Homeಮುಖಪುಟಮಹಿಳೆಯ ಕುರಿತ ಕೀಳು ಗ್ರಹಿಕೆ ಯಾರು ಹೊಣೆ?

ಮಹಿಳೆಯ ಕುರಿತ ಕೀಳು ಗ್ರಹಿಕೆ ಯಾರು ಹೊಣೆ?

- Advertisement -
- Advertisement -

ವರದಿಯೊಂದರ ಪ್ರಕಾರ ಭಾರತದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರ ಕಿರುಕುಳ, ವರದಕ್ಷಿಣೆ ಸಾವು, ಅಪಹರಣ ರೀತಿಯ ಅಪರಾಧಗಳ ಪ್ರಮಾಣ ಜೂನ್ 2020ರಿಂದ ಜೂನ್ 2021ರ ಒಂದು ವರ್ಷದ ಅವಧಿಯಲ್ಲಿ ಅದರ ಹಿಂದಿನ ಒಂದು ವರ್ಷಕ್ಕಿಂತ ಏರಿಕೆಯಾಗಿದೆ. ಅತ್ಯಾಚಾರ ಪ್ರಕರಣಗಳು ಶೇ.43ರಷ್ಟು ಏರಿಕೆಯಾಗಿವೆ. ಕರ್ನಾಟಕದಲ್ಲಿ ಜನವರಿ 2019ರಿಂದ ಮೇ 2021ರವರೆಗೆ ದಿನಕ್ಕೆ ಸರಾಸರಿ ಕನಿಷ್ಠ ಒಂದು (ಕೆಲವೊಮ್ಮೆ ಹೆಚ್ಚು) ಅತ್ಯಾಚಾರ ಸಂಭವಿಸಿವೆ.

ಅಧಿಕಾರದ ಕೆಲ ಪ್ರಮುಖ ಸ್ಥಾನಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಸಾಧ್ಯವಾದ ಬಳಿಕವೂ, ನಿರಂತರವಾಗಿ ಇಂಥ ದೌರ್ಜನ್ಯಗಳು, ಅತ್ಯಾಚಾರಗಳು ನಡೆಯುತ್ತಿವೆ. ತಪ್ಪಿತಸ್ಥರಿಗೆ ಖಂಡಿತ ಕಠಿಣ ಶಿಕ್ಷೆಯಾಗಬೇಕು. ಅದೇ ಹೊತ್ತಲ್ಲಿ, ಅತ್ಯಾಚಾರವೆಸಗಿದವರನ್ನ ತಕ್ಷಣವೇ ಗುಂಡಿಟ್ಟು ಕೊಲ್ಲಿ ಎಂಬಂಥ ಆಕ್ರೋಶದ ಪ್ರತಿಕ್ರಿಯೆಗಳಲ್ಲಿ ವೈಚಾರಿಕತೆಯ ಕೊರತೆಯಿರುವುದನ್ನೂ ಗಮನಿಸಬೇಕು. ಕಾರಣಗಳನ್ನು ತಿಳಿದು, ಔಷಧವನ್ನು ಸರಿಯಾದ ಕ್ರಮದಲ್ಲಿ ನೀಡಿ ರೋಗವನ್ನು ನಿರ್ಮೂಲನಗೊಳಿಸಬೇಕೆ ಹೊರತು ರೋಗಿಯನ್ನಲ್ಲ. ಮಹಿಳೆಯ ಮೇಲಿನ ಇಂಥ ಅಪರಾಧಗಳ ಮೂಲ ಬೇರುಗಳು ಗಂಡು-ಹೆಣ್ಣಿನ ತಾರತಮ್ಯವನ್ನ ಪೋಷಿಸಿರುವ ನಮ್ಮ ಸ್ಥಾಪಿತ ವ್ಯವಸ್ಥೆಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಗ್ರಹಿಕೆಗಳ ಆಳದಲ್ಲಿವೆ ಎಂಬುದನ್ನು ಅರಿಯಬೇಕು.

ಹೆಣ್ಣು ಭೋಗದ ವಸ್ತು ಎಂಬುದು ಜಡ್ಡುಗಟ್ಟಿದ ನಮ್ಮ ಸಮಾಜದಲ್ಲಿ ಸ್ವೀಕೃತ ಮತ್ತು ಲೋಕಾಭಿರಾಮದ ವಿಚಾರವಾಗಿದೆ ಎನ್ನುವುದಕ್ಕೆ ಇತ್ತೀಚೆಗೆ ವಿಧಾನಸಭೆಯಲ್ಲಿ ಹಿರಿಯ ಸದಸ್ಯರ ನಡುವೆ ನಡೆದ ಅತ್ಯಾಚಾರದ ಕುರಿತಾದ ತಮಾಷೆ ಒಂದು ನಿದರ್ಶನ. ಈ ವಿಚಾರಕ್ಕೆ ಬಂದಂಥ ವಿರೋಧದಲ್ಲಿ ಸ್ತ್ರೀಪರವಾದ ನಿಜ ಕಾಳಜಿಯ ಪಾಲೆಷ್ಟು ಮತ್ತು ರಾಜಕೀಯವೆಷ್ಟು ಎಂಬುದನ್ನೂ ಪರಾಮರ್ಶಿಸಬೇಕು.

ರಾಜಕೀಯದ ಸ್ಥಾನಗಳಲ್ಲಿರುವ ಎಲ್ಲಾ ಮಹಿಳೆಯರಿಗೆ ರಾಜಕೀಯ ಮತ್ತು ಬೌದ್ಧಿಕ ಸ್ವಾತಂತ್ರ್ಯವಿದೆಯೇ? ಅವರು ಯಾರ ಮತ್ತು ಯಾವ ಸೈದ್ಧಾಂತಿಕ ಹಿತಾಸಕ್ತಿಗಳನ್ನು ಕಾಯುತ್ತಿದ್ದಾರೆ? ಎಂಬ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳುವ ಅಗತ್ಯವಿದೆ. ಮೈಸೂರಿನಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಿಂದೆ ಮಹಿಳಾ ಆಯೋಗದ ಜವಾಬ್ದಾರಿಯುತ ಹುದ್ದೆಯಲ್ಲಿದ್ದ ಮಹಿಳೆಯೊಬ್ಬರು ’ಉನ್ನತ ವಿದ್ಯಾಭ್ಯಾಸ ಪಡೆದ ಆ ಸಂತ್ರಸ್ತೆ ನಿರ್ಜನ ಪ್ರದೇಶಕ್ಕೆ ಅಷ್ಟೊತ್ತಿನಲ್ಲಿ ಹೋಗಿರುವುದು ನನಗೆ ಅಸಹ್ಯವೆನಿಸುತ್ತದೆ’ ಎಂದಿದ್ದರು. ಒಂದು ರೀತಿಯಲ್ಲಿ ಪುರುಷಪ್ರಧಾನ ವ್ಯವಸ್ಥೆಯ ಮೌಲ್ಯಗಳ ಮೂಲಕ ಹೆಣ್ಣಿನ ಹಕ್ಕುಗಳನ್ನು ಹದ್ದುಬಸ್ತಿನಲ್ಲಿಡಲು ಸಾಧ್ಯವಾಗದಿದ್ದರೆ, ಶಿಕ್ಷಣ ವ್ಯವಸ್ಥೆಯೇ ಸೋತಂತೆ ಎಂಬುದನ್ನು ಈ ಮಾತು ಧ್ವನಿಸುತ್ತದೆ. ಇದು ಪ್ರಗತಿಪರ ಎಂದು ಹೇಳಿಕೊಳ್ಳುವ ರಾಜಕೀಯ ಪಕ್ಷದಲ್ಲಿಯೂ ಆಳವಾಗಿ ಬೇರೂರಿರುವ ಪುರುಷ ಪ್ರಾಧಾನ್ಯತೆಯ ಲಕ್ಷಣವಾಗಿದೆ. ಇದು ಇಡೀ ವ್ಯವಸ್ಥೆಯನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳಲು ತನ್ನ ಹಿತಾಸಕ್ತಿಯನ್ನು ಕಾಯುವಂತ ಮಹಿಳೆಯರಿಗೆ ಮಾತ್ರ ಅಧಿಕಾರದ ಸ್ಥಾನಗಳನ್ನು ನೀಡುತ್ತಿದೆಯೇ ಎಂಬ ಪ್ರಶ್ನೆ ಹುಟ್ಟಿಸುತ್ತಿದೆ. ಇನ್ನೊಂದು ದೃಷ್ಟಿಯಿಂದ ನೋಡುವುದಾದರೆ, ಮಹಿಳೆಯರೇ ಆಡುವ ಇಂಥ ಮಾತುಗಳು ಇಡೀ ಮನುಕುಲದ ಸಂಕಥನದಲ್ಲಿ ಅಧಿಕಾರ ವಂಚಿತ ಹೆಣ್ಣು ತನ್ನದೇ ಆದ ಸಂಕಥನ/ಭಾಷೆಯನ್ನು ಕೂಡ ಹೊಂದಿರದೆ, ಇಡೀ ಲೋಕದ ಭಾಷೆಯೆಂಬಂತೆ ಬಿಂಬಿತವಾದ ಪುರುಷಾಧಿಕಾರದ ಹಿತಾಸಕ್ತಿ ಕಾಯುವ ಭಾಷೆಯನ್ನೇ ತಾನೂ ಬಳಸುತ್ತಿರುವುದರ ಅಪ್ರಜ್ಞಾಪೂರ್ವಕ ಪರಿಣಾಮವೂ ಆಗಿರಬಹುದು.

ಮನುಷ್ಯ (ಮ್ಯಾನ್) ಎಂಬ ಪದ ಪುರುಷ ಎಂಬರ್ಥವನ್ನಷ್ಟೇ ನೀಡದೆ, ಇಡೀ ಮನುಕುಲವನ್ನೇ ಸೂಚಿಸಲು ಕೂಡ ಬಳಸಲ್ಪಡುತ್ತದೆ. ಶಿಕ್ಷಕರು, ವಿದ್ಯಾರ್ಥಿಗಳು, ವೈದ್ಯರು ಇಂಥ ಎಲ್ಲಾ ಪುರುಷವಾಚಕ ಪದಗಳು ಆಡಳಿತರೂಢವಾಗಿ ಅವರ ಇಡೀ ವೃತ್ತಿ ಸಮುದಾಯವನ್ನು (ಅದರಲ್ಲಿರುವ ಮಹಿಳೆಯರನ್ನೂ ಸೇರಿದಂತೆ) ಸೂಚಿಸಬಲ್ಲವು. ಅಂದರೆ, ಮಾನವ ಭಾಷೆ ಲಿಂಗರಾಜಕಾರಣದಿಂದ (ಜಂಡರ್ ಪಾಲಿಟಿಕ್ಸ್) ಯಾವ ಪರಿ ಆಳಲ್ಪಟ್ಟಿದೆಯೆಂದರೆ ಪುರುಷ ತುಂಬಾ ಸಹಜವಾಗಿ ಇಡೀ ಮಾನವಕುಲದ ಪ್ರತಿನಿಧಿಯಾಗುತ್ತಾನೆ. ’ಶರಣಸತಿ ಲಿಂಗಪತಿ’ ಎನ್ನುವಲ್ಲಿ ಶರಣರು ಕೂಡ ಸತಿಪತಿಯ ಸಂಬಂಧದಲ್ಲಿ ಪತಿ ಶ್ರೇಷ್ಠ ಎಂಬ ಗಂಡಾಳ್ವಿಕೆಯ ಭಾಷೆಯ ಮಿತಿಯಲ್ಲಿ ಸಿಕ್ಕಿಕೊಳ್ಳುತ್ತಾರೆ. ದೇವರನ್ನು ಸೂಚಿಸಲು ಇಂಗಿಷ್‌ನಲ್ಲಿ HE ಎಂಬ ಪದ ಬಳಕೆಯಿದೆ; SHE ಎಂಬುದಲ್ಲ. ಜಗತ್ತಿನಾದ್ಯಂತ ರಾಷ್ಟ್ರ, ನಾಡು ಎಂಬುದನ್ನು ಹೆಣ್ಣಿಗೆ/ ತಾಯಿಗೆ ಹೋಲಿಸುವುದಿದೆ; ಈ ಅಪ್ರಜ್ಞಾಪೂರ್ವಕ ಹೋಲಿಕೆಗಳ ವಿಶ್ಲೇಷಣೆಯಲ್ಲಿ, ಇವು ಪುರುಷನ ಅಧಿಕಾರದ ಹಪಾಹಪಿ ಮತ್ತು ಆಳುವ ಹಂಬಲದಿಂದ ಕಟ್ಟಿಕೊಂಡ ವೈಚಾರಿಕ ಚೌಕಟ್ಟುಗಳು ಎಂಬುದು ತಿಳಿಯುತ್ತದೆ. ಇಂಥ ಪುರುಷಾಧಿಕಾರದ ಚಿಂತನೆಯ ಪರಿಣಾಮವಾಗಿಯೇ ’ರಾಷ್ಟ್ರಪತಿ’ ಎಂಬ ಪದ ಹುಟ್ಟಿದಂತಿದೆ.

ಜನಪ್ರಿಯ ಸಿನಿಮಾಗಳಲ್ಲಿ ನಾಯಕ ಕೈಕಟ್ಟಿ ನಿಂತಿದ್ದು ಅವನ ಸುತ್ತಲೂ ತಳುಕುಬಳುಕಿನಿಂದ ನರ್ತಿಸುವ ನಾಯಕಿಯ ಚಿತ್ರಣವಿರುತ್ತದೆ. ಅಂದರೆ, ನರ್ತಿಸಲು ಬಾರದ ನಾಯಕರಿರಬಹುದು; ಆದರೆ ನಾಯಕಿ ನರ್ತಿಸುವುದು ಕಡ್ಡಾಯ. ಇಂದಿಗೂ ಕೂಡ ಬಹುತೇಕ ಮುಖ್ಯಧಾರೆಯ ಜನಪ್ರಿಯ ಸಿನಿಮಾಗಳಲ್ಲಿ ಬೌದ್ಧಿಕತೆ, ಸಾಧನೆ, ಸಾಮಾಜಿಕ ಕಳಕಳಿ, ಸಾಹಸ ಮತ್ತು ಸಮಾಜಸೇವೆ ನಾಯಕನ ಗುಣಗಳಾಗಿರುತ್ತವೆಯೇ ಹೊರತು ನಾಯಕಿಯವಲ್ಲ. ನಾಯಕನ ಪ್ರತಿಷ್ಠೆಯನ್ನು ಹೆಚ್ಚಿಸಲು ಕಾಣಿಸಿಕೊಳ್ಳುವ ಒಂದು ಸುಂದರ ಆದರೆ ಸ್ವತಂತ್ರ ವ್ಯಕ್ತಿತ್ವವಿಲ್ಲದ ಆಭರಣದಂತೆ ನಾಯಕಿಯಿರುತ್ತಾಳೆ. ಸಿನಿಮಾ ಕಲಾವಿದರಲ್ಲಿ ನಟಿಯರು 35 ವರ್ಷ ವಯಸ್ಸಿನ ನಂತರ ಬಹುತೇಕ ನಾಯಕಿಯ ಪಾತ್ರವನ್ನು ಕಳೆದುಕೊಳ್ಳುತ್ತಾರೆ ಮತ್ತು ಪೋಷಕ ನಟಿಯ ಪಾತ್ರಕ್ಕೆ ತಳ್ಳಲ್ಪಡುತ್ತಾರೆ. ಇದು ಒಬ್ಬ ನಾಯಕಿಯ ಆಯ್ಕೆಯಲ್ಲಿ ಯೌವನದ ಪಾಲು ಆಕೆಯ ನಟನಾ ಪ್ರತಿಭೆಯ ಪಾಲಿಗಿಂತ ಹೆಚ್ಚಿನದು ಎಂಬುದನ್ನು ತೋರಿಸುತ್ತದೆ. ನಟರು ಮಾತ್ರ ಎಪ್ಪತ್ತರ ವಯಸ್ಸಿನ ತನಕವೂ ನಾಯಕರಾಗಿ ನಟಿಸಿರುವ ಹಲವಾರು ನಿದರ್ಶನಗಳಿವೆ. ಈ ಎಲ್ಲಾ ಸಂಗತಿಗಳು ಸಮಾಜ ಹೆಣ್ಣಿಗೆ ಘನತೆಯ ಸ್ವತಂತ್ರ ಅಸ್ತಿತ್ವ ಮತ್ತು ವ್ಯಕ್ತಿತ್ವವನ್ನು ನಿರಾಕರಿಸಿ ಒಂದು ಭೋಗದ ಸರಕಿನಂತೆ ಗ್ರಹಿಸಿರುವುದರ ಕುರುಹುಗಳು. ಬಹುಪಾಲು ಜನಪ್ರಿಯ ಸಿನಿಮಾಗಳು ಒಪ್ಪಿತ ಸಾಮಾಜಿಕ ಮೌಲ್ಯಗಳನ್ನೇ ಪ್ರತಿನಿಧಿಸುವುದರಿಂದ, ಮೇಲೆ ಹೇಳಲಾದ ಸಂಗತಿಗಳು ನಮ್ಮ ಬದುಕಿನ ಸಾಮಾಜಿಕ ವಾಸ್ತವವನ್ನು ಬಿಚ್ಚಿಡುತ್ತವೆ.

ಗಂಡಿನ ವಲಯದಲ್ಲಿ ಹೆಣ್ಣನ್ನು ವರ್ಣಿಸಲು ಬಳಸುವ ಹಣ್ಣು, ಮಾಲು, ಐಟಂ ಇತ್ಯಾದಿ ಪದಗಳಲ್ಲಿ ಹೆಣ್ಣನ್ನು ಸರಕಾಗಿಸುವಿಕೆ ಸ್ಪಷ್ಟವಿದೆ. ಪುರುಷನನ್ನೇ ಬೈಯುವ ಉದ್ದೇಶವಿದ್ದರೂ ಆ ಪುರುಷನ ಅಕ್ಕ, ತಂಗಿ, ತಾಯಿ, ಹೆಂಡತಿಯರ ಲೈಂಗಿಕತೆಯನ್ನು ಕೀಳೀಕರಿಸುವ ಮೂಲಕವೇ ಬೈಗುಳಗಳು ಹುಟ್ಟುತ್ತವೆ. ಇನ್ನೊಂದೆಡೆ, ಹೆಣ್ಣಿನ ಮೇಲೆ ನಡೆಯುವ ಅತ್ಯಾಚಾರಕ್ಕೆ ಅವಳ ದೇಹಭಾಷೆ, ಉಡುಗೆ-ತೊಡುಗೆಗಳು ಇತ್ಯಾದಿಗಳೇ ಕಾರಣವೆಂದು ಆರೋಪಿಸಿ ಅವಳನ್ನೇ ಅಪರಾಧಿಯನ್ನಾಗಿಸಲಾಗಿದೆ. ಗಂಡನ ವೇಷದಲ್ಲಿ ಮೋಸದಿಂದ ಅಹಲ್ಯೆಯ ಜೊತೆ ಲೈಂಗಿಕ ಸುಖವನ್ನು ಹೊಂದುವ ಇಂದ್ರನದೇ ತಪ್ಪಾಗಿದ್ದರೂ, ಕಲ್ಲಾಗಬೇಕಾದ ತೀವ್ರ ಶಿಕ್ಷೆಗೊಳಗಾಗುವುದು ಅಹಲ್ಯೆಯೇ. ಮಹಿಳೆಯ ದೇಹದ ಮೇಲೆ ಹಕ್ಕು ಚಲಾಯಿಸಲು ಸದಾ ಹವಣಿಸುತ್ತಲೇಯಿರುವ ಪುರುಷಕೇಂದ್ರಿತ ಜಗತ್ತು ಯಾವತ್ತೂ ಅವಳ ದೃಷ್ಟಿಕೋನದಿಂದ ಅವಳ ಬದುಕನ್ನ ಗ್ರಹಿಸಲು ಇಚ್ಚಿಸುವುದಿಲ್ಲ. ಲೇಖಕಿ ಗೀತಾ ವಸಂತ ಅವರ ಮಾತಿನಲ್ಲಿ ’ಪ್ರಜನನಕ್ಕಾಗಿ ಇರುವ ಯೋನಿ ಹಾಗೂ ಹಾಲೂಡುವ ಸಲುವಾಗಿ ಇರುವ ಮೊಲೆಗಳು ಸದಾ ಕಾಮಪ್ರಚೋದಕ ಅಂಗಗಳಾಗಿ ಕಾಣುವುದು ಪುರುಷರ ನೋಟದ ಮಿತಿಯೇ ಹೊರತು ಅದು ಪ್ರಕೃತಿಯ ವಿಕಾರವಲ್ಲ’. ಇಂದಿಗೂ, ತನ್ನ ದೇಹದ ಮೇಲೆ ನಡೆವ ಲೈಂಗಿಕ ಕ್ರೌರ್ಯವನ್ನು ಬಹಿರಂಗಪಡಿಸಲು ಮತ್ತು ಕಾನೂನಾತ್ಮಕವಾಗಿ ವಿರೋಧಿಸಲು ಕುಟುಂಬದ ಅನುಮತಿಯನ್ನು ನಿರೀಕ್ಷಿಸಬೇಕಾಗಿರುವುದು ನಾಗರಿಕ ಸಮಾಜದ ಮಹಿಳಾ ಸ್ವಾತಂತ್ರ್ಯದ ವಿಪರ್ಯಾಸ.

ಭಾರತೀಯ ಸಮಾಜದಲ್ಲಿ ಹೆಣ್ಣಿನ ಮೇಲೆ ನಡೆಯುವ ದೇಹ ರಾಜಕಾರಣ ಎಷ್ಟು ಸಹಜವಾಗಿಬಿಟ್ಟಿದೆಯೆಂದರೆ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರವಾದಾಗ ವಿಶ್ವವಿದ್ಯಾಲಯಗಳು ಕೂಡ ವಿದ್ಯಾರ್ಥಿನಿಯರನ್ನು ಸಂಜೆ 6ರ ನಂತರ ಹೊರಗೆ ಅಡ್ಡಾಡಬಾರದು ಎಂಬ ಆದೇಶವನ್ನು ಮೊದಲು ಹೊರಡಿಸಿದವೇ ಹೊರತು ಅಂಥ ಹೀನಕೃತ್ಯ ಎಸಗುವ ಗಂಡಸರಿಗೆ ಹಾಕಬಹುದಾದ ನಿಬಂಧಗಳ ಆದೇಶವನ್ನಲ್ಲ. ಇಂಥ ಆದೇಶಗಳು ಹೆಣ್ಣಿಗೆ ತನ್ನ ಅಸ್ತಿತ್ವದ ಬಗ್ಗೆ ಹುಟ್ಟಿಸಬಹುದಾದ ಕೀಳರಿಮೆ ಹೇಗಿರುತ್ತದೆ ಎಂದು ಅರಿಯದಷ್ಟು ಅಸೂಕ್ಷ್ಮತೆ ಒಳ್ಳೆಯದಲ್ಲ. ಉನ್ನತ ಶಿಕ್ಷಣದ ಹಂತದಲ್ಲಿರುವ ಬಹಳಷ್ಟು ವಿದ್ಯಾರ್ಥಿಗಳಲ್ಲೂ ಇಂತಹ ಸೂಕ್ಷ್ಮ ವಿಚಾರಗಳ ಬಗೆಗೆ ಪ್ರತಿರೋಧವೇ ಇರದಿರುವುದನ್ನು ನೋಡಿದರೆ, ಈ ಸಮಸ್ಯೆಯ ಮೂಲ ಎಷ್ಟು ಆಳವಾಗಿದೆ ಎಂಬುದು ತಿಳಿಯುತ್ತದೆ.

ಪುರುಷಪ್ರಧಾನ ವ್ಯವಸ್ಥೆ ಪುರುಷನ ಲಿಂಗಪ್ರಜ್ಞೆಯ ಅಸೂಕ್ಷ್ಮತೆಯನ್ನು ವಿನೋದಪ್ರಜ್ಞೆ ಮತ್ತು ಸಾಮಾಜಿಕರಣದ ಗುಣವೆಂಬಂತೆ ನೋಡುತ್ತದೆ. ’ಹೈ ಬಿಪಿ ಆದಾಗ ಪಕ್ಕದ ಮನೆಯ ಹೆಂಗಸರ ಜೊತೆ ಮಾತನಾಡಿ, ಲೋ ಬಿಪಿ ಆದಾಗ ನಿಮ್ಮ ಹೆಂಡತಿಯ ಜೊತೆ ಮಾತನಾಡಿ’-ಇದನ್ನೊಂದು ಜೋಕಿನ ರೂಪದಲ್ಲಿ ಮಹಿಳಾ ಮತ್ತು ಪುರುಷ ಸಹೋದ್ಯೋಗಿಗಳೆಲ್ಲರೂ ಇರುವ ವೃತ್ತಿನಿರತರ ವಾಟ್ಸಾಪ್ ಗುಂಪಿನಲ್ಲಿ ಲೋಕಾಭಿರಾಮವಾಗಿ ಪುರುಷರು ಹಂಚಿಕೊಳ್ಳುತ್ತಾರೆ. ಮಹಿಳೆಯರು ಪ್ರತಿಕ್ರಿಯಿಸದಿರುವುದು – ಇದೊಂದು ಹೇರಲಾಗಿರುವ ಮೌಲ್ಯ ಎಂಬುದನ್ನು ತೋರುತ್ತದೆ. ಮೇಲಿನ ಜೋಕನ್ನು ಅದರಲ್ಲಿರುವ ಹೆಂಡತಿ ಹೆಂಗಸು ಎಂಬ ಪದಗಳಿಗೆ ಬದಲಾಗಿ ಗಂಡ ಗಂಡಸು ಎಂಬ ಪದಗಳನ್ನು ಬಳಸಿ ಮಹಿಳೆಯೊಬ್ಬಳು ಹಂಚಿಕೊಂಡರೆ ಹೇಗಿರುತ್ತದೆ ಎಂದ ತಕ್ಷಣ, ಇಡೀ ಗುಂಪು ಗಂಭೀರವದನವಾಗುತ್ತದೆ; ಅಷ್ಟೇ ಅಲ್ಲ, ಸಭ್ಯತೆ ಮತ್ತು ಸಂಸ್ಕೃತಿಯ ಬಗೆಗಿನ ಪಾಠ ಆರಂಭವಾಗುತ್ತದೆ.

ವಿದ್ಯಾವಂತ ಹೆಂಡತಿಯರ ಕೌಟುಂಬಿಕ ಹಕ್ಕುಗಳ ಪ್ರತಿಪಾದನೆಯನ್ನು ಕೆಲವರು ತಲೆನೋವು ಎಂದೋ ಹುಲಿ ಸಿಂಹದ ಘರ್ಜನೆ ಎಂದೋ ಅಣಕವಾಡುತ್ತಾರೆ. ಲೇಖಕಿ ಜೂಡಿಬ್ರಾಡಿ ತನ್ನ ಪ್ರಬಂಧವೊಂದರಲ್ಲಿ ಹೆಂಡತಿಯಾದವಳ ಜವಾಬ್ದಾರಿಗಳ ಭಾರವನ್ನು ನೋಡಿ ’ನನಗೂ ಒಬ್ಬ ಹೆಂಡತಿ ಬೇಕು’ ಎನ್ನುವುದನ್ನು ತುಂಬಾ ಶಿಕ್ಷಕರು (ವ್ಯವಸ್ಥೆಯನ್ನು ಒಪ್ಪಿಕೊಂಡಿರುವ ಶಿಕ್ಷಕಿಯರು ಕೂಡ) ಹಾಸ್ಯಪ್ರಜ್ಞೆಯಿಂದ ನೋಡುತ್ತಾರಷ್ಟೇ ಹೊರತು, ಅದರೊಳಗಿನ ತೀಕ್ಷ್ಣವಾದ ವಿಡಂಬನೆ, ನೋವು, ಅಸಹಾಯಕತೆಯನ್ನು ಗುರುತಿಸುತ್ತಿಲ್ಲ. ಹೆಣ್ತನ ಮತ್ತು ತಾಯಿತನವನ್ನು ಅತಾರ್ಕಿಕವಾಗಿ ಬೇರೆಬೇರೆಯಾಗಿ ಕಲ್ಪಿಸಿ ಹೆಣ್ತನವನ್ನು ದುರ್ಗಿ ಅಥವಾ ಮಾಯೆಯಾಗಿ, ತಾಯ್ತನವನ್ನು ಮಾತೆಯಾಗಿ ತನ್ನ ಅಗತ್ಯ ಮತ್ತು ಅನುಕೂಲತೆಗೆ ತಕ್ಕಂತೆ ಪುರುಷ ವ್ಯವಸ್ಥೆ ಇತಿಹಾಸದುದ್ದಕ್ಕೂ ನಂಬಿಸಿಕೊಂಡು ಬಂದಿದೆ. ಹೆಂಡತಿ ಮಾಯೆ ಮತ್ತು ತೊಡಕು ಎಂಬ ಪೂರ್ವಗ್ರಹ ಬೇರೂರಿರುವ ಕಾರಣದಿಂದಲೇ ಅವಿವಾಹಿತರಾಗಿಯೇ ಉಳಿದ ಪುರುಷ ರಾಜಕಾರಣಿಗಳನ್ನು ಜನಸಾಮಾನ್ಯರು ವಿಶೇಷ ಗೌರವಾದರಗಳಿಂದ ನೋಡುತ್ತಾರೆ. ಒಬ್ಬಳೇ ಹೆಣ್ಣಿನ ಬೇರೆಬೇರೆ ಅವಸ್ಥೆಗಳನ್ನು ಮೇಲು ಕೀಳೆಂದು ತನ್ನ ಅಧಿಕಾರ ರಾಜಕಾರಣಕ್ಕಾಗಿ ಪುರುಷ ವ್ಯವಸ್ಥೆ ವರ್ಗೀಕರಿಸುತ್ತದೆ. ಹಾಗೆಂದು, ಎಲ್ಲಾ ಮಹಿಳೆಯರ ಸಮಸ್ಯೆಗಳನ್ನೂ ಏಕರೂಪೀಕರಿಸಲಾಗದು. ಭಾರತೀಯ ಸನ್ನಿವೇಶದಲ್ಲಿ, ಮಹಿಳೆಯ ಆತಂಕಗಳು ಆಕೆಯ ವರ್ಗ, ವರ್ಣ, ಜಾತಿ, ಧರ್ಮ, ವೃತ್ತಿ, ಶಿಕ್ಷಣಗಳ ಸಂಬಂಧದಲ್ಲಿ ಮತ್ತಷ್ಟು ಸಂಕೀರ್ಣತೆಯನ್ನು ಪಡೆದುಕೊಳ್ಳುತ್ತವೆ.

ಕೌಟುಂಬಿಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಹಂತದ ಬೇರುಮಟ್ಟದ ಅಸಮಾನತೆಗಳಿಂದ ಇನ್ನೂ ಬಿಡಿಸಿಕೊಳ್ಳಲು ಆಗದಿರುವುದು ಸಹಜವಾಗಿ ಭಾರತೀಯ ಮಹಿಳೆಯನ್ನು ಪೂರ್ಣ ಪ್ರಮಾಣದ ರಾಜಕೀಯದ ಆಲೋಚನೆಗಳಿಂದ ದೂರವಿಟ್ಟಿದೆ. ಆಕೆ ಅಂಥ ಪ್ರಾಥಮಿಕ ತೊಡಕುಗಳಲ್ಲೇ ಸಿಕ್ಕಿಕೊಂಡಿರಲೆಂಬುದು ಪುರುಷಪ್ರಧಾನ ರಾಜಕಾರಣದ ಹಿತಾಸಕ್ತಿಯೂ ಹೌದು. ವಿಶೇಷವಾಗಿ ಬಲಪಂಥೀಯ ರಾಜಕಾರಣ ಎತ್ತುವ ಮಹಿಳೆಯರ ವೇಷಭೂಷಣ, ವೈಯಕ್ತಿಕ ಪ್ರೀತಿ ಪ್ರೇಮದ ಕುರಿತ ತಕರಾರುಗಳು ಇಂಥ ತೊಡಕಿನ ನಿರ್ಮಾಣದ ಭಾಗವೇ. ಜನಪರ ಯೋಜನೆಗಳನ್ನು ಜಾರಿಗೊಳಿಸಲು ಗಂಡಸುತನ ಬೇಕು ಮತ್ತು ಅದು ತಮಗಿದೆ ಎಂಬ ಸಚಿವರು ಮತ್ತು ಸಂಸದರ ನಡುವಿನ ಇತ್ತೀಚಿನ ಸಾರ್ವಜನಿಕ ವಾಗ್ವಾದದ ಮೂಲಧ್ವನಿ ಮಹಿಳೆಯ ಕ್ರಿಯಾಶೀಲತೆಯನ್ನು, ರಾಜಕೀಯ ಮತ್ತು ಆಡಳಿತಾತ್ಮಕ ಸಾಮರ್ಥ್ಯವನ್ನು ಕೀಳೀಕರಿಸುತ್ತಿದೆ. ದೇಶದ ಭೂಪಟಕ್ಕೆ ಭಾರತಮಾತೆ ಎಂದು ಕರೆಯುವುದರಲ್ಲಿಯೇ ಮಹಿಳಾ ಗೌರವದ ಆಟ ಮುಗಿಸಿ ಕೈತೊಳೆದುಕೊಳ್ಳುವ ಭಾರತೀಯ ಪುರುಷ ರಾಜಕಾರಣದ ಯಾಜಮಾನ್ಯದ ಕಪಟತನ, ಶಾಸನಸಭೆಗಳಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸದೆ ಸಾಗುತ್ತಿರುವುದರಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಎಲ್ಲಾ ಸ್ತರದ ಮಹಿಳೆಯರನ್ನು ಒಳಗೊಳ್ಳದ ಹೊರತು ಈ ಮೀಸಲಾತಿಯಿಂದಲೂ ಹೆಚ್ಚಿನದೇನನ್ನೂ ನಿರೀಕ್ಷಿಸಲಾಗದು.

ಔಪಚಾರಿಕ ಶಿಕ್ಷಣ ಉದ್ಯೋಗ ಮತ್ತು ಆ ಮೂಲಕ ಪಡೆಯುವ ಆರ್ಥಿಕ ಸ್ವಾವಲಂಬನೆ ಮಹಿಳೆಯರನ್ನು ಪುರುಷವಾದದ ಶೋಷಣೆಯಿಂದ ಮುಕ್ತಗೊಳಿಸುತ್ತದೆ ಎಂಬುದು ಪೂರ್ಣ ನಿಜವಲ್ಲ. ಯಾಕೆಂದರೆ, ಮೇಲಿನ ವಿಶ್ಲೇಷಣೆಗಳಲ್ಲಿ ಕಂಡಂತೆ ನಮ್ಮ ಪುರುಷಪೋಷಿತ ಸಾಮಾಜಿಕ ಮತ್ತು ಸಾಂಸ್ಕೃತಿಕ ಚೌಕಟ್ಟುಗಳು ಕುಟುಂಬ, ಸಮಾಜ, ಧರ್ಮ, ಎಂಬ ಅನೌಪಚಾರಿಕ ಶಿಕ್ಷಣ ಸಂಸ್ಥೆಗಳ ಮೂಲಕ ಹೆಣ್ಣು ಎರಡನೇ ದರ್ಜೆಯ ಪ್ರಜೆ ಎಂಬ ಲಿಂಗಬೇಧದ ಪ್ರಜ್ಞೆಯನ್ನು ಜನರಲ್ಲಿ ನಿರಂತರವಾಗಿ ಮೂಡಿಸಿ ಅವರ ಒಪ್ಪಿಗೆ ಉತ್ಪಾದಿಸಿಕೊಳ್ಳುತ್ತವೆ. ಸಿಮೊನ್ ದಿ ಬೋವಾ ಹೇಳುವಂತೆ ಎಲ್ಲಿಯವರೆಗೆ ಮಹಿಳೆ ಪುರುಷನಿರ್ಮಿತ ಮಾನಸಿಕ ವೈಚಾರಿಕ ಚೌಕಟ್ಟುಗಳಲ್ಲಿ ಬದುಕಬೇಕಾಗುತ್ತದೆಯೋ, ಅಲ್ಲಿಯವರೆಗೆ ನಿಜವಾದ ಅರ್ಥದಲ್ಲಿ ಆಕೆ ಸ್ವತಂತ್ರಳಾಗುವುದಿಲ್ಲ. ಮಾನವ ಸಮಾಜದ ಭಾಷಿಕ ರಚನೆಗಳು, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂರಚನೆಗಳು, ಸಿದ್ಧಾಂತಗಳು, ವೈಚಾರಿಕತೆ,
ಜ್ಞಾನಶಿಸ್ತುಗಳ ಮೂಲ ಬೇರುಗಳು ಗಂಡಾಳ್ವಿಕೆಯ ಆಲೋಚನಾ ಕ್ರಮಗಳಿಂದಲೇ ನೀರುಣಿಸಲ್ಪಟ್ಟಿರುವುದರಿಂದ, ಇವೆಲ್ಲವುಗಳನ್ನು ವರ್ಜಿಸಿಯೇ ತಮ್ಮ ವೈಚಾರಿಕ ಚೌಕಟ್ಟನ್ನು ನಿರ್ಮಿಸಿಕೊಳ್ಳಬೇಕೆಂಬ ಸ್ತ್ರೀವಾದಿಗಳ ಅನಿಸಿಕೆಯಲ್ಲಿಯೂ ಅರ್ಥವಿದೆ. ಇದರರ್ಥ ಪುರುಷರನ್ನು ದ್ವೇಷಿಸುವುದು ಅಥವಾ ದೂರವಿಡುವುದಲ್ಲ. ಬದಲಾಗಿ, ಲಿಂಗಪ್ರಭೇದದ ಸ್ಥಿರಮಾದರಿಗಳನ್ನು (ಜೆಂಡರ್ ಸ್ಟಿರಿಯೋಟೈಪ್) ಸೃಷ್ಟಿಸುವುದರ ಮೂಲಕ ಪುರುಷ ಮತ್ತು ಮಹಿಳೆಯರಿಬ್ಬರ ನಡುವಿನ ಸಹಜ ಮಾನವೀಯ ಗೌರವಯುತ ಸಂಬಂಧಗಳನ್ನು ಕೂಡ ಅಧಿಕಾರದ ಸಂಬಂಧಗಳಾಗಿ ಶ್ರೇಣೀಕರಣಗೊಳಿಸಿದ ಗಂಡಾಳ್ವಿಕೆಯ ಸಿದ್ಧಾಂತವನ್ನು ದೂರವಿಡುವುದಾಗಿದೆ.

ಆ ಮೂಲಕ ಈ ನಡೆಯು ಪುರುಷ ಮತ್ತು ಸ್ತ್ರೀ ಇಬ್ಬರನ್ನೂ ಸ್ಥಿರಮಾದರಿಗಳಿಂದ ಹುಟ್ಟುವ ದೈಹಿಕ ಮಾನಸಿಕ ಸಾಮಾಜಿಕ ಬೌದ್ಧಿಕ ಹಿಂಸೆಯಿಂದ ಬಿಡುಗಡೆಗೊಳಿಸಿ, ಪ್ರೀತಿಯ ಸಹಬಾಳ್ವೆಯನ್ನು ನೆಲೆಗೊಳಿಸುತ್ತದೆ. ಪುರುಷವಾದವೆಂಬುದು ಯಾಜಮಾನ್ಯದ ಅಧಿಕಾರದ ಹಿತಾಸಕ್ತಿಯುಳ್ಳವರ ನಿಯಂತ್ರಣದ ಒಂದು ಮಾದರಿಯೇ ವಿನಹ ಎಲ್ಲಾ ಪುರುಷರು ಒಪ್ಪಿರುವ ಬದುಕಿನ ಕ್ರಮವಲ್ಲ. ದೇಹಗಳನ್ನು ಮೇಲುಕೀಳುಗಳೆಂದು ಅತಾರ್ಕಿಕವಾಗಿ ವಿಂಗಡಿಸುವ ಪುರುಷವಾದ ಜನಾಂಗೀಯವಾದ ಮತ್ತು ಜಾತಿವಾದಗಳ ಮೂಲ ಎಳೆ ಒಂದೇ ಆಗಿರುವುದರಿಂದ ಮಹಿಳಾ ಹೋರಾಟವೆಂಬುದು ತಾತ್ವಿಕವಾಗಿ ಈ ಎಲ್ಲಾ ದಬ್ಬಾಳಿಕೆಗಳ ವಿರುದ್ಧದ ಹೋರಾಟವೂ ಆಗಿದೆ ಅಥವಾ ಆಗಬೇಕಾಗಿದೆ. ಒಂದು ಸಮಾಜದಲ್ಲಿ ಅಸ್ತಿತ್ವದಲ್ಲಿರುವ ಸ್ತ್ರೀ-ಪುರುಷ ಸಂಬಂಧದ ಸ್ವರೂಪವು ಮಾನವ ತನ್ನ ಪಶುಸ್ಥಿತಿಯಿಂದ ಮಾನವತೆಯ ದಿಕ್ಕಿನಲ್ಲಿ ಎಷ್ಟು ದೂರ ಒಂದು ಕಾಲಘಟ್ಟದಲ್ಲಿ ಸಾಗಿದ್ದಾನೆ ಎಂಬುದನ್ನು ಸ್ಪಷ್ಟವಾಗಿ ಗುರುತಿಸುತ್ತದೆ ಎನ್ನುವ ಮಾರ್ಕ್ಸ್‌ನ ಮಾತು ಸಂಸ್ಕೃತಿಯ ಹೆಸರಿನಲ್ಲಿ ಆತ್ಮರತಿಯಲ್ಲಿ ಮುಳುಗಿರುವ ನಮ್ಮ ಸಮಾಜವನ್ನು ಎಚ್ಚರಿಸಬೇಕಿದೆ.

ಡಾ. ಸಿ. ಬಿ. ಐನಳ್ಳಿ

ಡಾ. ಸಿ. ಬಿ. ಐನಳ್ಳಿ
ಧಾರವಾಡದ ಕರ್ನಾಟಕ ಕಲಾ ಮಹಾವಿದ್ಯಾಲಯಲ್ಲಿ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೂಲತಃ ಬಳ್ಳಾರಿ ಜಿಲ್ಲೆಯವರು. ಇಂಡಿಯನ್-ಅಮೆರಿಕನ್ ಲೇಖಕಿ ‘ಜುಂಪಾ ಲಾಹಿರಿಯ ಕೃತಿಗಳಲ್ಲಿ ವಸ್ತು ಮತ್ತು ತಂತ್ರಗಳ ಅಧ್ಯಯನ’ಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ.


ಇದನ್ನೂ ಓದಿ: ವಿಕಲಾಂಗ ಮಹಿಳೆಯ ಮೇಲೆ ಟ್ರಾಫಿಕ್‌ ಎಎಸ್‌ಐ ಹಲ್ಲೆ: ಗೃಹ ಸಚಿವರ ಸೂಚನೆ ಬೆನ್ನಲ್ಲೇ ‌ಅಧಿಕಾರಿ ಅಮಾನತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...