನುಣುಚಿಕೊಂಡಿದ್ದಾರೆ.
ಇದನ್ನೂ ಓದಿ: ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ: ಅಡ್ವಾಣಿ ನೇತೃತ್ವದಲ್ಲಿ ಸಂಗ್ರಹವಾಗಿದ್ದ ಕೋಟ್ಯಂತರ ರೂ ಏನಾಯ್ತು?
ಸಂದರ್ಶನದಲ್ಲಿ ಕೇಳಿದ ಪ್ರಶ್ನೆಯಿಂದ ಗಲಿಬಿಲಿಗೊಂಡ ಚಂಪತ್ ರಾಯ್, “ಇದು ನಿಮ್ಮ ಪ್ರಶ್ನೆ ಅಲ್ಲ, ಈ ಪ್ರಶ್ನೆಯನ್ನು ಕೇಳಲು ನಿಮಗೆ ಯಾರು ಹೇಳಿದ್ದಾರೋ, ಅವರು ಮೂರ್ಖರು, ಬುದ್ಧಿಯಿಲ್ಲದವರು” ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.
ಈ ಪ್ರಶ್ನೆಯು ಎನ್‌ಡಿಟಿವಿ ಕೇಳುತ್ತಿದೆ ಎಂದು ಸಂದರ್ಶಕಿ ಹೇಳಿದಾಗ, “ಈ ಪ್ರಶ್ನೆಯನ್ನು ಎನ್‌ಡಿಟಿವಿಯಲ್ಲಿನ ಯಾರು ಬರೆದು ನಿಮಗೆ ನೀಡಿದ್ದಾರೋ, ಅವರು ಮೂರ್ಖರು. ಅವರಿಗೆ ಸ್ವಲ್ಪವೂ ಬುದ್ಧಿಯಿಲ್ಲ ಎಂದು ನಾನು ಹೇಳಲು ಬಯಸುತ್ತೇನೆ. ಒಟ್ಟು 37,000 ಮಂದಿ ಕಾರ್ಯಕರ್ತರನ್ನು ಈ ಕಾರ್ಯಕ್ಕೆ ನಿಯೋಜನೆ ಮಾಡಿದ್ದೇವೆ. ಮೂರು ಪ್ರಮುಖ ಬ್ಯಾಂಕ್ ಗಳಲ್ಲಿ ಅವರು ಖಾತೆಯನ್ನು ಹೊಂದಿದ್ದಾರೆ. ಸಂಗ್ರಹವಾದ ದೇಣಿಗೆಗಳನ್ನು ಅವರು ಮಾತ್ರವೇ ಬ್ಯಾಂಕ್ ಗೆ ತಂದೊಪ್ಪಿಸಬಹುದಾಗಿದೆ. ನಾವು ಮನೆಯ ಮುಂದೆ ಸ್ಟಿಕ್ಕರ್ ಅಂಟಿಸುವಂತೆ ಯಾರನ್ನೂ ಕೇಳಿಕೊಂಡಿಲ್ಲ. ಇನ್ನು ರಾಜಕೀಯದವರು ಚುನಾವಣೆಯ ವೇಳೆ ಕರಪತ್ರ, ಸ್ಟಿಕ್ಕರ್, ಧ್ವಜಗಳನ್ನು ಹಾಕುತ್ತಾರೆ. ಇಲ್ಲಿಯೂ ಸ್ಟಿಕ್ಕರ್ ಹಾಕಿದರೆ ತಪ್ಪೇನಿಲ್ಲ” ಎಂದು ಸಂದರ್ಶನದಲ್ಲಿ ಚಂಪತ್ ರಾಯ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ರಾಮಮಂದಿರಕ್ಕೆ ದೇಣಿಗೆ ನೀಡಲು ನಿರಾಕರಿಸಿದ್ದಕ್ಕೆ ಬೆದರಿಕೆ: ಕುಮಾರಸ್ವಾಮಿ ಆರೋಪ
ಹಾಗಾಗಿ ಈ ಪ್ರಶ್ನೆಗೆ ಸ್ಪಷ್ಟವಾದ ಉತ್ತರವನ್ನು ಯಾರು ಕೊಡುತ್ತಾರೆ ಎನ್ನುವ ಮತ್ತೊಂದು ಪ್ರಶ್ನೆ ಎದುರಾಗಿದೆ.
2017 ರಲ್ಲಿ ರಾಮ ಜನ್ಮಭೂಮಿ ವಿವಾದದ ಪ್ರಮುಖ ಸಂಘಟನೆಯಾದ ನಿರ್ಮೋಹಿ ಅಖಾಡ, “ರಾಮಮಂದಿರಕ್ಕೆ ಸಂಗ್ರಹವಾದ ಹಣವನ್ನು ಬಿಜೆಪಿ ತನ್ನ ರಾಜಕೀಯಕ್ಕೆ ಬಳಸಿಕೊಂಡಿದೆ” ಎಂದು ಆರೋಪಿಸಿತ್ತು.
ಇದನ್ನೂ ಓದಿ: PM Cares ಲೆಕ್ಕವನ್ನೇ ಕೊಡದವರು, ರಾಮಮಂದಿರಕ್ಕೆ ಸಂಗ್ರಹಿಸುವ ಹಣದ ಲೆಕ್ಕ ಕೊಡುತ್ತಾರಾ: ಸಿದ್ದರಾಮಯ್ಯ



ಪ್ರಶ್ನೆಗಳನ್ನು ಕೇಳುವ ಯಾರಿಗೂ ಬುದ್ದಿಯಿಲ್ಲ.
ಬುದ್ದಿ ಎಲ್ಲ ಇರುವುದು ಇವನಿಗೆ ಮಾತ್ರ
ಲೆಕ್ಕ ಕೇಳುವವರು ದೇಶದ್ರೋಹಿಗಳು
ರಾಮನ ಹೆಸರಿನಲ್ಲಿ ಸ್ವಯಂ ಘೋಷಿತ ದೇಶ ಪ್ರೇಮಿಗಳ ದೊಂಬರಾಟ…