Homeಮುಖಪುಟಸುಪ್ರೀಂ ಕೋರ್ಟ್‌ನಲ್ಲಿ ದೇಶದ್ರೋಹ ಕಾನೂನಿನ ಸಾಂವಿಧಾನಿಕತೆ ಪ್ರಶ್ನಿಸಿರುವ ಎಸ್.ಜಿ ಒಂಬತ್ಕೆರೆ ಯಾರು?

ಸುಪ್ರೀಂ ಕೋರ್ಟ್‌ನಲ್ಲಿ ದೇಶದ್ರೋಹ ಕಾನೂನಿನ ಸಾಂವಿಧಾನಿಕತೆ ಪ್ರಶ್ನಿಸಿರುವ ಎಸ್.ಜಿ ಒಂಬತ್ಕೆರೆ ಯಾರು?

ಸೈನಿಕನಾಗಿ ತಮ್ಮ ಇಡೀ ಜೀವನವನ್ನು ದೇಶಸೇವೆಗೆ ಅರ್ಪಿಸಿದ ಅವರ ಅರ್ಜಿಯಲ್ಲಿ ಯಾವುದೇ ದುರುದ್ದೇಶವಿರಲು ಸಾಧ್ಯವಿಲ್ಲ ಎಂದು ಸಿಜೆಐ ಎನ್.ವಿ ರಮಣ ಅಭಿಪ್ರಾಯಪಟ್ಟಿದ್ದಾರೆ.

- Advertisement -
- Advertisement -

“ಸೈನಿಕನಾಗಿ ತಮ್ಮ ಇಡೀ ಜೀವನವನ್ನು ದೇಶಸೇವೆಗೆ ಅರ್ಪಿಸಿದವರು. ರಾಷ್ಟ್ರದ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯಲು ಅನೇಕ ಯುದ್ಧಗಳಲ್ಲಿ ಭಾಗವಹಿಸಿದ ಅವರ ಅರ್ಜಿಯಲ್ಲಿ ಯಾವುದೇ ದುರುದ್ದೇಶವಿರಲು ಸಾಧ್ಯವಿಲ್ಲ”. ಇವು ಮೈಸೂರಿನಲ್ಲಿ ನೆಲೆಸಿರುವ ನಿವೃತ್ತ ಮೇಜರ್ ಜನರಲ್ ಎಸ್.ಜಿ ಒಂಬತ್ಕೆರೆಯವರ ಕುರಿತು ಭಾರತದ ಮುಖ್ಯ ನ್ಯಾಯಾಧೀಶರಾದ ಎನ್‌.ವಿ ರಮಣರವರು ಆಡಿದ ಮಾತುಗಳು..

ದೇಶದ್ರೋಹ ಕಾನೂನಿನ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಭಾರತದ ಸುಪ್ರೀಂ ಕೋರ್ಟ್ ಸಹ “ದೇಶದ್ರೋಹದ ಕಾನೂನು ಬ್ರಿಟೀಷ್ ಕಾಲದ ಈ ವಶಾಹತುಶಾಹಿ ಪಳಯುಳಿಕೆ ಆಗಿದ್ದು, ಸ್ವಾತಂತ್ರ್ಯ ದೊರೆತ 75 ವರ್ಷಗಳ ನಂತರವೂ ಅದರ ಅಗತ್ಯವಿದೆಯೇ? ನಾವು ಇದರ ಸಿಂಧುತ್ವವನ್ನು ಪರಿಶೀಲಿಸುತ್ತೇವೆ” ಎಂದು ನುಡಿದಿದೆ. ಇಂತಹ ಮಹತ್ವದ ಚರ್ಚೆಗೆ ಕಾರಣರಾದವರು ಛಲಬಿಡದ ಹೋರಾಟಗಾರರಾದ ಎಸ್.ಜಿ ಒಂಬತ್ಕೆರೆ… ಏಕೆಂದರೆ ದೇಶದ್ರೋಹ ಕಾನೂನಿನ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಅವರು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಜೊತೆಗೂಡಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ಸುಪ್ರೀಂ ಪುರಸ್ಕರಿಸಿದ್ದು ಅದೀಗ ದೇಶಾದ್ಯಂತ ಹೊಸ ಚರ್ಚೆಗೆ ಕಾರಣವಾಗಿದೆ.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಎಸ್. ಸುಧೀರ್ ಜಿ ಒಂಬತ್ಕೆರೆಯವರು (79) ಬಹಳ ವರ್ಷ ಸೈನ್ಯದಲ್ಲಿ ಸೇವೆ ಸಲ್ಲಿಸಿದವರು. ಮದ್ರಾಸ್‌ ಐಐಟಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ಓದಿರುವ ಅವರು ಭಾರತದ ಅತ್ಯಂತ ಎತ್ತರದ ಪ್ರದೇಶದಲ್ಲಿ ಸೇತುವೆ ನಿರ್ಮಿಸುವ ಮೂಲಕ ಪ್ರಶಸ್ತಿ ಸಹ ಪಡೆದಿದ್ದಾರೆ. ದೆಹಲಿಯ ಸೈನ್ಯದ ಶಿಸ್ತು ಮತ್ತು ಜಾಗರೂಕತೆ ವಿಭಾಗದ ಹೆಚ್ಚುವರಿ ಡಿಜಿಯಾಗಿ ನಿವೃತ್ತನಾದ ನಂತರ 30 ವರ್ಷಗಳಿಂದ ಮೈಸೂರಿನಲ್ಲಿ ನೆಲೆಸಿರುವ ಅವರು ಪ್ರಖರ ಚಿಂತಕರು ಮತ್ತು ದಿಟ್ಟ ಹೋರಾಟಗಾರರು ಎನ್ನುತ್ತಾರೆ ಅವರ ಸ್ನೇಹಿತರು ಮತ್ತು ಒಡನಾಡಿಯಾದ ಡಾ.ವಿ ಲಕ್ಷ್ಮೀನಾರಾಯಣ್.

ಸರ್ಕಾರಿ ಸೌಲಭ್ಯ ಪಡೆಯಲು, ಇತರ ಸೇವೆಗಳಿಗೆ ಆಧಾರ್ ಕಡ್ಡಾಯಗೊಳಿಸಲು ಸರ್ಕಾರ ಹೊರಟಾಗ ಅದನ್ನು ಒಂಬತ್ಕೆರೆಯವರು ತೀವ್ರವಾಗಿ ವಿರೋಧಿಸಿದ್ದರು. ಇದು ದೇಶದ ಪ್ರಜೆಗಳ ಖಾಸಗಿತನದ ಹಕ್ಕುಗಳನ್ನು ಕಿತ್ತುಕೊಳ್ಳುತ್ತದೆ ಮತ್ತು ಎನ್‌ಪಿಆರ್‌ಗೆ ಕಾರಣವಾಗುತ್ತದೆ ಎಂದು ಪ್ರತಿಪಾದಿಸಿದ್ದರು. ಆಗ ಸುಪ್ರೀಂ ಕೋರ್ಟ್ ಆಧಾರ್ ಕಡ್ಡಾಯ ತೆಗೆಯಬೇಕೆಂದು ಸೂಚಿಸಿತ್ತು. ಸರ್ಜಿಕಲ್ ಸ್ಟ್ರೈಕ್, ಬಾಲಾಕೋಟ್ ದಾಳಿ ವೇಳೆ ಸೈನ್ಯವನ್ನು ರಾಜಕೀಯ ಕಾರಣಗಳಿಗಾಗಿ ಬಳಸಿಕೊಳ್ಳುವುದನ್ನು ವಿರೋಧಿಸಿ, ಸೈನ್ಯದ ಹೆಸರಲ್ಲಿ ಮತ ಕೇಳುವುದನ್ನು ವಿರೋಧಿಸಿ ರಾಷ್ಟ್ರಪತಿಗಳಿಗೆ ಪತ್ರ ಬರೆದ 150ಕ್ಕೂ ಹೆಚ್ಚು ಗಣ್ಯರಲ್ಲಿ ಎಸ್.ಜಿ ಒಂಬತ್ಕೆರೆಯವರು ಒಬ್ಬರಾಗಿದ್ದರು.

ರಟ್ಟಹಳ್ಳಿಯಲ್ಲಿ ಗಿಡಮರ ಬೆಳೆಸುವ ಪ್ರಚಾರಾಂದೋನ ಆರಂಭಿಸಿದ ಇವರು, ಚಾಮುಂಡಿ ಬೆಟ್ಟದಲ್ಲಿ ಮರಗಳನ್ನು ಉಳಿಸಲು ಹೋರಾಡಿದ್ದಾರೆ. ಚಾಮಲಪುರ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯ ವಿರುದ್ಧ ನಿರಂತರ ಪ್ರತಿಭಟನೆಗಳನ್ನು ನಡೆಸಿದರು. ಪರಿಸರ ಸಂಬಂಧದ ಹಲವು ವೇದಿಕೆಗಳಲ್ಲಿ ಸಕ್ರಿಯರಾಗಿರುವ ಅವರು ಮೈಸೂರು ಹೆರಿಟೇಜ್ ಕಮಿಟಿ ಮತ್ತು ಮೈಸೂರಿನ ಗ್ರಾಹಕ ವೇದಿಕೆಯಲ್ಲಿ ಕ್ರಿಯಾಶೀಲರಾಗಿ ಕೆಲಸ ಮಾಡಿದ್ದಾರೆ. ಮಾನವ ಹಕ್ಕುಗಳ ಪರವಾಗಿ ಹೋರಾಡುತ್ತಿರುವ ಅವರು ದೇಶದ್ರೋಹದ ಕಾನೂನಿನ ದುರ್ಬಳಕೆ ವಿರೋಧಿಸಿ ಸುಪ್ರೀಂನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸಾಮಾನ್ಯವಾಗಿ ಸೈನ್ಯದ ಹಿನ್ನೆಲೆಯಿರುವವರು ಆರಾಮಾಗಿರಲು ಬಯಸುತ್ತಾರೆಯೇ ಹೊರತು ಸಾಮಾಜಿಕ ಕಳಕಳಿ ಹೊಂದಿರುವುದಿಲ್ಲ. ಆದರೆ ಇವರು ಮಾತ್ರ ಭಿನ್ನವಾಗಿ ನಿಲ್ಲುತ್ತಾರೆ ಮತ್ತು ಸದಾ ಸಮಾಜದ ಪರ ಚಿಂತಿಸುತ್ತಾರೆ ಎಂದು ಪಿಯುಸಿಲ್‌ನ ಹಿರಿಯ ಹೋರಾಟಗಾರರಾದ ಡಾ.ವಿ ಲಕ್ಷ್ಮೀನಾರಾಯಣ್ ಹೇಳುತ್ತಾರೆ.

ಅವರು ಪಿಯುಸಿಎಲ್‌ನ ಅಜೀವ ಸದಸ್ಯರಾಗಿದ್ದಾರೆ. ಎಲ್ಲಾ ಜೀವಪರ-ಜನಪರ ಮತ್ತು ಪರಿಸರ ಉಳಿವಿನ ಹೋರಾಟದಲ್ಲಿ ಅವರು ಮುಂದಿರುತ್ತಾರೆ. ದೇಶಾದ್ಯಂತ ಎಡಪಕ್ಷಗಳು ಒಗ್ಗಟ್ಟಾಗಬೇಕು ಎಂಬ ಪ್ರಯತ್ನ ನಡೆಸಿದ್ದ ಅವರು ದೆಹಲಿಯಲ್ಲಿ ಸಮಾವೇಶವನ್ನು ನಡೆಸಿದ್ದರು. ಆಧಾರ್ ಕಾರ್ಡ್ ಕಡ್ಡಾಯ ವಿರೋಧಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಮೇಧಾ ಪಾಟ್ಕರ್‌ರವರ ಜೊತೆಗೂಡಿ ನರ್ಮದಾ ಬಚಾವ್ ಆಂದೋಲನದಲ್ಲಿ ಭಾಗವಹಿಸಿದ್ದ ಅವರು ಮೇಧಾ ಪಾಟ್ಕರ್‌ರವರನ್ನು ಮೈಸೂರಿಗೂ ಕರೆಸಿ ಜಾಗೃತಿ ಕಾರ್ಯಕ್ರಮ ನಡೆಸಿದ್ದರು.

ಸದ್ಯ ಸುಪ್ರೀಂ ಕೋರ್ಟ್ ಅವರ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿದೆ. “ದೇಶದ್ರೋಹ ಕಾಯ್ದೆ ತೀವ್ರ ದುರ್ಬಳಕೆಯಾಗುತ್ತಿದೆ. ಬಹಳ ಹಿಂದೆಯೇ ನಾವು ರದ್ದುಪಡಿಸಿದ ಐಟಿ ಕಾಯ್ದೆ ಸೆಕ್ಷನ್ 66ಎ ಅಡಿಯಲ್ಲಿ ಈಗಲೂ ಪೊಲೀಸರು ಕೇಸು ದಾಖಲಿಸುತ್ತಿದ್ದಾರೆ. ಇದು ಒಬ್ಬ ಅತ್ಯುತ್ಸಾಹಿ ಬಡಗಿಗೆ ಮರದ ತುಂಡು ಕಡಿಯಲು ಹೇಳಿದರೆ ಇಡೀ ಕಾಡು ಕಡಿದಂತೆ. ತಮಗಾಗದವರನ್ನು ಹತ್ತಿಕ್ಕಲು, ತಮ್ಮ ವಿರುದ್ಧದ ದನಿಯನ್ನು ಅಡಗಿಸಲು ಇಂತಹ ಕಾಯ್ದೆಗಳನ್ನು ದುರ್ಬಳಕೆ ಮಾಡಿಕೊಳ್ಳಬಹುದು. ಯಾವುದೋ ಹಳ್ಳಿಯ ಮೂಲೆಯಲ್ಲಿ ತನಗಾಗದ ವ್ಯಕ್ತಿಯೊಬ್ಬನನ್ನು ಮಟ್ಟಹಾಕಲು ಪೊಲೀಸ್ ಅಧಿಕಾರಿಯೊಬ್ಬ ಈ ಕೇಸು ಹಾಕಿ ಒಳಗೆ ತಳ್ಳಬಹುದಲ್ಲವೇ? ಎಲ್ಲಕ್ಕಿಂತ ಹೆಚ್ಚಾಗಿ ದೇಶದ್ರೋಹದ ಆರೋಪಗಳು ಸಾಬೀತಾಗುವುದು ಬಹಳ ಕಡಿಮೆ. ಈ ಎಲ್ಲ ಅಂಶಗಳನ್ನು ಸರ್ಕಾರ ಪರಿಗಣಿಸಿ ತನ್ನ ಅಭಿಪ್ರಾಯ ತಿಳಿಸಬೇಕು” ಎಂದು ಕೋರ್ಟ್ ಸೂಚಿಸಿದೆ.

ಹೀಗೆ ಮರ ಉಳಿಸುವುದರಿಂದ ಆರಂಭಿಸಿ, ದೇಶದ್ರೋಹ ಕಾನೂನು ರದ್ದಾಗಬೇಕು ಎನ್ನುವರೆಗೂ ಹತ್ತ ಹಲವು ವಿಷಯಗಳಲ್ಲಿ ವೊಂಬತ್ಕೆರೆಯವರು ಹೋರಾಟನಿರತರಾಗಿದ್ದಾರೆ. ಮೈಸೂರಿನಲ್ಲೇ ನೆಲೆಸಿರುವ ಅವರು ಎಲೆಮರೆಕಾಯಿಯಂತೆ ಬಹಳ ಜನಕ್ಕೆ ಅಪರಿಚಿತರೆಂದೇ ಹೇಳಬಹುದು. ಆದರೆ ಅವರ ವಯಕ್ತಿಯ ಬದುಕಿನ ಬಗ್ಗೆಯಾಗಲಿ, ಹೋರಾಟದ ಬಗ್ಗೆಯಾಗಲಿ ಕೇಳಿದರೆ ನನಗಿಂತ ಜನರ ನೆಮ್ಮದಿಯ ಜೀವನ ಮುಖ್ಯ. ಆ ಕುರಿತು ಹೆಚ್ಚು ಗಮನ ನೀಡೋಣ ಎನ್ನುತ್ತಾರೆ…


ಇದನ್ನೂ ಓದಿ: ವಶಾಹತುಶಾಹಿ ದೇಶದ್ರೋಹದ ಕಾನೂನು ಸ್ವಾತಂತ್ರ್ಯದ 75 ವರ್ಷಗಳ ನಂತರವೂ ಅಗತ್ಯವೇ?: ಸುಪ್ರೀಂ ಪ್ರಶ್ನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...