Homeಮುಖಪುಟಯಾರು ಈ ಬಾಬಾ ರಾಮದೇವ್? ಏನು ಈ ಪತಂಜಲಿ?: ಆಧ್ಯಾತ್ಮಿಕ ಬಂಡವಾಳಶಾಹಿಯ ಸಂಪೂರ್ಣ ಡಿಟೇಲ್ಸ್....

ಯಾರು ಈ ಬಾಬಾ ರಾಮದೇವ್? ಏನು ಈ ಪತಂಜಲಿ?: ಆಧ್ಯಾತ್ಮಿಕ ಬಂಡವಾಳಶಾಹಿಯ ಸಂಪೂರ್ಣ ಡಿಟೇಲ್ಸ್….

- Advertisement -
- Advertisement -

‘ಯಾರ‍್ರಿ ಅವ್ನು ನನ್ ಅರೆಸ್ಟ್ ಮಾಡೋನು, ಅವರಪ್ಪನ ಕಡೆಯಿಂದಲೂ ಆಗಲ್ಲ ಬಿಡಿ’ ಹೀಗೆ ಉದ್ಧಟತನದ ಹೇಳಿಕೆ ಕೊಟ್ಟಿದ್ದಾರೆ ಬಾಬಾ ರಾಮದೇವ್. ಈ ಹೊಣಗೇಡಿ ಹೇಳಿಕೆ ವಿರುದ್ಧ ಇಂದು ಡೆಕ್ಕನ್ ಹೆರಾಲ್ಡ್, ಸಾಂಕ್ರಾಮಿಕ ಕಾಯ್ದೆ ಅಡಿ ಈ ಬಾಬಾನ ಮೇಲೆ ಕೂಡಲೇ ಕ್ರಮ ಕೈಗೊಳ್ಳಿ ಎಂದು ಸಂಪಾದಕೀಯವನ್ನೇ ಬರೆದಿದೆ.

ಭಾರತದಲ್ಲಿ ಆಧ್ಯಾತ್ಮಿಕ ಬಂಡವಾಳಶಾಹಿಯ (spiritual capatilism) ಭಾಗವಾಗಿ ಇದನ್ನು ನೋಡಬೇಕು. ಯಾವುದೇ ವೈಜ್ಞಾನಿಕ ಮತ್ತು ವೈದ್ಯಕೀಯ ಆಧಾರವಿಲ್ಲದೇ ಕೋವಿಡ್‌ಗೆ ಪರಿಹಾರ ಎಂದು ಕೊರೋನಿಲ್ ಎಂಬ ಔಷಧಿಯನ್ನು ಹಂಚುವ ಒಬ್ಬ ಬೂದಿ ಬಾಬಾ ಈ ನವ ಬಗೆಯ ಬಂಡವಾಳಶಾಹಿಯ ಒಂದು ಭಾಗ. ಇಂತಹ ಬಂಡವಾಳಶಾಹಿಯ ಹಿಂದೆ ರಕ್ಷಕನಾಗಿ ನಿಂತಿರುವುದು ಸಂಘ ಪರಿವಾರ ಎಂಬುದರಲ್ಲಿ ಎರಡು ಮಾತಿಲ್ಲ. ಈ ಆಧ್ಯಾತ್ಮಿಕ ಬಂಡವಾಳಶಾಹಿ ಲೋಕದಲ್ಲಿ ರಾಮದೇವ್ ಜೊತೆಗೆ ರವಿಶಂಕರ್ ಗುರು, ನಿತ್ಯಾನಂದ ಮತ್ತು ಜಗ್ಗಿ ಸದ್ಗುರುಗಳೆಲ್ಲ ಇದ್ದಾರೆ.

ಕಳೆದ 15 ದಿನಗಳಿಂದ ಸುದ್ದಿಯಲ್ಲಿರುವ ಈ ಬಾಬಾ ರಾಮದೇವ್ ಜೈಲಿನಲ್ಲಿರಬೇಕಿತ್ತು. ಆದರೆ, ಈತನ ಬೆನ್ನಿಗೆ ಆಡಳಿತರೂಢ ಪಕ್ಷವೇ ಇರುವ ಕಾರಣ, ಈತ ದೇಶದ ವೈದ್ಯ ಸಮೂಹವನ್ನೇ ಗೇಲಿ ಮಾಡಿ ದಕ್ಕಿಸಿಕೊಳ್ಳಬಲ್ಲ. ಈಗ ಪೊಲೀಸ್/ಕಾನೂನು ವ್ಯವಸ್ಥೆಯನ್ನು ಚಿಲ್ಲರೆ ಎಂಬಂತೆ ಮಾತಾಡಿದ್ದಾರೆ.

2002ರಲ್ಲಿ ಈ ರಾಮ್ ಕಿಸಾನ್ ಯಾದವ್ ಅಲಿಯಾಸ್ ಬಾಬಾ ರಾಮದೇವ್ ಸಂಸ್ಕಾರ ಟಿವಿಯಲ್ಲಿ ತಮ್ಮ ಹೊಟ್ಟೆಯನ್ನು ತಿರುವುತ್ತ ಜನರ ಎದುರು ಕಾಣಿಸಿಕೊಂಡರು. ಈಗ ಈ ಮಹಾಶಯ ಭಾರತದ ‘ಪ್ರಮುಖ’ ಸಾರ್ವಜನಿಕ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಪ್ರಿಯಾಂಕಾ ಪಾಠಕ್ ನಿಕಟವಾಗಿ ಸಂಶೋಧಿಸಿ ಬರೆದ “ಗಾಡ್‌ಮನ್ ಟು ಟೈಕೂನ್’ ಎಂಬ ಪುಸ್ತಕದಲ್ಲಿ ಗಮನಿಸಿದಂತೆ, ಬಾರ್ಕ್ (Broadcast Audience Research Council) ಪ್ರಕಾರ, ಬಾಬಾ ರಾಮದೇವ್ ಅವರ ಪತಂಜಲಿ 2016ರಲ್ಲಿ ಟಿವಿ ಚಾನೆಲ್‌ಗಳಲ್ಲಿ ತುಂಬ ಪ್ರಸಿದ್ಧಿ ಪಡೆಯಿತು. ಅಂದರೆ ಆ ಪ್ರಮಾಣದಲ್ಲಿ ಅದು ಜಾಹಿರಾತು ನೀಡುತ್ತ ಹೋಗಿತು. “ಜನವರಿ 2016ರ ಮೊದಲ ವಾರದಲ್ಲಿ 11,897 ರಿಂದ ಮಾರ್ಚ್ 25 ರ ವಾರದಲ್ಲಿ 24,050ಕ್ಕೆ ಜಾಹಿರಾತು ಇಮ್ಮಡಿಗೊಳಿಸಿತು. ಅದೇ ಅವಧಿಯಲ್ಲಿ, ಟಿವಿ ಚಾನೆಲ್‌ಗಳಲ್ಲಿ ರಾಮ್‌ದೇವ್ 2,34,934 ಬಾರಿ ಕಾಣಿಸಿಕೊಂಡರು, ಅಂದರೆ ಅವರು ಪ್ರತಿ 30 ಸೆಕೆಂಡಿಗೆ ಒಂದು ಅಥವಾ ಇನ್ನೊಂದು ಚಾನೆಲ್‌ನಲ್ಲಿ ಕಾಣಿಸಿಕೊಂಡಿದ್ದರು! ಪತಂಜಲಿ ಆಯುರ್ವೇದ ಲಿಮಿಟೆಡ್ ಭಾರತದ ಟಾಪ್ ಹತ್ತು ಜಾಹೀರಾತುದಾರರಲ್ಲಿ ಒಂದಾಗಿ ಉಳಿದಿದೆ ಮತ್ತು ರಾಮದೇವ್ ಅವರ ಮುಖವು ಚಾನೆಲ್‌ಗಳಲ್ಲಿ ಈಗ ಸರ್ವತ್ರವಾಗಿದೆ.

ಅಂದರೆ ಈ ಮನುಷ್ಯ ಪ್ರಮುಖ ಟಿವಿ ಚಾನೆಲ್‌ಗಳಿಗೆ ಆದಾಯವನ್ನು ಕೊಡುತ್ತ, ತನ್ನನ್ನು ಬೆಳೆಸಲು ಈ ಟಿವಿ ಚಾನೆಲ್‌ಗಳಿಂದ ಸಹಕಾರ ಪಡೆಯುತ್ತ ಬಂದಿದ್ದಾರೆ.
ಅಣ್ಣಾ ಹಜಾರೆ ಎಂಬ ಅಜ್ಜ 2013-14ರ ಸುಮಾರಿಗೆ ದೆಹಲಿಯಲ್ಲಿ ಭ್ರಷ್ಟಾಚಾರ ವಿರೋಧಿ ಹೋರಾಟ ಮಾಡುವಾಗ ಅಲ್ಲಿ ಈ ರಾಮದೇವ್ ಎಂಟ್ರಿ ಕೊಡುತ್ತಾರೆ. ಅಣ್ಣಾ ತರಹವೇ ಈತನೂ ಬಿಜೆಪಿ ವಲಯ ಹೊರಬಿಟ್ಟ ಒಂದು ಆಯುಧವಾಗಿ ಕೆಲಸ ಮಾಡುತ್ತಾರೆ. ಪೊಲೀಸರು ಬಂಧಿಸಲು ಬಂದಾಗ ಈ ಮನುಷ್ಯ ಚೂಡಿದಾರ್ ತೊಟ್ಟು ಪರಾರಿಯಾಗುತ್ತಾರೆ.

ಹರಿಯಾಣದ ಬಡ ಜಿಲ್ಲೆಗಳಲ್ಲಿ ಒಂದಾದ ಸೈದ್ ಅಲಿಪುರದ ಈ ಮನುಷ್ಯ, 6ನೇ ಕ್ಲಾಸ್‌ವರೆಗೆ ಓದಿದ್ದಾರಂತೆ. ಅಣ್ಣಾ ಹಜಾರೆ 7ನೆ ಕ್ಲಾಸ್. ಈ ಇಬ್ಬರೂ ‘ವಿದ್ಯಾವಂತರು’ ಮಗದೊಬ್ಬ ‘ವಿದ್ಯಾವಂತ’ ಮೋದಿ ಅಧಿಕಾರಕ್ಕೆ ಬರಲು ನೆರವು ನೀಡಿದರು!

ಬಾಬಾನ ಚಟುವಟಿಕೆ ಗಮನಿಸಿ. ಚೀನಾ ತಯಾರಿಸಿದ ಸರಕುಗಳನ್ನು ಬಹಿಷ್ಕರಿಸುವ ಬಗ್ಗೆ ಟ್ವೀಟ್ ಮಾಡುತ್ತ ಇದ್ದ, ತನ್ನ ಚೀನಾ ನಿರ್ಮಿತ ಐಫೋನ್‌ನಿಂದ! ದೆಹಲಿಯಲ್ಲಿ ರಾಷ್ಟ್ರಕ್ಕೆ ಧೈರ್ಯದ ಬಗ್ಗೆ ಬೋಧಿಸುವ ಸಂದರ್ಭದಲ್ಲಿ ಪೊಲೀಸ್ ದಾಳಿಯಿಂದ ತಪ್ಪಿಸಿಕೊಳ್ಳಲು ಮಹಿಳೆಯರ ಬಟ್ಟೆಗಳನ್ನು ಧರಿಸಿ ಪರಾರಿಯಾದ! ನಂಬಿಕೆ ಮತ್ತು ಸ್ವ-ಮೌಲ್ಯದ ಬಗ್ಗೆ ಈ ಮನುಷ್ಯ ಮಾತನಾಡುತ್ತಾರೆ, ಆದರೆ ಅವರ ಜಾಹೀರಾತುಗಳಲ್ಲಿ ಹೆಚ್ಚಿನವು ತಪ್ಪು ದಾರಿಗೆಳೆಯುತ್ತವೆ. ಅವು ನಂಬಿಕೆಗೇ ಯೋಗ್ಯ ಅಲ್ಲ.

ಈ ಎಲ್ಲಾ ಅಸಂಬದ್ಧತೆಗಳ ಹೊರತಾಗಿಯೂ, ರಾಮದೇವ್ ಇವತ್ತು ಬಹಳ ಎತ್ತರಕ್ಕೆ ಬೆಳೆದಿದ್ದಾರೆ. ಅವರ ಹಿಂದೆ ಆಡಳಿತರೂಢ ಬಿಜೆಪಿ ಪಕ್ಷವಿದೆ. ಆರೋಗ್ಯ ಸಚಿವ, ಸಾರಿಗೆ ಸಚಿವ ಅಷ್ಟೇ ಏಕೆ ಮೋದಿ-ಶಾ ಜೋಡಿ ಕೂಡ ಅವರ ಬೆನ್ನಿಗಿದೆ, ಹೀಗಾಗಿ ಅವರು ವೈದ್ಯ ವ್ಯವಸ್ಥೆಯನ್ನು ಮತ್ತು ನಿನ್ನೆ ಪೊಲೀಸ್ ವ್ಯವಸ್ಥೆಯನ್ನು ಹೀಗಳೆದು ಮಾತನಾಡುತ್ತಾರೆ. ಜೈಲಲ್ಲಿ ಇರಬೇಕಾದ ವ್ಯಕ್ತಿ ಇವತ್ತು ಖುಲ್ಲಂಖುಲ್ಲ ಬೀಸು ಹೇಳಿಕೆ ನೀಡುತ್ತಿದ್ದಾರೆ. ಇದು ಮೋದಿ ಸರ್ಕಾರ ಸೃಷ್ಟಿಸಿದ ಅರಾಜಕತೆಯ ಭಾಗದಂತಿದೆ.

ಈ ಬಾಬಾ ರಾಜಕಾರಣಿಗಳೊಂದಿಗೆ ಮಾತನಾಡುತ್ತಾರೆ ಮತ್ತು ಈತ ಹೇಳಿದ್ದನ್ನು ಅವರು ಕೇಳುತ್ತಾರೆ. ಈ ಮನುಷ್ಯ ಸೈನ್ಯಕ್ಕಾಗಿ ಯೋಗ ಶಿಬಿರಗಳನ್ನು ಮಾಡುತ್ತಾರೆ!
ಈ ಮನುಷ್ಯ ಯಾವಾಗ ಜನಿಸಿದನೆಂಬುದರ ಬಗ್ಗೆ ಸ್ಪಷ್ಟವಾದ ದಾಖಲೆಗಳಿಲ್ಲ! ಈತನ ಶಿಕ್ಷಣ ಮತ್ತು ಆರಂಭಿಕ ವೃತ್ತಿಜೀವನವು ಸಂಶಯಾಸ್ಪದವಾಗಿದೆ. ಪ್ರಿಯಾಂಕಾ ಪಾಠಕ್ ಅವರ ಸಂಶೋಧಿತ ಕೃತಿಯಲ್ಲಿ ಬರೆದ ಪ್ರಕಾರ, ಕೊಲೆ, ಭ್ರಷ್ಟಾಚಾರ, ಕಾರ್ಪೊರೇಟ್ ಸ್ವಾಧೀನ ಎಲ್ಲವೂ ಇಲ್ಲಿವೆ.

ಪ್ರಿಯಾಂಕಾ ಪಾಠಕ್ ಹೇಳುವಂತೆ, ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ (ಪತಂಜಲಿಯ ಪ್ರಮುಖ ಅಧಿಕಾರಿ ಮತ್ತು ಬಾಬಾನ ಇನ್ನೊಂದು ಮುಖ) ಇಬ್ಬರಿಗೂ ಶಿಕ್ಷಣದ ಕೊರತೆಯಿದೆ.
ರಾಮದೇವ್ ಅವರನ್ನು ರಾಜಕೀಯ ಶೈಲಿಯಲ್ಲಿ ಪರಿಚಯಿಸಿದ ವ್ಯಕ್ತಿ ಸ್ವದೇಶಿ ಪ್ರಚಾರಕ ರಾಜೀವ್ ದೀಕ್ಷಿತ್. ನಿಗೂಢ ಸಂದರ್ಭಗಳಲ್ಲಿ ಅವರು ಇದ್ದಕ್ಕಿದ್ದಂತೆ ನಿಧನರಾದರು. ಅವರ ಮರಣೋತ್ತರ ಪರೀಕ್ಷೆಯನ್ನು ಏಕೆ ನಡೆಸಲಿಲ್ಲ? ಎಂದು ಲೇಖಕಿ ಪಾಠಕ್ ಪ್ರಶ್ನೆ ಎತ್ತುತ್ತಾರೆ.
ಮರಣೋತ್ತರ ಪರೀಕ್ಷೆಗೆ ಒತ್ತಾಯಿಸಿ ಐವತ್ತು ಜನರು ಅಭಿಯಾನಕ್ಕೆ ಸಹಿ ಹಾಕಿ ಅದನ್ನು ಬಾಬಾ ರಾಮ್‌ದೇವ್ ಅವರಿಗೆ ನೀಡಿದರು. ಇದು ಬಾಬಾ ರಾಮದೇವ್ ಅವರಿಂದ ಮಾತ್ರ ಪರಿಹರಿಸಬಹುದಾದ ಒಂದು ರಹಸ್ಯವಾಗಿದೆ. ಅವರು ಮರಣೋತ್ತರ ಪರೀಕ್ಷೆಗೆ ಹಿಂದೇಟು ಹಾಕಿದ್ದು ಏಕೆ ಎಂದು ಲೇಖಕಿ ಪ್ರಶ್ನೆ ಎತ್ತುತ್ತಾರೆ.

ರಾಮದೇವ್ ಮತ್ತು ಬಾಲಕೃಷ್ಣ ಇಬ್ಬರಿಗೂ ಶಿಕ್ಷಣದ ಕೊರತೆಯಿದೆ. ಸಿಬಿಐ ಬಾಲಕೃಷ್ಣ ವಿರುದ್ಧ ನಕಲಿ ಪದವಿ ಪ್ರಮಾಣ ಪತ್ರ ಹೊಂದಿದ ಪ್ರಕರಣಗಳನ್ನು ದಾಖಲಿಸಿದೆ. ಕರಮ್‌ವೀರ್ ಎಂಬ ಸಾಧು ಸನ್ಯಾಸಿ ರಾಮದೇವ್ ಮತ್ತು ಬಾಲಕೃಷ್ಣರನ್ನು ಒಟ್ಟು ಮಾಡಿದರು. ಅವರಿಗೆ ಮಾರ್ಗದರ್ಶನ ನೀಡಿದರು. ಕರಮವೀರ್ ವಿದ್ಯಾವಂತ, ಪ್ರಬುದ್ಧ ವ್ಯಕ್ತಿ. ಅವರು ಭಾರತದ ಅಗ್ರಗಣ್ಯ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಗುರುಕುಲ್ ಕಾಂಗ್ರಿ ಮಹಾ ವಿಶ್ವವಿದ್ಯಾಲದಿಂದ ಮೂರು ಪದವಿಗಳನ್ನು ಪಡೆದಿದ್ದಾರೆ. ಅವರು ಈಗ ಮಹಾರಾಷ್ಟ್ರ ಮತ್ತು ಉತ್ತರಾಖಂಡದಲ್ಲಿ ಸಣ್ಣ ಆಶ್ರಮಗಳನ್ನು ನಡೆಸುತ್ತಿದ್ದಾರೆ, ತಮ್ಮ ಸಮಯವನ್ನು ಎರಡು ಸ್ಥಳಗಳ ನಡುವೆ ವಿಂಗಡಿಸಿ ಯೋಗ ಶಿಬಿರಗಳನ್ನು ಉಚಿತವಾಗಿ ನಡೆಸುತ್ತಾರೆ.

ಆದರೆ, ಏನೆಲ್ಲ ಅವಘಡ ಸಂಭವಿಸಿದರೂ, ಅವರು ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣರನ್ನು ನೋಡಿಕೊಳ್ಳುವುದನ್ನು ಮುಂದುವರೆಸಿದ್ದರು. ಈ ಜೋಡಿ ತೊಂದರೆಗೆ ಒಳಗಾದಾಗೆಲ್ಲ ಅವರು ತಮ್ಮ ಸಹಾಯಹಸ್ತ ನೀಡಿದ್ದಾರೆ ಎಂದು ಲೇಖಕಿ ಪಾಠಕ್ ಹೇಳುತ್ತಾರೆ.
ಒಂದು ಹಂತದಲ್ಲಿ ಕರಮವೀರ್ ಈ ಜೋಡಿಯನ್ನು ನಿರಾಕರಿಸಿದ ನಂತರ ರಾಮದೇವ್ ಕೃಪಾಲು ಬಾಗ್ ಆಶ್ರಮದಲ್ಲಿ ನೆಲೆಸಿದರು.

ಕೃಪಾಲು ಬಾಗ್ ಆಶ್ರಮದ ಶಂಕರ್ ದೇವ್, ಸೀಮಿತ ಮಹತ್ವಾಕಾಂಕ್ಷೆಯ ಹಳೆಯ, ಶಾಂತ ವ್ಯಕ್ತಿ. ಆತ ತನ್ನ ಗುರುವಿನಿಂದ ಆನುವಂಶಿಕವಾಗಿ ಪಡೆದ ಆಶ್ರಮದಲ್ಲಿ ಹಣ್ಣಿನ ತೋಟವನ್ನು ನಡೆಸುತ್ತಿದ್ದ. ಆದರೆ ಶಂಕರ್‌ದೇವ ಅವರ ಸಾವಿನ ಹಿಂದೆಯೂ ಬಾಬಾನ ನೆರಳಿದೆ ಎಂದು ಲೇಖಕಿ ಆರೋಪಿಸಿದ್ದಾರೆ.

ಉತ್ತರಾಖಂಡದ ಮಾರಾಟ ತೆರಿಗೆ ಅಧಿಕಾರಿ ಜಿತೇಂದರ್ ರಾಣಾ ಅವರು ರಾಮದೇವ್‌ರ ದಿವ್ಯಾ ಫಾರ್ಮಸಿ ಮಾರಾಟ ತೆರಿಗೆ ವಂಚನೆ ಕುರಿತು ತನಿಖೆ ನಡೆಸಿದರು. ಆ ವರ್ಷ, ಬಾಬಾನ ಆಶ್ರಮದಲ್ಲಿ ಕೆಲಸ ಮಾಡುವವರು ಒಂದೇ ದಿನದಲ್ಲಿ 22 ಲಕ್ಷ ರೂ ಎಣಿಸುತ್ತಿದ್ದರು. ದಿವ್ಯಾ ಫಾರ್ಮಸಿ ಕನಿಷ್ಠ 5 ಕೋಟಿ ರೂ.ಗಳ ತೆರಿಗೆಯನ್ನು ತಪ್ಪಿಸಿದೆ ಎಂದು ಸಾಬೀತುಪಡಿಸಲು ತನಿಖಾ ಅಧಿಕಾರಿ ರಾಣಾ ಅವರು 2,000 ಕೆಜಿ ಕಾಗದವನ್ನು ಸಂಗ್ರಹಿಸಿದ್ದಾರೆ ಎಂದು ತೆಹೆಲ್ಕಾ ವರದಿ ಮಾಡಿತ್ತು. ಅವರು ದಾಳಿ ನಡೆಸಿದರು. ಆದರೆ, ಬಾಬಾ ರಾಮದೇವ್ ಅವರ ಸ್ನೇಹಿತರಾದ ಅಂದಿನ ಉತ್ತರಾಖಂಡ ರಾಜ್ಯಪಾಲ ಎನ್.ಡಿ ತಿವಾರಿ ತನಿಖೆಗೆ ಅಡ್ಡಿಪಡಿಸಿದರು. ಪರಿಸ್ಥಿತಿ ತುಂಬಾ ಕಷ್ಟಕರವಾಯಿತು, ರಾಣಾ ನಿವೃತ್ತಿಯನ್ನು ತೆಗೆದುಕೊಳ್ಳಲು ನಿರ್ಧರಿಸಿದರು. ಅಲ್ಲಿಗೆ ಪ್ರಕರಣ ಮುಚ್ಚಿಯೇ ಹೋಗಿತು ಎಂದು ಲೇಖಕಿ ಹೇಳುತ್ತಾರೆ.

ರಾಮದೇವ್ ವಿಎಚ್‌ಪಿ, ಕಾಂಗ್ರೆಸ್, ಬಿಜೆಪಿ ಮತ್ತು ಸಮಾಜವಾದಿ ಪಕ್ಷದಲ್ಲಿ ಸ್ನೇಹಿತರನ್ನು ಹೊಂದಿದ್ದಾರೆ. ಸುಬ್ರತಾ ರಾಯ್ ಅಂತಹ ಆರ್ಥಿಕ ಸಲಹೆಗಾರ ಕೂಡ ರಾಮದೇವ್ ದೋಸ್ತ ಆಗಿದ್ದಾರೆ. ಪತಂಜಲಿ ಮತ್ತು ರಾಮದೇವ್ ತಮ್ಮ ಔಷಧಿಗಳು ಕ್ಯಾನ್ಸರ್, ಎಚ್‌ಐವಿಗಳನ್ನು ಗುಣಪಡಿಸುತ್ತವೆ ಎಂದು ಭರವಸೆ ನೀಡುತ್ತಾರೆ. ಸಲಿಂಗಕಾಮವನ್ನು ಕೂಡ ಗುಣಪಡಿಸುತ್ತೆ ಎಂದೂ ಹೇಳಿದ್ದಾರೆ. ಇವೆಲ್ಲಕ್ಕೂ ಆಧಾರವೇ ಇಲ್ಲ ಎಂದು ಲೇಖಕಿ ಹೇಳುತ್ತಾರೆ.

ಆಧ್ಯಾತ್ಮಿಕ ಬಂಡವಾಳಶಾಹಿ

ಇದು ಭಾರತದಲ್ಲಿನ ಆಧ್ಯಾತ್ಮಿಕ ಬಂಡವಾಳಶಾಹಿಯ (spiritual capatilism) ಒಂದು ಮುಖ. ಇದನ್ನು ಬಗೆಯುತ್ತ ಹೋದರೆ, 70ರ ದಶಕದಲ್ಲಿ ಬ್ರಹ್ಮಚಾರಿ ಎನ್ನುವ ಸ್ವಘೋಷಿತ ದೇವಮಾನವ ಅಂದಿನ ಪ್ರದಾನಿ ಇಂದಿರಾಗಾಂಧಿಯವರಿಗೆ ಹತ್ತಿರನಾದ. ವೃತ್ತಿ ರಾಜಕಾರಣ, ಅಧಿಕಾರ ರಾಜಕಾರಣದೊಂದಿಗೆ ಆಧ್ಯಾತ್ಮವನ್ನು ಬೆಸೆದ ಮೊದಲ ಬಹಿರಂಗ ಪ್ರಕರಣವಿದು. ನಂತರದಲ್ಲಿ ಪುಣೆಯಲ್ಲಿ ಆಶ್ರಮ ಮಾಡಿದ ಓಶೋ ರಜನೀಶ್ ಸೆಕ್ಸ್ ಮತ್ತು ಆಧ್ಯಾತ್ಮವನ್ನು ಬೆಸೆದು ವಿದೇಶಗಳಿಗೆ ತೆಗೆದುಕೊಂಡು ಹೋದರು. ರವಿಶಂಕರ್ ಗುರು, ನಿತ್ಯಾನಂದ ಮತ್ತು ಸದ್ಗುರು ಜಗ್ಗಿ ಕೂಡ ಈ ಆಧ್ಯಾತ್ಮಿಕ ಬಂಡವಾಳಶಾಹಿಯ ಗುಂಪಲ್ಲೆ ಇದ್ದಾರೆ. ಇವರಿಗೆ ಸರ್ಕಾರಗಳು ಮುಖ್ಯವಾಗಿ ಬಿಜೆಪಿ ಸರ್ಕಾರಗಳು ಬೆನ್ನೆಲುಬಾಗಿ ನಿಂತಿವೆ.

ಅಲೋಪಥಿ ವೈದ್ಯ ಕ್ರಮವನ್ನೇ ಜರಿದಿದ್ದಲ್ಲದೇ ಧಮ್ ಇದ್ದರೆ ಬಂಧಿಸಿ ಎಂದು ಬಾಬಾ ರಾಮದೇವ್ ಹೇಳುತ್ತಾರೆ. ಯಾವ ಸಂಶಯವೂ ಬೇಡ, ಅವರು ಅಂಬಾನಿ, ಅದಾನಿಗಳಂತೆ ಬಿಜೆಪಿಗೆ ಸಾಕಷ್ಟು ಫಂಡ್ ನೀಡಿದ್ದಾರೆ ಮತ್ತು ಅಂಬಾನಿ, ಅದಾನಿಗಳಂತೆ ಸರ್ಕಾರದಿಂದ ತೆರಿಗೆ ನೆರವನ್ನೂ ಪಡೆದಿದ್ದಾರೆ.

ಜೈಲಲ್ಲಿ ಇರಬೇಕಾದವನ್ನೊಬ್ಬ ವೈದ್ಯಕೀಯ ಮತ್ತು ಕಾನೂನು ವ್ಯವಸ್ಥೆಯನ್ನೇ ಹಂಗಿಸಿ, ನಿಂದಿಸಿ ಹೇಳಿಕೆ ಕೊಡುತ್ತಲೇ ಇದ್ದಾರೆ. ಆದರೂ ಯಾವ ಕ್ರಮವೂ ಇಲ್ಲ. ಇದೇನಾ ಅಚ್ಛೇ ದಿನ್!

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ; ಬಾಬಾ ರಾಮದೇವ್ ವಿರುದ್ಧ 1,000 ಕೋಟಿ ರೂ. ಮಾನನಷ್ಟ ಮೊಕದ್ದಮೆ ನೋಟಿಸ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...