ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಭಾರತದ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿದ್ದ ವೇಳೆ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎನ್ನುವ ಆರೋಪಗಳು ಕೇಳಿಬಂದಿವೆ. ಹೀಗಾಗಿ ಅವರಿಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ನೀಡುತ್ತೀರಾ ಎಂಬ ಪ್ರಶ್ನೆಗೆ, ”ನನ್ನ ಟಿಕೆಟ್‌ನ್ನು ಯಾರು ರದ್ದು ಮಾಡುತ್ತಾರೆ?” ಎಂದು ಸಿಂಗ್ ಹೇಳುತ್ತಿರುವ ವೀಡಿಯೊ ವೈರಲ್ ಆಗಿದೆ.
ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬ್ರಿಜ್ ಭೂಷಣ್ ಅವರು, ”ಕೌನ್ ಕಾತ್ ರಹಾ ಹೈ ಉಸ್ಕಾ ನಾಮ್ ಬಟಾವೋ?… ಕಟೋಗೆ ಆಪ್? ಕಟೋ?…(ನನ್ನ ಟಿಕೆಟ್ ಅನ್ನು ಯಾರು ರದ್ದು ಮಾಡುತ್ತಾರೆ? ನೀವು ಅದನ್ನು ಮಾಡುತ್ತೀರಾ? ನೀವು?…)” ಎಂದು ಹೇಳಿರುವ ವಿಡಿಯೋ ಹರಿದಾಡುತ್ತಿದೆ.
ವೀಡಿಯೊ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮದಲ್ಲಿ ಅನೇಕರು, ಬ್ರಿಜ್ ಭೂಷಣ್ ವಿರುದ್ಧದ ಪ್ರಕರಣವು ತನಿಖೆಯಲ್ಲಿದ್ದಾಗಲೂ ಅವರ “ಅಹಂಕಾರ” ಕಡಿಮೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಕೂಡ ವಿಡಿಯೋವನ್ನು ಹಂಚಿಕೊಂಡಿದ್ದಾರೆ, ಸಿಂಗ್ ಅವರು “ಅಧಿಕಾರದ ದುರಹಂಕಾರ” ತೋರಿಸಿದ್ದಾರೆ ಎಂದಿದ್ದಾರೆ.
”ದೇಶಕ್ಕಾಗಿ ಪದಕ ಗೆದ್ದ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಬ್ರಿಜ್ ಭೂಷಣ್, ತನ್ನ ಟಿಕೆಟ್‌ನ್ನು ರದ್ದುಗೊಳಿಸುವ ಧೈರ್ಯ ಯಾರಿಗಿದೆ ಎಂದು ಬಹಿರಂಗವಾಗಿ ಸವಾಲು ಹಾಕುತ್ತಾನೆ. ಅಂದರೆ ಇದರಲ್ಲಿ ದೊಡ್ಡವರ ಕೈವಾಡ ಇದೆ ಅನಿಸುತ್ತದೆ. ಇದು ಅವರ ಅಧಿಕಾರದ ದುರಹಂಕಾರ” ಎಂದು ಅವರು ಹೇಳಿದ್ದಾರೆ.
देश के लिए मैडल लाने वाली #Wrestler बेटियों के साथ यौन शोषण करने वाला बृजभूषण खुले में ललकार रहा है कि उसकी टिकट काटने की हिम्मत किस में है?
किसी बड़े आदमी का ही हाथ होगा इसके सर पर, तभी सत्ता का इतना घमंड है! #Brijbhushan pic.twitter.com/nURqrwjtpy
— Swati Maliwal (@SwatiJaiHind) September 24, 2023
ಭಾರತೀಯ ಕುಸ್ತಿ ಒಕ್ಕೂಟದ ನಿರ್ಗಮನ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಸಿಕ್ಕ ಪ್ರತಿ ಅವಕಾಶದಲ್ಲೂ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ದೆಹಲಿ ಪೊಲೀಸರು ಶನಿವಾರ ಸ್ಥಳೀಯ ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇಂಡಿಯಾ ಟುಡೇ ಪ್ರಕಾರ, ದೆಹಲಿ ಪೊಲೀಸರನ್ನು ಪ್ರತಿನಿಧಿಸುವ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ ಅವರು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಹರ್ಜೀತ್ ಸಿಂಗ್ ಜಸ್ಪಾಲ್ ಅವರ ಪೀಠದ ಮುಂದೆ ಈ ಮಹತ್ವದ ಹೇಳಿಕೆ ನೀಡಿದ್ದು, ಸಿಂಗ್ ಅವರಿಗೆ ಅವರು ಉದ್ದೇಶಪೂರ್ವಕವಾಗಿಯೇ ಈ ರೀತಿ ಮಾಡುತ್ತಿದ್ದರು ಎಂದು ಹೇಳಿದ್ದಾರೆ.
ಮಹಿಳಾ ಕುಸ್ತಿಪಟು ನೀಡಿದ ದೂರನ್ನು ಉಲ್ಲೇಖಿಸಿದ ವಕೀಲರು, ತಜಕಿಸ್ತಾನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿಂಗ್ ಅವರು ಮಹಿಳಾ ಕುಸ್ತಿಪಟುವನ್ನು ಕೋಣೆಗೆ ಕರೆದು ಬಲವಂತವಾಗಿ ತಬ್ಬಿಕೊಂಡಿದ್ದರು. ಇದಕ್ಕೆ ಆಕೆ ವಿರೋಧಿಸಿದಾಗ ಕುಸ್ತಿಪಟುವಿಗೆ ನಾನು ನಿನ್ನ ‘ಅಪ್ಪನಂತೆ’ ಅದಕ್ಕಾಗಿ ಈ ರೀತಿ ಮಾಡಿದ್ದೇನೆ ಎಂದು ಹೇಳಿದ್ದಾರೆ. ಈ ಘಟನೆ ನೋಡಿದರೆ ಅವರು ಉದ್ದೇಶಪೂರ್ವಕವಾಗಿಯೇ ಮಾಡಿದ್ದಾರೆಂದು ಸ್ಪಷ್ಟವಾಗಿ ತಿಳಿದು ಬರುತ್ತದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಉತ್ತರ ಪ್ರದೇಶದ ಭಾರತೀಯ ಜನತಾ ಪಕ್ಷದ ಸಂಸದ ಸಿಂಗ್ ವಿರುದ್ಧ ಆರು ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.
ಕನಿಷ್ಠ ಎರಡು ಸಂದರ್ಭಗಳಲ್ಲಿ ಕ್ರೀಡೆಗೆ ಸಂಬಂಧಿಸಿದ ಸಹಾಯ ಮಾಡಲು ಸಿಂಗ್ ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ದೂರುದಾರ ಕ್ರೀಡಾಪಟುಗಳು ಲೈಂಗಿಕ ಕಿರುಕುಳದ 15 ಘಟನೆಗಳನ್ನು ಕೂಡ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಒಲಿಂಪಿಕ್ ಪದಕ ವಿಜೇತರಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಮತ್ತು ಎರಡು ಬಾರಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ ವಿನೇಶ್ ಫೋಗಟ್ ಸೇರಿದಂತೆ ಭಾರತದ ಅಗ್ರ ಕುಸ್ತಿಪಟುಗಳು ಜನವರಿಯಲ್ಲಿ ಸಿಂಗ್ ವಿರುದ್ಧ ಮೊದಲು ಪ್ರತಿಭಟನೆಯನ್ನು ಪ್ರಾರಂಭಿಸಿದ್ದರು. ಆರೋಪಗಳ ತನಿಖೆಗಾಗಿ ರಚಿಸಲಾಗಿದ್ದ ಮೇಲ್ವಿಚಾರಣಾ ಸಮಿತಿಯು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಏಪ್ರಿಲ್‌ನಲ್ಲಿ ಪ್ರತಿಭಟನೆ ಪುನರಾರಂಭಿಸಿದ್ದರು.
ಏಪ್ರಿಲ್‌ನಲ್ಲಿ ಸುಪ್ರೀಂ ಕೋರ್ಟ್ ಈ ವಿಷಯದಲ್ಲಿ ಮಧ್ಯಪ್ರವೇಶಿಸಿದ ನಂತರ ದೆಹಲಿ ಪೊಲೀಸರು ಸಿಂಗ್ ವಿರುದ್ಧ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿದ್ದಾರೆ. ಜೂನ್ 15 ರಂದು ಸಿಂಗ್ ವಿರುದ್ಧ 1,000 ಪುಟಗಳ ಆರೋಪಪಟ್ಟಿ ಸಲ್ಲಿಸಲಾಗಿತ್ತು.
ಆಗಸ್ಟ್‌ನಲ್ಲಿ ನಡೆದ ಪ್ರಕರಣದ ಹಿಂದಿನ ವಿಚಾರಣೆಯ ಸಂದರ್ಭದಲ್ಲಿ, ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಸಿಂಗ್ ಮತ್ತು ಅವರ ಅಮಾನತುಗೊಂಡ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಅವರನ್ನು ವಿಚಾರಣೆಗೆ ಒಳಪಡಿಸಲು ಸಾಕಷ್ಟು ಪುರಾವೆಗಳಿವೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಆದರೆ ಲೈಂಗಿಕ ಉದ್ದೇಶವಿಲ್ಲದೆ ಮಹಿಳೆಯನ್ನು ಅಪ್ಪಿಕೊಳ್ಳುವುದು ಅಥವಾ ಸ್ಪರ್ಶಿಸುವುದು ಅಪರಾಧವಲ್ಲ ಎಂದು ಭೂಷಣ್ ನ್ಯಾಯಾಲಯಕ್ಕೆ ತಿಳಿಸಿದ್ದರು. ಪ್ರಕರಣದ ಕುರಿತು ಕೋರ್ಟ್ ಅಕ್ಟೋಬರ್ 7 ರಂದು ಮುಂದಿನ ವಿಚಾರಣೆ ನಡೆಸಲಿದೆ.


