ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಬೆಳಕಿಗೆ ಬಂದ ನಂತರ ಈ ಹಗರಣದಲ್ಲಿ ಸಚಿವರೊಬ್ಬರು ಶಾಮೀಲಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ. ಉನ್ನತ ಶಿಕ್ಷಣ ಮತ್ತು ಐಟಿಬಿಟಿ ಸಚಿವ ಅಶ್ವಥ್ ನಾರಾಯಣ್‌ರವರ ತಮ್ಮ ಸತೀಶ್‌ರವರು ಮಾಗಡಿಯ ದರ್ಶನ್ ಎಂಬುವವರಿಂದ ಹಣ ಪಡೆದು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ದೂರಿದೆ.
ಪತ್ರಕರ್ತರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, “ನನಗೆ ಬಂದಿರುವ ಮಾಹಿತಿ ಪ್ರಕಾರ ಪಿಎಸ್ಐ ನೇಮಕ ಅಕ್ರಮದಲ್ಲಿ ಮಂತ್ರಿಗಳ ಸಂಬಂಧಿ ಭಾಗಿಯಾಗಿದ್ದಾರೆ ಎಂದು ಗೊತ್ತಾಗಿದೆ. ಆ ಆರೋಪಿಯನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುವ ವೇಳೆ ಆ ಮಂತ್ರಿ ಫೋನ್ ಮಾಡಿ ಅವರನ್ನು ಕಳಿಸುವಂತೆ ಒತ್ತಡ ಹೇರಿದ್ದಾರೆ” ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿಗಳಿಗೆ ಬದ್ಧತೆ ಇದ್ದರೆ ಈ ಪ್ರಕರಣದಲ್ಲಿ ಭಾಗಿಯಾಗಿರುವವರು ಎಷ್ಟೇ ದೊಡ್ಡವರಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅದು ಬಿಜೆಪಿ ಶಾಸಕರು, ನಾಯಕರು, ಮಂತ್ರಿಗಳಾಗಿರಲಿ, ಕಾಂಗ್ರೆಸ್, ಜೆಡಿಎಸ್ ನವರಾಗಿರಲಿ, ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮಂಡ್ಯದ ಬಿಜೆಪಿ ನಾಯಕರೊಬ್ಬರು ನನಗೆ ಕರೆ ಮಾಡಿ ಈ ವಿಚಾರದ ಬಗ್ಗೆ ಮಾತನಾಡಬೇಡಿ, ಅವರು ಮುಂದೆ ಮುಖ್ಯಮಂತ್ರಿ ಆಗುವವರು, ಅವರ ಹೆಸರು ಎಳೆದು ತರಬೇಡಿ, ಮುಚ್ಚಿಹಾಕಿ ಎನ್ನುತ್ತಿದ್ದಾರೆ” ಎಂದು ಡಿಕೆಶಿ ಆರೋಪಿಸಿದ್ದಾರೆ.
ನನ್ನ ಹೆಸರಿಗೆ ಮಸಿ ಬಳಿಯುವ ಷಡ್ಯಂತ್ರ: ಸಚಿವ ಅಶ್ವಥ್ ನಾರಾಯಣ್ ಪ್ರತಿಕ್ರಿಯೆ
ಈ ಕುರಿತು ಪ್ರತಿಕ್ರಿಯಿಸಿರುವ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, “ಸೂಕ್ತ ಸಾಕ್ಷಿ ಆಧಾರಗಳಿಲ್ಲದೆ ಈ ರೀತಿ ಆರೋಪ ಮಾಡಿ ನನ್ನ ಹೆಸರಿಗೆ ಮಸಿ ಬಳಿಯುವುದು ಸರಿಯಲ್ಲ” ಎನ್ನುವ ಮೂಲಕ ಆರೋಪಗಳನ್ನು ನಿರಾಕರಿಸಿದ್ದಾರೆ.
ನಾನು ಸಿಎಂ ಆಗಿಬಿಡುತ್ತೇನೆ ಎನ್ನವ ಭಯ ಡಿ.ಕೆ ಶಿವಕುಮಾರ್‌ರವರನ್ನು ಕಾಡುತ್ತಿದೆ. ಒಬ್ಬ ನಾಯಕನ ಬೆಳವಣಿಗೆ ಸಹಿಸದೆ ಹೀಗೆಲ್ಲಾ ಪಿತೂರಿ ಮಾಡುತ್ತಿದ್ದಾರೆ. ಹೀಗಾಗಿ ವಿನಾಕಾರಣ ನನ್ನ ಮೇಲೆ ಆರೋಪ ಹೊರಿಸಿ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ವಿಶೇಷ ವರದಿ: ಬಿಜೆಪಿ ಅವಧಿಯಲ್ಲಿ ಪರೀಕ್ಷಾ ಅಕ್ರಮ, ಎಡವಟ್ಟುಗಳು & ಶೈಕ್ಷಣಿಕ ಅವ್ಯವಸ್ಥೆ
ಒಬ್ಬ ವ್ಯಕ್ತಿಗಾಗಿ ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ನಡೆಸುವುದು ಸಾಧ್ಯವಿಲ್ಲ. ಆದರೆ ಕಾಂಗ್ರೆಸ್ ಮುಖಂಡರು ನನ್ನನ್ನು ಸಿಕ್ಕಿಸಲು ನನ್ನ ಹೆಸರು ಎಳೆದು ತರುತ್ತಿದ್ದಾರೆ. ಡಿ.ಕೆ ಶಿವಕುಮಾರ್‌ರವರಿಗೆ ಕರೆ ಮಾಡಿದ ಮಂಡ್ಯದ ಬಿಜೆಪಿ ಮುಖಂಡನ ಹೆಸರು ಹೇಳಲು ಎಂದು ಸವಾಲು ಹಾಕಿದ್ದಾರೆ.



ತಿರುಕನ ಕನಸು ಕಾಣುತ್ತಿರುವ ನಮ್ಮ ಮಂತ್ರಿಗೆ ಅವರ ತಮ್ಮ ಮಾಡಿದ ತಪ್ಪು ಕೆಲಸ ಅವರ ಕನಸಿಗೆ ಕೊಳ್ಳಿ ಇಟ್ಟಂತಾಗಿದೆ.